Love Jihad: ಹಿಂದೂ ಧರ್ಮವನ್ನು ಮುಗಿಸಲು ಲವ್ ಜಿಹಾದ್ ರೂಪದಲ್ಲಿ ಭಯೋತ್ಪಾದನೆ; ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದ
ಲವ್ ಜಿಹಾದ್ ರೂಪದಲ್ಲಿ ಭಯೋತ್ಪಾದನೆ ಹೊಸ ರೂಪವನ್ನು ಪಡೆದುಕೊಂಡಿದೆ. ಇದು ಭಾರತದಲ್ಲಿ ಸನಾತನ ಧರ್ಮವನ್ನು ಮುಗಿಸುವ ತಂತ್ರವಾಗಿದೆ. ನಾವೆಲ್ಲರೂ ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಸನಾತನ ಧರ್ಮವಾದ ಹಿಂದೂ ಧರ್ಮವನ್ನು ನಿರ್ನಾಮ ಮಾಡಲು ಲವ್ ಜಿಹಾದ್ ರೂಪದಲ್ಲಿ ಭಯೋತ್ಪಾದನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Union Minister Giriraj Singh) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಲವ್ ಜಿಹಾದ್ (Love Jihad) ರೂಪದಲ್ಲಿರುವ ಭಯೋತ್ಪಾದನೆಯು ಹಿಂದೂ ಧರ್ಮವನ್ನು ಮುಗಿಸುವ ತಂತ್ರವಾಗಿದೆ. ಇದರ ವಿರುದ್ಧ ಜನರು ಒಂದಾಗಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒತ್ತಾಯಿಸಿದ್ದಾರೆ.
ಮಾಜಿ ಶಾಸಕ ಕೃಷ್ಣಾನಂದ ರೈ ಅವರ ಪುಣ್ಯಸ್ಮರಣೆ ಪ್ರಯುಕ್ತ ಮೊಹಮ್ಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್, ಭಯೋತ್ಪಾದನೆಯೆಂಬುದು ಲವ್ ಜಿಹಾದ್ ರೂಪದಲ್ಲಿ ಹೊಸ ರೂಪವನ್ನು ಪಡೆದುಕೊಂಡಿದೆ. ಇದು ಭಾರತದಲ್ಲಿ ಸನಾತನ ಧರ್ಮವಾದ ಹಿಂದೂ ಧರ್ಮವನ್ನು ಮುಗಿಸುವ ತಂತ್ರವಾಗಿದೆ. ನಾವೆಲ್ಲರೂ ಒಗ್ಗೂಡಿ ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ; ಪೋಷಕರಿಂದ ಲವ್ ಜಿಹಾದ್ ಆರೋಪ
ಜನಸಂಖ್ಯೆ ನಿಯಂತ್ರಣ ಕಾನೂನುಗಳನ್ನು ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದ ಸಚಿವ ಗಿರಿರಾಜ್ ಸಿಂಗ್, ಇಂತಹ ನೀತಿಗಳು ದೇಶದ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ಚೀನಾದಲ್ಲಿ ಪ್ರತಿ ನಿಮಿಷಕ್ಕೆ 10 ಮಕ್ಕಳು ಜನಿಸುತ್ತಿದ್ದರೆ ಭಾರತದಲ್ಲಿ ಪ್ರತಿ ನಿಮಿಷಕ್ಕೆ 31 ಶಿಶುಗಳು ಜನಿಸುತ್ತವೆ. ಈ ಕಾರಣದಿಂದಾಗಿ ಇದುವರೆಗೂ ಅಭಿವೃದ್ಧಿಯು ತ್ವರಿತ ವೇಗದಲ್ಲಿ ನಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
Population control bill is crucial, we’ve limited resources. China implemented ‘one child policy’, controlled population & achieved development. China has 10 children born a minute while India has 30 children born a minute,how’ll we compete with China:Union minister Giriraj Singh pic.twitter.com/cxSEGc2AHA
— ANI (@ANI) November 27, 2022
2023ರ ವೇಳೆಗೆ ಭಾರತ ಜನಸಂಖ್ಯೆಯ ವಿಚಾರದಲ್ಲಿ ಚೀನಾವನ್ನು ಮೀರಿಸಲಿದೆ. ಭಾರತವು ಜನಸಂಖ್ಯೆ ನಿಯಂತ್ರಣಕ್ಕೆ ಗಟ್ಟಿಯಾದ ಕಾನೂನುಗಳನ್ನು ರೂಪಿಸುವುದು ಅನಿವಾರ್ಯವಾಗಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ನಡೆದ ಮತಾಂತರದ ಹಿಂದೆ ಲವ್ ಜಿಹಾದ್? 12 ಜನರ ವಿರುದ್ಧ ಕೇಸ್ ಬುಕ್
ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆಯೂ ಮಾತನಾಡಿದ ಗಿರಿರಾಜ್ ಸಿಂಗ್, ಮಹಿಳೆಯರ ಮೇಲಿನ ಯಾವುದೇ ದೌರ್ಜನ್ಯವನ್ನು ಧರ್ಮದ ಚೌಕಟ್ಟಿನ ಮೂಲಕ ನೋಡಬಾರದು. ಮಹಿಳಾ ದೌರ್ಜನ್ಯವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಎಲ್ಲರೂ ಸಂಪೂರ್ಣವಾಗಿ ಖಂಡಿಸಬೇಕು ಎಂದು ಗಿರಿರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.