11 ಲಕ್ಷದ ಶಾಂಡೆಲಿಯರ್, 30 ಲಕ್ಷದ ಟಿವಿ ಯೂನಿಟ್; ಜನರ ವೀಕ್ಷಣೆಗೆ ಕೇಜ್ರಿವಾಲ್ ಅವರ ‘ಶೀಶ್ ಮಹಲ್’ ಬಾಗಿಲು ತೆರೆದ ಸರ್ಕಾರ

ದೆಹಲಿ ಸರ್ಕಾರವು ಇಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿವಾದಾತ್ಮಕ ‘ಶೀಶ್ ಮಹಲ್’ ನಿವಾಸವನ್ನು ಮೊದಲ ಬಾರಿಗೆ ಮಾಧ್ಯಮಗಳಿಗೆ ತೆರೆದಿದೆ. ಕೇಜ್ರಿವಾಲ್ ಅವರು ಬಂಗಲೆಯನ್ನು ಖಾಲಿ ಮಾಡಿದ ನಂತರ ಸರ್ಕಾರವು ಆಸ್ತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂದು ವರ್ಮಾ ತಿಳಿಸಿದರು. ಮಾಜಿ ಮುಖ್ಯಮಂತ್ರಿಗಳು ಸ್ಥಳಾಂತರಗೊಂಡ ನಂತರ ಯಾರೂ ಈ ನಿವಾಸವನ್ನು ಬಳಸಿಲ್ಲ ಮತ್ತು ಒಂದೇ ಒಂದು ವಸ್ತುವನ್ನೂ ಬದಲಾಯಿಸಿಲ್ಲ ಎಂದು ಅವರು ಹೇಳಿದರು. ಈ ಹಿಂದೆ ಸರ್ಕಾರಿ ವಾಹನವನ್ನೂ ಬಳಸುವುದಿಲ್ಲ ಎಂದು ಹೇಳಿದ್ದ ಕೇಜ್ರಿವಾಲ್, ಹಲವಾರು ಇತರ ಮನೆಗಳನ್ನು ಕೆಡವಿ ತಮಗಾಗಿ ಐಷಾರಾಮಿ ನಿವಾಸವನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

11 ಲಕ್ಷದ ಶಾಂಡೆಲಿಯರ್, 30 ಲಕ್ಷದ ಟಿವಿ ಯೂನಿಟ್; ಜನರ ವೀಕ್ಷಣೆಗೆ ಕೇಜ್ರಿವಾಲ್ ಅವರ ‘ಶೀಶ್ ಮಹಲ್’ ಬಾಗಿಲು ತೆರೆದ ಸರ್ಕಾರ
ಶೀಶ್ ಮಹಲ್
Image Credit source: PTI

Updated on: Nov 27, 2026 | 4:28 PM

ನವದೆಹಲಿ, ನವೆಂಬರ್ 27: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಸವಿದ್ದ ವಿವಾದಾತ್ಮಕ ಸರ್ಕಾರಿ ಬಂಗಲೆ ‘ಶೀಶ್ ಮಹಲ್’ ಒಳಾಂಗಣವನ್ನು ದೆಹಲಿ ಸರ್ಕಾರ ಇಂದು ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದೆ. ದೆಹಲಿಯ ಲೋಕೋಪಯೋಗಿ ಇಲಾಖೆ ಸಚಿವ ಪರ್ವೇಶ್ ವರ್ಮಾ ಅವರು ಬಂಗಲೆಯ ಪ್ರತಿಯೊಂದು ರೂಂಗಳನ್ನು ತೋರಿಸಿದ್ದು, ಅಲ್ಲಿರುವ ಐಷಾರಾಮಿ ವಸ್ತುಗಳ ಮೇಲೆ ಬೆಲೆ ಪಟ್ಟಿಗಳನ್ನು ಅಂಟಿಸಿ ಒಟ್ಟು 56 ಕೋಟಿ ರೂ.ಗೂ ಅಧಿಕ ಸಾರ್ವಜನಿಕ ಹಣವನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ಸರ್ಕಾರಿ ಆಸ್ತಿಯ ಮೇಲೆ ಸಾರ್ವಜನಿಕರ ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬುದನ್ನು ಜನರಿಗೆ ತೋರಿಸುವುದೇ ಈ ನಿವಾಸವನ್ನು ತೆರೆಯುವ ಉದ್ದೇಶವಾಗಿದೆ. ಶೀಶ್ ಮಹಲ್ ತೋರಿಸುವ ಉದ್ದೇಶವೇನೆಂದರೆ, ಇದು ತಮ್ಮದೇ ಹಣ ಎಂಬುದನ್ನು ಜನರಿಗೆ ಅರಿವು ಮೂಡಿಸುವುದು. ಶೀಶ್ ಮಹಲ್‌ಗಾಗಿ ಒಟ್ಟು 58 ಕೋಟಿ ಬಜೆಟ್ ನಿಗದಿಪಡಿಸಲಾಗಿತ್ತು” ಎಂದು ಸಚಿವರು ಹೇಳಿದ್ದಾರೆ.

Loading...


ಬಂಗಲೆಯ ಒಳಗಿರುವ ಐಷಾರಾಮಿ ವಸ್ತುಗಳು ಮತ್ತು ಅವುಗಳ ಬೆಲೆಯ ವಿವರ:

  • ಕೇಜ್ರಿವಾಲ್ ಅವರ ಬಂಗಲೆಯಲ್ಲಿ ಅಳವಡಿಸಲಾಗಿರುವ ಟಿವಿ ಯೂನಿಟ್‌ಗೆ 30 ಲಕ್ಷ ವೆಚ್ಚವಾಗಿದ್ದು, ಪ್ರತ್ಯೇಕ ಟಿವಿಯೊಂದರ ಬೆಲೆ 3.43 ಲಕ್ಷವಾಗಿದೆ. ಒಟ್ಟು 5 ಬೃಹತ್ OLED ಟಿವಿಗಳನ್ನು ಅಳವಡಿಸಲಾಗಿದೆ.
  • ಹಾಲ್‌ನಲ್ಲಿರುವ ಅಲಂಕಾರಿಕ ಶಾಂಡೆಲಿಯರ್ ಬೆಲೆ 11.56 ಲಕ್ಷ ರೂ. ಎಂದು ನಮೂದಿಸಲಾಗಿದೆ.
  • 2 ಆಸನಗಳ ಸೋಫಾ: 5.47 ಲಕ್ಷ
  • ಸೆಂಟ್ರಲ್ ಟೇಬಲ್: 6.79 ಲಕ್ಷ
  • ರೌಂಡ್ ಸೈಡ್ ಟೇಬಲ್‌ಗಳು: 10 ಲಕ್ಷ
  • ಡೈನಿಂಗ್ ಟೇಬಲ್ ಮತ್ತು ಕುರ್ಚಿಗಳು: 5.58 ಲಕ್ಷ
  • ಡಬಲ್ ಬೆಡ್‌ಗಳು: 1.96 ಲಕ್ಷ ಮತ್ತು ಕನ್ಸೋಲ್ ಯೂನಿಟ್: 3.34 ಲಕ್ಷ
  • 6.71 ಲಕ್ಷದ ಪೂಜಾ ಮಂದಿರ ಮತ್ತು ಕರ್ಟನ್‌ಗಳು
  • ಈ ಬಂಗಲೆಯು 8 ಬೆಡ್‌ರೂಮ್‌ಗಳು, 12 ಶೌಚಾಲಯಗಳು, ಜಕುಝಿ ಬಾತ್, ಸ್ಪಾ, ಸ್ವಯಂಚಾಲಿತ ಬಾಗಿಲು-ಕಿಟಕಿಗಳು, ಪ್ರತಿ ಕೋಣೆಯಲ್ಲೂ ಸ್ಮಾರ್ಟ್ ಲೈಟಿಂಗ್ ಹಾಗೂ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಅಮೃತಶಿಲೆಯನ್ನು ಹಾಕಲಾಗಿದೆ.


ಶೀಶ್ ಮಹಲ್ ಬಂಗಲೆಯೊಳಗಿನ ಒಂದು ಸಣ್ಣ ಕೋಣೆಯನ್ನು ತೋರಿಸಿದ ಸಚಿವ ಪರ್ವೇಶ್ ವರ್ಮಾ, ಅಲ್ಲಿ ಸೀಟ್ ಹರಿದಿರುವ ಮರದ ಕುರ್ಚಿಯೊಂದನ್ನು ಇಡಲಾಗಿತ್ತು ಎಂದು ತೋರಿಸಿದರು. ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ ಲೈವ್ ಮಾಡುವಾಗ ತಾವು ಅತ್ಯಂತ ಸರಳವಾಗಿ ಬದುಕುತ್ತಿದ್ದೇವೆ ಎಂದು ಜನರನ್ನು ನಂಬಿಸಲು ಈ ಹಳೆಯ ಕುರ್ಚಿ ಮತ್ತು ಸರಳ ಹಿನ್ನೆಲೆಯನ್ನು ಬಳಸಿಕೊಳ್ಳುತ್ತಿದ್ದರು ಎಂದು ವರ್ಮಾ ಆರೋಪಿಸಿದರು.

ಇದನ್ನೂ ಓದಿ: ಕೆಲವರ ಗಮನ ಸ್ವಿಮ್ಮಿಂಗ್​ಪೂಲ್, ಶೀಶ್​ಮಹಲ್ ಕಡೆಗಿದ್ದರೆ ನಮ್ಮ ಆದ್ಯತೆ ಶುದ್ಧ ನೀರು ನೀಡುವುದಾಗಿತ್ತು; ಮೋದಿ ವಾಗ್ದಾಳಿ

8 ಕೋಟಿಯಿಂದ 56 ಕೋಟಿಗೆ ಏರಿದ ಬಜೆಟ್:

ಆರಂಭದಲ್ಲಿ 8 ಕೋಟಿ ಬಜೆಟ್‌ನೊಂದಿಗೆ ಶುರುವಾದ ಈ ನವೀಕರಣ ಕಾಮಗಾರಿಯು ಹಂತ ಹಂತವಾಗಿ 56 ಕೋಟಿಗೂ ಹೆಚ್ಚು ವೆಚ್ಚಕ್ಕೆ ತಲುಪಿತು ಎಂದು ದ್ವಾರದಲ್ಲಿ ಹಾಕಲಾದ ಫಲಕದಲ್ಲಿ ತೋರಿಸಲಾಗಿದೆ. ಸರ್ಕಾರಿ ಬಂಗಲೆ ಮತ್ತು ವಾಹನವನ್ನೇ ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದ್ದ ಕೇಜ್ರಿವಾಲ್, ಹಲವು ಹಳೆಯ ಬಂಗಲೆಗಳು ಹಾಗೂ ಸಿಬ್ಬಂದಿ ವಸತಿಗೃಹಗಳನ್ನು ಕೆಡವಿ ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ನಡುವೆ ಈ ಭವ್ಯ ಬಂಗಲೆ ನಿರ್ಮಿಸಿಕೊಂಡಿದ್ದಾರೆ ಎಂದು ವರ್ಮಾ ಟೀಕಿಸಿದ್ದಾರೆ.


ಸಾರ್ವಜನಿಕ ವೀಕ್ಷಣೆಗೆ 20 ರೂ. ಟಿಕೆಟ್:

ಇಂದು ಮಾಧ್ಯಮಗಳ ಭೇಟಿ ಹಾಗೂ ಶನಿವಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪರಿಶೀಲನೆಯ ನಂತರ, ಸಾರ್ವಜನಿಕರಿಗೂ ಬಂಗಲೆ ವೀಕ್ಷಿಸಲು ಅವಕಾಶ ನೀಡಲಾಗುವುದು. ಸಾಮಾನ್ಯರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಹಿರಿಯ ನಾಗರಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ವಾಸವಾಗಿದ್ದ ಸರ್ಕಾರಿ ಬಂಗಲೆಯ ಬಾತ್​ರೂಂ ನವೀಕರಣಕ್ಕೆ 15 ಕೋಟಿ ದುಂದುವೆಚ್ಚ!

ಕೊವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದ ಸಮಯದಲ್ಲಿ ಈ ನಿವಾಸವನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು ಎಂದು ಸಚಿವರು ಆರೋಪಿಸಿದರು. ಆ ಅವಧಿಯಲ್ಲಿ ಯೋಜನೆಗೆ ಸಂಬಂಧಿಸಿದ ಕಡತಗಳಿಗೆ ತುರ್ತು ಆಧಾರದ ಮೇಲೆ ಸಹಿ ಹಾಕಲಾಗಿತ್ತು ಎಂದು ಅವರು ದೂರಿದರು. ಈ ಬಂಗಲೆಯು 2015ರಿಂದ 2024ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವಾಗಿತ್ತು. 2025ರ ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭ್ರಷ್ಟಾಚಾರ ಮತ್ತು ದುಂದುವೆಚ್ಚದ ಆರೋಪಗಳ ಮೇಲೆ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಲು ಬಿಜೆಪಿ ‘ಶೀಶ್ ಮಹಲ್’ ಎಂಬ ಹೆಸರನ್ನು ಹುಟ್ಟುಹಾಕಿತ್ತು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:22 pm, Fri, 27 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us