ಪ್ರಧಾನಿ ಮೋದಿ ಕೂಡ ವಿದೇಶ ಪ್ರವಾಸದಲ್ಲೇ ಇರುತ್ತಾರಲ್ಲ; ರಾಹುಲ್ ಕುರಿತ ಬಿಜೆಪಿ ಟೀಕೆಗೆ ಪ್ರಿಯಾಂಕಾ ಗಾಂಧಿ ತಿರುಗೇಟು
ಬಿಜೆಪಿ ಇಂದು ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮುಂಬರುವ ಜರ್ಮನಿ ಪ್ರವಾಸದ ಬಗ್ಗೆ ಟೀಕಾಪ್ರಹಾರ ನಡೆಸಿದ್ದಾರೆ. ಲೋಕಸಭಾ ಅಧಿವೇಶನದ ವೇಳೆ ವಿದೇಶಕ್ಕೆ ಹೋಗುತ್ತಾರೆ, ಆಮೇಲೆ ಬಂದು ನನಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ ಎನ್ನುತ್ತಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ವಿದೇಶ ಪ್ರವಾಸದಲ್ಲೇ ಇರುತ್ತಾರೆ ಎನ್ನುವ ಮೂಲಕ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ನವದೆಹಲಿ, ಡಿಸೆಂಬರ್ 10: ಲೋಕಸಭಾ ಅಧಿವೇಶನ ನಡೆಯುತ್ತಿರುವಾಗಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಜರ್ಮನಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿಯನ್ನು ಪ್ರವಾಸದ ನಾಯಕ, ಅರೆಕಾಲಿಕ ನಾಯಕ ಎಂದೆಲ್ಲ ಲೇವಡಿ ಮಾಡಿದ್ದರು. ಬಿಜೆಪಿಯ ಟೀಕೆಗೆ ಕಾಂಗ್ರೆಸ್‌ನ ಹಿರಿಯ ನಾಯಕಿ ಮತ್ತು ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.
“ಪ್ರಧಾನಿ ಮೋದಿ ತಮ್ಮ ಕೆಲಸದ ಸಮಯದ ಅರ್ಧದಷ್ಟು ಭಾಗವನ್ನು ದೇಶದ ಹೊರಗೆ ಕಳೆಯುತ್ತಾರೆ. ಹೀಗಿದ್ದಮೇಲೆ ವಿರೋಧ ಪಕ್ಷದ ನಾಯಕನ ವಿದೇಶ ಪ್ರವಾಸದ ಬಗ್ಗೆ ಅವರು ಏಕೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ವೋಟ್ ಚೋರಿ ರಾಷ್ಟ್ರವಿರೋಧಿ ಕೃತ್ಯ; ಎಸ್‌ಐಆರ್ ಚರ್ಚೆ ವೇಳೆ ರಾಹುಲ್ ಗಾಂಧಿ ಆರೋಪ
ಲೋಕಸಭಾ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಕೂಡ ಬಿಜೆಪಿಗೆ ಪ್ರತಿಕ್ರಿಯಿಸಿದ್ದು, “ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಬಳಿ ಉತ್ತರಗಳಿಲ್ಲ. ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಬಿಜೆಪಿ ಬಳಿ ಉತ್ತರವಿಲ್ಲದಿದ್ದಾಗ, ಅವರನ್ನು ಕೆಣಕುವುದೊಂದೇ ಅವರಿಗೆ ಉಳಿದಿರುವ ಮಾರ್ಗ” ಎಂದು ಅವರು ಹೇಳಿದ್ದಾರೆ.
#WATCH | On BJP criticising Lok Sabha LoP and Congress MP Rahul Gandhi’s upcoming visit to Germany, Congress MP Priyanka Gandhi Vadra says, “Modi ji spends almost half of his working time outside the country. Why are they raising questions on the Leader of the Opposition’s… pic.twitter.com/qrpYOZANXw
— ANI (@ANI) December 10, 2025
ಇದನ್ನೂ ಓದಿ: ಪ್ರವಾಸದ ನಾಯಕ; ರಾಹುಲ್ ಗಾಂಧಿಯ ಜರ್ಮನಿ ಭೇಟಿಗೆ ಬಿಜೆಪಿ ಲೇವಡಿ
ರಾಹುಲ್ ಗಾಂಧಿ ಡಿಸೆಂಬರ್ 15 ರಿಂದ 20 ರವರೆಗೆ ಬರ್ಲಿನ್‌ಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಜರ್ಮನ್ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಭಾರತೀಯ ವಲಸೆಗಾರರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ ಎಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ತಿಳಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 19ರಂದು ಮುಕ್ತಾಯಗೊಳ್ಳಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




