ರಾಜಾ ರಘುವಂಶಿ ಹತ್ಯೆ; ರಾಜ್ ಕುಶ್ವಾಹ ಖರೀದಿಸಿದ್ದ ಪಿಸ್ತೂಲ್, ಮದ್ದುಗುಂಡುಗಳು ಪತ್ತೆ
ರಾಜಾ ರಘುವಂಶಿಯ ಕೊಲೆಯ ಸಂಚು ಮಾಡಿದ್ದ ಅವರ ಪತ್ನಿ ಸೋನಂ ಹಾಗೂ ಆಕೆಯ ಪ್ರಿಯಕರ ರಾಜ್ ಕುಶ್ವಾಹಾ ಮೇಘಾಲಯದಲ್ಲಿ ಹನಿಮೂನ್‌ಗೆ ಹೋಗಿದ್ದ ರಾಜಾ ರಘುವಂಶಿಯನ್ನು ಕೊಲೆ ಮಾಡಿದ್ದರು. ಇದೀಗ ಪೊಲೀಸರು ದೇಶೀ ನಿರ್ಮಿತ ಪಿಸ್ತೂಲ್, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ಲಾನ್ ಬಿ ಮಾಡಿದ್ದ ಸೋನಂ ಹಾಗೂ ರಾಜ್ ಒಂದುವೇಳೆ ತಮ್ಮ ಮೊದಲ ಪ್ಲಾನ್ ಸಕ್ಸಸ್ ಆಗದಿದ್ದರೆ ಪಿಸ್ತೂಲ್ನಿಂದ ಗುಂಡು ಹಾರಿಸಿ ರಾಜಾನನ್ನು ಕೊಲ್ಲಲು ಪರ್ಯಾಯ ಪ್ಲಾನ್ ಮಾಡಿಕೊಂಡಿದ್ದರು.

ನವದೆಹಲಿ, ಜೂನ್ 26: ಇಂದೋರ್ ಉದ್ಯಮಿ ರಾಜಾ ರಘುವಂಶಿ (Raja Raghuvanshi) ಹತ್ಯೆಯ ತನಿಖೆ ನಡೆಸುತ್ತಿರುವ ಶಿಲ್ಲಾಂಗ್ ಪೊಲೀಸರು, ಮೊದಲ ಪ್ರಯತ್ನ ವಿಫಲವಾದರೆ ಎರಡನೇ ಕೊಲೆ ಯತ್ನಕ್ಕಾಗಿ ಅವರ ಪತ್ನಿಯ ಪ್ರೇಮಿ ರಾಜ್ ಕುಶ್ವಾಹ (Raj Kushwaha) ಖರೀದಿಸಿದ ದೇಶೀಯ ನಿರ್ಮಿತ ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಶಿಲ್ಲಾಂಗ್ ಪೊಲೀಸರು ಇಂದೋರ್‌ನಲ್ಲಿ ದೇಶೀಯ ನಿರ್ಮಿತ ಪಿಸ್ತೂಲ್, ಎರಡು ಮ್ಯಾಗಜೀನ್‌ಗಳು ಮತ್ತು ಮದ್ದುಗುಂಡುಗಳನ್ನು ಹೊಂದಿರುವ ಪ್ಯಾಕೆಟ್ ಅನ್ನು ಪತ್ತೆಹಚ್ಚಿದ್ದಾರೆ. ಇವುಗಳನ್ನು ರಾಜಾ ರಘುವಂಶಿ ಕೊಲ್ಲಲು ರಾಜ್ ಕುಶ್ವಾಹ ಖರೀದಿಸಿದ್ದರು ಎನ್ನಲಾಗಿದೆ. ಮೇ 11ರಂದು ಸೋನಮ್ ಅವರನ್ನು ವಿವಾಹವಾದ ರಾಜಾ ರಘುವಂಶಿ, ಮೇ 23ರಂದು ಹೆಂಡತಿಯ ಜೊತೆ ಮೇಘಾಲಯದಲ್ಲಿ ಹನಿಮೂನ್‌ಗೆ ಹೋಗಿದ್ದಾಗ ನಾಪತ್ತೆಯಾಗಿದ್ದರು. ಜೂನ್ 2ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಆಳವಾದ ಕಣಿವೆಯಲ್ಲಿ ಅವರ ವಿರೂಪಗೊಂಡ ಮೃತದೇಹ ಪತ್ತೆಯಾಗಿತ್ತು.
ರಾಜಾ ರಘುವಂಶಿ ಅವರ ಪತ್ನಿ ಸೋನಮ್ ರಘುವಂಶಿ ಮೇಘಾಲಯದಲ್ಲಿ ತಮ್ಮ ಹನಿಮೂನ್‌ಗೆ ಹೋಗಿದ್ದಳು. ಆಕೆಯ ಗಂಡನ ಶವ ಪತ್ತೆಯಾದರೂ ಆಕೆ ಮಾತ್ರ ನಾಪತ್ತೆಯಾಗಿದ್ದಳು. ಒಂದೆರಡು ದಿನ ಆಕೆಯ ಮೃತದೇಹಕ್ಕೆ ಸುತ್ತಮುತ್ತಲೂ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಕೊನೆಗೆ ಆಕೆ ಪರಾರಿಯಾಗಿ ಬಚಾವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಆಕೆಯ ಶವದ ಜೊತೆಗೆ ಆಕೆ ಜೀವಂತವಾಗಿದ್ದಾಳೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದರು. ನಂತರ ಆಕೆಯೇ ಈ ಕೊಲೆಯಲ್ಲಿ ಪ್ರಮುಖ ಶಂಕಿತಳಾಗಿದ್ದಳು. ಆಕೆಯ ಪ್ರಿಯಕರ ರಾಜ್ ಕುಶ್ವಾಹ ಜೊತೆ ಈ ಕೊಲೆಯನ್ ಪ್ಲಾನ್ ಮಾಡಿದ್ದಾಳೆ ಎಂಬುದು ಪತ್ತೆಯಾಗಿತ್ತು. ಬಳಿಕ, ವಾರಾಣಸಿ-ಘಾಜಿಪುರ್ ಮುಖ್ಯ ರಸ್ತೆಯಲ್ಲಿರುವ ಧಾಬಾದಲ್ಲಿ ಆಕೆಯನ್ನು ಪತ್ತೆಹಚ್ಚಲಾಯಿತು ಮತ್ತು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ಮೇಘಾಲಯದ ಹನಿಮೂನ್ನಲ್ಲಿ ಕೊಲೆ; ನಾನೇ ಗಂಡ ರಾಜ ರಘುವಂಶಿಯನ್ನು ಕೊಂದಿದ್ದೆಂದು ಒಪ್ಪಿಕೊಂಡ ಸೋನಂ
ಮೇಘಾಲಯದಲ್ಲಿ ರಾಜ್ ಕುಶ್ವಾಹ ನೇಮಿಸಿಕೊಂಡಿದ್ದ ಮೂವರು ಹಿಟ್‌ಮ್ಯಾನ್‌ಗಳು ರಾಜಾ ಅವರನ್ನು ಕೊಂದಿದ್ದರು ಎಂದು ಪೊಲೀಸರು ಹೇಳಿದ್ದರು. ಇದೀಗ ರಾಜ್‌ಗೆ ಸೇರಿದ ಲ್ಯಾಪ್‌ಟಾಪ್ ಬ್ಯಾಗ್ ಅನ್ನು ತೆಗೆದುಕೊಂಡ ಆರೋಪಿಗಳಲ್ಲಿ ಒಬ್ಬನ ಕಾರಿನಿಂದ ಪೊಲೀಸರು ಎರಡು ಮ್ಯಾಗಜೀನ್‌ಗಳು, ಮದ್ದುಗುಂಡುಗಳು ಮತ್ತು 50,000 ರೂ.ಗಳೊಂದಿಗೆ ದೇಶೀಯ ನಿರ್ಮಿತ ಪಿಸ್ತೂಲ್ ಅನ್ನು ಪತ್ತೆಹಚ್ಚಿದ್ದಾರೆ. ಪೊಲೀಸರ ಪ್ರಕಾರ, ಆ ಬ್ಯಾಗ್ ಸುಟ್ಟುಹೋಗಿದೆ ಮತ್ತು ಲ್ಯಾಪ್‌ಟಾಪ್ ಪತ್ತೆಯಾಗಿಲ್ಲ.
ಇದನ್ನೂ ಓದಿ: ಮೇಘಾಲಯದಲ್ಲಿ ಕೊಲೆಗೂ ಮೊದಲಿನ ರಾಜ ರಘುವಂಶಿಯ ಕೊನೆಯ ವಿಡಿಯೋ ಬಯಲು
ಈಗಾಗಲೇ ಸೋನಮ್ ರಘುವಂಶಿ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ ತಮ್ಮ ಪ್ರಣಯ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ರಾಜಾ ಅವರನ್ನು ಕೊಲ್ಲಲು ಅವರೇ ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Thu, 26 June 25








