ಅರ್ಬನ್ ನಕ್ಸಲ್, ಕಲ್ಚರಲ್ ಮಾರ್ಕ್ಸಿಸ್ಟ್ಗಳೇ ದೇಶಕ್ಕೆ ಮಾರಕ: ಮೋಹನ್ ಭಾಗವತ್
ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಆಯುಧ ಪೂಜೆ ನೆರವೇರಿತು. ನಂತರ ವಿಜಯದಶಮಿ ಭಾಷಣ ಮಾಡಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ದೇಶದ ಭದ್ರತೆ, ಸಮಗ್ರತೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಅರ್ಬನ್ ನಕ್ಸಲ್, ಕಲ್ಚರಲ್ ಮಾರ್ಕ್ಸಿಸ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಖಾಲಿಸ್ತಾನಿ ಪರ ಬೆಂಬಲ ಸೂಚಿಸುವವರನ್ನೂ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಭಾಷಣದ ಮತ್ತಷ್ಟು ವಿವರಗಳಿಗೆ ಮುಂದಿದೆ ಓದಿ.
ಮುಂಬೈ, ಅಕ್ಟೋಬರ್ 12: ‘ಡೀಪ್ ಸ್ಟೇಟ್’, ‘ವೋಕಿಸಂ’, ‘ಕಲ್ಚರಲ್ ಮಾರ್ಕ್ಸಿಸ್ಟ್’ ಇಂತಹ ಶಬ್ದಗಳು ಇತ್ತೀಚೆಗಿನ ದಿನಗಳಲ್ಲಿ ಚರ್ಚೆಯಲ್ಲಿವೆ. ವಾಸ್ತವವಾಗಿ, ಅವರು ಎಲ್ಲಾ ಸಾಂಸ್ಕೃತಿಕ ಸಂಪ್ರದಾಯಗಳ ಘೋಷಿತ ಶತ್ರುಗಳು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಟೀಕಿಸಿದರು. ನಾಗಪುರದ ಕಚೇರಿಯಲ್ಲಿ ವಿಜಯದಶಮಿ ಪೂಜೆಯ ನಂತರ ಭಾಷಣ ಮಾಡಿದ ಅವರು, ಸಾಂಸ್ಕೃತಿಕ ಮೌಲ್ಯಗಳು, ಸಂಪ್ರದಾಯಗಳು ಮತ್ತು ಯಾವುದನ್ನು ಒಳ್ಳೆಯದು ಅಥವಾ ಮಂಗಳಕರವೆಂದು ಪರಿಗಣಿಸಲಾಗಿದೆಯೋ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಗುಂಪಿನ ಕಾರ್ಯವೈಖರಿಯ ಒಂದು ಭಾಗವಾಗಿದೆ ಎಂದು ಆರೋಪಿಸಿದರು.
ಕಲ್ಚರಲ್ ಮಾರ್ಕ್ಸಿಸ್ಟ್ ಕುತಂತ್ರದ ಅರಿವಿರಲಿ: ಭಾಗವತ್ ಕಿವಿಮಾತು
ಸಮಾಜದ ಮನಸ್ಸನ್ನು ರೂಪಿಸುವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು, ಉದಾ. ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳು. ಸಂವಹನ ಮಾಧ್ಯಮ, ಬೌದ್ಧಿಕ ಸಂವಾದ ಇತ್ಯಾದಿಗಳನ್ನು ತಮ್ಮ ಪ್ರಭಾವಕ್ಕೆ ತಂದು ಅವುಗಳ ಮೂಲಕ ಸಮಾಜದ ವಿಚಾರ, ಸಂಸ್ಕಾರ ಮತ್ತು ನಂಬಿಕೆಗಳನ್ನು ನಾಶಪಡಿಸುವುದು ಅವರ ಕಾರ್ಯ ವೈಖರಿಯ ಮೊದಲ ಹೆಜ್ಜೆಯಾಗಿದೆ ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ಒಟ್ಟಿಗೆ ವಾಸಿಸುವ ಸಮಾಜದಲ್ಲಿ, ಯಾವುದೇ ಘಟಕವು ಅದರ ವಾಸ್ತವಿಕ ಅಥವಾ ಕೃತಕವಾಗಿ ರಚಿಸಲಾದ ಅನನ್ಯತೆ, ಬೇಡಿಕೆ, ಅವಶ್ಯಕತೆ ಅಥವಾ ಸಮಸ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಲು ಪ್ರೇರೇಪಿಸುತ್ತದೆ. ಅವರಲ್ಲಿ ಅನ್ಯಾಯಗ್ರಸ್ಥ ಭಾವನೆಯನ್ನು ಸೃಷ್ಟಿಸಲಾಗುತ್ತದೆ. ಅವರ ಅತೃಪ್ತಿಯ ವಾತಾವರಣವನ್ನು ಗಮನಿಸಿ, ಆ ಘಟಕವು ಸಮಾಜದ ಉಳಿದ ಭಾಗಗಳಿಗಿಂತ ಭಿನ್ನವಾಗಿ ಮತ್ತು ವ್ಯವಸ್ಥೆಯ ವಿರುದ್ಧವಾಗಿ, ಆಕ್ರಮಣಕಾರಿಯಾಗಿಸುತ್ತದೆ. ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂಭಾವ್ಯತೆ – fault linesಗಳನ್ನೂ ಕಂಡುಹಿಡಿದು ನೇರ ಸಂಘರ್ಷಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತಿದೆ. ವ್ಯವಸ್ಥೆ, ಕಾನೂನು, ಆಡಳಿತ ಇತ್ಯಾದಿಗಳ ಬಗ್ಗೆ ಅಶ್ರದ್ಧೆ ಮತ್ತು ದ್ವೇಷವನ್ನು ತೀವ್ರಗೊಳಿಸುವ ಮೂಲಕ ಅರಾಜಕತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಆ ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಲು ಅನುಕೂಲವಾಗುತ್ತದೆ ಎಂದು ಭಾಗವತ್ ಎಚ್ಚರಿಕೆಯ ಮಾತುಗಳನ್ನಾಡಿದರು.
ಪಾಕ್ ಬೆಂಬಲಿಗರ, ಖಾಲಿಸ್ತಾನಿಗಳ ಬಗ್ಗೆ ಪರೋಕ್ಷ ಕಿಡಿ
ಖಾಲಿಸ್ತಾನಿ ಚಟುವಟಿಕೆ, ಪಾಕಿಸ್ತಾನಕ್ಕೆ ಬೆಂಬಲ ನೀಡುವವರ ಬಗ್ಗೆ ಪರೋಕ್ಷ ಚಾಟಿ ಬೀಸಿದ ಮೋಹನ್ ಭಾಗವತ್ ದೇಶದ ಭದ್ರತೆ, ಸುರಕ್ಷತೆಯ ಕುರಿತೂ ಮಾತುಗಳನ್ನಾಡಿದರು. ವಿಶ್ವದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ಸಿಗುವುದರಿಂದ ಯಾರ ಸ್ವಾರ್ಥ ಹೊಡೆದುರುಳುತ್ತದೆಯೋ ಅಂತಹ ಶಕ್ತಿಗಳು ಭಾರತ ಒಂದು ಚೌಕಟ್ಟಿನೊಳಗೆ ಬೆಳೆಯುವಂತೆ ಮಾಡಲು ನಿರೀಕ್ಷೆಯಂತೆಯೇ ಶ್ರಮಿಸುತ್ತಿವೆ. ತಮ್ಮ ಉದಾರವಾದಿ, ಜನತಾಂತ್ರಿಕ ಸ್ವಭಾವ ಮತ್ತು ವಿಶ್ವಶಾಂತಿಗಾಗಿ ಕಟಿಬದ್ದರೆನ್ನುವ ದೇಶಗಳ ಕಟಿಬದ್ಧತೆ ಅವರ ಸುರಕ್ಷತೆ ಮತ್ತು ಸ್ವಾರ್ಥದ ಪ್ರಶ್ನೆ ಎದ್ದಾಗ ಅಂತರ್ಧಾನವಾಗುತ್ತಿದೆ. ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವುದರಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾಯಿತ ಅಲ್ಲಿನ ಸರ್ಕಾರಗಳನ್ನು ಹಿಂಸಾತ್ಮಕ ಮಾರ್ಗದ ಮೂಲಕ ಕೆಳಗಿಳಿಸುವುದಕ್ಕೂ ಹಿಂದೇಟು ಹಾಕುವುದಿಲ್ಲ. ಭಾರತದ ಒಳಗೆ ಮತ್ತು ಹೊರಗೆ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಪ್ರತಿಯೊಬ್ಬರೂ ಈ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು. ಸುಳ್ಳಿನ ಅಥವಾ ಅರ್ಧಸತ್ಯದ ಆಧಾರದಲ್ಲಿ ಉದ್ದೇಶಪೂರ್ವಕವಾಗಿ ಭಾರತದ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಮೋಹನ್ ಭಾಗವತ್ ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಖಂಡನೆ
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಂಗೆಯ ತಾತ್ಕಾಲಿಕ ಮತ್ತು ಸ್ಥಾನೀಯ ಕಾರಣಗಳು ಈ ಘಟನಾಕ್ರಮದ ಒಂದು ಮುಖ ಮಾತ್ರ. ಹಾಗೆಯೇ ಅಲ್ಲಿರುವ ಹಿಂದೂ ಸಮಾಜದ ಮೇಲೆ ಯಾವುದೇ ಕಾರಣವಿಲ್ಲದೇ ನಡೆಯುವ ಅಮಾನವೀಯ ಅತ್ಯಾಚಾರದ ಪರಂಪರೆ ಮತ್ತೆ ಮರುಕಳಿಸಿತು. ಆ ದೌರ್ಜನ್ಯದ ವಿರುದ್ಧ ಅಲ್ಲಿನ ಹಿಂದುಗಳು ಈ ಬಾರಿ ಸಂಘಟಿತರಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಮನೆಯಿಂದ ಹೊರಬಂದು ವಿರೋಧಿಸಿದ್ದರಿಂದ ಸ್ವಲ್ಪ ಬಚಾವಾದರು. ಆದರೆ ಎಲ್ಲಿಯವರೆಗೂ ಅಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ, ಅಲ್ಲಿನ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಆದ್ದರಿಂದ ಆ ದೇಶದಿಂದ ಭಾರತಕ್ಕೆ ಒಳನುಸುಳುತ್ತಿರುವ ಮತ್ತು ಅದರ ಕಾರಣದಿಂದಾಗಿ ಇಲ್ಲಿ ಉದ್ಭವಿಸುತ್ತಿರುವ ಜನಸಂಖ್ಯಾ ಅಸಮತೋಲನವು ಇಲ್ಲಿನ ಸಾಮಾನ್ಯ ಜನರನ್ನು ಬಾಧಿಸುವ ಚಿಂತೆಯ ವಿಷಯವಾಗಿದೆ ಎಂದು ಭಾಗವತ್ ಹೇಳಿದರು.
‘ಸೌಹಾರ್ದತೆ, ಸುರಕ್ಷತೆಗೆ ಒಳನುಸುಳುವಿಕೆಯಿಂದ ಅಡ್ಡಿ’
ಪರಸ್ಪರ ಸೌಹಾರ್ದತೆ ಮತ್ತು ದೇಶದ ಸುರಕ್ಷತೆಯ ಮೇಲೂ ಈ ಒಳನುಸುಳುವಿಕೆ ಗಂಭೀರವಾದ ಪ್ರಶ್ನೆಯನ್ನು ಮೂಡಿಸುತ್ತದೆ. ಉದಾರತೆ, ಮಾನವತೆ, ಹಾಗೂ ಸದ್ಭಾವನೆಯ ಪರವಾಗಿರುವ ಎಲ್ಲರ, ವಿಶೇಷವಾಗಿ ಭಾರತ ಸರ್ಕಾರ ಮತ್ತು ವಿಶ್ವಾದ್ಯಂತ ನೆಲೆಸಿರುವ ಹಿಂದೂಗಳ ಸಹಾಯವೊಂದೇ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಅಗತ್ಯವಿರುವ ವಿಚಾರ. ಅಸಂಘಟಿತವಾಗಿರುವುದು ಅಥವಾ ದುರ್ಬಲರಾಗಿ ಉಳಿಯುವುದು ದುಷ್ಟರಿಂದ ದೌರ್ಜನ್ಯವನ್ನು ಆಹ್ವಾನಿಸುವುದು ಎಂಬ ಪಾಠವನ್ನು ಪ್ರಪಂಚದಾದ್ಯಂತದ ಹಿಂದೂ ಸಮಾಜವೂ ಗ್ರಹಿಸಬೇಕು. ಆದರೆ ವಿಷಯ ಇಲ್ಲಿಗೆ ನಿಲ್ಲುವುದಿಲ್ಲ. ಈಗ ಭಾರತದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನದ ಜೊತೆ ಸೇರುವ ಮಾತುಗಳು ಕೇಳಿಬರುತ್ತಿವೆ. ಇಂತಹ ಕಥನ (Narrative)ಗಳನ್ನು ಸೃಷ್ಟಿಸಿ. ಸ್ಥಾಪಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಯಾವ ದೇಶಗಳು ಬಯಸುತ್ತವೆ ಎಂದು ಹೇಳಬೇಕಾಗಿಲ್ಲ. ಅದಕ್ಕೆ ಸೂಕ್ತ ಉತ್ತರಗಳು ಇಲ್ಲಿನ ಆಡಳಿತಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:
ಆದರೆ ಮತ್ತೊಂದೆಡೆಯಲ್ಲಿ ಸಮಾಜದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಷ್ಟ-ಭ್ರಷ್ಟಗೊಳಿಸುವ ವೈವಿಧ್ಯತೆಯನ್ನು ಪ್ರತ್ಯೇಕತೆಯಂತೆ ಬಿಂಬಿಸುವ, ಸಮಸ್ಯೆಗಳಿಂದ ಬಳಲುತ್ತಿರುವ ಗುಂಪುಗಳಲ್ಲಿ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಮೂಡಿಸುವ ಮತ್ತು ಅತೃಪ್ತಿಯನ್ನು ಆರಾಜಕತೆಗೆ ಪರಿವರ್ತಿಸುವ ಪ್ರಯತ್ನಗಳು ಹೆಚ್ಚಾಗಿರುವುದು ಸಮಾಜದಲ್ಲಿರುವ ಸರ್ವಾಧಿಕ ಚಿಂತೆಯ ವಿಷಯವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ