
ಶ್ರೀನಗರ, ಆಗಸ್ಟ್ 14: ಸಿಂಧೂ ನದಿ ನೀರು ಒಪ್ಪಂದಕ್ಕೆ (Indus Waters Treaty) ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿಯ ಹೇಳಿಕೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಇಂದು ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನವು ಭಾರತೀಯರ ರಕ್ತವನ್ನು ಹೀರಿಬಿಟ್ಟಿದೆ” ಎಂದು ವಾಗ್ದಾಳಿ ನಡೆಸಿದ ಅವರು, “ಸಿಂಧೂ ಜಲ ಒಪ್ಪಂದದ ಮೂಲಕ ನಮ್ಮ ರಕ್ತವನ್ನು ಸಂಪೂರ್ಣವಾಗಿ ಹೀರಲಾಗಿದೆ ಎಂದು ನಾವು ಯಾವಾಗಲೂ ಹೇಳುತ್ತಲೇ ಬಂದಿದ್ದೇವೆ. ಇವು ನಮ್ಮ ನದಿಗಳು. ಇವುಗಳ ಮೇಲೆ ಮೊದಲ ಹಕ್ಕು ನಮ್ಮದೇ ಎಂಬುದು ಸಾರ್ವಕಾಲಿಕ ಸತ್ಯ” ಎಂದು ಅವರು ಹೇಳಿದ್ದಾರೆ.
“ಪಾಕಿಸ್ತಾನವು ಆಗಾಗ ತನ್ನನ್ನು ಕಾಶ್ಮೀರದ ಜನರ ದೊಡ್ಡ ಹಿತೈಷಿ ಎಂದು ಹೇಳಿಕೊಳ್ಳುತ್ತದೆ. ಆದರೆ ನೀರಿನ ವಿಚಾರ ಬಂದಾಗ ಆ ಕಾಳಜಿ ಎಲ್ಲಿ ಮಾಯವಾಗುತ್ತದೆ? ನಮ್ಮದೇ ನದಿಗಳನ್ನು ಬಳಸುವ ನಮ್ಮ ಹಕ್ಕನ್ನು ಕಸಿದುಕೊಂಡಾಗ ಅವರ ಕಾಳಜಿ ಎಲ್ಲಿಗೆ ಹೋಗಿತ್ತು?” ಎಂದು ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ
“ಗಡಿಯಲ್ಲಿರುವ ಒಟ್ಟು 6 ನದಿಗಳಲ್ಲಿ ಪಂಜಾಬ್ ಮೂಲಕ ಹರಿಯುವ 3 ನದಿಗಳನ್ನು ಭಾರತ ತನ್ನ ಬಳಿ ಇಟ್ಟುಕೊಂಡರೆ, ಉಳಿದ 3 ನದಿಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಯಿತು. ಆದರೂ ಪಾಕಿಸ್ತಾನಕ್ಕೆ ಸಮಾಧಾನವಿಲ್ಲ. ಅಂದಿನಿಂದ ನಾವು ಸಿಂಧೂ ನದಿ ನೀರು ಒಪ್ಪಂದದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ನಮಗೆ ಚೀನಾಬ್ ನದಿಯಿಂದ ಕುಡಿಯುವ ನೀರನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. ತುಲ್ಬುಲ್‌ನಲ್ಲಿ ಬ್ಯಾರೇಜ್ ನಿರ್ಮಿಸಲು ಮತ್ತು ನೀರಾವರಿಗಾಗಿ ಜೇಲಂ ನದಿಯನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ನೀರನ್ನು ಸಂಗ್ರಹಿಸಲು ಮತ್ತು ನಿಯಂತ್ರಿಸಲು ನಮ್ಮ ಯಾವುದೇ ನದಿಗಳ ಮೇಲೆ ದೊಡ್ಡ ಆಣೆಕಟ್ಟು ನಿರ್ಮಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು ಇದನ್ನು “ರಕ್ತದ ಹನಿ” ಎಂದು ಕರೆದಿರುವುದು ಒಳ್ಳೆಯದೇ ಆಯಿತು. ಅವರು ಹೇಳಿದ್ದು ಸರಿಯಾಗಿದೆ. ಈ ನೀರು ನಮ್ಮ ರಕ್ತ. ನಮ್ಮ ರಕ್ತವನ್ನು ಹೀರಲಾಗಿದೆ. ಈಗ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ನಮ್ಮ ಜಲಸಂಪನ್ಮೂಲಗಳನ್ನು ನಾವು ಸರಿಯಾಗಿ ಬಳಸಿಕೊಳ್ಳಲು ಇದು ರದ್ದಾಗಿಯೇ ಉಳಿಯಬೇಕು” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಪೂರ್ಣ ರಾಜ್ಯದ ಅರ್ಹತೆ ಪುನಃಸ್ಥಾಪನೆಗೆ ಒಮರ್ ಪಟ್ಟು:
ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯದ ಅರ್ಹತೆಯನ್ನು ಪುನಃಸ್ಥಾಪಿಸಬೇಕೆಂಬ ತಮ್ಮ ಬೇಡಿಕೆಯನ್ನು ಒಮರ್ ಅಬ್ದುಲ್ಲಾ ಪುನರುಚ್ಚರಿಸಿದ್ದು, ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಆರಂಭವಷ್ಟೇ. ಇನ್ನು ಮುಂದೆ ಸಾಕಷ್ಟು ಹೋರಾಟಗಳು ಬರಲಿವೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ