ಜನರಿಗೆ ಮೋಸ ಮಾಡುತ್ತಿರುವ ಭಾರತ ಸರ್ಕಾರ: ಅಮೆರಿಕ ಸೇನಾಧಿಕಾರಿಯ ಲಡಾಖ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಭವಿಷ್ಯದಲ್ಲಿ ಅನಾಹುತಕಾರಿ ಆಗಬಲ್ಲ ಕೆಲಸವನ್ನು ಚೀನಾ ಮಾಡುತ್ತಿದೆ. ಅದನ್ನು ನಿರ್ಲಕ್ಷಿಸುತ್ತಿರುವ ಭಾರತ ಸರ್ಕಾರವು ದೇಶಕ್ಕೆ ಮೋಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜನರಿಗೆ ಮೋಸ ಮಾಡುತ್ತಿರುವ ಭಾರತ ಸರ್ಕಾರ: ಅಮೆರಿಕ ಸೇನಾಧಿಕಾರಿಯ ಲಡಾಖ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ರಾಹುಲ್ ಗಾಂಧಿ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 10, 2022 | 4:58 PM

ದೆಹಲಿ: ಭಾರತದ ಗಡಿಯುದ್ದಕ್ಕೂ ಚೀನಾ ನಿರ್ಮಿಸಿರುವ ಸೇನಾ ಮೂಲಸೌಕರ್ಯ (Military Infrastructure) ವಿಚಾರದಲ್ಲಿ ಸರ್ಕಾರವು ಸುಳ್ಳು ಹೇಳುತ್ತಿದೆ. ಭವಿಷ್ಯದಲ್ಲಿ ಅನಾಹುತಕಾರಿ ಆಗಬಲ್ಲ ಕೆಲಸವನ್ನು ಚೀನಾ (China) ಮಾಡುತ್ತಿದೆ. ಅದನ್ನು ನಿರ್ಲಕ್ಷಿಸುತ್ತಿರುವ ಭಾರತ ಸರ್ಕಾರವು (Govt of India) ದೇಶಕ್ಕೆ ಮೋಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮಾಡಿದ್ದಾರೆ. ಭಾರತದ ಭೌಗೋಳಿಕ ಸಮಗ್ರತೆ ಕಾಪಾಡಲು ಬದ್ಧ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಕೇಂದ್ರ ಸರ್ಕಾರದ ಭರವಸೆ ಪ್ರಕಟವಾದ ಒಂದು ದಿನದ ನಂತರ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದಾರೆ.

ಭಾರತದ ಗಡಿಯಲ್ಲಿ ಚೀನಾ ನಿರ್ಮಿಸಿರುವ ಮೂಲಸೌಕರ್ಯ ಕುರಿತಂತೆ ಅಮೆರಿಕದ ಜನರಲ್ ಚಾರ್ಲ್ಸ್ ಎ ಫ್ಲೈನ್​ ನೀಡಿರುವ ಹೇಳಿಕೆಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ‘ಚೀನಾ ಸೇನೆಯ ಪಶ್ಚಿಮ ಮಿಲಿಟರಿ ಕಮಾಂಡ್ ರೂಪಿಸಿರುವ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕಿದೆ. ಈ ಕಟ್ಟಡ ಮತ್ತು ಇತರ ಸೌಕರ್ಯಗಳನ್ನು ಚೀನಾ ಏಕೆ ನಿರ್ಮಿಸಿದೆ, ಅವರು ಏನು ಸಾಧಿಸಬೇಕೆಂದಿದ್ದಾರೆ’ ಎಂದು ಜನರಲ್ ಚಾರ್ಲ್ಸ್ ಪ್ರಶ್ನಿಸಿದ್ದರು. ಭಾರತಕ್ಕೆ ಈ ಸೇನಾಧಿಕಾರಿಗಳ ನಾಲ್ಕು ದಿನಗಳ ಭೇಟಿಗೆಂದು ಬಂದಿದ್ದರು.

ಚಾರ್ಲ್ಸ್ ಅವರ ಹೇಳಿಕೆಯನ್ನು ಆಧಾರವಾಗಿ ಇರಿಸಿಕೊಂಡು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ‘ನಮ್ಮ ದೇಶದ ಭದ್ರತೆ ಆತಂಕದಲ್ಲಿದೆ. ಭಾರತದ ಗಡಿಯಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಶೀಘ್ರ ಗಮನ ಹರಿಸಬೇಕು ಎಂದು ಎಚ್ಚರಿಸಲು ಅಮೆರಿಕದಿಂದ ಸೇನಾಧಿಕಾರಿ ಬರಬೇಕಿದೆ. ಜಗತ್ತು ಸುತ್ತುವ ನಮ್ಮ ಪ್ರಧಾನಿಗೆ ಚೀನಾ ಎಂದು ಉಚ್ಚರಿಸುವುದು ಹೇಗೆ ಎನ್ನುವುದೇ ಮರೆತು ಹೋಗಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದರು.

‘ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನನಗೆ ಪ್ರಶ್ನೆ ಕೇಳಲು ಅವಕಾಶ ಸಿಗಲಿಲ್ಲ. ಸಂಸತ್ತಿನಲ್ಲಿ ಯಾವುದೇ ಚರ್ಚೆಯೂ ನಡೆಯಲಿಲ್ಲ. ವಿದೇಶಿಗರೊಬ್ಬರು ಬಂದು ಚೀನಾ ಗಡಿ ವಿದ್ಯಮಾನಗಳ ಮಾಹಿತಿ ಕೊಡಬೇಕಿದೆ. ಇದು ಸರ್ಕಾರಕ್ಕೆ ನಾಚಿಕೆ ತರಿಸಬೇಕು’ ಎಂದು ಓವೈಸಿ ವ್ಯಂಗ್ಯವಾಡಿದರು.

ಪ್ರತಿಪಕ್ಷಗಳ ಟೀಕೆಯ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ಅರಿಂದಮ್ ಬಾಗ್​ಚಿ, ‘ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದ ಭೌಗೋಳಿಕ ಸಮಗ್ರತೆ ಮತ್ತು ಭದ್ರತೆ ಕಾಪಾಡಲು ಅಗತ್ಯ ಕ್ರಮಗಳನ್ನು ಸರ್ಕಾರವು ತೆಗೆದುಕೊಂಡಿದೆ’ ಎಂದು ಹೇಳಿದ್ದರು.

ಅಮೆರಿಕ ಸೇನಾಧಿಕಾರಿಯ ಹೇಳಿಕೆಯನ್ನು ಚೀನಾ ಸರ್ಕಾರವು ಸಾರಾಸಗಟಾಗಿ ತಳ್ಳಿ ಹಾಕಿದೆ. ‘ಅಮೆರಿಕದ ಕೆಲ ಅಧಿಕಾರಿಗಳು ಎರಡೂ ದೇಶಗಳ ನಡುವೆ ವೈಷಮ್ಯ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಅನಾಹುತಕಾರಿ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಅಮೆರಿಕ ಪ್ರಯತ್ನ ಮಾಡಲಿದೆ ಎಂದು ಆಶಿಸುತ್ತೇವೆ’ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಝ್ವೌ ಲಿಜಿಯನ್ ಹೇಳಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada