ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿಕೊಟ್ಟ ಅಫ್ಘಾನ್ ಹಿಂದು-ಸಿಖ್ ಮುಖಂಡರು; ನರೇಂದ್ರ ಮೋದಿಯವರಿಗೆ ರುಮಾಲು, ಸಾಂಪ್ರದಾಯಿಕ ಉಡುಪು ಉಡುಗೊರೆ
ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದು-ಸಿಖ್ ಮುಖಂಡರ ನಿಯೋಗವೊಂದು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿತ್ತು. ಅವರ ಬಳಿ ಮಾತನಾಡಿದ ಮೋದಿ, ಭಾರತ ನಿಮಗೆ ಮನೆಯೇ ಹೊರತು, ನೀವು ಇಲ್ಲಿ ಅತಿಥಿಗಳಲ್ಲ ಎಂದಿದ್ದಾರೆ.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಿವಾಸಕ್ಕೆ ಅಫ್ಘಾನಿಸ್ತಾನದ ಹಿಂದು ಮತ್ತು ಸಿಖ್ ಸಮುದಾಯದ ನಾಯಕರನ್ನೊಳಗೊಂಡ ನಿಯೋಗ (Delegation of Sikhs and Hindus from Afghanistan) ಭೇಟಿ ಕೊಟ್ಟಿತ್ತು. ಹೀಗೆ ಮುಂಜಾನೆ ತಮ್ಮ ನಿವಾಸಕ್ಕೆ ಆಗಮಿಸಿದ ಅಫ್ಘಾನ್ ಮೂಲದ ಹಿಂದು ಮತ್ತು ಸಿಖ್ ನಾಯಕರಿಗೆ, ಭಾರತ ನಿಮ್ಮ ಮನೆಯೇ ಹೊರತು, ನೀವಿಲ್ಲ ಅತಿಥಿಗಳಲ್ಲ. ಭಾರತೀಯರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಹೇಳಿದ್ದಾರೆ. ಹಾಗೇ, ಈ ನಿಯೋಗವನ್ನು ಭೇಟಿಯಾದ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಫೋಟೋಗಳನ್ನು ಶೇರ್ ಮಾಡಿಕೊಂಡು, ಅಫ್ಘಾನ್ನಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದವರನ್ನು ಇಂದು ಭೇಟಿಯಾದೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Glimpses from the interaction with Hindu and Sikh refugees who came from Afghanistan. pic.twitter.com/Joo9YPFbNc
— Narendra Modi (@narendramodi) February 19, 2022
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಮೇಲೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು ಮತ್ತು ಸಿಖ್ರು ಅನೇಕರು ಭಾರತಕ್ಕೆ ಬಂದಿದ್ದಾರೆ. ಹೀಗೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರ ನಿಯೋಗವೊಂದು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿತ್ತು. ಹಾಗೇ, ಪ್ರಧಾನಿ ಮೋದಿಯವರಿಗೆ ಅಫ್ಘಾನ್ ಪೇಟ ಮತ್ತು ಸಾಂಪ್ರದಾಯಿಕ ಉಡುಗೆಯೊಂದನ್ನು ನೀಡಿದ್ದಾರೆ. ಈ ಪೇಟ (ಟರ್ಬನ್) ಅಫ್ಘಾನಿಸ್ತಾನದ ಸಂಕೇತವಾಗಿದೆ. ನೀವಿದನ್ನು ಧರಿಸಿದರೆ ಅಫ್ಘಾನ್ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಅವರಿಗೆ ನಿಜಕ್ಕೂ ಸಂತೋಷವಾಗಲಿದೆ ಎಂದು ಅವರು ಪಿಎಂಗೆ ಹೇಳಿದ್ದಾರೆ.
ಇಂದು ಅಫ್ಘಾನಿಸ್ತಾನ ಹಿಂದೂ-ಸಿಖ್ ಸಮುದಾಯದವರು ತಮ್ಮನ್ನು ಭೇಟಿಯಾದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ತಾವು 2015ರಲ್ಲಿ ಅಫ್ಘಾನ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದನ್ನು ನೆನಪಿಸಿಕೊಂಡರು. ಇನ್ನು ಭೇಟಿಗೆ ಬಂದ ಅಫ್ಘಾನ್ ಅಲ್ಪಸಂಖ್ಯಾತರು, ತಾಲಿಬಾನ್ ಆಕ್ರಮಣ ಮಾಡಿದಾಗ ತಮಗೆ ಭಾರತ ಸರ್ಕಾರ ನೀಡಿದ ನೆರವನ್ನು ನೆನಪಿಸಿಕೊಂಡು, ಕೃತಜ್ಞತೆ ಸಲ್ಲಿಸಿದರು. ಮುಂದಿನ ವಾರ ಭಾರತ ಅಫ್ಘಾನಿಸ್ತಾನದ ಜನರಿಗಾಗಿ ಸುಮಾರು 50 ಸಾವಿರ ಮೆಟ್ರಿಕ್ ಟನ್ಗಳಷ್ಟು ಗೋಧಿ ಕಳಿಸಿಕೊಡಲಿದೆ. ಗೋಧಿಯನ್ನು ಹೊತ್ತು ಹೋಗುವ ಅಫ್ಘಾನ್ ಟ್ರಕ್ ಪಾಕಿಸ್ತಾನಿ ಭೂಪ್ರದೇಶದ ಮೂಲಕವೇ ಹಾದುಹೋಗಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಾಮ್ ಬಾಗ್ಚಿ ಗುರುವಾರ ತಿಳಿಸಿದ್ದಾರೆ.
ನಿನ್ನೆ (ಫೆ.18) ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ಭಾರತದ ಹಿರಿಯ ಸಿಖ್ ನಾಯಕರೊಂದಿಗೆ ಸಂವಾದ ನಡೆಸಿದ್ದರು. ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಖ್ ನಾಯಕರನ್ನು ಭೇಟಿ ಮಾಡಿದ್ದ ಅವರು, 1947 ರ ವಿಭಜನೆಯ ಸಮಯದಲ್ಲಿ ಸಿಖ್ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್ನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದೂ ಹೇಳಿದ್ದರು.
ಇದನ್ನೂ ಓದಿ: ಭಾರತ 1947ರಲ್ಲಿ ಹುಟ್ಟಿಲ್ಲ: ಹಿರಿಯ ಸಿಖ್ ನಾಯಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ
Published On - 5:34 pm, Sat, 19 February 22