ಲಸಿಕಾ ಅಭಿಯಾನಕ್ಕೆ ಸ್ಪುಟ್ನಿಕ್ ಲಸಿಕೆ ಸೇರ್ಪಡೆಯಾಗಿಲ್ಲ; ಆದರೆ, ಭಾರತದಲ್ಲಿ ಸ್ಪುಟ್ನಿಕ್ ಲಸಿಕೆ 2ನೇ ಡೋಸ್ ಕೊರತೆ ಎದುರಾಗಿರೋದು ಏಕೆ?
ಇನ್ನೂ ಭಾರತದಲ್ಲೇ ರಷ್ಯಾದ ಸ್ಪುಟ್ನಿಕ್ ಲಸಿಕೆಯು ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ, ಈಗ ಇದು ಆಗಸ್ಟ್ ತಿಂಗಳಿಗೆ ಮುಂದೂಡಿಕೆ ಆಗಿದೆ. ಭಾರತದಲ್ಲಿ 6 ಕಂಪನಿಗಳು ಸ್ಪುಟ್ನಿಕ್v ಲಸಿಕೆ ಉತ್ಪಾದಿಸಲು ಆರ್‌ಡಿಐಎಫ್ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ರಷ್ಯಾದ ಸ್ಪುಟ್ನಿಕ್ v ಲಸಿಕೆಯು ಶೇ.91.6 ರಷ್ಟು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.
ಭಾರತವು ಸಾರ್ವತ್ರಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಇನ್ನೂ ಸ್ಪುಟ್ನಿಕ್ ಲಸಿಕೆಯನ್ನು ಸೇರ್ಪಡೆ ಮಾಡಿಲ್ಲ. ಆದರೆ, ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯ 2ನೇ ಡೋಸ್ ಕೊರತೆ ಎದುರಾಗಿರೋದು ಏಕೆ? ಸ್ಪುಟ್ನಿಕ್ ಲಸಿಕೆಯ ಉತ್ಪಾದನೆಯಲ್ಲಿ ಎದುರಾಗಿರುವ ಸಮಸ್ಯೆ ಏನು? ಸಮಸ್ಯೆ ಪರಿಹಾರಕ್ಕೆ ರಷ್ಯಾ ಏನು ಮಾಡುತ್ತಿದೆ ಎನ್ನುವುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
ಸ್ಪುಟ್ನಿಕ್ V ಎರಡನೇ ಡೋಸ್ ಲಸಿಕೆ ಉತ್ಪಾದನೆಯಲ್ಲಿ ಸಮಸ್ಯೆ! ಭಾರತದ ಕೊರೊನಾ ಲಸಿಕಾ ಅಭಿಯಾನ ವೇಗ ಪಡೆಯಲು ರಷ್ಯಾದ ಸ್ಪುಟ್ನಿಕ್ Vಲಸಿಕೆಯು ದೊಡ್ಡ ಕೊಡುಗೆ ನೀಡುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ನಿರೀಕ್ಷೆಯು ಈಗ ಹುಸಿಯಾಗುತ್ತಿದೆ. ಸ್ಪುಟ್ನಿಕ್ V ಲಸಿಕೆಯ ಉತ್ಪಾದನೆಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವುದು ಈಗ ರಷ್ಯಾದ ವಿಜ್ಞಾನಿಗಳಿಗೂ ಸವಾಲು ಆಗಿದೆ. ರಷ್ಯಾದ ಸ್ಪುಟ್ನಿಕ್ V ಲಸಿಕೆಯ ಉತ್ಪಾದನೆಯಲ್ಲಿ ಎದುರಾಗಿರುವ ಸಮಸ್ಯೆ ಏನೆಂದರೇ, ಸ್ಪುಟ್ನಿಕ್ V ಲಸಿಕೆಯ ಮೊದಲ ಡೋಸ್ ನೀಡಿದ್ದ ವಯಲ್ ನಿಂದಲೇ ಎರಡನೇ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಲ್ಲ.
ಸ್ಪುಟ್ನಿಕ್V ಮೊದಲ ಡೋಸ್ ಲಸಿಕೆಯೇ ಬೇರೆ. ಎರಡನೇ ಡೋಸ್ ಲಸಿಕೆಯೇ ಬೇರೆ. ಎರಡನ್ನೂ ಪ್ರತೇಕವಾಗಿ ಉತ್ಪಾದನೆ ಮಾಡಬೇಕು. ಮೊದಲ ಡೋಸ್ ಲಸಿಕೆ ಉತ್ಪಾದನೆಯಾದ ಪ್ರಮಾಣದಲ್ಲೇ ಎರಡನೇ ಡೋಸ್ ಲಸಿಕೆಯು ಉತ್ಪಾದನೆಯಾಗಬೇಕು. ಆಗ ಸ್ಪುಟ್ನಿಕ್ V ಲಸಿಕೆಯನ್ನು ಜನರಿಗೆ ನೀಡಲು ಸಾಧ್ಯ.
ಸ್ಪುಟ್ನಿಕ್ V ಲಸಿಕೆಯ ಮೊದಲ ಡೋಸ್ ಲಸಿಕೆಯನ್ನು rAD26 ಅಡಿನೋವೈರಸ್ ವೆಕ್ಟರ್ ಬಳಸಿ ಉತ್ಪಾದನೆ ಮಾಡಲಾಗುತ್ತೆ. ಇನ್ನೂ ಸ್ಪುಟ್ನಿಕ್ V ಲಸಿಕೆಯ ಎರಡನೇ ಡೋಸ್ ಲಸಿಕೆಯನ್ನು rAD5 ಅಡಿನೋವೈರಸ್ ವೆಕ್ಟರ್ ಬಳಸಿ ಉತ್ಪಾದನೆ ಮಾಡಲಾಗುತ್ತೆ. ಮೊದಲ ಮತ್ತು ಎರಡನೇ ಡೋಸ್ ಲಸಿಕೆಗಳನ್ನು ಬೇರೆ ಬೇರೆ ಅಡಿನೋವೈರಸ್ ವೆಕ್ಟರ್ ಬಳಸಿ ಉತ್ಪಾದನೆ ಮಾಡಲಾಗುತ್ತೆ. ಮೊದಲ ಡೋಸ್ ಲಸಿಕೆಯು ನಿಜವಾದ ಲಸಿಕೆ. ಎರಡನೇ ಡೋಸ್ ಲಸಿಕೆಯು ಬೂಸ್ಟರ್ ಡೋಸ್. ಮೊದಲ ಡೋಸ್ ಲಸಿಕೆ ಪಡೆದ 21 ದಿನದ ಬಳಿಕ ಎರಡನೇ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತೆ.
ಭಾರತಕ್ಕೆ 31.5 ಲಕ್ಷ ಡೋಸ್ ಮೊದಲ ಡೋಸ್ ಸ್ಪುಟ್ನಿಕ್ ಲಸಿಕೆಯು ರಷ್ಯಾದಿಂದ ಅಮದು ಆಗಿದೆ. ಆದರೆ, ಸ್ಪುಟ್ನಿಕ್ ಲಸಿಕೆಯ ಎರಡನೇ ಡೋಸ್ ಲಸಿಕೆಯು 4.5 ಲಕ್ಷ ಡೋಸ್ ಮಾತ್ರ ಇದೆ. ಭಾರತದಲ್ಲಿ ಮೊದಲ ಡೋಸ್ ಲಸಿಕೆಯು ಲಭ್ಯವಿರುವ ಪ್ರಮಾಣದಷ್ಟೇ ಎರಡನೇ ಡೋಸ್ ಲಸಿಕೆಯು ಲಭ್ಯವಿಲ್ಲ. ಹೀಗಾಗಿ ಭಾರತದಲ್ಲಿ ಸ್ಪುಟ್ನಿಕ್V ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಸ್ಪುಟ್ನಿಕ್ ಲಸಿಕೆಯನ್ನು ಭಾರತದ ಸಾರ್ವತ್ರಿಕ ಲಸಿಕಾ ಅಭಿಯಾನಕ್ಕೂ ಸೇರ್ಪಡೆ ಮಾಡಲು ಸಾಧ್ಯವಾಗಿಲ್ಲ. ಸ್ಪುಟ್ನಿಕ್ ಲಸಿಕೆಯ 2ನೇ ಡೋಸ್ ಲಸಿಕೆಯು ಕಡಿಮೆ ಪ್ರಮಾಣದಲ್ಲಿ ಲಭ್ಯವಿರುವುದು ಭಾರತಕ್ಕೂ ಕೂಡ ಅನಿರೀಕ್ಷಿತ ಎಂದು ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ತಂಡದ ಮುಖ್ಯಸ್ಥ ಡಾಕ್ಟರ್ ಎನ್.ಕೆ.ಅರೋರಾ ಹೇಳಿದ್ದಾರೆ.
ಸ್ಪುಟ್ನಿಕ್ ಲಸಿಕೆಯ ಎರಡನೇ ಡೋಸ್ ಲಸಿಕೆಯ ಉತ್ಪಾದನೆಯಲ್ಲಿ ರಷ್ಯಾದಲ್ಲಿ ಸಮಸ್ಯೆ ಇದೆ. ಎರಡನೇ ಡೋಸ್ ಲಸಿಕೆಯನ್ನ ಉತ್ಪಾದನೆ ಮಾಡುವುದು ಬಹಳ ಕಷ್ಟ. rAD5 ಎರಡನೇ ಡೋಸ್ ಲಸಿಕೆಯ ಉತ್ಪಾದನೆಗೆ ಹೆಚ್ಚಿನ ಸಮಯ ಬೇಕು. ಸೆಲ್ ಕಲ್ಚರ್ ನಲ್ಲಿ ವೈರಸ್ ಗಳನ್ನ ಬೆಳೆಸಲಾಗುತ್ತೆ. ಸೆಲ್ ಕಲ್ಚರ್ ನಲ್ಲಿ ಬೆಳೆಯುವ ವೈರಸ್ ಗುಣಮಟ್ಟ ಕಡಿಮೆ ಇರುತ್ತೆ. ವೈರಸ್ ಗುಣಮಟ್ಟ, ಪ್ರಮಾಣ ಕಡಿಮೆಯಾದರೇ, ಲಸಿಕೆಯ ಉತ್ಪಾದನೆ ಕೂಡ ಕಡಿಮೆ ಆಗುತ್ತೆ.
ಹೀಗಾಗಿ ಸ್ಪುಟ್ನಿಕ್ ಲಸಿಕೆಯ ಎರಡನೇ ಡೋಸ್ ಲಸಿಕೆಯು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿಲ್ಲ. ಭಾರತವು ಕೂಡ ಈ ಸಮಸ್ಯೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಬೇರೆ ಕಂಪನಿಗಳ ಲಸಿಕೆಯಲ್ಲಿ ಈ ಸಮಸ್ಯೆ ಇಲ್ಲ. ಬೇರೆ ಕಂಪನಿಗಳ ಲಸಿಕೆಯಲ್ಲಿ ಮೊದಲ ಡೋಸ್ ನೀಡಿದ್ದ ವಯಲ್ ನಿಂದಲೇ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತೆ. ಆದರೆ, ಸ್ಪುಟ್ನಿಕ್ ಲಸಿಕೆಯು ಬೇರೆ ಎಲ್ಲ ಕೊರೊನಾ ಲಸಿಕೆಗಳಂತೆ ಅಲ್ಲ.
ಆದರೆ, ರಷ್ಯಾದ ಸ್ಪುಟ್ನಿಕ್V ಲಸಿಕೆಯ ಎರಡನೇ ಡೋಸ್ ಉತ್ಪಾದನೆಯಲ್ಲಿ ಸಮಸ್ಯೆ ಇದೆ ಎನ್ನುವುದನ್ನು ರಷ್ಯನ್ ಡೈರೆಕ್ಟ್ ಇನ್ ವೆಸ್ಟ್ ಮೆಂಟ್ ಫಂಡ್ ಒಪ್ಪಿಕೊಳ್ಳಲ್ಲ. ಆರ್‌ಡಿಐಎಫ್ ಜೊತೆಗೆ ಭಾರತದಲ್ಲಿ ಸ್ಪುಟ್ನಿಕ್V ಲಸಿಕೆ ಉತ್ಪಾದನೆ ಮಾಡಲು ಒಪ್ಪಂದ ಮಾಡಿಕೊಂಡಿರುವ ಕಂಪನಿಗಳು ಈಗಾಗಲೇ ಎರಡನೇ ಡೋಸ್ ಲಸಿಕೆಯನ್ನು ಉತ್ಪಾದಿಸಿವೆ. ಈ ಲಸಿಕೆಯನ್ನು ಪರೀಕ್ಷೆಗಾಗಿ ರಷ್ಯಾದ ಗಾಮಲೇಯಾ ಸೆಂಟರ್ ಗೆ ಕಳಿಸಲಾಗಿದೆ.
ಸ್ಪುಟ್ನಿಕ್ ಲಸಿಕೆಯ ತಂತ್ರಜ್ಞಾನವನ್ನು ಭಾರತದಲ್ಲಿ ಒಪ್ಪಂದ ಮಾಡಿಕೊಂಡಿರುವ ಕಂಪನಿಗಳಿಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ಪುಟ್ನಿಕ್ ವಿ ಮತ್ತು ಸ್ಪುಟ್ನಿಕ್ ಲೈಟ್ ಲಸಿಕೆಗಳನ್ನು ಭಾರತಕ್ಕೆ ಆಗಸ್ಟ್ ತಿಂಗಳಿನಲ್ಲಿ ವೇಗವಾಗಿ ಪೂರೈಸಲು ಪ್ಲ್ಯಾನ್ ಮಾಡಲಾಗಿದೆ ಎಂದು ರಷ್ಯನ್ ಡೈರೆಕ್ಟ್ ಇನ್‌ವೆಸ್ಟ್ ಮೆಂಟ್ ಫಂಡ್ ಹೇಳಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲೇ ಸ್ಪುಟ್ನಿಕ್V ಲಸಿಕೆಯು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಾಗಲಿದೆ ಎಂದು ಆರ್‌ಡಿಐಎಫ್ ಹೇಳಿದೆ. ವಿಶ್ವದ ಅತಿ ದೊಡ್ಡ ಲಸಿಕಾ ಉತ್ಪಾದನಾ ಕಂಪನಿಯಾದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೂಡ ಸ್ಪುಟ್ನಿಕ್V ಲಸಿಕೆಯನ್ನು ಉತ್ಪಾದಿಸಲಿದೆ, ಜೊತೆಗೆ ಗ್ಲಾಂಡ್ ಫಾರ್ಮಾ, ಹೆಟೆರೋ ಬಯೋ ಫಾರ್ಮಾ, ಪನೆಸಿಯಾ ಬಯೋಟೆಕ್, ಸ್ಟೆಲೀಸ್ ಬಯೋಫಾರ್ಮಾ, ವಿರಚವೋ ಬಯೋಟೆಕ್, ಮೋರ್ ಪೆನ್ ಲ್ಯಾಬೋರೇಟರಿ ಕಂಪನಿಗಳು ಕೂಡ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸುತ್ತಿವೆ.
ಭಾರತಕ್ಕೆ 10 ಕೋಟಿ ಡೋಸ್ ಸಿಗುತ್ತಾ? ಕೇಂದ್ರ ಸರ್ಕಾರವು ರಷ್ಯಾದ ಸ್ಪುಟ್ನಿಕ್v ಲಸಿಕೆಯ ಮೇಲೆ ಭರವಸೆ ಇಟ್ಟುಕೊಂಡಿದೆ. ಭಾರತಕ್ಕೆ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ಅವಧಿಯಲ್ಲಿ 10 ಕೋಟಿ ಡೋಸ್ ಸ್ಪುಟ್ನಿಕ್ ಲಸಿಕೆಯು ಸಿಗಲಿದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ. ನಿರೀಕ್ಷೆಯಂತೆ ಆಗಸ್ಟ್ ತಿಂಗಳಿನಿಂದ ಸ್ಪುಟ್ನಿಕ್v ಲಸಿಕೆ ಸಿಗದಿದ್ದರೇ, ಭಾರತದ ಲಸಿಕಾ ಅಭಿಯಾನಕ್ಕೂ ಹಿನ್ನಡೆಯಾಗಲಿದೆ.
ಭಾರತದಲ್ಲಿ ಇದುವರೆಗೂ 4,44,638 ಡೋಸ್ ಸ್ಪುಟ್ನಿಕ್ ಲಸಿಕೆಯ ಮೊದಲ ಡೋಸ್ ಲಸಿಕೆಯನ್ನು ಜನರಿಗೆ ನೀಡಲಾಗಿದೆ ಎಂದು ಕೋವಿನ್ ಪೋರ್ಟಲ್ ನಲ್ಲಿ ಮಾಹಿತಿ ಇದೆ. ಆಯ್ದ ಆಸ್ಪತ್ರೆಗಳಲ್ಲಿ ಈ ವಾರ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತೆ.
ಇನ್ನೂ ಸ್ಪುಟ್ನಿಕ್ ಲಸಿಕೆಯ ಮಾರ್ಕೆಟಿಂಗ್ ಹಕ್ಕು ಪಡೆದಿರುವ ಹೈದರಾಬಾದ್‌ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಹೇಳುವ ಪ್ರಕಾರ, ಸ್ಪುಟ್ನಿಕ್ ಲಸಿಕೆಯ ಪೂರೈಕೆಯನ್ನು ಹೆಚ್ಚಿಸಲು ಆರ್‌ಡಿಐಎಫ್ ಜೊತೆಗೆ ಸಮನ್ವಯದಿಂದ ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಭಾರತದಲ್ಲಿ ಸ್ಪುಟ್ನಿಕ್ v ಲಸಿಕೆ ಉತ್ಪಾದಿಸುವ 6 ಕಂಪನಿಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೋಲ್ಡ್ ಚೈನ್ ಮೂಲಸೌಕರ್ಯ ಸ್ಥಾಪಿಸಿದ್ದೇವೆ. ಸ್ಪುಟ್ನಿಕ್ ಲಸಿಕೆಯನ್ನು ಮೈನಸ್ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಸಂಗ್ರಹಿಸಿಡಬೇಕು ಎಂದು ರೆಡ್ಡೀಸ್ ಲ್ಯಾಬೋರೇಟರಿ ಹೇಳಿದೆ.
ಇನ್ನೂ ಭಾರತದಲ್ಲೇ ರಷ್ಯಾದ ಸ್ಪುಟ್ನಿಕ್ ಲಸಿಕೆಯು ಜುಲೈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ, ಈಗ ಇದು ಆಗಸ್ಟ್ ತಿಂಗಳಿಗೆ ಮುಂದೂಡಿಕೆ ಆಗಿದೆ. ಭಾರತದಲ್ಲಿ 6 ಕಂಪನಿಗಳು ಸ್ಪುಟ್ನಿಕ್v ಲಸಿಕೆ ಉತ್ಪಾದಿಸಲು ಆರ್‌ಡಿಐಎಫ್ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಹೈದರಾಬಾದ್‌ನ ಡಾಕ್ಟರ್ ರೆಡ್ಡೀಸ್ ಲ್ಯಾಬೋರೇಟರಿ ಕಂಪನಿಯು 25 ಕೋಟಿ ಡೋಸ್ ಲಸಿಕೆಯನ್ನು ರಷ್ಯಾದಿಂದ ಅಮದು ಮಾಡಿಕೊಳ್ಳುವ ಒಪ್ಪಂದ ಆಗಿದೆ. ರಷ್ಯಾದ ಸ್ಪುಟ್ನಿಕ್v ಲಸಿಕೆಯು ಶೇ.91.6 ರಷ್ಟು ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.
(shortage of sputnik v corona vaccine in india but why)