ವಯನಾಡು: ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ಇಂದು ಕೇರಳದ ವಯನಾಡು ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆರಳಲಿದ್ದಾರೆ. ನಂತರ ರಸ್ತೆ ಮಾರ್ಗವಾಗಿ ಕೇರಳದ ಪ್ರವಾಹಪೀಡಿತ ಪ್ರದೇಶವಾದ ಮೆಪ್ಪಾಡಿ ತಲುಪಲಿದ್ದಾರೆ. ನಂತರ ವಯನಾಡು, ಮೆಪ್ಪಾಡಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ವಿಮ್ಸ್ ಆಸ್ಪತ್ರೆಗೆ ಕೂಡ ರಾಹುಲ್ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಮೆಪ್ಪಾಡಿಯಿಂದ ಮೈಸೂರಿಗೆ ಹಿಂತಿರುಗುವ ರಾಹುಲ್ ಗಾಂಧಿ ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ.
ಭೂಕುಸಿತದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಯನಾಡ್ ಜಿಲ್ಲಾಧಿಕಾರಿ ಅವರೊಂದಿಗೆ ರಾಹುಲ್ ಗಾಂಧಿ ಮಂಗಳವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ತುರ್ತು ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ವಯನಾಡಿನಲ್ಲಿ ಸಂಭವಿಸಿದ ಅನಾಹುತಕ್ಕೆ ಸಂತಾಪ ವ್ಯಕ್ತಪಡಿಸಿದ ಅವರು, ವಯನಾಡಿನಲ್ಲಿ ತಕ್ಷಣದ ಮಧ್ಯಸ್ಥಿಕೆಗೆ ಕೇಂದ್ರ ಸಚಿವರೊಂದಿಗೆ ಮಾತನಾಡುವುದಾಗಿ ಮತ್ತು ಯುಡಿಎಫ್ ಕಾರ್ಯಕರ್ತರು ನೇರವಾಗಿ ರಕ್ಷಣಾ ಕಾರ್ಯಾಚರಣೆಗೆ ಬರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತದಲ್ಲಿ 98 ಜನ ಸಾವು; ಒಗ್ಗಟ್ಟಾಗಿ ರಕ್ಷಣಾ ಕಾರ್ಯಾಚರಣೆಗೆ ಕೇರಳ ಸಿಎಂ ಕರೆ
ಈ ಬಾರಿ ವಯನಾಡು ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ಗಾಂಧಿ ಕೂಡ ರಾಹುಲ್ ಗಾಂಧಿಯ ಜೊತೆಗೆ ವಯನಾಡಿಗೆ ಭೇಟಿ ನೀಡಲಿದ್ದಾರೆ.
ಮಂಗಳವಾರ ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಹೊರಡುತ್ತವೆ. ಇನ್ನೂ ಸಿಕ್ಕಿಬಿದ್ದಿರುವವರನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಕರೆತರಲಾಗುವುದು. ನಾನು ಕೇರಳ ಮುಖ್ಯಮಂತ್ರಿ ಮತ್ತು ವಯನಾಡ್ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಸೌಲಭ್ಯ ಒದಗಿಸುವುದಾಗಿ ಸೂಚಿಸಿದ್ದೇನೆ” ಎಂದು ಹೇಳಿದ್ದರು.
ಇದನ್ನೂ ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ; ಮಾಧವ್ ಗಾಡ್ಗೀಳ್ ಸಮಿತಿಯ ವರದಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ?
“ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರೊಂದಿಗೂ ನನ್ನ ಹೃತ್ಪೂರ್ವಕ ಸಂತಾಪಗಳು. ಎಲ್ಲರನ್ನೂ ಆದಷ್ಟು ಬೇಗ ಸುರಕ್ಷಿತವಾಗಿ ಕರೆತರಲೆಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ” ಎಂದು ಪ್ರಿಯಾಂಕಾ ಗಾಂಧಿ ಕೂಡ ಪೋಸ್ಟ್ ಮಾಡಿದ್ದರು. ಕೇರಳದ ವಯನಾಡಿನಲ್ಲಿ ಈಗಾಗಲೇ ಸಾವಿನ ಸಂಖ್ಯೆ 110ರ ಗಡಿ ದಾಟಿದೆ.
ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಕೂಡ ಸಜ್ಜುಗೊಳಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ರಕ್ಷಣಾ ಪ್ರಯತ್ನಗಳು ಸವಾಲಾಗಿಯೇ ಉಳಿದಿವೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ