ಆರ್​ಟಿಸಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದ ಕಾಂಗ್ರೆಸ್ ಮುಖಂಡ ರಂಗಾರೆಡ್ಡಿ ವಿರುದ್ಧ ಬಿಆರ್​ಎಸ್ ಕಿಡಿ

ತೆಲಂಗಾಣದ ಕಾಂಗ್ರೆಸ್ ಶಾಸಕ ಮಾಲ್ರೆಡ್ಡಿ ರಂಗಾರೆಡ್ಡಿ ವಿರುದ್ಧ ಬಿಆರ್​ಎಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಆರ್​ಟಿಸಿ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ 'ಮಹಾಲಕ್ಷ್ಮಿ' ಯೋಜನೆ ಕುರಿತು ಸಂವಾದ ನಡೆಸುವಾಗ ಅನುಚಿತವಾಗಿ ಕೈ ಹಿಡಿದು ಮಾತನಾಡಿದ್ದಾರೆ ಎನ್ನಲಾಗಿದೆ. ವಿಡಿಯೋ ವೈರಲ್ ಆಗಿದ್ದು, ಬಿಆರ್​ಎಸ್ ನಾಯಕರು ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಸಕರು ಆರೋಪಗಳನ್ನು ತಳ್ಳಿಹಾಕಿ, ರಾಜಕೀಯ ದುರುದ್ದೇಶದಿಂದ ವಿಡಿಯೋ ತಿರುಚಲಾಗಿದೆ ಎಂದಿದ್ದಾರೆ.

ಆರ್​ಟಿಸಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದ ಕಾಂಗ್ರೆಸ್ ಮುಖಂಡ ರಂಗಾರೆಡ್ಡಿ ವಿರುದ್ಧ ಬಿಆರ್​ಎಸ್ ಕಿಡಿ
ರಂಗಾರೆಡ್ಡಿ
Image Credit source: NDTV

Updated on: Oct 08, 2026 | 9:36 AM

ಹೈದರಾಬಾದ್, ಅಕ್ಟೋಬರ್ 08: ತೆಲಂಗಾಣದ ಆಡಳಿತಾರೂಢ ಕಾಂಗ್ರೆಸ್​ ಪಕ್ಷದ ಹಿರಿಯ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿನಿಯೊಬ್ಬಳನ್ನು ಅನುಚಿತವಾಗಿ ಮುಟ್ಟಿದ್ದಾರೆ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಆರ್​ಎಸ್ ಗಂಭೀರ ಆರೋಪ ಮಾಡಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ವಿವಾದಕ್ಕೆ ಕಾರಣವಾದ ವೈರಲ್ ವಿಡಿಯೋ ಯಾವುದು?

ಇಬ್ರಾಹಿಂಪಟ್ಟಣಂ ಕ್ಷೇತ್ರದ 70 ವರ್ಷದ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ ಅವರು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುತ್ತಿದ್ದರು. ತೆಲಂಗಾಣ ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಮಹಾಲಕ್ಷ್ಮಿ’ ಯೋಜನೆಯ ಪ್ರಯೋಜನಗಳ ಕುರಿತು ಚರ್ಚಿಸುತ್ತಿದ್ದ ವೇಳೆ, ಶಾಸಕರು ವಿದ್ಯಾರ್ಥಿನಿಯ ಕೈ ಹಿಡಿದು ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿಯರು ಈ ಯೋಜನೆಯಿಂದ ತಮಗೆ ವಾರ್ಷಿಕ ಸುಮಾರು 45,000 ರೂ. ಉಳಿತಾಯವಾಗುತ್ತಿದೆ ಎಂದು ವಿವರಿಸುತ್ತಿದ್ದರು.

ಬಿಆರ್‌ಎಸ್ ನಾಯಕರ ಆಕ್ರೋಶ ಮತ್ತು ಬೇಡಿಕೆಗಳು

ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಆರ್‌ಎಸ್ ಹಿರಿಯ ನಾಯಕ ಆರ್.ಎಸ್. ಪ್ರವೀಣ್ ಕುಮಾರ್ ಅವರು ಈ ವಿಡಿಯೋವನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “70 ವರ್ಷದ ಶಾಸಕರು ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿನಿಯ ಕೈ ಮುಟ್ಟುವ ಅಗತ್ಯವೇನಿತ್ತು? ಇದು ಮಹಿಳೆಯ ಘನತೆಗೆ ಧಕ್ಕೆ ತರುವಂತಹ ಅಪರಾಧವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

 

ಪೋಸ್ಟ್​

ಮಹಿಳಾ ಆಯೋಗ ಮತ್ತು ಪೊಲೀಸರಿಗೆ ಮನವಿ:

ರಾಜ್ಯ ಮಹಿಳಾ ಆಯೋಗವು ಶಾಸಕರಿಗೆ ತಕ್ಷಣ ಸಮನ್ಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದ ಅವರು, ಬಸ್ ಕಂಡಕ್ಟರ್‌ನಿಂದ ದೂರು ಪಡೆದು ಶಾಸಕರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ನಮ್ರತೆಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ‘SHE Teams’ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆರೋಪಗಳನ್ನು ಸಾರಾಸಾಗಟಾಗಿ ತಳ್ಳಿಹಾಕಿರುವ ಶಾಸಕ ರಂಗಾ ರೆಡ್ಡಿ, ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ್ದಾರೆ: “ನಾನು ವಿದ್ಯಾರ್ಥಿನಿಯರೊಂದಿಗೆ ತಂದೆಯ ವಾತ್ಸಲ್ಯದಿಂದ ಮಾತನಾಡುತ್ತಿದ್ದೆ. ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಹೇಳಿದ್ದಾರೆ.

ವಿಡಿಯೋ ತಿರುಚುವ ಯತ್ನ:

ಅಕ್ಟೋಬರ್ 6 ರಂದು ಬೊಂಗಲೂರಿನಲ್ಲಿ ಬಸ್ ಹತ್ತಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದೆ. ವಿದ್ಯಾರ್ಥಿನಿಯರು ಹೆಚ್ಚಿನ ಬಸ್ ಸೌಲಭ್ಯಕ್ಕೆ ಮನವಿ ಮಾಡುತ್ತಿದ್ದರು. ಬಸ್ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ಸೆರೆಹಿಡಿಯಲಾದ ದೃಶ್ಯಗಳನ್ನು ಬಿಆರ್‌ಎಸ್ ರಾಜಕೀಯ ದುರುದ್ದೇಶದಿಂದ ತಿರುಚಿ ತೇಜೋವಧೆ ಮಾಡುತ್ತಿದೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us