ಪಾಕ್ ಉಗ್ರರ ಹಿಟ್​ಲಿಸ್ಟ್​ನಲ್ಲಿ ಬಂಗಾಳದ ಸಿಎಂ; ಜಂತರ್ ಮಂತರ್ ಪ್ರತಿಭಟನೆಯೊಳಗೆ ನುಸುಳಲು ಯತ್ನಿಸಿತ್ತು ಜೈಶ್

ಈ ವಾರದ ಆರಂಭದಲ್ಲಿ ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಬಂಧಿಸಲ್ಪಟ್ಟ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಏಜೆಂಟ್ ಮೊಹಮ್ಮದ್ ಹಮೀಮ್ ಮಂಡಲ್ ನವದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಎಂಬ ಆಘಾತಕಾರಿ ವಿಷಯವನ್ನು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ, ಮಂಡಲ್ ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ದೇಶದ ರಾಜಧಾನಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಾದಿತಪ್ಪಿಸಲು ಮತ್ತು ಹಿಂಸಾಚಾರ ಸೃಷ್ಟಿಸಲು ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ಪಾಕ್ ಉಗ್ರರ ಹಿಟ್​ಲಿಸ್ಟ್​ನಲ್ಲಿ ಬಂಗಾಳದ ಸಿಎಂ; ಜಂತರ್ ಮಂತರ್ ಪ್ರತಿಭಟನೆಯೊಳಗೆ ನುಸುಳಲು ಯತ್ನಿಸಿತ್ತು ಜೈಶ್
Suvendu Adhikari
Image Credit source: PTI

Updated on: Aug 01, 2026 | 10:58 PM

ನವದೆಹಲಿ, ಆಗಸ್ಟ್ 1: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನೀಟ್ (NEET-UG) ಪರೀಕ್ಷೆಯ ಅಕ್ರಮಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಳ್ಳಲು ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಏಜೆಂಟ್ ಮೊಹಮ್ಮದ್ ಹಮೀಮ್ ಮಂಡಲ್ ಯೋಜನೆ ರೂಪಿಸಿದ್ದ ಎಂಬ ಸಂಗತಿ ಬಯಲಾಗಿದೆ. ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಈ ವಾರದ ಆರಂಭದಲ್ಲಿ ಬರ್ಧಮಾನ್‌ನಿಂದ ಹಮೀಮ್ ಮಂಡಲ್‌ನನ್ನು ಬಂಧಿಸಿತ್ತು. ಆತ ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ಪ್ರತಿಭಟನೆಯ ಸಮಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ ಸಂಚು:

ವಿಶೇಷ ಕಾರ್ಯಪಡೆಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಗೌರವ್ ಶರ್ಮಾ ಮಾತನಾಡಿ, ಹಮೀಮ್ ಮಂಡಲ್ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಲು ಯೋಜಿಸಿದ್ದ ಎಂದಿದ್ದಾರೆ. “ಹೇಗಾದರೂ ಮಾಡಿ ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ದೆಹಲಿಯ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಯೋಜನೆ ಇತ್ತು. ಇದಲ್ಲದೆ, ಹಲವಾರು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುರಿಯಾಗಿಸಲು ಯೋಜಿಸಲಾಗಿತ್ತು. ಆ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಇದ್ದರು” ಎಂದು ಗೌರವ್ ಶರ್ಮಾ ಕೊಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ

ಹಮೀಮ್ ಮಂಡಲ್ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ (ISI)ನೊಂದಿಗೆ ಸಂಪರ್ಕದಲ್ಲಿದ್ದ. ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಇತರ ಬಿಜೆಪಿ ನಾಯಕರನ್ನು ಗುರಿಯಾಗಿಸಲು ಮಂಡಲ್ ಸಂಚು ರೂಪಿಸಿದ್ದ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಆತ ರಾಜಕಾರಣಿಗಳಿಗೆ ಹನಿ-ಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಲು ಯೋಜಿಸಿದ್ದ ಎಂದಿದ್ದಾರೆ.

ಶುಕ್ರವಾರ ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಿಂದ ಬಂಧಿಸಲ್ಪಟ್ಟ ಅರ್ಪಿತಾ ಸರ್ಕಾರ್ ಜೊತೆಗೂಡಿ ಮಂಡಲ್ ಹನಿಟ್ರ್ಯಾಪ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಬ್ಬರೂ 4 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ನಂತರ ಪ್ರೀತಿಯಲ್ಲಿದ್ದರು. ಹಮೀಮ್ ಮಂಡಲ್ ತನ್ನ ಶಂಕಿತ ಹ್ಯಾಂಡ್ಲರ್‌ಗಳನ್ನು ಮೊದಲು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ, ನಂತರ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಸಂಭಾಷಣೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us