ಅಣ್ಣಾಮಲೈಗೆ ಬಿಜೆಪಿಯ ರಾಷ್ಟ್ರ ರಾಜಕಾರಣದಲ್ಲಿ ಸ್ಥಾನ? ಅಮಿತ್ ಶಾ ಸುಳಿವು
ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದ ಕೆ. ಅಣ್ಣಾಮಲೈ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ, ಅಣ್ಣಾಮಲೈಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಷ್ಟ್ರೀಯ ಮಟ್ಟದ ಪಾತ್ರ ನೀಡುವ ಬಗ್ಗೆ ಸುಳಿವು ನೀಡಿದ್ದಾರೆ. ಇಂದು ಚೆನ್ನೈನಲ್ಲಿ ಮಾತನಾಡಿದ ಅಮಿತ್ ಶಾ ಈ ಬಗ್ಗೆ ಸುಳಿವು ನೀಡಿದ್ದಾರೆ.

ಚೆನ್ನೈ, ಏಪ್ರಿಲ್ 11: ತಮಿಳುನಾಡು ಬಿಜೆಪಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ಕೆ ಅಣ್ಣಾಮಲೈ (K Annamalai) ಅವರನ್ನು ಬಿಜೆಪಿಯ ರಾಷ್ಟ್ರೀಯ ಸ್ಥಾನಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ನೈನಾರ್ ನಾಗೇಂದ್ರನ್ ಅವರನ್ನು ಬಿಜೆಪಿಯ ಹೊಸ ಮುಖ್ಯಸ್ಥರನ್ನಾಗಿ ನೇಮಿಸಿದ ನಂತರ ಈ ವಿಷಯ ತಿಳಿಸಲಾಗಿದೆ. 40 ವರ್ಷದ ಐಪಿಎಸ್ ಅಧಿಕಾರಿ, ರಾಜಕಾರಣಿ ಅಣ್ಣಾಮಲೈ ಅವರು ಪಕ್ಷದ ರಾಜ್ಯ ಮುಖ್ಯಸ್ಥ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, 2026ರ ಚುನಾವಣೆಗೂ ಮುನ್ನ ತಮಿಳುನಾಡಿನಲ್ಲಿ ನಾಯಕತ್ವ ಬದಲಾವಣೆಗೆ ದಾರಿ ಮಾಡಿಕೊಟ್ಟಿದ್ದಾರೆ.
“ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ, ಕೆ. ಅಣ್ಣಾಮಲೈ ಅವರು ಶ್ಲಾಘನೀಯ ಸಾಧನೆಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೀತಿಗಳನ್ನು ಜನರಿಗೆ ತಲುಪಿಸುವುದರಲ್ಲಿ ಅಥವಾ ಪಕ್ಷದ ಕಾರ್ಯಕ್ರಮಗಳನ್ನು ಹಳ್ಳಿಯಿಂದ ಹಳ್ಳಿಗೆ ತಲುಪಿಸುವುದರಲ್ಲಿ ಅಣ್ಣಾಮಲೈ ಅವರ ಕೊಡುಗೆ ಅಭೂತಪೂರ್ವವಾಗಿದೆ. ಬಿಜೆಪಿಯ ರಾಷ್ಟ್ರೀಯ ಚೌಕಟ್ಟಿನಲ್ಲಿ ಅಣ್ಣಾಮಲೈ ಅವರ ಸಂಘಟನಾ ಕೌಶಲ್ಯವನ್ನು ಬಿಜೆಪಿ ಬಳಸಿಕೊಳ್ಳುತ್ತದೆ” ಎಂದು ಅಮಿತ್ ಶಾ ಟ್ವೀಟ್ ಮೂಲಕವೂ ಹೇಳಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ನೀಡಿಲ್ಲ, ಮುಂದಿನ ಅಧ್ಯಕ್ಷನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ: ಕೆ ಅಣ್ಣಾಮಲೈ
ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಭಾಗವಾಗಿ ಪಕ್ಷ ಸ್ಪರ್ಧಿಸಿದ ವಿಧಾನಸಭಾ ಚುನಾವಣೆಯ ಸ್ವಲ್ಪ ಸಮಯದ ನಂತರ, ಜೂನ್ 2021ರಲ್ಲಿ ಅಣ್ಣಾಮಲೈ ಅವರನ್ನು ಬಿಜೆಪಿಯ ತಮಿಳುನಾಡು ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಸೆಪ್ಟೆಂಬರ್ 2023ರಲ್ಲಿ ಆ ಮೈತ್ರಿ ಮುರಿದುಹೋಯಿತು. ಅದಕ್ಕೆ ಎಐಎಡಿಎಂಕೆ ನಾಯಕರು ಅಣ್ಣಾಮಲೈ ಅವರನ್ನು ಹೊಣೆಗಾರರನ್ನಾಗಿ ಮಾಡಿದರು. ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಒಂದೇ ಒಂದು ಸ್ಥಾನಗಳನ್ನು ಗೆಲ್ಲಲು ವಿಫಲವಾಯಿತು. ಕೊಯಮತ್ತೂರು ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಯ ವಿರುದ್ಧ ಅಣ್ಣಾಮಲೈ ಸ್ವತಃ ಸೋತರು.
The Tamil Nadu BJP has received a nomination for the post of state president only from Shri @NainarBJP Ji.
As the President of the Tamil Nadu BJP unit, Shri @annamalai_k Ji has made commendable accomplishments. Whether it is carrying the policies of PM Shri @narendramodi Ji to…
— Amit Shah (@AmitShah) April 11, 2025
ಕಳೆದ ವಾರ, ಅಣ್ಣಾಮಲೈ ಅವರು ರಾಜ್ಯ ಪಕ್ಷದ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದರು. “ಪಕ್ಷವು ಉಜ್ವಲ ಭವಿಷ್ಯವನ್ನು ಹೊಂದಬೇಕೆಂದು ಬಯಸುತ್ತೇನೆ. ಈ ಪಕ್ಷದ ಬೆಳವಣಿಗೆಗಾಗಿ ಅನೇಕರು ತಮ್ಮ ಪ್ರಾಣವನ್ನೇ ನೀಡಿದ್ದಾರೆ. ನಾನು ಯಾವಾಗಲೂ ಈ ಪಕ್ಷಕ್ಕೆ ಶುಭ ಹಾರೈಸುತ್ತೇನೆ. ಮುಂದಿನ ರಾಜ್ಯಾಧ್ಯಕ್ಷರ ಸ್ಪರ್ಧೆಯಲ್ಲಿ ನಾನು ಇಲ್ಲ. ಯಾವುದೇ ರಾಜಕೀಯ ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಾನು ಯಾವುದೇ ಸ್ಪರ್ಧೆಯಲ್ಲಿ ಇಲ್ಲ” ಎಂದು ಅವರು ಶುಭ ಹಾರೈಸಿದ್ದರು.
ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಆಯ್ಕೆ
ಇಂದು ಬಿಜೆಪಿ ಮತ್ತು ಎಐಎಡಿಎಂಕೆ ತಮ್ಮ ಚುನಾವಣಾ ಮೈತ್ರಿಯನ್ನು ಅಧಿಕೃತಗೊಳಿಸಿವೆ. ಅಮಿತ್ ಶಾ ಅವರು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದಲ್ಲಿ ಸ್ಪರ್ಧಿಸಲಾಗುವುದು ಎಂದು ಘೋಷಿಸಿದ್ದಾರೆ. ಎರಡೂ ಪಕ್ಷಗಳು ಬೇರ್ಪಟ್ಟ ಸುಮಾರು ಎರಡು ವರ್ಷಗಳ ನಂತರ ಮತ್ತೊಮ್ಮೆ ತಮ್ಮ ಮೈತ್ರಿಯನ್ನು ಮಾಡಿಕೊಂಡಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ