
ಜೈಪುರ, ನವೆಂಬರ್ 27: ಕೆಂಪು ಸೀರೆ, ಹಸಿರು ಸಲ್ವಾರ್ ಸೂಟ್ ಮತ್ತು ಹಳದಿ ಸೀರೆ ಹೀಗೆ 3 ಬಗೆಯ ಡ್ರೆಸ್ ಧರಿಸಿ ಬಂದ ರಾಜಸ್ಥಾನದ ಮಹಿಳೆಯೊಬ್ಬರು ಸ್ಥಳೀಯ ಸಂಸ್ಥೆ ಚುನಾವಣೆಗೆ 3 ಪಕ್ಷಗಳಿಂದ ನಾಮಪತ್ರ ಸಲ್ಲಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿಯಿಂದಲೂ ಇದೇ ಮಹಿಳೆ ಸ್ಪರ್ಧಿಸಿದ್ದು, ಕಾಂಗ್ರೆಸ್ನಿಂದಲೂ ಈಕೆ ನಾಮಪತ್ರ ಸಲ್ಲಿಸಿದ್ದರು. ಬಳಿಕ, ಪಕ್ಷೇತರ ಅಭ್ಯರ್ಥಿಯಾಗಿಯೂ ಈಕೆ ನಾಮಪತ್ರ ಸಲ್ಲಿಸಿದ್ದರು. ಕೊನೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಥಳೀಯ ಚುನಾವಣೆಯಲ್ಲಿ ಈಕೆ ಗೆಲುವು ಸಾಧಿಸಿದ್ದಾರೆ. ಆದರೆ, ಚುನಾವಣೆ ಮುಗಿದು, ಫಲಿತಾಂಶ ಪ್ರಕಟವಾಗುವವರೆಗೂ ಈಕೆಯ ಈ ತ್ರಿಬಲ್ ಆ್ಯಕ್ಟಿಂಗ್ ಯಾರ ಗಮನಕ್ಕೂ ಬರಲಿಲ್ಲವೇ? ಎಂಬ ದೊಡ್ಡ ಪ್ರಶ್ನೆ ಎದ್ದಿದೆ.
ವತಿ ಕುಮಾರಿ ಎಂಬ ಮಹಿಳೆ ಮಾಜಿ ಕಾಂಗ್ರೆಸ್ ಶಾಸಕ ವಾಜಿಬ್ ಅಲಿ ಅವರ ಸಮ್ಮುಖದಲ್ಲಿ ತಮ್ಮ ಮೊದಲ ನಾಮಪತ್ರವನ್ನು ಸಲ್ಲಿಸಿದರು. ಕೆಂಪು ಸೀರೆ ಧರಿಸಿದ್ದ ಕುಮಾರಿ, ನಾಮಪತ್ರ ದಾಖಲೆಗಳಿಗೆ ಸಹಿ ಹಾಕುವಾಗ ಸೀರೆಯ ಸೆರಗಿನಿಂದ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ನಂತರ ಮತ್ತೊಂದು ನಾಮಪತ್ರ ಸಲ್ಲಿಸಲು ಮರಳಿದ ಅವರು, ಈ ಬಾರಿ ಹಸಿರು ಸಲ್ವಾರ್ ಸೂಟ್ ಧರಿಸಿದ್ದರು. ದುಪಟ್ಟಾದ ಹಿಂದೆ ಮುಖವನ್ನು ಮರೆಮಾಚಿಕೊಂಡಿದ್ದ ಅವರು, ಶಾಸಕ ಜವಾಹರ್ ಸಿಂಗ್ ಬೇಧಮ್ ಅವರ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದರು. ಮೂರನೇ ಬಾರಿ ಅವರು ಹಳದಿ ಸೀರೆಯಲ್ಲಿ ಕಾಣಿಸಿಕೊಂಡರು. ಈ ವೇಳೆ ಕುಮಾರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಬಾರಿ ಆಕೆ ತಮ್ಮ ಮುಖವನ್ನು ಮುಚ್ಚಿಕೊಂಡಿರಲಿಲ್ಲ.
ಇದನ್ನೂ ಓದಿ: ‘ಉತ್ತರ ಪ್ರದೇಶಕ್ಕೆ ಮುಸ್ಲಿಂ ಉಪಮುಖ್ಯಮಂತ್ರಿ’; ಚುನಾವಣೆಗೂ ಮುನ್ನ ಚಂದ್ರಶೇಖರ್ ಆಜಾದ್, ಓವೈಸಿ ದೊಡ್ಡ ಭರವಸೆ
ಈ ಹಿಂದೆ ಬ್ರಜ್‌ನಗರ ಪಂಚಾಯತ್ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಈ ಮಹಿಳೆಯ ಮಾವ ಅರ್ಜುನ್ ಪ್ರಧಾನ್ ಅವರೇ ಈ ಚುನಾವಣಾ ವ್ಯವಸ್ಥೆಗಳನ್ನು ನಿರ್ವಹಿಸಿದ್ದರು. ಬಿಜೆಪಿಯೂ ಕುಮಾರಿ ಅವರಿಗೆ ಬೆಂಬಲ ನೀಡಿತ್ತು ಎಂದು ವರದಿಯಾಗಿದ್ದು, ತದನಂತರ ಅವರಿಗೆ ಗೆಲುವಿನ ಪ್ರಮಾಣಪತ್ರವನ್ನು ನೀಡಲಾಯಿತು. ವರದಿಗಳ ಪ್ರಕಾರ, ಒಂದೇ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಕುಮಾರಿ ಅವರಿಗೆ ಆತ್ಮವಿಶ್ವಾಸ ಇರಲಿಲ್ಲ. ಹೀಗಾಗಿ, ಅವರು ಇನ್ನೂ 2 ನಾಮಪತ್ರಗಳನ್ನು ಸಲ್ಲಿಸಲು ನಿರ್ಧರಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಯುವಕರಿಗೆ 5 ಸಾವಿರ ರೂ. ನಿರುದ್ಯೋಗ ಭತ್ಯೆ, 25 ಲಕ್ಷ ಸರ್ಕಾರಿ ಉದ್ಯೋಗ; ಯುಪಿ ಚುನಾವಣೆಗೆ ಸಮಾಜವಾದಿ ಪಕ್ಷ ಪ್ರಣಾಳಿಕೆ ಬಿಡುಗಡೆ
ನಿಯಮಗಳ ಪ್ರಕಾರ, ಒಬ್ಬ ಅಭ್ಯರ್ಥಿಯು ಒಂದೇ ವಾರ್ಡ್ ಅಥವಾ ಕ್ಷೇತ್ರಕ್ಕೆ ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ. ಆದರೆ, ಅವರು ಕೇವಲ ಒಂದು ರಾಜಕೀಯ ಪಕ್ಷವನ್ನು ಮಾತ್ರ ಪ್ರತಿನಿಧಿಸಬಹುದು ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು. ಆದರೆ, ಈ ಮಹಿಳೆ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ