ಶೌಚಾಲಕ್ಕೆಂದು ಬಸ್ಸಿನಿಂದ ಇಳಿದ ಪ್ರಯಾಣಿಕರ ಮೇಲೆ ಹರಿದ ಕಂಟೇನರ್; 6 ಜನ ಸ್ಥಳದಲ್ಲೇ ಸಾವು
ಯಮುನಾ ಎಕ್ಸ್‌ಪ್ರೆಸ್‌ವೇ'ನಲ್ಲಿ ಸಾವಿನ ಸರಣಿ ಮುಂದುವರಿದಿದೆ. ಶನಿವಾರ ಮುಂಜಾನೆ ಸುರಿರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ರಸ್ತೆಯಲ್ಲೇ ನಿಲ್ಲಿಸಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ.

ಮಥುರಾ(ಫೆ.07): ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಅತಿವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯ ಪರಿಣಾಮವಾಗಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಶನಿವಾರ ಬೆಳಗಿನ ಜಾವ 2:45 ರ ಸುಮಾರಿಗೆ ನಡೆದಿದೆ. ಸುರಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೈಲ್‌ಸ್ಟೋನ್ 88 ಬಳಿ ಈ ದುರಂತ ನಡೆದಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ದೆಹಲಿಯಿಂದ ಕಾನ್ಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಬೆಳಗಿನ ಜಾವ ಸುಮಾರು 2:45 ರ ಸುಮಾರಿಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುತ್ತಿತ್ತು. ಪ್ರಯಾಣದ ಮಧ್ಯೆ ಪ್ರಯಾಣಿಕರು ಶೌಚಾಲಯ ಬಳಸಲು ಬಸ್ ನಿಲ್ಲಿಸಲಾಗಿದೆ. ಇನ್ನು ಚಾಲಕ ಹಸಿರು ವಲಯದಲ್ಲಿ ಬಸ್ ನಿಲ್ಲಿಸುವ ಬದಲು ರಸ್ತೆಯಲ್ಲೇ ನಿಲ್ಲಿಸಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ಬಸ್‌ಗೆ ಡಿಕ್ಕಿ ಹೊಡೆದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
A major accident occurred on the Yamuna Expressway in Mathura. A container truck ran over passengers who had disembarked from a bus. Six people died on the spot, and one was injured.#UttarPradesh #Mathura #Accident pic.twitter.com/w69fKULn1e
— Siraj Noorani (@sirajnoorani) February 7, 2026
ಇದನ್ನೂ ಓದಿ: ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್‌ಐಟಿ! ನಾಲ್ವರ ಬಂಧನ
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮೃತರಲ್ಲಿ ಬಸ್ತಿ ನಿವಾಸಿ ದೇವೇಶ್, ಔರೈಯಾದ ಸೋನು, ಕನ್ನೌಜ್ನ ಅಸ್ಲಾಂ ಹಾಗೂ ದೆಹಲಿಯ ಸಂತೋಷ್ ಎಂದು ನಾಲ್ವರನ್ನು ಗುರುತಿಸಲಾಗಿದೆ. ಉಳಿದ ಇಬ್ಬರ ಗುರುತು ಪತ್ತೆಹಚ್ಚುವ ಕೆಲಸ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅಪಘಾತಕ್ಕೆ ಮುಖ್ಯ ಕಾರಣ ನಿಯಮ ಉಲ್ಲಂಘಿಸಿ ಬಸ್ ಹೈವೇಯಲ್ಲೇ ನಿಲ್ಲಿಸಿರುವುದು ಮತ್ತು ಕಂಟೇನರ್ ಅತಿವೇಗದ ಚಲನೆ ಎಂದು ತಿಳಿದುಬಂದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Sat, 7 February 26
