SC on loan moratorium: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಎರಡೂ ಬಿಲ್ಕುಲ್ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್
ಸಾಲ ವಿನಾಯಿತಿ (Loan moratorium) ಅವಧಿ ವಿಸ್ತರಣೆ ಹಾಗೂ ಸಾಲ ವಿನಾಯಿತಿ ಮೇಲೆ ಆರು ತಿಂಗಳ ಬಡ್ಡಿ ಮನ್ನಾ ಎರಡೂ ಸಾಧ್ಯವಿಲ್ಲ ಎಂದು ಮಾರ್ಚ್ 23ನೇ ತಾರೀಕಿನ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಲ ವಿನಾಯಿತಿ ಅವಧಿಯನ್ನು ಆರು ತಿಂಗಳು ವಿಸ್ತರಿಸಬೇಕು ಎಂದು ಕೋರಿ ವಿವಿಧ ವಾಣಿಜ್ಯ ಒಕ್ಕೂಟಗಳು ಹಾಗೂ ಕಾರ್ಪೊರೇಟ್ಗಳು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಮಾರ್ಚ್ 23, 2021) ತಿರಸ್ಕರಿಸಿದೆ. ಇದರ ಜತೆಗೆ ವಿನಾಯಿತಿ ಅವಧಿಯ ಬಡ್ಡಿಯ ಸಂಪೂರ್ಣ ಮನ್ನಾ ಕೂಡ ಸಾಧ್ಯವಿಲ್ಲ ಎಂದು ತಿಳಿಸಿದೆ. ಯಾವುದೇ ಹಣಕಾಸು ಪ್ಯಾಕೇಜ್ ಅಥವಾ ಪರಿಹಾರ ನೀಡುವಂತೆ ಸರ್ಕಾರಕ್ಕಾಗಲೀ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಾಗಲೀ ನಿರ್ದೇಶನ ನೀಡುವುದು ಸಾಧ್ಯವಿಲ್ಲ. ಇನ್ನು ನಿರ್ದಿಷ್ಟ ವಲಯಗಳಿಗೆ ಪರಿಹಾರ ನೀಡುವಂತೆ ಸಹ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎಂ.ಆರ್.ಶಾ, ಸಂಜೀವ್ ಖನ್ನಾ ಅವರನ್ನು ಒಳಗೊಂಡ ಪೀಠವು ಸಾಲ ವಿನಾಯಿತಿ ಮತ್ತು ಬಡ್ಡಿ ಮನ್ನಾ ಕುರಿತು ತೀರ್ಪನ್ನು ಘೋಷಿಸಿದರು. ಇನ್ನು ಮಂಗಳವಾರದಂದು ಸುಪ್ರೀಂ ಕೋರ್ಟ್, ವಿನಾಯಿತಿ ಸಂದರ್ಭದಲ್ಲಿ ಸಾಲ ಬಾಕಿ ಉಳಿಸಿಕೊಂಡವರಿಗೆ ಬಡ್ಡಿಯ ಮೇಲೆ ಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಮುಂದಿನ ಇಎಂಐ ಜತೆಗೆ ಹೊಂದಾಣಿಕೆ ಇನ್ನು ಬಡ್ಡಿ ಮೇಲೆ ಬಡ್ಡಿ ಹಾಕಿದ್ದಲ್ಲಿ ಅದನ್ನು ಮುಂದಿನ ಇಎಂಐಗೆ ಹೊಂದಾಣಿಕೆ ಮಾಡಲಾಗುವುದು ಮತ್ತು ಉದ್ದೇಶಪೂರ್ವಕ ಸುಸ್ತಿದಾರರಿಗೆ ಸುಸ್ತಿಬಡ್ಡಿ ಹಾಕಲಾಗುವುದು. ಕಳೆದ ವರ್ಷ ಡಿಸೆಂಬರ್ 17ನೇ ತಾರೀಕಿನಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ಪೀಠವು ಅರ್ಜಿಗಳ ಕುರಿತಾದ ತೀರ್ಪನ್ನು ಕಾಯ್ದಿರಿಸಿತ್ತು.
ಮಾರ್ಚ್ 1ರಿಂದ ಮೇ 31, 2020ರವರೆಗೆ, ಆ ಮೇಲೆ ಆಗಸ್ಟ್ 31ರ ತನಕ ದೇಶಾದ್ಯಂತ ಕೊರೊನಾ ಲಾಕ್ಡೌನ್ ಇರುವ ವೇಳೆ ಮಾರ್ಚ್ 27, 2020ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಮೇಲೆ ಕಂತಿಗೆ ವಿನಾಯಿತಿ ಘೋಷಿಸಿತ್ತು. ಇನ್ನು ಆರ್ಥಿಕ ಒತ್ತಡ ಆಗಬಾರದು ಎಂಬ ಕಾರಣಕ್ಕೆ ಸಾಲ ಪಡೆದವರಿಗೆ ಅನುತ್ಪಾದಕ ಆಸ್ತಿ ಎನಿಸಿಕೊಳ್ಳದೆ ಒಂದು ಸಲದ ಸಾಲ ಮರು ಹೊಂದಾಣಿಕೆಗೆ ಅವಕಾಶ ನೀಡುವಂತೆ ಆರ್ಬಿಐ ಸೂಚಿಸಿತ್ತು.
2 ಕೋಟಿ ರೂಪಾಯಿ ತನಕದ ಸುಸ್ತಿ ಬಡ್ಡಿ ಮನ್ನಾ 2020ರ ಸೆಪ್ಟೆಂಬರ್ನಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್, ಆಗಸ್ಟ್ 31ನೇ ತಾರೀಕಿನ ತನಕ ಯಾವುದು ಎನ್ಪಿಎ (ಅನುತ್ಪಾದಕ ಆಸ್ತಿ) ಅಲ್ಲವೋ ಅದನ್ನು ಮುಂದಿನ ಆದೇಶದ ತನಕ ಹಾಗೆ ಪರಿಗಣಿಸಬಾರದು ಎಂದು ಅದೇಶಿಸಿತ್ತು. ಒಂದು ತಿಂಗಳ ನಂತರ, ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರವು ಕೆಲವು ವಿಭಾಗದಡಿಯಲ್ಲಿ ಬರುವ 2 ಕೋಟಿ ರೂಪಾಯಿ ತನಕದ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿತು.
ಕೇಂದ್ರ ಸರ್ಕಾರವು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಎಲ್ಲ ಸಾಲ- ಮುಂಗಡಗಳಿಗೆ ವಿನಾಯಿತಿಯ 6 ತಿಂಗಳ ಅವಧಿಗೆ ಬಡ್ಡಿ ಮನ್ನಾ ಮಾಡಿದಲ್ಲಿ 6 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಬಿಟ್ಟುಕೊಡಬೇಕಾಗುತ್ತದೆ. ಒಂದು ವೇಳೆ ಈ ಹೊರೆಯನ್ನು ಬ್ಯಾಂಕ್ಗಳೇ ಭರಿಸಬೇಕು ಎಂದಾದಲ್ಲಿ ಅವುಗಳ ನಿವ್ವಳ ಮೌಲ್ಯದ ಬಹುತೇಕ ಪಾಲು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಅವುಗಳ ಅಸ್ತಿತ್ವದ ಪ್ರಶ್ನೆ ಉದ್ಭವಿಸುತ್ತದೆ ಎಂದು ತಿಳಿಸಿತ್ತು.
ಇದನ್ನೂ ಓದಿ: ಬ್ಯಾಂಕ್ಗಳಿಗೆ ಬಡ್ಡಿ ಮನ್ನಾ ಹೊರೆ ಭರಿಸುವುದು ಅಸಾಧ್ಯ: ಸುಪ್ರೀಂಗೆ ವಿವರ ಸಲ್ಲಿಸಿದ ಕೇಂದ್ರ
Published On - 12:01 pm, Tue, 23 March 21