ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಆತಂಕ: ಅಮೆರಿಕದ USCIRF ಸಂಸ್ಥೆಯಿಂದ ಭಾರತದ ಬಗ್ಗೆ ಸತತ 3ನೇ ಬಾರಿಗೆ ಆಕ್ಷೇಪ
ಭಾರತಕ್ಕೆ ‘ನಿರ್ದಿಷ್ಟ ಕಾಳಜಿಯ ದೇಶ’ (Country of Particular Concern - CPC) ಎನ್ನುವ ಕಳಂಕಿತ ಸ್ಥಾನಮಾನ ನೀಡಬೇಕು ಎಂದು ಈ ವರ್ಷವೂ ಸಂಸ್ಥೆಯು ಶಿಫಾರಸು ಮಾಡಿದೆ.
ದೆಹಲಿ: ಅಮೆರಿಕದ ಜಾಗತಿಕ ಧಾರ್ಮಿಕ ಸ್ವಾತಂತ್ರ್ಯ ವೇದಿಕೆಯ (United States Commission on International Religious Freedom – USCIRF) ವಾರ್ಷಿಕ ವರದಿ ಸೋಮವಾರ (ಏಪ್ರಿಲ್ 25) ಬಿಡುಗಡೆಯಾಗಿದೆ. ಕಳೆದ ಎರಡು ವರ್ಷಗಳಿಂದ ಮಾಡಿದಂತೆ ಈ ವರ್ಷವೂ ಈ ವರದಿಯಲ್ಲಿ ಭಾರತದ ತೇಜೋವಧೆ ನಡೆದಿದೆ. ಭಾರತಕ್ಕೆ ‘ನಿರ್ದಿಷ್ಟ ಕಾಳಜಿಯ ದೇಶ’ (Country of Particular Concern – CPC) ಎನ್ನುವ ಕಳಂಕಿತ ಸ್ಥಾನಮಾನ ನೀಡಬೇಕು ಎಂದು ಈ ವರ್ಷವೂ ಸಂಸ್ಥೆಯು ಶಿಫಾರಸು ಮಾಡಿದೆ. ಹೀಗಾಗಬಹುದು ಎಂದು ಮೊದಲೇ ಭಾರತದ ವಿದೇಶಾಂಗ ಇಲಾಖೆ ಅಂದಾಜಿಸಿತ್ತು. ಜಾಗತಿಕ ಮಟ್ಟದಲ್ಲಿ ಪ್ರಭಾವಶಾಲಿಯಾಗಿರುವ ಭಾರತ ವಿರೋಧಿ ಗುಂಪುಗಳು ಭಾರತಕ್ಕೆ ಮಸಿ ಬಳಿಯಲು ಸಂಘಟಿತ ಪ್ರಯತ್ನ ಮಾಡುತ್ತಿವೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದರು.
ಭಾರತದೊಂದಿಗೆ ಇತರ 15 ದೇಶಗಳಿಗೆ ಇದೇ ರೀತಿಯ ಆಕ್ಷೇಪಾರ್ಹ ಸ್ಥಾನಮಾನ ಘೋಷಿಸಲಾಗಿದೆ. ಅಫ್ಘಾನಿಸ್ತಾನ, ಮ್ಯಾನ್ಮಾರ್, ಚೀನಾ, ಎರಿಟ್ರಿಯಾ, ಇರಾನ್, ನೈಜೀರಿಯಾ, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಸೌದಿ ಅರೇಬಿಯಾ, ಸಿರಿಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ವಿಯೆಟ್ನಾಂ ದೇಶಗಳಲ್ಲಿಯೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ವರದಿಯು ತಿಳಿಸಿದೆ.
ಈ ದೇಶಗಳ ಸರ್ಕಾರಗಳು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದೌರ್ಜನ್ಯವನ್ನು ಸಹಿಸಿಕೊಳ್ಳುತ್ತಿವೆ. ಅವರ ಹಕ್ಕುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು USCIRF ಸಂಸ್ಥೆಯ 2022ರ ವಾರ್ಷಿಕ ವರದಿಯು ತಿಳಿಸಿತ್ತು. 2021ರಲ್ಲಿ ಭಾರತದ ಧಾರ್ಮಿಕ ಸ್ವಾತಂತ್ರ್ಯಕ್ಕೆ ತೀವ್ರ ಪ್ರಮಾಣದಲ್ಲಿ ಧಕ್ಕೆಯಾಯಿತು. ಅದೇ ವರ್ಷ ಸರ್ಕಾರವು ಹಿಂದೂ ರಾಷ್ಟ್ರೀಯವಾದದ ಅಜೆಂಡಾ ಜಾರಿಗೊಳಿಸುವ ಹಲವು ನೀತಿಗಳನ್ನು ಅನುಷ್ಠಾನಗೊಳಿಸಿತು. ಇದರಿಂದ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಪರಿಣಾಮವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಲಿ ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಜಾರಿ ಮಾಡಿದ ಕಾನೂನುಗಳ ಮೂಲಕ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ದೇಶದಲ್ಲಿ ಮೂಲ ಬದಲಾವಣೆಗಳನ್ನು ಯೋಜಿಸಲಾಗುತ್ತಿದೆ. ಇದರಿಂದ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ವರದಿಯು ಹೇಳಿದೆ. USCIRF ವರದಿಯ ಮೇಲೆ ಕ್ರಮ ಜರುಗಿಸಬೇಕು ಎಂಬ ಯಾವುದೇ ನಿಬಂಧನೆ ಯಾವುದೇ ದೇಶದ ಸರ್ಕಾರಕ್ಕೆ ಇರುವುದಿಲ್ಲ. ಇದು ವಿವಿಧ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಗಮನಿಸಿ, ವಿಶ್ಲೇಷಿಸಿ, ವರದಿ ಸಿದ್ಧಪಡಿಸುವುದಕ್ಕೆ ಮಾತ್ರ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಂಡಿದೆ. ಆದರೆ ಅಮೆರಿಕ ಸೇರಿದಂತೆ ಹಲವು ಸರ್ಕಾರಗಳು ಈ ವರದಿಯನ್ನು ಆಧರಿಸಿ ವಿದೇಶಾಂಗ ನೀತಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
2020ರಿಂದ ಭಾರತವನ್ನು ನಿರ್ದಿಷ್ಟ ಕಾಳಜಿಯ ದೇಶಗಳ ಪಟ್ಟಿಗೆ ಸೇರಿಸಲು USCIRF ಶಿಫಾರಸು ಮಾಡುತ್ತಲೇ ಇದೆ. ಆದರೆ ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯು 2020 ಮತ್ತು 2021ರಲ್ಲಿ ಈ ಶಿಫಾರಸನ್ನು ತಳ್ಳಿ ಹಾಕಿತ್ತು. 2021ರಲ್ಲಿ ಭಾರತವು ತನ್ನ ಪ್ರತಿರೋಧವನ್ನು ಪ್ರಬಲವಾಗಿ ದಾಖಲಿಸಿತ್ತು. 2022ರಲ್ಲಿ ವರದಿ ಪ್ರಕಟವಾಗುವುದಕ್ಕೆ ಮೊದಲೇ ಭಾರತ ಸರ್ಕಾರದ ರಾಜತಾಂತ್ರಿಕರು ಸಕ್ರಿಯರಾಗಿ ಮಾಹಿತಿ ಕಲೆಹಾಕಿದ್ದರು. ಭಾರತ ವಿರೋಧಿ ಗುಂಪುಗಳ ಲಾಬಿಯಿಂದ ಇಂಥ ವರದಿ ಬಂದಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಶಬ್ದಮಾಲಿನ್ಯ: ಹೈಕೋರ್ಟ್ ಆದೇಶ ಉಲ್ಲಂಘಿಸಿದ ಬೆಂಗಳೂರಿನ ನಾನಾ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ನೋಟಿಸ್, ಇಲ್ಲಿದೆ ಪಟ್ಟಿ