ಚಿಕನ್ ನೆಕ್ ಕಾರಿಡಾರ್ ಎಂದರೇನು? ಸಿಲಿಗುರಿಗೆ ಈ ಹೆಸರಿನಿಂದ ಕರೆಯುವುದೇಕೆ?

Chicken Neck Corridor: ಭಾರತದ ಭೂಪಟದಲ್ಲಿ 'ಚಿಕನ್ ನೆಕ್' ಅಥವಾ 'ಸಿಲಿಗುರಿ ಕಾರಿಡಾರ್' ಎಂಬುದು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಅತ್ಯಂತ ಕಿರಿದಾದ ಭೂಭಾಗವಾಗಿದೆ. ಇದನ್ನು ಭಾರತದ ಇಡೀ ರಕ್ಷಣಾ ಇತಿಹಾಸದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಮಿಲಿಟರಿ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಇದು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳೊಂದಿಗೆ ಸಂಪರ್ಕಿಸುವ ಏಕೈಕ ಕೊಂಡಿಯಾಗಿದೆ. ಈ ಕಾರಿಡಾರ್ ಕುರಿತಾದ ಇನ್ನಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಚಿಕನ್ ನೆಕ್ ಕಾರಿಡಾರ್ ಎಂದರೇನು? ಸಿಲಿಗುರಿಗೆ ಈ ಹೆಸರಿನಿಂದ ಕರೆಯುವುದೇಕೆ?
Chicken Neck Corridor

Updated on: May 19, 2026 | 4:02 PM

ನವದೆಹಲಿ, ಮೇ 19: ‘ಚಿಕನ್ ನೆಕ್’ (Chicken Neck) ಕಾರಿಡಾರ್ ಎಂಬುದಕ್ಕೆ ಅಧಿಕೃತವಾಗಿ ‘ಸಿಲಿಗುರಿ ಕಾರಿಡಾರ್’ (Siliguri Corridor) ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಅತ್ಯಂತ ಕಿರಿದಾದ ಭೂಭಾಗವಾಗಿದೆ. ಇದನ್ನು ಭಾರತದ ಭೂಪಟದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಮಿಲಿಟರಿ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಇದು ಪಶ್ಚಿಮ ಬಂಗಾಳದ ಸಿಲಿಗುರಿ ನಗರದ ಸುತ್ತಲಿರುವ ಪ್ರದೇಶವಾಗಿದೆ.

ಚಿಕನ್ ನೆಕ್ ಎಂಬ ಹೆಸರು ಬಂದಿದ್ದೇಕೆ?:

ನೀವೇನಾದರೂ ಭಾರತದ ಭೂಪಟವನ್ನು ನೋಡಿದರೆ ಈ ಕಿರಿದಾದ ಭೂಭಾಗವು ಕೋಳಿಯ ಕತ್ತಿನಂತೆ ಕಾಣುತ್ತದೆ. ಕೋಳಿಯ ಕುತ್ತಿಗೆಯ ರೀತಿ ತೆಳುವಾದ ಮತ್ತು ಸೂಕ್ಷ್ಮವಾದ ಗಡಿಯನ್ನು ಹೊಂದಿರುವುದರಿಂದ ಈ ಭಾಗವನ್ನು ಚಿಕನ್ ನೆಕ್ ಕಾರಿಡಾರ್ ಎಂದು ಕರೆಯಲಾಗುತ್ತದೆ. ಇದು ಭಾರತದ ಮುಖ್ಯ ಭೂಭಾಗವನ್ನು ಈಶಾನ್ಯ ರಾಜ್ಯಗಳೊಂದಿಗೆ ಸಂಪರ್ಕಿಸುತ್ತದೆ. ಈ ಚಿಕನ್ ನೆಕ್ ಕಾರಿಡಾರ್​ನ ಅತ್ಯಂತ ಕಿರಿದಾದ ಭಾಗವು ಕೇವಲ 17 ರಿಂದ 22 ಕಿಲೋಮೀಟರ್ ಮಾತ್ರ ಅಗಲವಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲೂ 2 ಚಿಕನ್ ನೆಕ್ ಕಾರಿಡಾರ್ ಇದೆ; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಎಚ್ಚರಿಕೆ

ಈ ಪ್ರದೇಶವು ಅತ್ಯಂತ ಸೂಕ್ಷ್ಮವಾಗಿದೆ. ಏಕೆಂದರೆ ಇದರ ಪಶ್ಚಿಮಕ್ಕೆ ನೇಪಾಳ, ದಕ್ಷಿಣಕ್ಕೆ ಬಾಂಗ್ಲಾದೇಶ, ಉತ್ತರಕ್ಕೆ ಭೂತಾನ್ ಹಾಗೂ ಚೀನಾ (ಟಿಬೆಟ್‌ನ ಚುಂಬಿ ಕಣಿವೆ) ದೇಶಗಳಿವೆ. ಹೀಗಾಗಿ, ಈ ಸಿಲಿಗುರಿ ಅಥವಾ ಚಿಕನ್ ನೆಕ್ ಕಾರಿಡಾರ್ ಭಾರತದ ಪಾಲಿಗೆ ಅತ್ಯಂತ ಮಹತ್ವದ ಮತ್ತು ನಿರ್ಣಾಯಕ ಸ್ಥಳವಾಗಿದೆ. ಇದೇ ಕಾರಿಡಾರ್​​ನ 120 ಎಕರೆ ಜಾಗವನ್ನು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಭಾರತದ ಮುಖ್ಯ ಭೂಭಾಗದಿಂದ ಅಸ್ಸಾಂ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯದ 8 ರಾಜ್ಯಗಳಿಗೆ ಹೋಗಲು ಇರುವ ಏಕೈಕ ರಸ್ತೆ ಮತ್ತು ರೈಲ್ವೆ ಮಾರ್ಗವೆಂದರೆ ಅದು ಚಿಕನ್ ನೆಕ್ ಕಾರಿಡಾರ್. ಎಲ್ಲಾ ತೈಲ ಪೈಪ್‌ಲೈನ್‌ಗಳು, ಇಂಟರ್ನೆಟ್ ಕೇಬಲ್‌ಗಳು ಮತ್ತು ಸೇನಾ ವಾಹನಗಳು ಇದೇ 22 ಕಿ.ಮೀ ಕಿರಿದಾದ ಮಾರ್ಗದ ಮೂಲಕವೇ ಹಾದುಹೋಗಬೇಕು. ಒಂದುವೇಳೆ ಯುದ್ಧದ ಸಮಯದಲ್ಲಿ ಚೀನಾ ದೇಶವು ಈ 22 ಕಿ.ಮೀ ಭಾಗದ ಮೇಲೆ ದಾಳಿ ನಡೆಸಿ ಇದನ್ನು ವಶಪಡಿಸಿಕೊಂಡರೆ, ಇಡೀ ಈಶಾನ್ಯ ಭಾರತವು ದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಆದ್ದರಿಂದ ಭಾರತೀಯ ಸೇನೆ ಇಲ್ಲಿ ಸದಾ ಹದ್ದಿನ ಕಣ್ಣಿಟ್ಟಿರುತ್ತದೆ.

ಇದನ್ನೂ ಓದಿ: ಚಿಕನ್ ನೆಕ್ ಕಾರಿಡಾರ್​​ನ 120 ಎಕರೆ ಭೂಮಿಯನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಪಶ್ಚಿಮ ಬಂಗಾಳದ ಸಿಎಂ

ಈ ಚಿಕನ್ ನೆಕ್ ಕಾರಿಡಾರ್‌ನಲ್ಲಿರುವ ಸುಮಾರು 120 ಎಕರೆ ಆಯಕಟ್ಟಿನ ಭೂಮಿಯನ್ನು ರಕ್ಷಣಾತ್ಮಕ ಕಾಮಗಾರಿಗಳಿಗಾಗಿ ಪಶ್ಚಿಮ ಬಂಗಾಳ ಸರ್ಕಾರವು ನೇರವಾಗಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ. ಇಲ್ಲಿನ ಉತ್ತರ ಬಂಗಾಳದ 7 ಪ್ರಮುಖ ಹೆದ್ದಾರಿಗಳ ನಿರ್ವಹಣೆಯನ್ನು ಕೇಂದ್ರದ ಏಜೆನ್ಸಿಗಳಾದ NHAI ಮತ್ತು NHIDCLಗೆ ವಹಿಸಿಕೊಡಲಾಗಿದೆ.

1947ರ ಭಾರತ ವಿಭಜನೆಗೂ ಮುನ್ನ ಈ ಚಿಕನ್ ನೆಕ್ ಕಾರಿಡಾರ್​​ನ ಸಮಸ್ಯೆ ಇರಲಿಲ್ಲ. ಆದರೆ ದೇಶ ವಿಭಜನೆಯಾಗಿ ‘ಪೂರ್ವ ಪಾಕಿಸ್ತಾನ’ (ಈಗಿನ ಬಾಂಗ್ಲಾದೇಶ) ಸೃಷ್ಟಿಯಾದಾಗ ಭಾರತದ ಪಶ್ಚಿಮ ಬಂಗಾಳದ ಬಹುದೊಡ್ಡ ಭೂಭಾಗ ಅದರ ಪಾಲಾಯಿತು. ಇದರಿಂದಾಗಿ ಈಶಾನ್ಯ ರಾಜ್ಯಗಳಿಗೆ ಹೋಗಲು ಭಾರತಕ್ಕೆ ಉಳಿದುಕೊಂಡಿದ್ದು ಸಿಲಿಗುರಿ ಸುತ್ತಮುತ್ತಲಿನ ಈ ಕಿರಿದಾದ ಸಣ್ಣ ಭೂಮಾರ್ಗ ಮಾತ್ರ. ಅದಕ್ಕಾಗಿಯೇ, ಭಾರತೀಯ ಸೇನೆಯು ಈ ‘ಚಿಕನ್ ನೆಕ್’ ಅನ್ನು ರಕ್ಷಿಸಲು ಸದಾ ಅಲ್ಲಿ ಅತ್ಯಂತ ಬಲಿಷ್ಠವಾದ ಮಿಲಿಟರಿ ಪಡೆಗಳನ್ನು ನಿಯೋಜಿಸಿರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 19 May 26

Follow Us