ಶಬರಿಮಲೆ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೇರಳ ಅರಣ್ಯ ಇಲಾಖೆಯಿಂದ ನೈಜ-ಸಮಯದ ಮೇಲ್ವಿಚಾರಣೆ, ಅಯ್ಯನ್ ಮೊಬೈಲ್ ಆಪ್

Safety of pilgrims: ಮುಖ್ಯವಾಗಿ ಪೀರುಮಾಡೆಯಲ್ಲಿರುವ ಈ ಕಂಟ್ರೋಲ್ ರೂಂ ಸೌಲಭ್ಯವು ಕಾಡು ಪ್ರಾಣಿಗಳ ಉಪಸ್ಥಿತಿಯ ಬಗ್ಗೆ ಎಚ್ಚರಿಸುತ್ತದೆ, ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸಲು ಮತ್ತು ಯಾತ್ರಾರ್ಥಿಗಳ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಶಬರಿಮಲೆ ಯಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗದಂತೆ ಎಚ್ಚರವಹಿಸಬಹುದಾಗಿದೆ.

ಶಬರಿಮಲೆ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೇರಳ ಅರಣ್ಯ ಇಲಾಖೆಯಿಂದ ನೈಜ-ಸಮಯದ ಮೇಲ್ವಿಚಾರಣೆ, ಅಯ್ಯನ್ ಮೊಬೈಲ್ ಆಪ್
ಶಬರಿಮಲೆ ಮಾರ್ಗದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೇರಳ ಅರಣ್ಯ ಇಲಾಖೆಯಿಂದ ನೈಜ-ಸಮಯದ ಮೇಲ್ವಿಚಾರಣೆ
Follow us
|

Updated on: Nov 20, 2023 | 9:58 AM

ಕೊಚ್ಚಿ: ಈ ಋತುವಿನಲ್ಲಿ ಶಬರಿಮಲೆ ಯಾತ್ರೆಯು (Sabarimala pilgrimage) ಕಳೆದ ವಾರದಿಂದ ಪುನರಾರಂಭಗೊಂಡಿದ್ದು ಭಕ್ತರು (pilgrims) ಪ್ರತಿ ವರ್ಷದಂತೆ ಅಯ್ಯಪ್ಪ ಸ್ವಾಮಿಯತ್ತ ಮುಖ ಆಡುತ್ತಿದ್ದಾರೆ. ವನ್ಯಜೀವಿಗಳ (wild animals) ಚಲನವಲನವನ್ನು ಪತ್ತೆ ಹಚ್ಚಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆಯು 12 ಕಿಮೀ ಉದ್ದದ ಸತ್ರಂ-ಪುಲ್ಮೇಡು-ಸನ್ನಿಧಾನಂ ಮಾರ್ಗದಲ್ಲಿ ಆನ್​​ಲೈನ್​​ ಮೂಲಕ ನೈಜ-ಸಮಯದ ಮೇಲ್ವಿಚಾರಣೆಯನ್ನು ಪ್ರಾರಂಭಿಸಿದೆ. ಇದರಿಂದ ಚಾರಣ ಮಾರ್ಗದಲ್ಲಿ ಚಲಿಸುತ್ತಿರುವ ಯಾತ್ರಿಕರ ಯೋಗಕ್ಷೇಮದ (safety of pilgrims) ಬಗ್ಗೆ ಕಣ್ಣಿಡಬಹುದಾಗಿದೆ.

ಮುಖ್ಯವಾಗಿ ಪೀರುಮಾಡೆಯಲ್ಲಿರುವ ಈ ಕಂಟ್ರೋಲ್ ರೂಂ ಸೌಲಭ್ಯವು ಕಾಡು ಪ್ರಾಣಿಗಳ ಉಪಸ್ಥಿತಿಯ ಬಗ್ಗೆ ಎಚ್ಚರಿಸುತ್ತದೆ, ಕ್ಷಿಪ್ರ ಪ್ರತಿಕ್ರಿಯೆ ತಂಡಗಳು (ಆರ್‌ಆರ್‌ಟಿ – rapid response teams, RRTs) ಸ್ಥಳಕ್ಕೆ ಧಾವಿಸಲು ಮತ್ತು ಯಾತ್ರಾರ್ಥಿಗಳ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗದಂತೆ ನೋಡಿಕೊಳ್ಳಲು ಕಳೆದ ವರ್ಷ ಇದೇ ರೀತಿಯ ಸೌಲಭ್ಯವನ್ನು ಅಳುತ-ಕರಿಮಲ-ಶಬರಿಮಲ ಮಾರ್ಗದಲ್ಲಿ ಯಶಸ್ವಿಯಾಗಿ ಪರಿಚಯಿಸಲಾಯಿತು.

“ನಾವು ಪುಲ್ಮೇಡು ಮಾರ್ಗದ ಉಪ್ಪುಪಾರ ಮತ್ತು ಝೀರೋ ಪಾಯಿಂಟ್‌ನಲ್ಲಿ ಪ್ಯಾನ್-ಟಿಲ್ಟ್ ಮತ್ತು ಜೂಮ್ (ಪಿಟಿಜೆಡ್) ಕ್ಯಾಮೆರಾಗಳನ್ನು ಸ್ಥಾಪಿಸಿದ್ದೇವೆ. ಸೀತಾಕುಲಂನಲ್ಲಿ ಒಂದು ವಾರದೊಳಗೆ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಸ್ಥಳಗಳಲ್ಲಿ ನಾವು ಬಹು ಕಣ್ಗಾವಲು ಕ್ಯಾಮೆರಾಗಳನ್ನು ಸಹ ಸ್ಥಾಪಿಸಿದ್ದೇವೆ. ಕಾಡು ಪ್ರಾಣಿಗಳು ಹುಲ್ಲುಗಾವಲುಗಳಲ್ಲಿ ಸಂಚರಿಸುತ್ತವೆ ಮತ್ತು ಅವುಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಈ ಕ್ಯಾಮೆರಾಗಳು ನಮಗೆ ಸಹಾಯ ಮಾಡುತ್ತವೆ. ನಾವು ಒಂದು ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಿಂಡುಗಳ ಉಪಸ್ಥಿತಿಯನ್ನು ಕಂಡುಕೊಂಡರೆ, ನಾವು ಆರ್‌ಆರ್‌ಟಿಗೆ ಎಚ್ಚರಿಕೆ ನೀಡುತ್ತೇವೆ, ಇದು ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಎಂದು ಅಳುತ ಅರಣ್ಯ ವಲಯದ ಅಧಿಕಾರಿ ಜ್ಯೋತಿಶ್ ಜೆ ಓಜಕ್ಕಲ್ ಹೇಳಿದರು.

ಆರು ವರ್ಷಗಳ ಹಿಂದೆ ಪೆರಿಯಾರ್ ಪೂರ್ವ ವಿಭಾಗ ಅಭಿವೃದ್ಧಿಪಡಿಸಿದ ನೆಟ್‌ವರ್ಕ್‌ನಿಂದ ಇಲಾಖೆಗೆ ಮೇಲ್ವಿಚಾರಣಾ ಸೌಲಭ್ಯದ ಕಲ್ಪನೆ ಸಿಕ್ಕಿತು. ಇದು ಕಾಡು ಪ್ರಾಣಿಗಳ ಚಲನವಲನವನ್ನು ಪತ್ತೆಹಚ್ಚಲು, ಕಾಡ್ಗಿಚ್ಚುಗಳ ಬಗ್ಗೆ ನಿಗಾವಹಿಸಲು ಮತ್ತು ಶ್ರೀಗಂಧದ ಮರ ಕಳ್ಳತನ ಮತ್ತು ಬೇಟೆಯಾಡುವುದು ಸೇರಿದಂತೆ ಮಾನವ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಹಾಯ ಮಾಡಿತು. ಇದಲ್ಲದೆ, ಅಂತರರಾಜ್ಯ ಅರಣ್ಯ ಗಡಿಯನ್ನು ಮೇಲ್ವಿಚಾರಣೆ ಮಾಡಲು ನೆಟ್‌ವರ್ಕ್ ಅನ್ನು ಬಳಸಲಾಗುತ್ತದೆ.

“ಬಿಎಸ್‌ಎನ್‌ಎಲ್ ಅನುಮತಿಯೊಂದಿಗೆ ಕಾಡಿನೊಳಗೆ ಟವರ್‌ಗಳು, ಟ್ರಾನ್ಸ್‌ಮಿಟರ್‌ಗಳು ಮತ್ತು ರಿಸೆಪ್ಟರ್‌ಗಳನ್ನು ಸ್ಥಾಪಿಸುವ ಮೂಲಕ ಪೆರಿಯಾರ್ ಟೈಗರ್ ರಿಸರ್ವ್ (ಪಿಟಿಆರ್) ನಲ್ಲಿ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಾಧಿಸಲಾಗಿದೆ. ನಾವು ಕಾಡಿನೊಳಗೆ ಸಂಪರ್ಕವನ್ನು ವಿಸ್ತರಿಸುವ ಅಂತರ್ ಜಾಲವನ್ನು ಹೊಂದಿದ್ದೇವೆ. PTR 925 ಚದರ ಕಿ.ಮೀ ಗಳಷ್ಟು ಹರಡಿದೆ ಮತ್ತು ನಾವು ಕ್ಯಾಂಪ್ ಶೆಡ್‌ಗಳನ್ನು ಹೊಂದಿದ್ದೇವೆ, ಅಲ್ಲಿಂದ ಸುಮಾರು 300 ವೀಕ್ಷಕರು ಕಾಡುಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಟೆಕ್ಕಿಯೂ ಆಗಿರುವ ಸೆಕ್ಷನ್ ಫಾರೆಸ್ಟ್ ಆಫೀಸರ್ ನೇತೃತ್ವದ ತಂಡದಿಂದ ನಾವು ನಿಯಂತ್ರಣ ಕೊಠಡಿಯನ್ನು ನಿರ್ವಹಿಸುತ್ತಿದ್ದೇವೆ ಎಂದು ಪೆರಿಯಾರ್ ಸಹಾಯಕ ಕ್ಷೇತ್ರ ನಿರ್ದೇಶಕ ಪಿ ಜೆ ಶುಹೈಬ್ ಹೇಳಿದರು.

ಪಿಟಿಆರ್ ಮಾನಿಟರಿಂಗ್ ವ್ಯವಸ್ಥೆಯನ್ನು ಮೂರು ಹಂತಗಳಲ್ಲಿ ಅಳವಡಿಸಲಾಗುತ್ತಿದೆ. ಮೊದಲ ಹಂತದ ಭಾಗವಾಗಿ ಮಂಗಳಾ ದೇವಿಯಲ್ಲಿ ಲೈವ್ HD ಸ್ಟ್ರೀಮಿಂಗ್ ಹೊಂದಿರುವ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಎರಡನೇ ಹಂತದಲ್ಲಿ 16 ಸ್ಥಳಗಳಿಗೆ ಜಾಲ ವಿಸ್ತರಿಸಲಾಗಿದೆ. ಮೂರನೇ ಹಂತವನ್ನು ಅನುಷ್ಠಾನಗೊಳಿಸಲು ಸಿಎಸ್ಆರ್ ಹಣವನ್ನು ಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ, ಇದು ಎಲ್ಲಾ ಕ್ಯಾಂಪ್ ಶೆಡ್‌ಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ವಿಸ್ತರಿಸುತ್ತದೆ. PTR ಆಂತರಿಕ ನೈಜ-ಸಮಯದ ಮೇಲ್ವಿಚಾರಣಾ ಸೌಲಭ್ಯವನ್ನು ಸ್ಥಾಪಿಸುವ ದೇಶದ ಏಕೈಕ ಅರಣ್ಯ ವಿಭಾಗವಾಗಿದೆ. ಮೊದಲ ಹಂತಕ್ಕೆ `4.75 ಲಕ್ಷ ವೆಚ್ಚವಾದರೆ, ಎರಡನೇ ಹಂತದಲ್ಲಿ 26 ಲಕ್ಷ ರೂ. ವೆಚ್ಚವಾಗಲಿದೆ.

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು 36 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಹ್ಯ ಏಜೆನ್ಸಿಯ ಸಹಾಯದಿಂದ ನೈಜ-ಸಮಯದ ಮೇಲ್ವಿಚಾರಣಾ ಸೌಲಭ್ಯವನ್ನು ಜಾರಿಗೆ ತಂದಿದೆ. ನಾವು ವಿವಿಧ ಸ್ಥಳಗಳಲ್ಲಿ 36 ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಕ್ಯಾಮೆರಾಗಳು ಸೌರಶಕ್ತಿಯಿಂದ ಚಾಲಿತವಾಗಿವೆ. ಸಂಪರ್ಕವು ಎರಡು ಆವರ್ತನಗಳಲ್ಲಿ ಉಚಿತ ಬ್ಯಾಂಡ್‌ವಿಡ್ತ್ ಅನ್ನು ಬಳಸುತ್ತದೆ. ವಿಶಾಲವಾದ ನೋಟವನ್ನು ಪಡೆಯಲು ಸಹಾಯ ಮಾಡಲು ಎತ್ತರದ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಕಾಡಿನೊಳಗೆ 22 ಕಿಮೀ ದೂರದಲ್ಲಿರುವ ಪೂವರಸ್ಸು ಎಂಬಲ್ಲಿನ ಕ್ಯಾಮೆರಾವು ಒಂದೆರಡು ವರ್ಷಗಳ ಹಿಂದೆ ಕಾಡುಗಳಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಕಾಲುಬಾಯಿ ರೋಗವನ್ನು ಗುರುತಿಸಲು ಸಹಾಯ ಮಾಡಿತು”ಎಂದು ನೆಟ್‌ವರ್ಕ್‌ನ ಉಸ್ತುವಾರಿ ವಹಿಸಿರುವ ಸಿಬು ಹೇಳಿದರು.

Sabarimala pilgrimage: ಯಾತ್ರಾರ್ಥಿಗಳಿಗಾಗಿ ಅಯ್ಯನ್ ಮೊಬೈಲ್ ಅಪ್ಲಿಕೇಶನ್

ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಅರಣ್ಯ ಇಲಾಖೆಯ ಅಯ್ಯನ್ ಅಪ್ಲಿಕೇಶನ್ ಅನ್ನು ಅರಣ್ಯ ಸಚಿವ ಎ ಕೆ ಶಸೀಂದ್ರನ್ ಇತ್ತೀಚೆಗೆ ಬಿಡುಗಡೆ ಮಾಡಿದರು. ಆ್ಯಪ್ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶ, ತೀರ್ಥಯಾತ್ರೆಯ ಟ್ರೆಕ್ ಮಾರ್ಗಗಳು ಮತ್ತು ಭಕ್ತರಿಗೆ ಮಾಡಬೇಕಾದ ಮತ್ತು ಮಾಡಬಾರದ ಮಾಹಿತಿಯನ್ನು ಒದಗಿಸುತ್ತದೆ. ಇದು ಪೂಜಾ ಸಮಯಗಳು ಮತ್ತು ಮಾಸಿಕ ಪೂಜೆಗಾಗಿ ದೇವಾಲಯವನ್ನು ತೆರೆಯುವ ದಿನಗಳ ಮಾಹಿತಿಯನ್ನು ಹೊಂದಿರುವ ಕ್ಯಾಲೆಂಡರ್ ಅನ್ನು ಸಹ ಹೊಂದಿದೆ. ಸನ್ನಿಧಾನಕ್ಕೆ ಐದು ಮಾರ್ಗಗಳಿವೆ ಮತ್ತು ಪ್ರವೇಶ ಬಿಂದುವಿನಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಭಕ್ತನು ಬೆಟ್ಟದ ದೇಗುಲವನ್ನು ತಲುಪಲು ತೆಗೆದುಕೊಂಡ ಮಾರ್ಗ, ದೂರ ಮತ್ತು ಅಂದಾಜು ಸಮಯದ ಮಾಹಿತಿಯನ್ನು ಪಡೆಯುತ್ತಾನೆ.

ನಾವು ತುರ್ತು ಪರಿಸ್ಥಿತಿಗಾಗಿ ಸಂಪರ್ಕ ಸಂಖ್ಯೆಗಳನ್ನು ಒದಗಿಸಿದ್ದೇವೆ. ಮಾರ್ಗದಲ್ಲಿ ಯಾತ್ರಾರ್ಥಿಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಮೇಲ್ವಿಚಾರಣಾ ತಂಡಕ್ಕೆ ಅಪ್ಲಿಕೇಶನ್ ಸಹಾಯ ಮಾಡುತ್ತದೆ ಮತ್ತು ಕಾಡು ಪ್ರಾಣಿಗಳ ಉಪಸ್ಥಿತಿಯಂತಹ ತುರ್ತು ಸಂದರ್ಭಗಳಲ್ಲಿ ನಾವು ಅಪ್ಲಿಕೇಶನ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸುತ್ತೇವೆ. ಸತ್ರಂ-ಸನ್ನಿಧಾನಂ ಮಾರ್ಗದಲ್ಲಿ ಐದು ವಿಶ್ರಾಂತಿ ಕೇಂದ್ರಗಳಿವೆ ಮತ್ತು ಭಕ್ತರು ಪ್ರತಿಯೊಂದರಲ್ಲೂ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಪ್ರತಿ ಬಿಂದುವಿನ ನಡುವಿನ ಯಾತ್ರಿಕರ ಸಂಖ್ಯೆಯನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಮಾರ್ಗದಲ್ಲಿರುವ ತಿನಿಸುಗಳನ್ನು ಗುರುತಿಸಲು ಈ ಆ್ಯಪ್ ನೆರವಾಗಲಿದೆ’ ಎಂದು ರೇಂಜ್ ಆಫೀಸರ್ ಜ್ಯೋತಿಶ್ ತಿಳಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ