ಭಾರತೀಯರು ಆತಂಕಪಡುವ ಅಗತ್ಯವಿಲ್ಲ, ಇಂಧನ ಸಂಗ್ರಹ ಸಾಕಷ್ಟಿದೆ; ರಾಜನಾಥ್ ಸಿಂಗ್ ಸ್ಪಷ್ಟನೆ
ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿಯ ನಡುವೆಯೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ರಸಗೊಬ್ಬರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ಸಂಪೂರ್ಣವಾಗಿ ಸಹಜ ಸ್ಥಿತಿಯಲ್ಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇಂದು ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿಯು (IGoM) ಸಭೆ ನಡೆಸಿದ್ದು, ದೇಶದ ಪೂರೈಕೆ ಜಾಲದ ಸ್ಥಿತಿಗತಿಗಳನ್ನು ಪರಾಮರ್ಶಿಸಿದೆ. ಭಾರತದ ಜನರು ಯಾವುದೇ ಕಾರಣಕ್ಕೂ ಗಾಬರಿಯಿಂದ ಇಂಧನವನ್ನು ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿಲ್ಲ ಎಂದು ಈ ಸಭೆಯ ಬಳಿಕ ಸ್ಪಷ್ಟಪಡಿಸಲಾಗಿದೆ.

ನವದೆಹಲಿ, ಮೇ 27: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಸಿದ್ಧತೆ ಹಾಗೂ ಪ್ರತಿಕ್ರಿಯಾ ಕ್ರಮಗಳ ಕುರಿತು ಚರ್ಚಿಸಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೇತೃತ್ವದ ಸಚಿವರ ಸಮಿತಿಯು ನವದೆಹಲಿಯ ಕರ್ತವ್ಯ ಭವನದಲ್ಲಿ ಇಂದು ಸಭೆ ನಡೆಸಿತು. ಈ ಸಭೆಯಲ್ಲಿ ಜೆ.ಪಿ. ನಡ್ಡಾ, ಹರ್ದೀಪ್ ಸಿಂಗ್ ಪುರಿ, ಅಶ್ವಿನಿ ವೈಷ್ಣವ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಿದ್ದರು. ಈ ವೇಳೆ ದೇಶದಲ್ಲಿ ಸದ್ಯಕ್ಕೆ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿ ಉತ್ತಮವಾಗಿದೆ. ಜನರು ಆತಂಕದಿಂದ ಹೆಚ್ಚುವರಿ ಇಂಧನ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿಲ್ಲ. ದೇಶದಲ್ಲಿ ಬೇಕಾದಷ್ಟು ಇಂಧನದ ಸಂಗ್ರಹವಿದೆ ಎಂದು ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಇಂಧನ ಕೊರತೆ ಇಲ್ಲ:
ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ತೈಲ ಶುದ್ಧೀಕರಣ ದೇಶವಾಗಿದ್ದು, ವಾರ್ಷಿಕ 258.1 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ದೇಶದ ಬಳಕೆಗಿಂತಲೂ ನಮ್ಮ ಸಾಮರ್ಥ್ಯ ಹೆಚ್ಚಾಗಿದ್ದು, ವಾರ್ಷಿಕ 61.5 ಮೆಟ್ರಿಕ್ ಟನ್ ತೈಲ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಸಭೆಯ ಬಳಿಕ ತಿಳಿಸಲಾಗಿದೆ.
ರಾಜನಾಥ್ ಸಿಂಗ್ ಅವರ ಪೋಸ್ಟ್ ಇಲ್ಲಿದೆ:
The 6th meeting of IGoM was held to review the availability of essential commodities and the resilience of our supply chains, keeping the West Asia situation in mind.
The Government under the leadership of PM Shri @narendramodi has been doing excellent work since the conflict in… pic.twitter.com/4MZg4UahUd
— Rajnath Singh (@rajnathsingh) May 27, 2026
ಇದನ್ನೂ ಓದಿ: ತೈಲ ಬೆಲೆ ಹೆಚ್ಚಳ ಭಾರತದಲ್ಲೇ ಕನಿಷ್ಠ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ
ಜಾಗತಿಕವಾಗಿ ತೈಲ ಬೆಲೆ ಹೆಚ್ಚಾಗಿದ್ದರೂ, ಅದರ ಭಾರ ಸಾಮಾನ್ಯ ಗ್ರಾಹಕರ ಮೇಲೆ ಬೀಳದಂತೆ ತಡೆಯಲು ಸಾರ್ವಜನಿಕ ವಲಯದ ತೈಲ ಕಂಪನಿಗಳು ದಿನಕ್ಕೆ ಸುಮಾರು 550 ಕೋಟಿ ರೂ.ಗಳ ನಷ್ಟವನ್ನು ತಾವೇ ಭರಿಸುತ್ತಿವೆ. ಆದರೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಬಳಕೆಯ ಡೀಸೆಲ್ ಬೆಲೆಗಳು ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಇರಲಿವೆ. ಕೆಲವರು ವಾಣಿಜ್ಯ ಬಳಕೆಗೆ ಚಿಲ್ಲರೆ ಮಾರಾಟದ ಅಗ್ಗದ ಡೀಸೆಲ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಮತ್ತು ಕಾಳಸಂತೆಯಲ್ಲಿ ಮಾರುತ್ತಿರುವುದು ಕಂಡುಬಂದಿದ್ದು, ಇಂತಹ ವಂಚನೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್: ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರದ ಕೊರತೆ
ಮುಂಬರುವ ಮುಂಗಾರು (ಖಾರಿಫ್ 2026) ಹಂಗಾಮಿಗೆ ದೇಶದಲ್ಲಿ ರಸಗೊಬ್ಬರ ದಾಸ್ತಾನು ಅತ್ಯಂತ ತೃಪ್ತಿದಾಯಕವಾಗಿದೆ. ಒಟ್ಟು ಅಗತ್ಯವಿರುವ 390.54 ಲಕ್ಷ ಮೆಟ್ರಿಕ್ ಟನ್ (LMT) ರಸಗೊಬ್ಬರದಲ್ಲಿ ಈಗಾಗಲೇ ಶೇ. 51ಕ್ಕಿಂತ ಹೆಚ್ಚು (ಅಂದರೆ 200.47 ಲಕ್ಷ ಮೆಟ್ರಿಕ್ ಟನ್) ದಾಸ್ತಾನು ಲಭ್ಯವಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಕೇವಲ ಶೇ. 33ರಷ್ಟು ದಾಸ್ತಾನು ಇರುತ್ತಿತ್ತು. ಬಿಕ್ಕಟ್ಟಿನ ನಂತರ ಒಟ್ಟು 122.4 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಪೂರೈಕೆಗೆ ಸೇರಿಸಲಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಭಾರತದ ಬಂದರುಗಳಿಗೆ ಮತ್ತಷ್ಟು ರಸಗೊಬ್ಬರ ಬರಲಿದ್ದು, ರೈತರಿಗೆ ಯಾವುದೇ ಕೊರತೆಯಾಗದಂತೆ ಮತ್ತು ಆಹಾರ ಪದಾರ್ಥಗಳ ಬೆಲೆ ಸ್ಥಿರವಾಗಿರುವಂತೆ ನೋಡಿಕೊಳ್ಳಲು ರಕ್ಷಣಾ ಸಚಿವರು ಸೂಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





