ನಮ್ಮ ಡ್ರೋನ್‌, ಕ್ಷಿಪಣಿಗಳ ಬಗ್ಗೆ ಯೋಚಿಸಿದರೂ ಪಾಕಿಸ್ತಾನಕ್ಕೆ ನಿದ್ರೆ ಬರುವುದಿಲ್ಲ; ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ಮೋದಿ

ಪಾಕಿಸ್ತಾನವರು ನಾವು ಆದಂಪುರ್ ವಾಯನೆಲೆಯನ್ನು ಛಿದ್ರಗೊಳಿಸಿದ್ದೇವೆ ಎಂಬ ಸುಳ್ಳು ಸುದ್ದಿ ಹರಡಿದ್ದರು. ಆದರೆ, ಇಂದು ಬೆಳಿಗ್ಗೆ ಪಂಜಾಬ್‌ನ ಅದೇ ಆದಂಪುರ್ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅದೇ ವಾಯುನೆಲೆಯಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿ ಪಾಕ್ ಸೇನೆಯ ಬೆವರಿಳಿಸಿದ್ದಾರೆ. ಕಳೆದ ವಾರ ಪಾಕಿಸ್ತಾನ ಹಾರಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಿಮ್ಮೆಟ್ಟಿಸುವಲ್ಲಿ ಆದಂ‌ಪುರ ವಾಯುನೆಲೆ ಪ್ರಮುಖ ಪಾತ್ರ ವಹಿಸಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ನಡುವೆ ಸುಮಾರು 100 ಗಂಟೆಗಳ ಕಾಲ ವೈಮಾನಿಕ ದಾಳಿಗಳು ನಡೆದವು.

ನಮ್ಮ ಡ್ರೋನ್‌, ಕ್ಷಿಪಣಿಗಳ ಬಗ್ಗೆ ಯೋಚಿಸಿದರೂ ಪಾಕಿಸ್ತಾನಕ್ಕೆ ನಿದ್ರೆ ಬರುವುದಿಲ್ಲ; ಆದಂಪುರ ವಾಯುನೆಲೆಯಲ್ಲಿ ಪ್ರಧಾನಿ ಮೋದಿ
Pm Modi In Adampur

Updated on: May 13, 2025 | 4:31 PM

ಆದಂಪುರ್, ಮೇ 13: ಆಪರೇಷನ್ ಸಿಂಧೂರ್ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆ ಸಾರ್ವಜನಿಕ ಭಾಷಣ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬಿನ ಆದಂ‌ಪುರ ವಾಯುನೆಲೆಗೆ (Adampur Air Base) ಭೇಟಿ ನೀಡಿದರು. ಈ ವಾಯುನೆಲೆಯಲ್ಲಿ ಐಎಎಫ್ ಯೋಧರನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದಾರೆ. “ಪಾಕಿಸ್ತಾನಕ್ಕೆ ನಮ್ಮ ‘ಲಕ್ಷ್ಮಣ ರೇಖೆ’ ಬಹಳ ಸ್ಪಷ್ಟವಾಗಿದೆ. ಯಾವುದೇ ಭಯೋತ್ಪಾದಕ ದಾಳಿಗೆ ನಮ್ಮದೇ ಆದ ಷರತ್ತುಗಳ ಮೇಲೆ ನಿರ್ಣಾಯಕ ಉತ್ತರ ನೀಡಲಾಗುವುದು. ನಾವು ಗಾಡ್‌ಫಾದರ್‌ಗಳು ಮತ್ತು ಭಯೋತ್ಪಾದನೆಯ ರಾಜ್ಯ ಪ್ರಾಯೋಜಕರ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಅವರು ಅಮಾಯಕರನ್ನು ಕೊಂದರೆ ಅವರಿಗೆ ವಿನಾಶವೊಂದೇ ಪರಿಹಾರ ಎಂದು ತಿಳಿದಿದೆ. ಪಾಕಿಸ್ತಾನವರು ಹೇಡಿಗಳಂತೆ ಬಂದರು. ಆದರೆ ಅವರು ಎದುರಿಸಬೇಕಾಗಿದ್ದು ಭಾರತೀಯ ಸೇನೆಯನ್ನು ಎಂಬುದನ್ನು ಮರೆತಿದ್ದಾರೆ. ಪಾಕಿಸ್ತಾನದ 9 ಭಯೋತ್ಪಾದಕ ಪಡೆಗಳು ನಾಶವಾದವು. 100ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು. ಅವರ ಒಂದು ದಾಳಿ ಪಾಕಿಸ್ತಾನದಲ್ಲಿ ಮಹಾವಿನಾಶಕ್ಕೆ ಕಾರಣವಾಯಿತು. ಈಗ ಪಾಕಿಸ್ತಾನದವರು ನಮ್ಮ ಕ್ಷಿಪಣಿ, ಡ್ರೋನ್​ಗಳ ಬಗ್ಗೆ ಯೋಚನೆ ಮಾಡಿದರೂ ಸಾಕು ಕಣ್ಣುಮುಚ್ಚಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.

“ಪಾಕಿಸ್ತಾನದ ಡ್ರೋನ್, ಅವರ ಯುಎವಿಗಳು, ವಿಮಾನಗಳು ಮತ್ತು ಕ್ಷಿಪಣಿಗಳು ಇವೆಲ್ಲವೂ ನಮ್ಮ ಸಮರ್ಥ ವಾಯು ರಕ್ಷಣೆಯ ಮುಂದೆ ವಿಫಲವಾದವು. ದೇಶದ ಎಲ್ಲಾ ವಾಯುನೆಲೆಗಳ ನಾಯಕತ್ವ ಮತ್ತು ಭಾರತೀಯ ವಾಯುಪಡೆಯ ಪ್ರತಿಯೊಬ್ಬ ವಾಯುಪಡೆಯ ಯೋಧರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನೀವು ನಿಜವಾಗಿಯೂ ಅದ್ಭುತ ಕೆಲಸ ಮಾಡಿದ್ದೀರಿ” ಎಂದು ಮೋದಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ
ಪ್ರಧಾನಿ ಮೋದಿ ಈ ವಿಚಾರಗಳನ್ನು ಗೆಲ್ಲಲೇಬೇಕು, ಎಚ್ಚರ ತಪ್ಪಿದ್ರೆ ಸಂಕಷ್ಟ!
ಭಾರತ-ಪಾಕ್ ಕದನ ವಿರಾಮಕ್ಕೆ ಏಕಾಏಕಿ ಸಿದ್ಧರಾಗಿದ್ದೇಕೆ?
ಪಾಕ್​ ದಾಳಿ: ಅವಳಿ ಮಕ್ಕಳ ಸಾವು, ತಂದೆ ಐಸಿಯುನಲ್ಲಿ, ಇಡೀ ಕುಟುಂಬವೇ ನಾಶ
ನರೇಂದ್ರ ಮೋದಿ ಅವರಿಂದ ರವಾನೆಯಾದ ಸಂದೇಶಗಳೇನು?


“ಆಪರೇಷನ್ ಸಿಂಧೂರ್‌ನೊಂದಿಗೆ ನೀವು ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೀರಿ, ಜನರಲ್ಲಿ ಏಕತೆಯನ್ನು ಹೆಚ್ಚಿಸಿದ್ದೀರಿ. ಐಎಎಫ್ ಪಾಕಿಸ್ತಾನದೊಳಗಿನ ಭಯೋತ್ಪಾದಕ ನೆಲೆಗಳನ್ನು ವೇಗ ಮತ್ತು ನಿಖರತೆಯಿಂದ ಗುರಿಯಾಗಿಸಿಕೊಂಡಿತು. ಇದು ಶತ್ರುಗಳನ್ನು ದಿಗ್ಭ್ರಮೆಗೊಳಿಸಿತು. ನೀವು ಸೈನಿಕರೆಲ್ಲರೂ ನಮ್ಮನ್ನು ಹೆಮ್ಮೆಪಡಿಸಿದ್ದೀರಿ ಮತ್ತು ಇತಿಹಾಸವನ್ನು ಸೃಷ್ಟಿಸಿದ್ದೀರಿ. ವೀರರಾದ ನಿಮ್ಮೆಲ್ಲರನ್ನೂ ಭೇಟಿ ಮಾಡಲು ನಾನು ಇಂದು ಬೆಳಿಗ್ಗೆ ಇಲ್ಲಿಗೆ ಬಂದಿದ್ದೇನೆ. ದಶಕಗಳ ನಂತರವೂ, ಈ ಘಟನೆಯ ಬಗ್ಗೆ ಚರ್ಚಿಸಲಾಗುವಾಗ, ನೀವೆಲ್ಲರೂ ಅದರ ಮೊದಲ ಅಧ್ಯಾಯದಲ್ಲಿರುತ್ತೀರಿ. ಇದು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ” ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದಾಕ್ಷಣ ವರಸೆ ಬದಲಿಸಿದ ಚೀನಾ!

“ನಮ್ಮ ಡ್ರೋನ್‌ಗಳು ಶತ್ರುಗಳ ಕೋಟೆಯ ಗೋಡೆಗಳನ್ನು ನಾಶ ಮಾಡಿದಾಗ, ನಮ್ಮ ಕ್ಷಿಪಣಿಗಳು ಗುಡುಗುವ ಶಬ್ದದೊಂದಿಗೆ ತನ್ನ ಗುರಿಯನ್ನು ತಲುಪಿದಾಗ ಶತ್ರುಗಳು ‘ಭಾರತ್ ಮಾತಾ ಕಿ ಜೈ’ ಎಂಬ ಪದವನ್ನು ಕೇಳುತ್ತಾರೆ. ನಾವು ರಾತ್ರಿಯೂ ಸೂರ್ಯನನ್ನು ಬೆಳಗಿಸಿದಾಗ ಶತ್ರುಗಳು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯನ್ನು ಕೇಳುತ್ತಾರೆ. ನಮ್ಮ ಸೈನ್ಯಗಳು ಪರಮಾಣು ಬೆದರಿಕೆಯನ್ನು ಹೊಡೆದೋಡಿಸಿದಾಗ ಆಕಾಶದಿಂದ ಒಂದೇ ಒಂದು ವಿಷಯ ಪ್ರತಿಧ್ವನಿಸುತ್ತದೆ ಅದು ‘ಭಾರತ್ ಮಾತಾ ಕಿ ಜೈ’. ನೀವೆಲ್ಲರೂ ಲಕ್ಷಾಂತರ ಭಾರತೀಯರನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ಪ್ರತಿಯೊಬ್ಬ ಭಾರತೀಯನ ತಾಯಿಯನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ, ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ. ಅದಕ್ಕಾಗಿಯೇ ನಾನು ಇಂದು ಬೆಳಿಗ್ಗೆ ನಿಮ್ಮನ್ನು ನೋಡಲು ನಿಮ್ಮ ನಡುವೆ ಬಂದಿದ್ದೇನೆ” ಎಂದು ಮೋದಿ ಸೈನಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಪ್ರೋತ್ಸಾಹದ ನುಡಿಗಳನ್ನಾಡಿದ್ದಾರೆ.


“ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಯಾವುದೇ ಸ್ಥಳವೂ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಭಾರತ ರವಾನಿಸಿದೆ. ನಾವು ಅವರನ್ನು ಧೂಳೀಪಟ ಮಾಡಿದ್ದೇವೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿವೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರು ಶಾಂತಿಯುತವಾಗಿ ಬದುಕಲು ಯಾವುದೇ ಸ್ಥಳವೂ ಉಳಿದಿಲ್ಲ ಎಂಬ ಸಂದೇಶವನ್ನು ನಾವು ಅವರಿಗೆ ನೀಡಿದ್ದೇವೆ. ನಾವು ಅವರ ಮನೆಯೊಳಗೆ ನುಗ್ಗಿ ಹೊಡೆದಿದ್ದೇವೆ. ನಮ್ಮ ಧರ್ಮದ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಹಿಡಿಯುವುದು ನಮ್ಮ ಸಂಪ್ರದಾಯ. ಆದ್ದರಿಂದ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಕಸಿದುಕೊಂಡಾಗ ನಾವು ಭಯೋತ್ಪಾದಕರನ್ನು ಅವರ ಸ್ವಂತ ಮನೆಗಳಿಗೆ ನುಗ್ಗಿ ಹತ್ತಿಕ್ಕಿದ್ದೇವೆ” ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಪಂಜಾಬ್​ನ ಅದಂಪುರ ವಾಯುನೆಲೆಯಲ್ಲಿ ಸೈನಿಕರ ಜೊತೆ ಪ್ರಧಾನಿ ಮೋದಿ ಮಾತುಕತೆ

“ಆಪರೇಷನ್ ಸಿಂಧೂರ್ ಸಮಯದಲ್ಲಿ ಮಾನವಶಕ್ತಿ ಮತ್ತು ಯಂತ್ರಶಕ್ತಿಯ ನಡುವಿನ ಅದ್ಭುತ ಸಮನ್ವಯವನ್ನು ಪ್ರದರ್ಶಿಸಲಾಯಿತು. ಪಾಕಿಸ್ತಾನದ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ನಮ್ಮ ವಾಯುನೆಲೆಗಳು ಮತ್ತು ರಕ್ಷಣಾ ಮೂಲಸೌಕರ್ಯಗಳು ಹಾನಿಗೊಳಗಾಗದೆ ಉಳಿದಿವೆ. ಕಳೆದ ದಶಕದಲ್ಲಿ ನಮ್ಮ ಪಡೆಗಳು ವಿಶ್ವದ ಅತ್ಯುತ್ತಮ ಉಪಕರಣಗಳನ್ನು ಪಡೆದುಕೊಂಡಿವೆ. ತಂತ್ರಜ್ಞಾನವನ್ನು ತಂತ್ರಗಳೊಂದಿಗೆ ಸಂಯೋಜಿಸುವಲ್ಲಿ ನಾವು ನಮ್ಮ ಸಾಮರ್ಥ್ಯಗಳನ್ನು ಸಾಬೀತುಪಡಿಸಿದ್ದೇವೆ” ಎಂದು ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:09 pm, Tue, 13 May 25