ಭಾರತೀಯ ನಗರಗಳ ಸಂಚಾರ ಸಮಸ್ಯೆ; ವಾಹನಗಳ ದೃಷ್ಟಿಯಲ್ಲಿ ನಿರ್ಮಾಣವಾದ ನಗರಗಳಲ್ಲಿ ಪಾದಚಾರಿಗಳಿಂದಲೇ ಹೆಚ್ಚು ಸಂಚಾರ

Santosh Nair's article in 'Your India' series: ಭಾರತೀಯ ನಗರಗಳು ವಾಹನಗಳಿಗಾಗಿ ಯೋಜಿಸಲ್ಪಟ್ಟಿದ್ದರೂ, ಬಹುಪಾಲು ಪ್ರಯಾಣಗಳು ಕಾಲ್ನಡಿಗೆಯಲ್ಲಿ ನಡೆಯುತ್ತವೆ. ಪಾದಚಾರಿಗಳು ಹದಗೆಟ್ಟ ಫುಟ್‌ಪಾತ್, ಅಸಮರ್ಪಕ ಸಾರ್ವಜನಿಕ ಸಾರಿಗೆ ಮತ್ತು ಕೊನೆಯ ಮೈಲಿ ಸಂಪರ್ಕದ ಕೊರತೆಯಿಂದ ಕಷ್ಟಪಡುತ್ತಾರೆ. ಇದು ರಸ್ತೆ ಸುರಕ್ಷತೆ ಮತ್ತು ಮಾಲಿನ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ನಗರ ಯೋಜನೆಗಳು ಈ ವಾಸ್ತವವನ್ನು ಅರ್ಥಮಾಡಿಕೊಂಡು ಪಾದಚಾರಿ ಸ್ನೇಹಿಯಾಗಬೇಕು.

ಭಾರತೀಯ ನಗರಗಳ ಸಂಚಾರ ಸಮಸ್ಯೆ; ವಾಹನಗಳ ದೃಷ್ಟಿಯಲ್ಲಿ ನಿರ್ಮಾಣವಾದ ನಗರಗಳಲ್ಲಿ ಪಾದಚಾರಿಗಳಿಂದಲೇ ಹೆಚ್ಚು ಸಂಚಾರ
ಟ್ರಾಫಿಕ್
Image Credit source: PTI
Edited By:

Updated on: Nov 22, 2026 | 2:57 PM

ಲತಾ ಎಂಬಾಕೆಯು ನಗರದ ಆಸ್ಪತ್ರೆಯೊಂದರಲ್ಲಿ ನೆಲ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾಳೆ. ಅವಳ ದಿನಚರಿ ನಡಿಗೆಯಿಂದಲೇ ಆರಂಭವಾಗುತ್ತದೆ. ಬೆಳಿಗ್ಗೆ ಐದು ಗಂಟೆಗೆ ತನ್ನ ಒಂದು ಕೋಣೆಯ ಮನೆಯಿಂದ ಹೊರಬರುವ ಅವಳು, ಫುಟ್‌ಪಾತ್ ಇಲ್ಲದ ರಸ್ತೆಯನ್ನು ದಾಟುತ್ತಾಳೆ; ನಿಲ್ಲಿಸಿದ್ದ ಕಾರು ಮತ್ತು ಕಟ್ಟಡ ನಿರ್ಮಾಣದ ಮರಳಿನ ರಾಶಿಯ ಪಕ್ಕದಿಂದ ಸಾಗುತ್ತಾಳೆ; ಸಿಗ್ನಲ್ ಇಲ್ಲದ ಜಂಕ್ಷನ್‌ನಲ್ಲಿ ಹತ್ತು ನಿಮಿಷ ಕಾಯುತ್ತಾಳೆ, ಮತ್ತು ತಂಗುದಾಣವೇ ಇಲ್ಲದ ಬಸ್ ನಿಲ್ದಾಣಕ್ಕೆ ಇನ್ನೂ ಇಪ್ಪತ್ತು ನಿಮಿಷ ನಡೆದುಕೊಂಡು ಹೋಗುತ್ತಾಳೆ. ಬಸ್ ಬಂದಾಗ, ಅದು ತುಂಬಿ ತುಳುಕುತ್ತಿರುತ್ತದೆ. ಆಸ್ಪತ್ರೆಯಲ್ಲಿ ಸಂಜೆ ಆರು ಗಂಟೆಯವರೆಗೆ ಉದ್ದನೆಯ ಕಾರಿಡಾರ್‌ಗಳಲ್ಲಿ ಮತ್ತೆ ನಡೆಯುತ್ತಲೇ ಇರುತ್ತಾಳೆ. ಕೆಲಸಕ್ಕೆ ಹೇಗೆ ಹೋಗುತ್ತೀರಿ ಎಂದು ಯಾರಾದರೂ ಕೇಳಿದರೆ, “ಬಸ್ಸಿನಲ್ಲಿ” ಎಂದು ಹೇಳುತ್ತಾಳೆ. ಉಳಿದ ಆ ನಲವತ್ತು ನಿಮಿಷಗಳನ್ನು ಯಾರೂ ಎಣಿಸುವುದಿಲ್ಲ.

ಭಾರತೀಯ ನಗರಗಳ ಸಣ್ಣ ಗುಟ್ಟು ಇದೇ ಆಗಿದೆ: ನಾವು ವಾಹನ ಚಲಾಯಿಸುವವರಿಗಾಗಿ ನಗರಗಳನ್ನು ಯೋಜಿಸುತ್ತೇವೆ. ಆದರೆ ನಡೆದುಕೊಂಡು ಹೋಗುವವರೇ ನಗರಗಳಲ್ಲಿ ಹೆಚ್ಚು. ಯಾವುದೇ ಚೌಕದಲ್ಲಿ ಒಂದು ನಿಮಿಷ ನಿಂತು ಹಾದುಹೋಗುವವುಗಳನ್ನು ಎಣಿಸಿ ನೋಡಿ. ಕಾರುಗಳು, ಸ್ಕೂಟರ್‌ಗಳು, ಬಸ್ಸುಗಳು, ಆಟೋಗಳು, ಕೆಲವು ಸೈಕಲ್‌ಗಳು ಮತ್ತು ಅವುಗಳ ನಡುವೆ, ಅತಿ ಸುಲಭವಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಪಾದಗಳು. ವಾಹನಗಳನ್ನಲ್ಲದೆ ಪ್ರಯಾಣಗಳನ್ನು ಎಣಿಸಿದರೆ, ನಮ್ಮ ರಸ್ತೆಗಳು ಎಂದಿಗೂ ಹೇಳದ ಸತ್ಯವೊಂದು ನಮಗೆ ಕಾಣಿಸುತ್ತದೆ. ಹೆಚ್ಚಿನ ಜನರು ನಡೆದುಕೊಂಡೇ ಹೋಗುತ್ತಿದ್ದಾರೆ. ಭಾರತೀಯ ನಗರಗಳಲ್ಲಿ ಜನರು ಹೇಗೆ ಸಂಚರಿಸುತ್ತಾರೆ ಎಂಬುದನ್ನು ನೀತಿ ಸಂಸ್ಥೆ ಒಆರ್‌ಎಫ್ (ORF) ಸಂಗ್ರಹಿಸಿದ ವಿವಿಧ ಅಧ್ಯಯನಗಳು, ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆಯ ನಗರಗಳಲ್ಲಿ ಸುಮಾರು ಶೇಕಡಾ 43ರಷ್ಟು ಪ್ರಯಾಣಗಳು ಕಾಲ್ನಡಿಗೆಯಲ್ಲೇ ನಡೆಯುತ್ತವೆ ಎಂದು ತೋರಿಸುತ್ತವೆ. ಹತ್ತು ಲಕ್ಷದಿಂದ ಒಂದು ಕೋಟಿಯವರೆಗಿನ ನಗರಗಳಲ್ಲಿ ಈ ಪಾಲು ಶೇಕಡಾ 37ರಷ್ಟಿದೆ. ಸಣ್ಣ ನಗರಗಳಲ್ಲಿ ಒಟ್ಟು ಪ್ರಯಾಣಗಳ ಪೈಕಿ ಸುಮಾರು ಅರ್ಧದಷ್ಟು, ಅಂದರೆ ಶೇಕಡಾ 49ರಷ್ಟು ಕಾಲ್ನಡಿಗೆಯಲ್ಲೇ ಸಾಗುತ್ತವೆ. ಮತ್ತೊಂದು ವಿಶ್ಲೇಷಣೆಯು ನಗರ ಪ್ರಯಾಣಗಳಲ್ಲಿ ಕಾಲ್ನಡಿಗೆ ಮತ್ತು ಸೈಕ್ಲಿಂಗ್ ಎರಡನ್ನೂ ಸೇರಿಸಿ ಸುಮಾರು ಶೇಕಡಾ 40ರಷ್ಟು ಎಂದು ಅಂದಾಜಿಸುತ್ತದೆ.

Loading...

ಇದನ್ನೂ ಓದಿ: ಪ್ರಯಾಣಿಕರಿಂದ ಬರುವ ಹಣಕ್ಕಿಂತ ರೈಲ್ವೆ ಖರ್ಚು ಮಾಡುತ್ತಿರುವುದೇ ಹೆಚ್ಚು

ನಗರಗಳಲ್ಲಿ ಹೆಚ್ಚಾಗಿರುವ ಖಾಸಗಿ ವಾಹನವು ಈ ಅಂಕಿಅಂಶಗಳಲ್ಲಿ ತುಂಬಾ ಚಿಕ್ಕದಾಗಿ ಕಾಣುತ್ತದೆ. ಅತಿ ದೊಡ್ಡ ನಗರಗಳಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಸೇರಿ ಕೇವಲ ಸುಮಾರು ಶೇಕಡಾ 15ರಷ್ಟು ಪ್ರಯಾಣಗಳನ್ನು ಮಾತ್ರ ರೂಪಿಸುತ್ತವೆ. ಮಧ್ಯಮ ಗಾತ್ರದ ನಗರಗಳಲ್ಲಿ ಇವುಗಳ ಪಾಲು ಶೇಕಡಾ 26ರಷ್ಟು ಇರುತ್ತದೆ. ಪ್ರತಿಯೊಂದು ಗಾತ್ರದ ನಗರದಲ್ಲೂ ನಡೆದುಕೊಂಡು ಹೋಗುವವರ ಸಂಖ್ಯೆ ಚಾಲಕರಿಗಿಂತ ಹೆಚ್ಚಾಗಿದೆ. ಹಾಗಾಗಿ ಈ ರಸ್ತೆಯನ್ನು ಯಾರಿಗಾಗಿ ನಿರ್ಮಿಸಲಾಯಿತು ಎಂದು ಕೇಳುವುದು ನ್ಯಾಯಸಮ್ಮತವಾಗಿದೆ. ವಾಹನಗಳಿಗೆ ಅಗಲವಾದ ಲೇನ್‌ಗಳು ಸಾಮಾನ್ಯವಾಗಿವೆ. ಆದರೆ ಫುಟ್‌ಪಾತ್‌ಗಳು ಹಾಳಾಗಿರುತ್ತವೆ. ಅದರಲ್ಲಿ ಪಾರ್ಕ್ ಮಾಡಿದ ಕಾರುಗಳು ಪಾದಚಾರಿಗಳಿಗೆ ಅಡಚಣೆ ಮಾಡುತ್ತವೆ. ಕೆಲವೆಡೆ ಫುಟ್​ಪಾತೇ ಇರೋದಿಲ್ಲ. ರಸ್ತೆಗಳಲ್ಲಿ ಕ್ರಾಸಿಂಗ್ ಜಾಗಗಳು ದೂರ ದೂರ ಇರುತ್ತವೆ. ನಗರ ಸಾರಿಗೆ ಬಜೆಟ್‌ನ ಶೇಕಡಾ 5ಕ್ಕಿಂತ ಕಡಿಮೆ ಭಾಗವು ಕಾಲ್ನಡಿಗೆ ಮತ್ತು ಸೈಕ್ಲಿಂಗ್‌ಗೆ ಹೋಗುತ್ತದೆ ಎಂದು ಒಂದು ವಿಶ್ಲೇಷಣೆ ಅಂದಾಜಿಸುತ್ತದೆ. ಆ ಅಂಕಿಅಂಶವು ದ್ವಿತೀಯ ಮೂಲದಿಂದ ಬಂದದ್ದಾಗಿದ್ದು ಅಧಿಕೃತ ದಾಖಲೆಗಳೊಂದಿಗೆ ಅದನ್ನು ಪರಿಶೀಲಿಸಬೇಕು. ಆದರೆ ಸ್ಥೂಲವಾಗಿ ಮಾಡಿರುವ ಅಂದಾಜು ಎಂದಿಟ್ಟುಕೊಂಡರೂ ಗಮನಾರ್ಹ ಅಂತರ ಇರುವುದನ್ನು ಕಾಣಬಹುದು.

ದುಡಿಯುವ ನಾಗರಿಕನ ವಾಹನವಾದ ಬಸ್ಸು ಕೂಡ ಇದೇ ರೀತಿಯ ಕಥೆಯನ್ನು ಹೇಳುತ್ತದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರತಿ ಒಂದು ಲಕ್ಷ ಜನರಿಗೆ 40ರಿಂದ 60 ಬಸ್ಸುಗಳ ಮಾನದಂಡವನ್ನು ನಿಗದಿಪಡಿಸಿದೆ. ಒಆರ್‌ಎಫ್ ಪಟ್ಟಿಯಲ್ಲಿ, ಬೆಂಗಳೂರಿನಲ್ಲಿ ಪ್ರತಿ ಲಕ್ಷ ಜನರಿಗೆ ಸುಮಾರು 45 ಬಸ್ಸುಗಳಿದ್ದು ಕನಿಷ್ಠ ಮಿತಿಯನ್ನು ಪೂರೈಸುತ್ತದೆ. ಮುಂಬೈನಲ್ಲಿ 28, ಮತ್ತು ಚೆನ್ನೈ ಹಾಗೂ ಹೈದರಾಬಾದ್‌ಗಳಲ್ಲಿ ತಲಾ 31 ಇವೆ. ಇನ್ನೂ ಕೆಳಗೆ ಹೋದರೆ, ಜೈಪುರದಲ್ಲಿ 10, ನಾಗ್ಪುರದಲ್ಲಿ 8 ಮತ್ತು ಲಕ್ನೋದಲ್ಲಿ 7 ಇವೆ. ಒಂದು ಲಕ್ಷ ಜನರಿಗೆ ಏಳು ಬಸ್ಸುಗಳು ಸೇವೆ ನೀಡುವ ನಗರದಲ್ಲಿ, ಕಾಯುವುದು ಸಣ್ಣ ಅನಾನುಕೂಲತೆಯಲ್ಲ. ಅದು ಕೆಲಸಕ್ಕೆ ತೆರಳುವ ಬೆಲೆಯ ಒಂದು ಭಾಗವಾಗವಾಗಿರುತ್ತದೆ. ಬೇರೆ ಯಾವುದೇ ಮಾರ್ಗವಿಲ್ಲದ ಆಸ್ಪತ್ರೆಯ ಸ್ವಚ್ಛತಾ ಕೆಲಸಗಾರ, ಅಂಗಡಿ ಸಹಾಯಕ ಮತ್ತು ವಿದ್ಯಾರ್ಥಿ ಪ್ರತಿದಿನ ಆ ಬೆಲೆ ತೆರುತ್ತಿರುತ್ತಾರೆ.

ಮೆಟ್ರೋ ಪಾತ್ರ ಇಲ್ಲಿ ಗಮನಾರ್ಹವೆನಿಸಿದೆ. ಭಾರತವು ಹಲವು ನಗರಗಳಲ್ಲಿ ಮೆಟ್ರೋ ಮಾರ್ಗಗಳನ್ನು ನಿರ್ಮಿಸಿದೆ. ಇದು ನಿಜಕ್ಕೂ ಒಂದು ಸಾಧನೆಯೇ ಸರಿ. ಈ ಮೆಟ್ರೋ ಸಿಸ್ಟಂಗಳು ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಕರೆದೊಯ್ಯುತ್ತವೆ. ಆದರೆ ಅದೇ ಒಆರ್‌ಎಫ್ ಅಧ್ಯಯನವು ನಿರೀಕ್ಷಿತ ಸಂಖ್ಯೆಗಳನ್ನು ವಾಸ್ತವ ಪ್ರಯಾಣಿಕರ ಸಂಖ್ಯೆಯೊಂದಿಗೆ ಹೋಲಿಸಿದಾಗ, ಹಲವು ಮಾರ್ಗಗಳಲ್ಲಿ ಯೋಜಿಸಿದ್ದಕ್ಕಿಂತ ಬಹಳ ಕಡಿಮೆ ಜನರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಮುಂಬೈನ ಮೊದಲ ಮಾರ್ಗವು ತನ್ನ ನಿರೀಕ್ಷೆಯ ಸುಮಾರು ಶೇಕಡಾ 75ರಷ್ಟನ್ನು ತಲುಪಿದರೆ, ಹೈದರಾಬಾದ್ ಸುಮಾರು ಶೇಕಡಾ 26ರಷ್ಟು ಮತ್ತು ಕಾನ್ಪುರ ಸುಮಾರು ಶೇಕಡಾ 2ರಷ್ಟನ್ನು ತಲುಪಿವೆ. ಇಲ್ಲಿ ಒಂದು ನ್ಯಾಯಸಮ್ಮತ ಟಿಪ್ಪಣಿ ಅಗತ್ಯವಿದೆ. ನಿರೀಕ್ಷೆಗಳನ್ನು ನಿರ್ದಿಷ್ಟ ವರ್ಷಗಳಿಗೆ ರೂಪಿಸಲಾಗಿತ್ತು. ಕೆಲವು ವಾಸ್ತವ ಎಣಿಕೆಗಳು ಸಂಚಾರ ಸ್ತಬ್ಧವಾಗಿದ್ದ ಸಾಂಕ್ರಾಮಿಕ ರೋಗದ (ಕೋವಿಡ್) ಅವಧಿಯಿಂದ ಬಂದಿರುವುದರಿಂದ, ಈ ಅಂತರವು ಇರುವುದಕ್ಕಿಂತ ದೊಡ್ಡದಾಗಿ ಕಾಣಿಸಬಹುದು. ಆದರೂ, ಈ ಪ್ಯಾಟರ್ನ್ ಅನ್ನು ಕಡೆಗಣಿಸುವುದು ಕಷ್ಟ. ಯೋಜಕರು ನಿರೀಕ್ಷಿಸಿದ್ದ ಜನಸಂದಣಿ ಬರಲಿಲ್ಲ.

ಇದನ್ನೂ ಓದಿ: ಭಾರತದ ರಸ್ತೆ ಸುರಕ್ಷತಾ ಬಿಕ್ಕಟ್ಟು: ‘ಅಪಘಾತ’ದ ಆಚೆ – ಅಂಕಿಅಂಶಗಳು ಮತ್ತು ಪರಿಹಾರಗಳು

ಪ್ರಯಾಣಿಕರು ಮೆಟ್ರೋ ನಿಲ್ದಾಣಕ್ಕೆ ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಮತ್ತು ಇನ್ನೊಂದು ತುದಿಯಲ್ಲಿ ತಾವು ಹೋಗಬೇಕಾದ ಸ್ಥಳಕ್ಕೆ ನಡೆದುಕೊಂಡು ಸಾಗಲು ಸಾಧ್ಯವಾದರೆ ಮಾತ್ರ ಮೆಟ್ರೋ ನಿಲ್ದಾಣ ಉಪಯುಕ್ತವಾಗುತ್ತದೆ ಎಂಬುದು ಇದಕ್ಕೊಂದು ಕಾರಣವಾಗಿರಬಹುದು. ಇದನ್ನೇ ‘ಕೊನೆಯ ಮೈಲಿ’ (last mile) ಎಂದು ಕರೆಯಲಾಗುತ್ತದೆ. ಮತ್ತು ಅನೇಕ ಪ್ರಯಾಣಗಳು ಅಲ್ಲಿಯೇ ಗೆಲ್ಲುತ್ತವೆ ಅಥವಾ ಸೋಲುತ್ತವೆ. ನಿಲ್ದಾಣದಿಂದ ಕಚೇರಿಗೆ ಫುಟ್‌ಪಾತ್ ಇಲ್ಲದ ರಸ್ತೆಯಲ್ಲಿ ಮೂವತ್ತು ನಿಮಿಷ ನಡೆಯಬೇಕಾದರೆ, ನಗರವನ್ನು ಇಪ್ಪತ್ತು ನಿಮಿಷದಲ್ಲಿ ದಾಟುವ ರೈಲಿಗೆ ಹೆಚ್ಚು ಮಹತ್ವವಿರುವುದಿಲ್ಲ. ನಡೆದುಕೊಂಡು ಹೋಗುವವನು ಸಾರಿಗೆ ವ್ಯವಸ್ಥೆಯಲ್ಲಿ ಸಣ್ಣ ಪಾತ್ರಧಾರಿಯಲ್ಲ. ಅವಳು ಅದರ ಮೊದಲ ಮತ್ತು ಕೊನೆಯ ಹೆಜ್ಜೆಯಾಗಿದ್ದಾಳೆ. ಯಾವುದೇ ರೀತಿಯಲ್ಲಿ ಆರಂಭವಾದರೂ, ಪ್ರತಿಯೊಂದು ಪ್ರಯಾಣವೂ ಕಾಲ್ನಡಿಗೆಯಲ್ಲೇ ಕೊನೆಗೊಳ್ಳುತ್ತದೆ.

ಇದು ಕೇವಲ ಸೌಕರ್ಯದ ವಿಷಯವಲ್ಲ. ಮುಖ್ಯವಾಗಿ ಕಾರುಗಳ ಸುತ್ತ ನಿರ್ಮಿಸಲಾದ ನಗರವು ಶೀಘ್ರದಲ್ಲೇ ಟ್ರಾಫಿಕ್ ಜಾಮ್ ಮತ್ತು ಮಾಲಿನ್ಯದಿಂದ ಉಸಿರುಗಟ್ಟುತ್ತದೆ, ಮತ್ತು ಅತಿ ಹೆಚ್ಚು ನಡೆಯುವವರಾದ ಬಡವರು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಅತಿ ದೊಡ್ಡ ಅಪಾಯವನ್ನು ಎದುರಿಸುತ್ತಾರೆ. ಭಾರತದಲ್ಲಿ, ರಸ್ತೆ ಸಾವುಗಳಲ್ಲಿ ಸುಮಾರು ಪ್ರತಿ ಐದರಲ್ಲಿ ಒಂದು ಸಾವು ಪಾದಚಾರಿಯದ್ದಾಗಿರುತ್ತದೆ.

ಲತಾಳಿಗೆ ಈ ಯಾವ ಸಂಖ್ಯೆಗಳೂ ತಿಳಿದಿಲ್ಲ. ತನ್ನ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯು ಕಾಣುವುದಕ್ಕಿಂತ ಉದ್ದವಾಗಿದೆ ಎಂಬುದಷ್ಟೇ ಅವಳಿಗೆ ಗೊತ್ತು.

ನಿಮ್ಮ ನಗರವು ತನ್ನ ಮುಂದಿನ ರಸ್ತೆಯನ್ನು ಯೋಜಿಸುವಾಗ, ಅದರ ಅಂಚಿನಲ್ಲಿ ಯಾರು ನಿಂತಿದ್ದಾರೆ ಎಂದು ಅದು ಕಲ್ಪಿಸಿಕೊಳ್ಳುತ್ತದೆ?

(ಆಧಾರಗಳು: ಒಆರ್‌ಎಫ್ (Observer Research Foundation — ಅಬ್ಸರ್ವರ್ ರಿಸರ್ಚ್ ಫೌಂಡೇಶನ್), ಭಾರತೀಯ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯ ವಿಶ್ಲೇಷಣೆ (ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಾನದಂಡಕ್ಕೆ ವಿರುದ್ಧವಾಗಿ ಪ್ರತಿ ಲಕ್ಷಕ್ಕೆ ಬಸ್ಸುಗಳು, ನಗರ ಗಾತ್ರಕ್ಕೆ ಅನುಗುಣವಾಗಿ ಸಂಚಾರ ವಿಧಾನಗಳ ಪಾಲು, ನಿರೀಕ್ಷೆಗೆ ವಿರುದ್ಧವಾಗಿ ಮೆಟ್ರೋ ಪ್ರಯಾಣಿಕರ ಸಂಖ್ಯೆ); ಕಾಲ್ನಡಿಗೆ-ಸೈಕ್ಲಿಂಗ್ ಪಾಲು ಮತ್ತು ಬಜೆಟ್ ಪಾಲಿಗಾಗಿ ನಗರ ಸಾರಿಗೆಯ ಹೆಚ್ಚುವರಿ ವಿಶ್ಲೇಷಣೆ, ಇದನ್ನು ಮೇಲೆ ದ್ವಿತೀಯ ಮೂಲವೆಂದು ಗುರುತಿಸಲಾಗಿದೆ; ಪಾದಚಾರಿ ಸಾವುಗಳಿಗಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ‘ಭಾರತದಲ್ಲಿ ರಸ್ತೆ ಅಪಘಾತಗಳು 2023’ ವರದಿ. ಲತಾ ಕಾಲ್ಪನಿಕ ಪಾತ್ರ; ಆದರೆ ಅಂಕಿಅಂಶಗಳು ನೈಜವಾದವು.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
Loading...
Unable to load recommendations.
Follow Us