ಮೇ ತಿಂಗಳಿಂದ ದೊರೆಯಲಿರುವ ಸ್ಪುಟ್ನಿಕ್ ವಿ ಲಸಿಕೆ ಭಾರತದ ಪಾಲಿಗೆ ಗೇಮ್ ಚೇಂಜರ್ ಆಗಲಿದೆಯೇ?

ಎರಡು ಡೋಸ್​ಗಳಲ್ಲಿ ನೀಡಲಾಗುವ ಈ ಲಸಿಕೆ ಇತರ ಲಸಿಕೆಗಳಿಗಿಂತ ಅತಿ ದೀರ್ಘ ಕಾಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ರಷ್ಯಾ ವಾದಿಸುತ್ತದೆ. ಸಹಜ ದ್ರವ ರೂಪದ ಲಸಿಕೆಯ ಜತೆ ಜತೆಗೆ ಪೌಡರ್ ರೂಪದ ಕೊರೊನಾ ಔಷಧವನ್ನು ಸಹ ಅಭಿವೃದ್ಧಿಪಡಿಸುವತ್ತ ಸಂಸ್ಥೆ ಗಮನಹರಿಸಿದೆ.

ಮೇ ತಿಂಗಳಿಂದ ದೊರೆಯಲಿರುವ ಸ್ಪುಟ್ನಿಕ್ ವಿ ಲಸಿಕೆ ಭಾರತದ ಪಾಲಿಗೆ ಗೇಮ್ ಚೇಂಜರ್ ಆಗಲಿದೆಯೇ?
ಸ್ಪುಟ್ನಿಕ್​ ವಿ ಲಸಿಕೆ
Follow us
guruganesh bhat
| Updated By: ಆಯೇಷಾ ಬಾನು

Updated on: Apr 29, 2021 | 6:35 AM

ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಮೇ 1ರಿಂದ ಭಾರತದಲ್ಲಿ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಶೇಕಡಾ 91.6ರಷ್ಟು ಖಚಿತ ಪರಿಣಾಮ ಬೀರುವ ಸಾಮರ್ಥ್ಯವುಳ್ಳ ಸ್ಪುಟ್ನಿಕ್ ವಿ ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ಎಂದು ರಷ್ಯಾ ಹೇಳಿದೆ. ಆದರೆ ಈವರೆಗೆ ತಾನು ಕೈಗೊಂಡ ಪ್ರಯೋಗಗಳ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಭೂಮಿಯಿಂದ ಬಾಹ್ಯಾಕಾಶಕ್ಕೆ ಉಡಾವಣೆಯಾದ ಮೊದಲ ಉಪಗ್ರಹದ ಹೆಸರೇ ಸ್ಪುಟ್ನಿಕ್. ರಷ್ಯಾ ಉಡಾವಣೆಗೊಳಿಸಿದ್ದ ಈ ಉಪಗ್ರಹದ ಹೆಸರಿನ ಅರ್ಥವೇ ಉಪಗ್ರಹ ಅಥವಾ ಪ್ರಯಾಣದಲ್ಲಿನ ಸಹಚರಿ.

ಹಿಂದಿನ ವರ್ಷವೇ ರಷ್ಯಾದ ಪ್ರಧಾನಿ ವ್ಲಾದಿಮಿರ್ ಪುಟಿನ್ ವಿಶ್ವದ ಮೊದಲ ಕೊವಿಡ್ ಲಸಿಕೆಯಾಗಿ ಸ್ಪುಟ್ನಿಕ್ ವಿ ಲಸಿಕೆಯನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದರು. ಇದೇ ಲಸಿಕೆಯೇ ಮೇ 1ರಂದು ಭಾರತಕ್ಕೆ ಲಗ್ಗೆಯಿಡಲಿದೆ.

ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸಿರುವುದು ಈಗಾಗಲೇ ಲಸಿಕೆ ಉತ್ಪಾದನೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗಮಾಲಿಯಾ ನ್ಯಾಷನಲ್ ರಿಸರ್ಚ್ ಇನ್ಸ್​ಟಿಟ್ಯೂಟ್ ಆಫ್ ಎಪಿಡೆಮಿಯಾನಾಲೊಜಿ ಆ್ಯಂಡ್ ಮೈಕ್ರೋಬಯೋಲಜಿ ಎಂಬ ಸಂಸ್ಥೆ. ಇದೇ ಸಂಸ್ಥೆ ಹಿಂದೆ ಎಬೊಲಾ ಮತ್ತು ಇನ್ನಿತರ ಕೆಲ ಲಸಿಕೆಗಳನ್ನು ಉತ್ಪಾದಿಸಿತ್ತು ಎಂಬುದು ಗಮನಾರ್ಹ. ಸ್ಪುಟ್ನಿಕ್ ವಿ ಲಸಿಕೆಯಲ್ಲಿ ಪ್ರಯೋಗದ ಹಂತದಲ್ಲಿನ ಆಗುಹೋಗುಗಳ ದತ್ತಾಂಶಗಳನ್ನು ಈವರೆಗೂ ಬಹಿರಂಗಪಡಿಸಿಲ್ಲ ಎಂಬುದೊಂದೇ ಸ್ವಲ್ಪ ಯೋಚಿಸಬೇಕಾದ ವಿಷಯ.

ಸದ್ಯ ಭಾರತದಲ್ಲಿ ಬಳಕೆಯಲ್ಲಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳೂ ಸೇರಿ ಇತರ ಎಲ್ಲ ಕೊರೊನಾ ಲಸಿಕೆಗಳಿಗಿಂತ ಸ್ಪುಟ್ನಿಕ್ ವಿ ಲಸಿಕೆ ಹೆಚ್ಚು ಪ್ರಭಾವಶಾಲಿ ಎಂದು ರಷ್ಯಾ ಪ್ರತಿಪಾದಿಸಿದೆ. ಎರಡು ಡೋಸ್​ಗಳಲ್ಲಿ ನೀಡಲಾಗುವ ಈ ಲಸಿಕೆ ಇತರ ಲಸಿಕೆಗಳಿಗಿಂತ ಅತಿ ದೀರ್ಘ ಕಾಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ರಷ್ಯಾ ವಾದಿಸುತ್ತದೆ. ಸಹಜ ದ್ರವ ರೂಪದ ಲಸಿಕೆಯ ಜತೆ ಜತೆಗೆ ಪೌಡರ್ ರೂಪದ ಕೊರೊನಾ ಔಷಧವನ್ನು ಸಹ ಅಭಿವೃದ್ಧಿಪಡಿಸುವತ್ತ ಸಂಸ್ಥೆ ಗಮನಹರಿಸಿದೆ.

ಲಸಿಕೆಯ ಲಭ್ಯತೆಯ ಜತೆಗೆ ಯಾವ ಬೆಲೆಗೆ ಲಸಿಕೆಯನ್ನು ಮಾರಲಾಗುತ್ತದೆ ಎಂಬುದು ಸಹ ಅತಿ ಮುಖ್ಯ ಅಂಶ. ಭಾರತದಲ್ಲಿ ಅಂದಾಜು 10 ಡಾಲರ್​ಗೆ ಸ್ಪುಟ್ನಿಕ್ ವಿ ಲಸಿಕೆಯನ್ನು ಮಾರಬಹುದು ಎಂದು ಹೇಳಲಾಗಿದ್ದರೂ, ಅಧಿಕೃತ ಹೇಳಿಕೆ ರಷ್ಯಾದಿಂದ ಹೊರಬಿದ್ದಿಲ್ಲ. ಆದರೆ ವಿಶ್ವದ ವಿವಿಧ 60 ದೇಶಗಳು ಈಗಾಗಲೇ ರಷ್ಯಾದ ಜತೆ ಸ್ಪುಟ್ನಿಕ್ ವಿ ಆಮದು ಮಾಡಿಕೊಳ್ಳಲು ಸಹಿ ಹಾಕಿವೆ. ಈ ವಿಷಯದಲ್ಲಿ ಹಿಂದೆ ಬೀಳದ ಭಾರತದ ಐದು ಔಷಧ ಕಂಪನಿಗಳು ರಷ್ಯಾ ಬಳಿ ಒಪ್ಪಂದ ಮಾಡಿಕೊಂಡು ಒಟ್ಟು 85 ಕೋಟಿ ಡೋಸ್ ಲಸಿಕೆ ಆಮದಿಗೆ ಒಡಂಬಡಿಕೆ ಮಾಡಿಕೊಂಡಿವೆ.

ಖಚಿತ ಫಲಿತಾಂಶ, ಬೆಲೆ ಮತ್ತು ಉತ್ಪಾದನೆಯಂತಹ ನಾನಾ ಕಾರಣಗಳಿಂದ ಸ್ಪುಟ್ನಿಕ್ ವಿ ಭಾರತದ ಪಾಲಿಗೆ ‘ಗೇಮ್ ಚೇಂಜರ್’ ಆಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

(Sputnik V vaccine arrives on May 1 can be a game changer in Indian Covid surge )