
ನವದೆಹಲಿ, ಸೆಪ್ಟೆಂಬರ್ 24: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಚುನಾವಣಾ ಆಯೋಗದ ಕಾರ್ಯಾಚರಣೆ ಕುರಿತಾದ ಆಂಗ್ಲ ಪತ್ರಿಕೆಯೊಂದರ ವರದಿಯನ್ನು ಆಧರಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ಸುದ್ದಿಗೋಷ್ಠಿಗೆ ಬಿಜೆಪಿ ತಿರುಗೇಟು ನೀಡಿದೆ. ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನವೇ ಇಲ್ಲ ಎಂದು ಬಿಜೆಪಿ ಟೀಕಿಸಿದೆ. ಇಂದು ಸುದ್ದಿಗೋಷ್ಠಿಯಲ್ಲಿನ ರಾಹುಲ್ ಗಾಂಧಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, “ಕಾಂಗ್ರೆಸ್‌ಗೆ ತನ್ನ ಸ್ವಂತ ಬಲದ ಮೇಲೆ ಒಂದೇ ಒಂದು ಚುನಾವಣೆಯನ್ನೂ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಪ್ರಿಯಾಂಕಾ ಗಾಂಧಿ ವಯನಾಡ್ ಕ್ಷೇತ್ರವನ್ನು ಗೆದ್ದಿರುವುದೇ ಮುಸ್ಲಿಂ ಲೀಗ್ ಬೆಂಬಲದಿಂದ. ಪಶ್ಚಿಮ ಬಂಗಾಳದಲ್ಲಿ 1977ರಿಂದೀಚೆಗೆ ಕಾಂಗ್ರೆಸ್ ಸರ್ಕಾರವಿಲ್ಲ. ಬಿಹಾರದಲ್ಲಿ 1990ರಿಂದ, ಉತ್ತರ ಪ್ರದೇಶದಲ್ಲಿ 1989ರಿಂದ ಹಾಗೂ ಒಡಿಶಾದಲ್ಲಿ 1999ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಇಲ್ಲ” ಎಂದು ಕಾಂಗ್ರೆಸ್ ಪಕ್ಷದ ಸೋಲಿನ ಇತಿಹಾಸವನ್ನು ತೆರೆದಿಟ್ಟರು.
ಜನರ ಪ್ರಜಾಸತ್ತಾತ್ಮಕ ಬೆಂಬಲವನ್ನು ಪಡೆಯಲು ವಿಫಲವಾಗಿರುವ ಗಾಂಧಿ ಕುಟುಂಬವು ಪ್ರಸಕ್ತ ಸಾಲಿನ ಸರಣಿ ಸೋಲುಗಳಿಂದ ಹತಾಶಗೊಂಡು ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಗಮನಕ್ಕೆ ತರದೆ ಅಥವಾ ಅವರ ಅನುಮತಿಯಿಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಸೇರಿದಂತೆ ಹಲವು ಆದೇಶಗಳನ್ನು ಹೊರಡಿಸಿದ್ದರು. ಇದರ ವಿರುದ್ಧ ಇಬ್ಬರೂ ಆಯುಕ್ತರು 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತ ದಾಖಲೆಗಳಲ್ಲೇ ಆಕ್ಷೇಪಣೆ ಸಲ್ಲಿಸಿದ್ದರು ಎಂಬ ವರದಿ ಬಹಿರಂಗಗೊಂಡ ಬೆನ್ನಲ್ಲೇ ಈ ರಾಜಕೀಯ ಸಂಘರ್ಷ ತೀವ್ರಗೊಂಡಿದೆ.
ಇದನ್ನೂ ಓದಿ: ‘ದೇಶದ್ರೋಹಿ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು’; ರಾಹುಲ್ ಗಾಂಧಿ ಒತ್ತಾಯ
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಭಾರತೀಯ ರಾಜಕೀಯದಲ್ಲಿ ಆಡಳಿತ ವಿರೋಧಿ ಅಲೆ ಎಂಬ ಮೂಲಭೂತ ಶಕ್ತಿಯಿದೆ. ಅದು ಯಾವುದೇ ಸರ್ಕಾರವನ್ನಾದರೂ ಅತ್ಯಂತ ವೇಗವಾಗಿ ವಿರೋಧಿಸಲು ಪ್ರಾರಂಭಿಸುತ್ತದೆ ಮತ್ತು ಯಾರನ್ನೂ ಬಿಡುವುದಿಲ್ಲ. 1971ರ ಬಾಂಗ್ಲಾದೇಶ ಯುದ್ಧ ಗೆದ್ದು ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇಂದಿರಾ ಗಾಂಧಿಯವರೂ ಸಹ ಒಂದೆರಡು ವರ್ಷಗಳಲ್ಲಿ ತೀವ್ರ ಆಡಳಿತ ವಿರೋಧಿಯನ್ನು ಎದುರಿಸಬೇಕಾಯಿತು. ಇದು ಪ್ರತಿ ನಾಯಕನಿಗೂ, ಕಾಂಗ್ರೆಸ್‌ಗೂ ಮತ್ತು ಪ್ರಾದೇಶಿಕ ಪಕ್ಷಗಳಿಗೂ ಅನುಭವವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಮಾತ್ರ ಏಕೆ ಆಡಳಿತ ವಿರೋಧಿ ಅಲೆ ಪರಿಣಾಮ ಬೀರಲಿಲ್ಲ?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.
“50 ವರ್ಷಗಳಿಂದ ಹರಿಯಾಣದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಅಧಿಕಾರ ಬದಲಾಗುತ್ತಿತ್ತು. ಇದ್ದಕ್ಕಿದ್ದಂತೆ ಅಲ್ಲಿ ಆಡಳಿತ ವಿರೋಧಿ ಅಲೆ ಮಾಯವಾಯಿತು. ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲೂ ಇದೇ ಆಯಿತು. ಉತ್ತರ ಪ್ರದೇಶದಲ್ಲಿ ಒಮ್ಮೆ ಸಮಾಜವಾದಿ ಪಕ್ಷ, ಮತ್ತೊಮ್ಮೆ ಬಿಎಸ್‌ಪಿ ಅಧಿಕಾರಕ್ಕೆ ಬರುತ್ತಿದ್ದವು, ಆದರೆ ಈಗ ಎಲ್ಲವೂ ನಿಂತುಹೋಗಿದೆ. ಒಬ್ಬ ವ್ಯಕ್ತಿಯ ಜನಪ್ರಿಯತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು, ಆದರೆ ಆಡಳಿತ ವಿರೋಧಿ ಅಲೆಯೇ ಕಣ್ಮರೆಯಾಗುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸದ್ದಾಂ ಹುಸೇನ್ ಅವರ ಇರಾಕ್‌ನಲ್ಲಿ ಅಥವಾ ಉತ್ತರ ಕೊರಿಯಾದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ, ಪ್ರಜಾಪ್ರಭುತ್ವವಿರುವ ಯಾವುದೇ ದೇಶದಲ್ಲಿ ಈ ರೀತಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಇಸಿ ಜ್ಞಾನೇಶ್ ಕುಮಾರ್ 48 ಗಂಟೆಯಲ್ಲಿ ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಬೃಹತ್ ಪ್ರತಿಭಟನೆ; ಸಿಜೆಪಿ ಎಚ್ಚರಿಕೆ
ಈ ಪ್ರಶ್ನೆಗೆ ಕೊನೆಗೂ ನಮಗೆ ಉತ್ತರ ಸಿಕ್ಕಿದೆ ಎಂದ ರಾಹುಲ್ ಗಾಂಧಿ, ದೇಶದಲ್ಲಿ ‘ವೋಟ್ ಚೋರಿ’ (ಮತಗಳ ಕಳವು) ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. “ಚುನಾವಣಾ ಆಯೋಗವು ರಕ್ಷಿಸಬೇಕಾದ ‘ಮತ’ದಿಂದ ನಮ್ಮ ಸಂವಿಧಾನಕ್ಕೆ ಶಕ್ತಿ ಸಿಗುತ್ತದೆ. ಸಂವಿಧಾನದಿಂದ ಕಾನೂನುಗಳು ರೂಪುಗೊಳ್ಳುತ್ತವೆ ಮತ್ತು ಕಾನೂನುಗಳಿಂದ ಸ್ವಾಯತ್ತ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಒಂದು ವೇಳೆ ಮತವೇ ನಾಶವಾದರೆ, ಸಂವಿಧಾನವೇ ನಾಶವಾದಂತೆ. ಸಂವಿಧಾನವೇ ಇಲ್ಲದಿದ್ದರೆ ಸಂಸತ್ತು ಮಾಡುವ ಕಾನೂನುಗಳು ಕಾನೂನುಬಾಹಿರವಾಗುತ್ತವೆ. ಆ ಕಾನೂನುಗಳು ಕಾನೂನುಬಾಹಿರವಾದರೆ ಸಂಸ್ಥೆಗಳಿಗೆ ಬೆಲೆಯೇ ಇರುವುದಿಲ್ಲ. ವೋಟ್ ಚೋರಿಯಿಂದ (ಮತ ಕಳವು) ಕಾನೂನು ಚೋರಿ ಹಾಗೂ ಸಂಸ್ಥೆಗಳ ಕಳವು ನಡೆಯುತ್ತಿದೆ” ಎಂದು ರಾಹುಲ್ ಗಾಂಧಿ ವಾದಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ