
ನವದೆಹಲಿ, ಆಗಸ್ಟ್ 25: ತೃಣಮೂಲ ಕಾಂಗ್ರೆಸ್ (TMC) ತೊರೆದು ಇತರ ಪಕ್ಷಗಳನ್ನು ಸೇರಿರುವ 20 ಶಾಸಕರು ಮತ್ತು ಸಂಸದರ ವಿರುದ್ಧ ಸಲ್ಲಿಕೆಯಾಗಿರುವ ಅನರ್ಹತಾ ಅರ್ಜಿಗಳನ್ನು ನಿರ್ದಿಷ್ಟ ಸಮಯಮಿತಿಯೊಳಗೆ ವಿಲೇವಾರಿ ಮಾಡುವಂತೆ ಕೋರಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ (Abhishek Banerjee) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ನೋಟಿಸ್ ಜಾರಿ ಮಾಡಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಂದ ಅನರ್ಹತಾ ಅರ್ಜಿಗಳ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬವನ್ನು ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ಈ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆಗೆ ಒಪ್ಪಿಗೆ ನೀಡಿದೆ. ಆದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಚಿವಾಲಯದ ಪರವಾಗಿ ಪ್ರತಿನಿಧಿಸುತ್ತಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಕಚೇರಿ ಹಾಗೂ ಲೋಕಸಭೆಯ ಮಹ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿಗೊಳಿಸುವುದನ್ನು ನ್ಯಾಯಾಲಯ ನಿರಾಕರಿಸಿದೆ.
ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ; ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಅರೆಸ್ಟ್ ವಾರಂಟ್ ಜಾರಿ
ಏನಿದು ಪ್ರಕರಣ?:
ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಅರ್ಜಿಯಲ್ಲಿ ಸಯಾನಿ ಘೋಷ್, ಕಾಕೋಲಿ ಘೋಷ್ ದಸ್ತಿದಾರ್, ಸುದೀಪ್ ಬಂಡೋಪಾಧ್ಯಾಯ, ಶತಾಬ್ದಿ ರಾಯ್, ಪ್ರಸನ್ ಬ್ಯಾನರ್ಜಿ, ಅರೂಪ್ ಚಕ್ರವರ್ತಿ, ದೀಪಕ್ ದೇವ್ ಅಧಿಕಾರಿ ಮತ್ತು ಯೂಸುಫ್ ಪಠಾಣ್ ಸೇರಿದಂತೆ 20 ಬಂಡಾಯ ಸಂಸದರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಈ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಿಂದ ಗೆದ್ದು ಬಂದಿದ್ದ ಈ ನಾಯಕರು, ಮೇ ತಿಂಗಳಲ್ಲಿ ಫಲಿತಾಂಶ ಬಂದ ತಕ್ಷಣವೇ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಎಂಬ ಪಕ್ಷದ ಜೊತೆ ವಿಲೀನಗೊಂಡಿದ್ದರು. ಸಂಸತ್ತಿನಲ್ಲಿ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ಕೋರಿದ್ದ ಇವರಿಗೆ, ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ಪ್ರತ್ಯೇಕ ಆಸನಗಳನ್ನು ಕಲ್ಪಿಸಲಾಗಿತ್ತು.
ಇದನ್ನೂ ಓದಿ: ಟಿಎಂಸಿ ಬಂಡಾಯ ಸಂಸದರಿಗೂ ಆಹ್ವಾನ ವಿರೋಧಿಸಿ ಸರ್ವಪಕ್ಷ ಸಭೆಯಿಂದ ಹೊರನಡೆದ ವಿರೋಧ ಪಕ್ಷಗಳು
ಸಂಸದರು ತಮ್ಮ ಪಕ್ಷದ ಚಿಹ್ನೆಯಡಿಯಲ್ಲಿ ಆಯ್ಕೆಯಾಗಿದ್ದು, ಮತ್ತೊಂದು ರಾಜಕೀಯ ಒಕ್ಕೂಟದೊಂದಿಗೆ ಕೈಜೋಡಿಸಿರುವುದು ಸ್ವಯಂಪ್ರೇರಿತವಾಗಿ ಪಕ್ಷದ ಸದಸ್ಯತ್ವವನ್ನು ತೊರೆದಂತಾಗುತ್ತದೆ; ಹೀಗಾಗಿ ಪಕ್ಷಾಂತರ ನಿಗ್ರಹ ಕಾಯ್ದೆಯಡಿ ಅವರು ಅನರ್ಹತೆಗೆ ಅರ್ಹರಾಗುತ್ತಾರೆ ಎಂದು ಟಿಎಂಸಿ ವಾದಿಸಿದೆ. ಆದರೆ, ತಮ್ಮ ನಡೆ ಸಿಂಧುವಾದ ವಿಲೀನವಾಗಿದೆ ಎಂದು ಬಂಡಾಯ ಸಂಸದರ ಬಣ ಪ್ರತಿಪಾದಿಸಿದೆ.
ಪಕ್ಷಾಂತರ ನಿಗ್ರಹ ಕಾಯ್ದೆ ಅಡಿಯಲ್ಲಿ ಇವರನ್ನು ಅನರ್ಹಗೊಳಿಸಬೇಕೆಂದು ಟಿಎಂಸಿ ಪಟ್ಟು ಹಿಡಿದಿದೆ. ಅಭಿಷೇಕ್ ಬ್ಯಾನರ್ಜಿ ಅವರು ಈ ಮುಂಚೆಯೇ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ತಕ್ಷಣವೇ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಸಂಬಂಧ ಜುಲೈ 27ರಂದು ಮತ್ತೊಮ್ಮೆ ಮನವಿ ಮಾಡಿದ್ದ ಅಭಿಷೇಕ್ ಬ್ಯಾನರ್ಜಿ, ಆಗಸ್ಟ್ 12ರಂದು ಸಭಾಪತಿಯನ್ನು ಭೇಟಿಯಾಗಿ ಚರ್ಚಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ