24 ವಿದ್ಯಾರ್ಥಿನಿಯರನ್ನು ಕೂಡಿಹಾಕಿ, ತಮ್ಮ ವರ್ಗಾವಣೆ ರದ್ದು ಮಾಡುವಂತೆ ಬ್ಲ್ಯಾಕ್​​ಮೇಲ್​ ಮಾಡಿದ ಶಿಕ್ಷಕಿಯರು; ಎಫ್​ಐಆರ್​ ದಾಖಲು

24 ವಿದ್ಯಾರ್ಥಿನಿಯರನ್ನು ಕೂಡಿಹಾಕಿ, ತಮ್ಮ ವರ್ಗಾವಣೆ ರದ್ದು ಮಾಡುವಂತೆ ಬ್ಲ್ಯಾಕ್​​ಮೇಲ್​ ಮಾಡಿದ ಶಿಕ್ಷಕಿಯರು; ಎಫ್​ಐಆರ್​ ದಾಖಲು
ಪ್ರಾತಿನಿಧಿಕ ಚಿತ್ರ

ವಿದ್ಯಾರ್ಥಿನಿಯರನ್ನು ಶಿಕ್ಷಕರು ಕೂಡಿ ಹಾಕಿದ್ದನ್ನು ಮೊದಲು ಶಿಕ್ಷಣಾಧಿಕಾರಿಗೆ ತಿಳಿಸಿದ್ದು ಈ ಬಾಲಕಿಯರು ಇದ್ದ ಹಾಸ್ಟೆಲ್​​ನ ವಾರ್ಡನ್​ ಲಲಿತಾ ಕುಮಾರಿ. ವಿಷಯ ಗೊತ್ತಾಗುತ್ತಿದ್ದಂತೆ ಶಿಕ್ಷಣಾಧಿಕಾರಿ ಪಾಂಡೆ ಮತ್ತು ಹೆಣ್ಣುಮಕ್ಕಳ ಶಿಕ್ಷಣ ಜಿಲ್ಲಾ ಸಂಯೋಜಕಿ ರೇಣು ಶ್ರೀವಾತ್ಸವ್​ ತಕ್ಷಣ ಶಾಲೆಯ ಬಳಿ ಹೋಗಿದ್ದಾರೆ.

TV9kannada Web Team

| Edited By: Lakshmi Hegde

Apr 23, 2022 | 9:26 AM

ಸರ್ಕಾರಿ ಕೆಲಸದಲ್ಲಿ ಇರೋರಿಗೆ ವರ್ಗಾವಣೆ ಎಲ್ಲ ಸಾಮಾನ್ಯ. ಶಿಕ್ಷಕರು ಇರಲಿ ಅಥವಾ ಇನ್ಯಾವುದೇ ಕಚೇರಿಯಲ್ಲಿ ಕೆಲಸ ಮಾಡುವವರು ಇರಲಿ. ಒಂದು ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ಟ್ರಾನ್ಸ್​ಫರ್ ಆಗುತ್ತಿರುತ್ತಾರೆ. ಕೆಲವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ವರ್ಗಾವಣೆಯನ್ನು ತಪ್ಪಿಸಿಕೊಳ್ಳಲು ಏನೇನೋ ಹರಸಾಹಸ ಮಾಡುತ್ತಿರುತ್ತಾರೆ. ಆದರೆ ಟ್ರಾನ್ಸ್​​ಫರ್​​ನಿಂದ ತಪ್ಪಿಸಿಕೊಳ್ಳಲು ಉತ್ತರ ಪ್ರದೇಶದ ಇಬ್ಬರು ಶಿಕ್ಷಕರು ಮಾಡಿದ್ದು ಕ್ರೈಂ.  ಸುಮಾರು 24 ವಿದ್ಯಾರ್ಥಿಗಳನ್ನು ಶಾಲೆಯ ಮೇಲ್ಛಾವಣಿ ಮೇಲೆ ಕೂಡಿ ಹಾಕಿ ಬೀಗ ಹಾಕಿದ್ದಲ್ಲದೆ, ಅವರನ್ನು ಬಿಡಬೇಕು ಎಂದರೆ ವರ್ಗಾವಣೆ ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಮತ್ತು ಇತರ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ.

ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಬೆಹಜಾಮ್​ನಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ. ಗುರುವಾರ ರಾತ್ರಿ ಸುಮಾರು 24 ಹೆಣ್ಣುಮಕ್ಕಳನ್ನು ಇಬ್ಬರು ಶಿಕ್ಷಕರು, ಶಾಲೆಯ ಮೇಲ್ಛಾವಣಿಯಲ್ಲಿ ಕೂಡಿಹಾಕಿದ್ದರು. ಆದರೆ ಸ್ಥಳೀಯ ಪೊಲೀಸರು, ಅಧಿಕಾರಿಗಳು ಸೇರಿ, ಹುಡುಗಿಯರನ್ನು ಅಲ್ಲಿಂದ ಬಿಡಿಸಿ ವಾಪಸ್​ ಕರೆದುಕೊಂಡು ಬಂದಿದ್ದಾರೆ.  ಶಿಕ್ಷಕರು ತಮ್ಮ ವರ್ಗಾವಣೆಯನ್ನು ತಪ್ಪಿಸಲು ಈ ತಂತ್ರ ಪ್ರಯೋಗ ಮಾಡಿದ್ದರು ಎಂದು ಲಖಿಂಪುರ ಖೇರಿಯ ಶಿಕ್ಷಣಾಧಿಕಾರಿ ಲಕ್ಷ್ಮೀಕಾಂತ್​ ಪಾಂಡೆ ಹೇಳಿದ್ದಾರೆ.

ವಿದ್ಯಾರ್ಥಿನಿಯರನ್ನು ಶಿಕ್ಷಕರು ಕೂಡಿ ಹಾಕಿದ್ದನ್ನು ಮೊದಲು ಶಿಕ್ಷಣಾಧಿಕಾರಿಗೆ ತಿಳಿಸಿದ್ದು ಈ ಬಾಲಕಿಯರು ಇದ್ದ ಹಾಸ್ಟೆಲ್​​ನ ವಾರ್ಡನ್​ ಲಲಿತಾ ಕುಮಾರಿ. ವಿಷಯ ಗೊತ್ತಾಗುತ್ತಿದ್ದಂತೆ ಶಿಕ್ಷಣಾಧಿಕಾರಿ ಪಾಂಡೆ ಮತ್ತು ಹೆಣ್ಣುಮಕ್ಕಳ ಶಿಕ್ಷಣ ಜಿಲ್ಲಾ ಸಂಯೋಜಕಿ ರೇಣು ಶ್ರೀವಾತ್ಸವ್​ ತಕ್ಷಣ ಶಾಲೆಯ ಬಳಿ ಹೋಗಿದ್ದಾರೆ. ಹಲವು ತಾಸುಗಳ ಹೊತ್ತು ಅಲ್ಲೇ ಇದ್ದರು. ಬಳಿಕ ಸ್ಥಳಕ್ಕೆ ಮಹಿಳಾ ಪೊಲೀಸ್ ಕೂಡ ಆಗಮಿಸಿದರು. ಹೀಗೆ ವಿದ್ಯಾರ್ಥಿನಿಯರನ್ನು ಕೂಡಿಟ್ಟುಕೊಂಡಿದ್ದ ಶಿಕ್ಷಕಿಯರ ಹೆಸರು ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ಎಂದಾಗಿದ್ದು, ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಶಿಕ್ಷಣ ಇಲಾಖೆಯಿಂದಲೂ ತನಿಖೆ ಪ್ರಾರಂಭವಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಶಂಕಿತ ಮಾಸ್ಟರ್​ಮೈಂಡ್ 5 ದಿನ ಪೊಲೀಸರ ವಶಕ್ಕೆ, ಬೆಂಗಳೂರಿನಲ್ಲಿ ಇನ್ನೂ ಇಬ್ಬರ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada