
ಪುಣೆ, ನವೆಂಬರ್ 24: ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಗೆಳತಿಯನ್ನು ಕೊಲೆ ಮಾಡಿ ಬಳಿಕ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದ ಘಟನೆ ಮಹಾರಾಷ್ಟ್ರದ ಪುಣೆಯ ಹಿಂಜೆವಾಡಿ ಪ್ರದೇಶದಲ್ಲಿ ನಡೆದಿದೆ. ಪಿಜಿಯಲ್ಲಿ ಮಹಿಳಾ ಸಾಫ್ಟ್ವೇರ್ ಎಂಜಿನಿಯರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಆಕೆಯ ಮೇಲೆ ನಡೆಸಿದ ಆರೋಪದಲ್ಲಿ ಶುಂಭನನ್ನು ಪೊಲೀಸರು ಬಂದಿಸಿದ್ದಾರೆ.
ಮೃತ ಮಹಿಳೆಯನ್ನು 27 ವರ್ಷದ ಕೋಮಲ್ ರಾಜೇಂದ್ರ ದಹಲೆ ಎಂದು ಗುರುತಿಸಲಾಗಿದೆ. ಅವರು ವಾರ್ಧಾ ಜಿಲ್ಲೆಯವರು. ಆರೋಪಿಯಾಗಿರುವ ಶುಭಂ ಕಲ್ಬಂಡೆ ಬುಲ್ಧಾನಾ ಜಿಲ್ಲೆಯ ನಿವಾಸಿ. ಕೋಮಲ್ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶುಭಂ ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾಗಿದ್ದರು. ಇಬ್ಬರೂ ಪುಣೆಯ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದರು.
ಭಾನುವಾರ ರಾತ್ರಿ ಇಬ್ಬರೂ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಬಳಿಕ ಕೋಮಲ್ ವಾಸವಿದ್ದ ಹಿಂಜೆವಾಡಿಯ ಸಖಾರೆ ವಸ್ತಿ ಪ್ರದೇಶದ ಪ್ರಿಸ್ಟೈನ್ ಪಿಜಿಗೆ ಮರಳಿದ್ದರು. ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಕಳೆದ ಎರಡು-ಮೂರು ತಿಂಗಳಿಂದಲೂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ್ಗೆ ವಾಗ್ವಾದ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಜಗಳ ತೀವ್ರಗೊಂಡಿದೆ. ಈ ವೇಳೆ ಶುಭಂ ಕೋಮಲ್ ಮೇಲೆ ಕೈಗಳಿಂದ ಹಲವು ಬಾರಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದರಿಂದ ಕೋಮಲ್ ಗಂಭೀರ ಸ್ಥಿತಿಗೆ ತಲುಪಿದ್ದು, ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ನಡೆದ ಬಳಿಕ ಶುಭಂ ಕೋಮಲ್ ಅವರ ಮೃತದೇಹದ ಪಕ್ಕದಲ್ಲೇ ಹಲವು ಗಂಟೆಗಳ ಕಾಲ ಕುಳಿತಿದ್ದ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಸುಮಾರು 6.30ಕ್ಕೆ ಪೊಲೀಸರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸುವಂತೆ ಮನವಿ ಮಾಡಿದ್ದಾನೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಪಿಜಿಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೋಮಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ವಿಚಾರಣೆ ಮತ್ತು ಪ್ರಾಥಮಿಕ ತನಿಖೆಯ ಬಳಿಕ ಶುಭಂನನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ನಿಖರವಾಗಿ ಸಾವಿಗೆ ಕಾರಣವೇನು ಎಂಬುದನ್ನು ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮುಂದಿನ ತನಿಖೆಯಿಂದ ಖಚಿತಪಡಿಸಿಕೊಳ್ಳಬೇಕಿದೆ. ಹಿಂಜೆವಾಡಿ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 5 ತಿಂಗಳ ಹಿಂದಷ್ಟೇ ಮದುವೆ; 2 ತಿಂಗಳ ಹಿಂದೆಯೇ ಕೊಲೆ; ಬೆಂಗಳೂರಿನ ಅಸ್ಥಿಪಂಜರ ಕೇಸ್‌ಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರದ ನಾಸಿಕ್‌ನಲ್ಲೂ ಲಿವ್‌ಇನ್ ಸಂಬಂಧಕ್ಕೆ ಸಂಬಂಧಿಸಿದ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿತ್ತು. 40 ವರ್ಷದ ವಸಂತ್ ಗೋರಖನಾಥ್ ಸತ್ಪುಟೆ ಎಂಬ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಆತನ ಲಿವ್‌ಇನ್ ಸಂಗಾತಿ ಹಸೀನಾ ಶೇಖ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ 2026ರ ಆಗಸ್ಟ್‌ನಲ್ಲಿ ನಡೆದಿತ್ತು.
ನಾಸಿಕ್‌ನ ಪಠಾರ್ಡಿ ಫಾಟಾ ಪ್ರದೇಶದ ಸ್ವರಾಜ್ಯನಗರದಲ್ಲಿ ವಾಸವಿದ್ದ ವಸಂತ್ ಆಗಸ್ಟ್ 5ರಿಂದ ನಾಪತ್ತೆಯಾಗಿದ್ದರು. ಅವರ ಚಾಲಕ ಆಗಸ್ಟ್ 16ರಂದು ಪೊಲೀಸರಿಗೆ ದೂರು ನೀಡಿದ್ದರು. ವಸಂತ್ ಅವರ ನಾಪತ್ತೆಯ ಹಿಂದೆ ಅಪಹರಣ ಅಥವಾ ಹತ್ಯೆಯ ಶಂಕೆಯಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಪೊಲೀಸರ ತನಿಖೆಯ ಪ್ರಕಾರ, ಆಗಸ್ಟ್ 6ರ ಬೆಳಗಿನ ಜಾವ ಸುಮಾರು 3 ಗಂಟೆಗೆ ಹಸೀನಾ ಮತ್ತು ಸಾಹಿಲ್ ರಫೀಕ್ ಶಾ ಸೇರಿ ವಸಂತ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪವಿದೆ. ಬಳಿಕ ಸಾಹಿಲ್, ಮೊಯಿನ್ ಮುಖ್ತಾರ್ ಶಾ ಮತ್ತು ಸರ್ಫರಾಜ್ ಅಬ್ರಾರ್ ಸಯ್ಯದ್ ಅವರ ಸಹಾಯದಿಂದ ಮೃತದೇಹವನ್ನು ಚೀಲದಲ್ಲಿ ತುಂಬಿ ಕಾರಿನಲ್ಲಿ ಸಾಗಿಸಿ ಕಸಾರಾ ಘಾಟ್‌ನ ಅರಣ್ಯ ಪ್ರದೇಶದಲ್ಲಿ ಎಸೆದಿದ್ದರು ಎನ್ನಲಾಗಿದೆ.
ತನಿಖೆ ನಡೆಸಿದ ಅಪರಾಧ ವಿಭಾಗದ ಪೊಲೀಸರು ಕಸಾರಾ ಘಾಟ್‌ನಲ್ಲಿ ಶೋಧ ನಡೆಸಿ ಮೃತದೇಹವನ್ನು ಪತ್ತೆಹಚ್ಚಿದ್ದರು. ಈ ಪ್ರಕರಣದಲ್ಲಿ ಹಸೀನಾ ಹಬೀಬ್ ಶೇಖ್, ಸಾಹಿಲ್ ರಫೀಕ್ ಶಾ, ಮೊಯಿನ್ ಮುಖ್ತಾರ್ ಶಾ ಮತ್ತು ಸರ್ಫರಾಜ್ ಅಬ್ರಾರ್ ಸಯ್ಯದ್ ಅವರನ್ನು ಬಂಧಿಸಲಾಗಿತ್ತು. ಹಸೀನಾ ಮತ್ತು ಸಾಹಿಲ್ ನಡುವಿನ ಸಂಬಂಧಕ್ಕೆ ವಸಂತ್ ಅಡ್ಡಿಯಾಗಿದ್ದರು ಎಂಬುದು ಆರೋಪಿಗಳ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ