ದೇವಸ್ಥಾನದಲ್ಲಿ ಹುಂಡಿ ಹಣ ಎಣಿಸುವಾಗ 20 ರೂ. ನೋಟಿನ ಮೇಲೆ ಬರೆದಿದ್ದ ಕೋರಿಕೆ ನೋಡಿ ಸಿಬ್ಬಂದಿ ಶಾಕ್
ಅನಂತಪುರ ದೇವಾಲಯದ ಹುಂಡಿಯಲ್ಲಿ ಸಿಕ್ಕ 20 ರೂ. ನೋಟಿನ ಮೇಲಿನ ವಿಚಿತ್ರ ಕೋರಿಕೆ ಈಗ ವೈರಲ್ ಆಗಿದೆ. 'ಅತ್ತೆ ಬೇಗ ಸಾಯಬೇಕು' ಎಂದು ಬರೆಯಲಾಗಿದ್ದ ಈ ಕೋರಿಕೆ ಸಿಬ್ಬಂದಿಯನ್ನು ಅಚ್ಚರಿಗೊಳಿಸಿತು. ಇದು ನೆಟ್ಟಿಗರಿಂದ ತಮಾಷೆ ಹಾಗೂ ಕೌಟುಂಬಿಕ ಕಲಹಗಳ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಮತ್ತು ಸಂಬಂಧಗಳ ಬಿರುಕಿಗೆ ಈ ಘಟನೆ ಕನ್ನಡಿ ಹಿಡಿದಿದೆ.

ಅನಂತಪುರ, ಜೂನ್ 19: ಭಕ್ತರು ಸಾಮಾನ್ಯವಾಗಿ ದೇವರ ಹುಂಡಿಗೆ ಕಾಣಿಕೆ ಹಾಕುವಾಗ ತಮಗೆ ಒಳ್ಳೆಯದಾಗಲಿ, ಆರೋಗ್ಯ, ಅಷ್ಟೈಶ್ವರ್ಯ ಸಿಗಲು, ಒಳ್ಳೆಯ ಕೆಲಸ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ(Temple)ದಲ್ಲಿ ಇತ್ತೀಚೆಗೆ ಹುಂಡಿ ಎಣಿಕೆಯ ವೇಳೆ ಕಂಡುಬಂದ ನೋಟೊಂದು ದೇವಾಲಯದ ಸಿಬ್ಬಂದಿ ಹಾಗೂ ಭಕ್ತರನ್ನು ಅಚ್ಚರಿಗೊಳಿಸಿದೆ.
ಹುಂಡಿಯಲ್ಲಿ ಸಿಕ್ಕ ಇಪ್ಪತ್ತು ರೂಪಾಯಿ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ವಿಚಿತ್ರ ಕೋರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಹುಂಡಿ ಎಣಿಕೆ ಮಾಡುವಾಗ ಸಿಬ್ಬಂದಿಗೆ ಸಿಕ್ಕ 20 ರೂ. ನೋಟಿನ ಮೇಲೆ ತೆಲುಗಿನಲ್ಲಿ ದೇವರೇ ನನ್ನ ಅತ್ತೆ ಬೇಗ ಸಾಯಬೇಕು ಎಂದು ಬರೆಯಲಾಗಿತ್ತು.
ಸಾಮಾನ್ಯವಾಗಿ ಕಾಗದದ ಮೇಲೆ ಕಷ್ಟಗಳನ್ನು ಬರೆದು ಹಾಕುವುದನ್ನು ನೋಡಿದ್ದ ಸಿಬ್ಬಂದಿಗೆ, ನೋಟಿನ ಮೇಲೆಯೇ ಯಾರೋ ಒಬ್ಬರ ಸಾವು ಬಯಸಿ ದೂರು ನೀಡಿರುವುದು ತೀವ್ರ ಆಶ್ಚರ್ಯ ಮೂಡಿಸಿದೆ. ಈ ವಿಚಿತ್ರ ಪ್ರಾರ್ಥನೆಯ ಫೋಟೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಮತ್ತಷ್ಟು ಓದಿ: 85 ಕೋಟಿ ರೂ. ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಆಕೆ ಕೇವಲ 20 ರೂಪಾಯಿ ಸುಪಾರಿ ನೀಡಿ ದೇವರಿಗೇ ನೇರ ದೂರು ದಾಖಲಿಸಿದ್ದಾಳೆ, ಇಪ್ಪತ್ತು ರೂಪಾಯಿಗೆ ಅತ್ತೆಯನ್ನೇ ಕೊಲ್ಲಲು ಹೊರಟಿದ್ದಾಳೆ. ದೇವರು ಕೂಡ ಇಂತಹ ವಿನಂತಿಯನ್ನು ಖಂಡಿತಾ ಊಹಿಸಿರಲ್ಲ ಎಂದು ಹಲವರು ತಮಾಷೆ ಮಾಡಿದ್ದಾರೆ.
ಇನ್ನು ಕೆಲವರು, ಇದು ಕೇವಲ ನಗುವ ವಿಷಯವಲ್ಲ. ಆ ಮಹಿಳೆ ಮನೆಯಲ್ಲಿ ಎಂತಹ ನರಕಯಾತನೆ ಮತ್ತು ಮಾನಸಿಕ ಒತ್ತಡ ಅನುಭವಿಸುತ್ತಿರಬಹುದು ಎಂಬುದಕ್ಕೆ ಈ ನೋಟೇ ಸಾಕ್ಷಿ. ಕೌಟುಂಬಿಕ ಕಲಹಗಳು ಈ ಮಟ್ಟಕ್ಕೆ ತಲುಪಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ನಗುವಿನ ಅಲೆ ಎಬ್ಬಿಸಿದ್ದರೂ, ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಭಿನ್ನಾಭಿಪ್ರಾಯಗಳಿಗೆ ಕನ್ನಡಿ ಹಿಡಿದಂತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




