India vs Pakistan: ಭಾರತದ ಗಡಿ ಔಟ್ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು
Pakistan Objects To India's Border Outpost: ಗುಜರಾತ್ನ ಪಾಕ್ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಭಾರತ ಮೂರು ಬಾರ್ಡರ್ ಔಟ್ಪೋಸ್ಟ್ಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಸಮುದ್ರ ಬೆಟ್ ಜಾಗದಲ್ಲಿನ ಔಟ್ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ಆಕ್ಷೇಪ ಸಲ್ಲಿಸಿದೆ. ಈ ಜಾಗ ತನಗೆ ಸೇರಿದ್ದೆಂಬುದು ಅದರ ವಾದ.
ನವದೆಹಲಿ: ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಜರಾತ್ನ ಸರ್ ಕ್ರೀಕ್ (Sir Creek) ಎಂಬಲ್ಲಿ ಭಾರತ ಬಾರ್ಡರ್ ಔಟ್ಪೋಸ್ಟ್ಗಳನ್ನು (BOP- Border Outpost) ನಿರ್ಮಿಸಿದೆ. ಇದು ವಿವಾದಿತ ಜಾಗವಾಗಿದ್ದು, ಇಲ್ಲಿ ಔಟ್ಪೋಸ್ಟ್ ನಿರ್ಮಿಸಬಾರದು ಎಂದು ಪಾಕಿಸ್ತಾನ ತಕರಾರು ತೆಗೆದಿದೆ. ಔಟ್ಪೋಸ್ಟ್ಗಳನ್ನು ಭಾರತದ ಗಡಿಭಾಗದ ಒಳಗೆಯೇ ನಿರ್ಮಿಸಲಾಗಿದೆ ಎಂದು ಭಾರತ ಉತ್ತರ ನೀಡಿದೆ. ಇದು ಕಳೆದ ತಿಂಗಳು ನಡೆದಿರುವ ವಿದ್ಯಮಾನ.
ಜನವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಭೇಟಿ ನಡೆದಿತ್ತು. ಬಿಎಸ್ಎಫ್ ಜೊತೆ ಪಾಕಿಸ್ತಾನದ ಗಡಿಭದ್ರತಾ ಅಧಿಕಾರಿಗಳು ಮಾತುಕತೆ ನಡೆಸಿ ಸಮುದ್ರ ಬೆಟ್ ಪ್ರದೇಶದಲ್ಲಿ ಭಾರತ ಗಡಿ ಔಟ್ಪೋಸ್ಟ್ಗಳನ್ನು ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಬಿಎಸ್ಎಫ್ ಅಧಿಕಾರಿಗಳ ಹೇಳಿಕೆಯನ್ನಾಧರಿಸಿ ಸಿಎನ್ಎನ್ ನ್ಯೂಸ್18 ವರದಿ ಮಾಡಿದೆ.
ಈಗ ಗಡಿ ಔಟ್ಪೋಸ್ಟ್ ನಿರ್ಮಾಣವಾಗುತ್ತಿರುವ ಜಾಗದ ಬಳಿ ಇರುವ ಜಲಮಾರ್ಗದಲ್ಲಿ ಭಾರತ ಮೊದಲಿಂದಲೂ ಪಹರೆ ನಡೆಸುತ್ತಾ ಬಂದಿದೆ. ಈಗ ಪಾಕಿಸ್ತಾನ ಈ ಜಾಗ ಭಾರತಕ್ಕೆ ಸೇರಿದ್ದಲ್ಲ ಎಂದು ಹೇಳುತ್ತಿದೆ ಎಂಬುದು ಭಾರತೀಯ ಅಧಿಕಾರಿಗಳ ಹೇಳಿಕೆ.
ಇದನ್ನೂ ಓದಿ: New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್
ಸರ್ ಕ್ರೀಕ್ ಜಾಗದಲ್ಲಿ ಎಂಟು ಅಂತಸ್ತಿನ ಬಂಕರುಗಳು ಮತ್ತು ವೀಕ್ಷಣಾ ಗೋಪುರವನ್ನು ನಿರ್ಮಿಸಲು ಕೇಂದ್ರ ಗೃಹ ಸಚಿವಾಲಯ 50 ಕೋಟಿ ರೂ ನೀಡಿದೆ. ಈ ಜಾಗದಲ್ಲಿ ಪಾಕಿಸ್ತಾನೀ ಮೀನುಗಾರಿಕಾ ದೋಣಿಗಳು ಭಾರತದ ಭಾಗದೊಳಗೆ ಆಗಾಗ್ಗೆ ನುಸುಳಿ ಬರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಔಟ್ ಪೋಸ್ಟ್ ಅನ್ನು ನಿರ್ಮಿಸಲು ಭಾರತ ಹೊರಟಿರುವುದು ತಿಳಿದುಬಂದಿದೆ.
ಗುಜರಾತ್ನ ಪಾಕಿಸ್ತಾನದ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಮೂರು ಬಾರ್ಡರ್ ಔಟ್ಪೋಸ್ಟ್ಗಳನ್ನು ನಿರ್ಮಿಸುತ್ತಿದೆ. ಲಾಖಪತ್ ವಾರಿ ಬೆಟ್, ಡಫಾ ಬೆಟ್ ಮತ್ತು ಸಮುದ್ರ ಬೆಟ್, ಇವು ಪಾಕಿಸ್ತಾನದ ಗಡಿಭಾಗವನ್ನು ಬಹಳ ನಿಕಟವಾಗಿ ಗಮನಿಸಲು ಅನುಕೂಲ ಮಾಡಿಕೊಡುತ್ತದೆ.
ಇದನ್ನೂ ಓದಿ: Pulwama Terror Attack: ಪುಲ್ವಾಮಾ ದಾಳಿ ಕರಾಳ ಘಟನೆಗೆ 4 ವರ್ಷ; ಎಂದೂ ಮರೆಯದ ಭಯಾನಕ ಘಟನೆಯ ಕುರಿತ 10 ಸಂಗತಿಗಳು
ಸಮುದ್ರ ಬೆಟ್ ಜಾಗವು ಒಂದು ದ್ವೀಪ ಪ್ರದೇಶದಲ್ಲಿದೆ. ಇದು ತನಗೆ ಸೇರಿದ ಜಾಗ ಎಂಬುದು ಪಾಕಿಸ್ತಾನದ ವಾದ. ಆದರೆ, ಈ ಮೂರು ಬಾರ್ಡರ್ ಔಟ್ಪೋಸ್ಟ್ಗಳು ಭಾರತಕ್ಕೆ ಬಹಳ ಅಗತ್ಯ ಇದೆ. ಕಳೆದ ವರ್ಷ ಭಾರತದ ಭಾಗದೊಳಗೆ 22 ಪಾಕಿಸ್ತಾನೀ ಮೀನುಗಾರರು, 79 ಮೀನುಗಾರಿಕೆ ದೋಣಿಗಳು ನುಸುಳಿದ್ದವು. 250 ಕೋಟಿ ರೂ ಮೌಲ್ಯದ ಹೆರಾಯಿನ್ ಮಾದಕವಸ್ತುಗಳನ್ನು ಬಿಎಸ್ಎಫ್ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ಮೀನುಗಾರಿಕೆಯ ಸೋಗಿನಲ್ಲಿ ಉಗ್ರರು ನುಸುಳಿ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ, ಇವರ ಮೇಲೆ ಸರಿಯಾದ ಕಣ್ಣಿಡಲು ಆ ಮೂರು ಬಾರ್ಡರ್ ಔಟ್ಪೋಸ್ಟ್ಗಳು ಅವಶ್ಯಕ ಎನ್ನುತ್ತಾರೆ ಗಡಿ ಭದ್ರತಾ ಅಧಿಕಾರಿಗಳು.
Published On - 7:52 am, Tue, 14 February 23