
ನವದೆಹಲಿ, ಫೆಬ್ರವರಿ 3: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ನಿನ್ನೆ (ಸೋಮವಾರ) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಘೋಷಿಸಿದ ಈ ವ್ಯಾಪಾರ ಒಪ್ಪಂದವು ಹಲವಾರು ಅಂಶಗಳನ್ನು ಒಳಗೊಂಡಿದೆ. ಆದರೆ, ಟ್ರಂಪ್ ಘೋಷಿಸಿದ ಈ ಅಂಶಗಳ ಬಗ್ಗೆ ಭಾರತ ಸರ್ಕಾರ ಇನ್ನೂ ಸರಿಯಾದ ಸ್ಪಷ್ಟನೆ ನೀಡಿಲ್ಲ. ಕೇವಲ ವ್ಯಾಪಾರ ಒಪ್ಪಂದದ ಬಗ್ಗೆ ಮಾತ್ರ ಪ್ರಧಾನಿ ಮೋದಿ (PM Modi) ಖಚಿತಪಡಿಸಿದ್ದಾರೆ. ಅದರಲ್ಲಿರುವ ಉಳಿದ ವಿಷಯಗಳ ಬಗ್ಗೆ ಯಾವುದೇ ಸ್ಪಷ್ಟೀಕರಣವಾಗಲಿ, ದೃಢೀಕರಣವಾಗಲಿ ಬಂದಿಲ್ಲ.
ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ್ದರು. ಅದರಲ್ಲಿ ಶೇ. 25ರಷ್ಟು ಸುಂಕವನ್ನು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದಕ್ಕೆ ದಂಡದ ರೂಪದಲ್ಲಿ ವಿಧಿಸಲಾಗಿತ್ತು. ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸು ಒದಗಿಸಲು ಸಹಾಯ ಮಾಡಿದೆ ಎಂದು ಟ್ರಂಪ್ ಪದೇ ಪದೇ ಹೇಳಿದ್ದರು.
ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯ ಮೂಲಕ ವ್ಯಾಪಾರ ಒಪ್ಪಂದವನ್ನು ದೃಢಪಡಿಸಿದ್ದರು “ಇಂದು ನನ್ನ ಆತ್ಮೀಯ ಗೆಳೆಯ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಿ ಖುಷಿಯಾಯಿತು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇ. 18ರಷ್ಟು ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಶತಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್‌ಗೆ ಹೃತ್ಪೂರ್ವಕ ಧನ್ಯವಾದಗಳು. ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ ಅದು ನಮ್ಮ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಹಾಗೇ ಪರಸ್ಪರ ಪ್ರಯೋಜನಕಾರಿ ಸಹಕಾರಕ್ಕಾಗಿ ಅಪಾರ ಅವಕಾಶಗಳನ್ನು ತೆರೆಯುತ್ತದೆ. ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ. ಶಾಂತಿಗಾಗಿ ಅವರ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಮೋದಿ ಹೇಳಿದ್ದರು.
ಇದನ್ನೂ ಓದಿ: ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ
ನಿನ್ನೆ ನಡೆದ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 7 ಪ್ರಮುಖ ಅಂಶಗಳು ಇಲ್ಲಿವೆ:
– ಭಾರತವು ಅಮೆರಿಕದ ರಫ್ತಿನ ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಲಿದೆ.
– ಅಮೆರಿಕವು ಆಮದು ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲಿದೆ.
– ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ.
– ಭಾರತವು ಅಮೆರಿಕದಿಂದ ತೈಲ ಖರೀದಿಯನ್ನು ಹೆಚ್ಚಿಸಲಿದೆ.
– ಭಾರತವು ವೆನೆಜುವೆಲಾದಿಂದ ತೈಲ ಖರೀದಿಯನ್ನು ಪ್ರಾರಂಭಿಸಲಿದೆ.
ಆದರೆ, ವ್ಯಾಪಾರ ಒಪ್ಪಂದ ಮಾಡಿಕೊಂಡಿರುವುದಾಗಿ ಮಾತ್ರ ಘೋಷಿಸಿರುವ ಪ್ರಧಾನಿ ಮೋದಿ ಈ ಯಾವ ವಿಚಾರಗಳ ಬಗ್ಗೆಯೂ ಇನ್ನೂ ಸ್ಪಷ್ಟನೆ ನೀಡಿಲ್ಲ. ಇದು ಕೇವಲ ಟ್ರಂಪ್ ಮಾಡಿರುವ ಘೋಷಣೆಯಷ್ಟೇ. ಭಾರತದ ಇನ್ನೊಂದು ಆಪ್ತ ದೇಶವಾಗಿರುವ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಭಾರತವಾಗಲಿ ಅಥವಾ ರಷ್ಯಾವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಈ ಬಗ್ಗೆ ಇನ್ನೂ ಗೊಂದಲ ಉಳಿದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:02 pm, Tue, 3 February 26