ದಿಶಾ ಅತ್ಯಾಚಾರ ಆರೋಪಿಗಳ ಎನ್ಕೌಂಟರ್; ಇಂದು ಪುರಾವೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ಸುಪ್ರೀಂ ಆಯೋಗದ ಸೂಚನೆ
Disha encounter case: ಸೈಬರಾಬಾದ್ ಪೊಲೀಸರು ಮಾಡಿದ ಎನ್ಕೌಂಟರ್ ಬಗ್ಗೆ ಸೂಕ್ತ ತನಿಖೆ ನಡೆಸಲು ಸುಪ್ರೀಂಕೋರ್ಟ್, ನ್ಯಾಯಮೂರ್ತಿ ಸಿರಪುರ್ಕರ್ ನೇತೃತ್ವದ ಆಯೋಗವನ್ನು ರಚಿಸಿತ್ತು. ಈ ಸಮಿತಿ, ಎನ್ಕೌಂಟರ್ಗೆ ಸಂಬಂಧಪಟ್ಟ ದಾಖಲೆಗಳ ಸಂಗ್ರಹ ಕೆಲಸವನ್ನು ಕಳೆದವಾರವೇ ಪೂರ್ಣಗೊಳಿಸಿದೆ.
2019ರ ನವೆಂಬರ್ನಲ್ಲಿ ನಡೆದಿದ್ದ ಹಿರಿಯ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸ್ ಎನ್ಕೌಂಟರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷಿಯನ್ನು ಇಂದು ಸಂಜೆಯೊಳಗೆ ಸಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ, ಸುಪ್ರೀಂಕೋರ್ಟ್ ನೇಮಕ ಮಾಡಿರುವ ನ್ಯಾಯಮೂರ್ತಿ ಸಿರ್ಪುಕರ್ ಆಯೋಗ ಸೂಚನೆ ನೀಡಿದೆ. 2019ರ ನವೆಂಬರ್ನಲ್ಲಿ ಹೈದರಾಬಾದ್ನ ಶಂಶಾಬಾದ್ನ ಚತನ್ಪಲ್ಲಿ ಬಳಿ 26ವರ್ಷದ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಡಿ.6ರಂದು ಎನ್ಕೌಂಟರ್ ಮಾಡಿದ್ದರು. ಅತ್ಯಾಚಾರ ಆರೋಪಿಗಳ ಎನ್ಕೌಂಟರ್ ಮಾಡಿದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಎನ್ಕೌಂಟರ್ ಕಾನೂನು ಬಾಹಿರ ಎಂದೂ ಹೇಳಲಾಗಿತ್ತು.
ಸೈಬರಾಬಾದ್ ಪೊಲೀಸರು ಮಾಡಿದ ಎನ್ಕೌಂಟರ್ ಬಗ್ಗೆ ಸೂಕ್ತ ತನಿಖೆ ನಡೆಸಲು ಸುಪ್ರೀಂಕೋರ್ಟ್, ನ್ಯಾಯಮೂರ್ತಿ ಸಿರಪುರ್ಕರ್ ನೇತೃತ್ವದ ಆಯೋಗವನ್ನು ರಚಿಸಿತ್ತು. ಈ ಸಮಿತಿ, ಎನ್ಕೌಂಟರ್ಗೆ ಸಂಬಂಧಪಟ್ಟ ದಾಖಲೆಗಳ ಸಂಗ್ರಹ ಕೆಲಸವನ್ನು ಕಳೆದವಾರವೇ ಪೂರ್ಣಗೊಳಿಸಿದ್ದು, ಇದೀಗ ಸಾಕ್ಷಿ ಸಂಗ್ರಹ, ಪರಿಶೀಲನೆ ಹಂತಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಹಾಗೇ, ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಕ್ಕೆ ಎನ್ಕೌಂಟರ್ ಮಾಡಲಾಗಿದೆ ಎಂಬುದಕ್ಕಿರುವ ಸಾಕ್ಷಿಗಳನ್ನು ಸಲ್ಲಿಸಿ ಎಂದು ತೆಲಂಗಾಣ ಸರ್ಕಾರಕ್ಕೆ ಸೂಚಿಸಿದೆ. ಈಗೆರಡು ದಿನಗಳ ಹಿಂದೆಯೇ ನಿರ್ದೇಶನ ನೀಡಿದ್ದ ಆಯೋಗ ಆಗಸ್ಟ್ 21 (ಇಂದು) ಕೊನೇ ದಿನ ಎಂದಿತ್ತು. ಅದರ ಅನ್ವಯ ಇಂದು ಸಂಜೆಯೊಳಗೆ ಸರ್ಕಾರ ಸಮಿತಿ ಎದುರು ಸಾಕ್ಷಿ ಸಲ್ಲಿಕೆ ಮಾಡಬೇಕಿದೆ. ಸದ್ಯ ಕೊರೊನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿ ಇರುವುದರಿಂದ ಈ ಸಮಿತಿ ಬಹುತೇಕ ವಿಚಾರಣೆಗಳನ್ನೆಲ್ಲ ವರ್ಚ್ಯುವಲ್ ಆಗಿಯೇ ಮಾಡುತ್ತಿದೆ. ಈಗಾಗಲೇ 16 ವರ್ಚ್ಯುವಲ್ ವಿಚಾರಣೆಗಳನ್ನು ನಡೆಸಿದ್ದು, ಪೊಲೀಸರಿಂದ ಸಲ್ಲಿಕೆಯಾಗಿದ್ದ ಸುಮಾರು 24 ಅರ್ಜಿಗಳ ಸಂಬಂಧ ತೀರ್ಪು ನೀಡಿದೆ. ತೀರ ಅನಿವಾರ್ಯವಿದ್ದವರ ಭೌತಿಕ ಉಪಸ್ಥಿತಿಗಾಗಿ ಸಮನ್ಸ್ ನೀಡುತ್ತಿದೆ.
ದಿಶಾ ಪೊಲೀಸರು ಕೊಟ್ಟ ಹೆಸರು ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ಸಂತ್ರಸ್ತೆಯ ಹೆಸರು ಬಹಿರಂಗ ಮಾಡಬಾರದು ಎಂದು ತನಿಖೆಗೆ ಅನುಕೂಲವಾಗುವಂತೆ ಪೊಲೀಸರು, ಮೃತ ಪಶುವೈದ್ಯೆಗೆ ದಿಶಾ ಎಂದು ಹೆಸರಿಟ್ಟಿದ್ದಾರೆ. ಇವರ ಬದುಕು ಅತ್ಯಂತ ಭೀಕರವಾಗಿ ಅಂತ್ಯವಾಗಿದ್ದನ್ನು ಅಂದು ಇಡೀ ದೇಶ ನೋಡಿದೆ. ಈಕೆ ರಾಜ್ಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸರ್ಜನ್ ಶ್ರೇಣಿಯ ಪಶುವೈದ್ಯೆಯಾಗಿದ್ದರು. ರಾತ್ರಿ ಮನೆಗೆ ಬರುವಾಗ ನಾಲ್ವರು ದಾಳಿ ಮಾಡಿ ಅತ್ಯಾಚಾರ ಎಸಗಿದ್ದರು. ನಂತರ ಹತ್ಯೆ ಮಾಡಿ ಮೃತದೇಹವನ್ನು ಸುಟ್ಟು ಹಾಕಿದ್ದರು. ಇಡೀ ದೇಶದ ಆಕ್ರೋಶಕ್ಕೆ ಕಾರಣವಾದ ಘಟನೆಯ ಆರೋಪಿಗಳನ್ನು ಶೀಘ್ರವೇ ಹಿಡಿದು, ವಿಳಂಬ ಮಾಡದಂತೆ ಶಿಕ್ಷೆ ನೀಡುವ ಜವಾಬ್ದಾರಿ ತೆಲಂಗಾಣ ಪೊಲೀಸ್, ನ್ಯಾಯಾಂಗ ವ್ಯವಸ್ಥೆಯದ್ದಾಗಿತ್ತು.
ಅಂತೆಯೇ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದರು. ಹಾಗೇ, 2019ರ ಡಿಸೆಂಬರ್ 6ರಂದು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಸೇತುವೆಯ ಕೆಳಗೆ ನಾಲ್ವರನ್ನೂ ಎನ್ಕೌಂಟರ್ ಮಾಡಿ ಕೊಂದು ಹಾಕಿದರು. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅಷ್ಟೆ ಅಲ್ಲ, ನಮ್ಮ ಬಳಿಯಿದ್ದ ಗನ್, ಅಸ್ತ್ರಗಳನ್ನು ಕಸಿಯಲು ಮುಂದಾದರು. ಹಾಗಾಗಿ ಆತ್ಮರಕ್ಷಣೆಗಾಗಿ ಹತ್ಯೆ ಮಾಡಬೇಕಾಯ್ತು ಎಂದು ಸೈಬರಾಬಾದ್ ಪೊಲಿಸರು ಹೇಳಿಕೆ ನೀಡಿದ್ದರು. ಸಾವಿರಾರು ಜನರು ಈ ಎನ್ಕೌಂಟರ್ನ್ನು ಸಂಭ್ರಮಿಸಿದ್ದರು. ಆದರೂ ಯಾವುದೇ ಪ್ರಕರಣದಲ್ಲಿ ಎನ್ಕೌಂಟರ್ ಆದ ಬಳಿಕ ಅದೂ ಕೂಡ ವಿಚಾರಣಾರ್ಹವಾಗಿರುತ್ತದೆ. ಪೊಲೀಸರು ಅದನ್ನು ಸೂಕ್ತವಾಗಿ, ಸಾಕ್ಷಿ ಸಮೇತ ಸಾಬೀತು ಮಾಡಿಕೊಳ್ಳಬೇಕಾಗುತ್ತದೆ. ಆ ಪ್ರಕ್ರಿಯೆ ಸದ್ಯ ನಡೆಯುತ್ತಿದೆ.
ಇದನ್ನೂ ಓದಿ: ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿ ಮೇಲೆ 2 ಹೊಸ ಕೇಸ್; ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಬೆಂಬಲಿಗರ ವಿರುದ್ಧವೂ ಪ್ರಕರಣ
Anupama Parameswaran: ಓಣಂ ಸ್ಪೆಷಲ್; ಟ್ರೆಡಿಷನಲ್ ಲುಕ್ನಲ್ಲಿ ಮಿಂಚಿದ ನಟಿ ಅನುಪಮಾ ಪರಮೇಶ್ವರನ್
(Telangana Government to present evidence about Disha encounter case to Supreme Court)
Published On - 1:33 pm, Sat, 21 August 21