ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲೇ ಕಾವೇರಿ ನೀರಿಗಾಗಿ ತಮಿಳುನಾಡು ಬೇಡಿಕೆ ಇಡುವುದೇಕೆ?

ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ವಿವಾದ ನಿನ್ನೆ-ಮೊನ್ನೆಯದಲ್ಲ. ಶತಮಾನದ ಇತಿಹಾಸವಿರುವ ಈ ನೀರಿನ ವಿವಾದವನ್ನೇ ಮುಂದಿಟ್ಟುಕೊಂಡು ಪಕ್ಷಗಳು ರಾಜ್ಯದ ಚುನಾವಣೆಯನ್ನೇ ಗೆದ್ದಿರುವ ನಿದರ್ಶನಗಳೂ ಇವೆ. ಸಾಮಾಜಿಕವಾಗಿ, ರಾಜಕೀಯವಾಗಿ ಕಾವೇರಿ ಜಲ ವಿವಾದ ಬಹಳ ಪ್ರಾಮುಖ್ಯತೆ ಪಡೆದಿದೆ. ಇಂದು ಕೂಡ ಕಾವೇರಿ ವಿವಾದ ಮುನ್ನೆಲೆಗೆ ಬಂದಿದ್ದು, ಕರ್ನಾಟಕದಿಂದ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್​ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ. ಸಾಮಾನ್ಯವಾಗಿ ಭಾರತದಲ್ಲಿ ಜೂನ್​ನಲ್ಲಿ ಮುಂಗಾರು ಪ್ರವೇಶವಾಗುತ್ತದೆ. ಆದರೂ, ಪ್ರತಿ ವರ್ಷ ತಮಿಳುನಾಡು ಆಗಸ್ಟ್ ತಿಂಗಳಲ್ಲಿ ಕರ್ನಾಟಕದ ಮುಂದೆ ಕಾವೇರಿ ನೀರಿಗಾಗಿ ಬೇಡಿಕೆ ಇಡುತ್ತದೆ. ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಈ ಕಾವೇರಿ ನೀರಿನ ಹೋರಾಟಕ್ಕೆ ಮರುಜೀವ ಬರುತ್ತದೆ. ಇದಕ್ಕೆ ಕಾರಣವೇನು ಎಂದು ನಿಮಗೆ ಗೊತ್ತಾ? ಆ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲೇ ಕಾವೇರಿ ನೀರಿಗಾಗಿ ತಮಿಳುನಾಡು ಬೇಡಿಕೆ ಇಡುವುದೇಕೆ?
ಕೆಆರ್​ಎಸ್​ ಡ್ಯಾಂ
Image Credit source: PTI

Updated on: Sep 08, 2026 | 6:25 PM

ಮುಖ್ಯಾಂಶಗಳು

  • ಏನಿದು ಕಾವೇರಿ ಜಲ ವಿವಾದ?
  • ತಮಿಳುನಾಡಿಗೆ ಆಗಸ್ಟ್ ತಿಂಗಳಲ್ಲಿ ಕಾವೇರಿ ನೀರು ಏಕೆ ಅಗತ್ಯ?
  • ಕರ್ನಾಟಕ ಕಾವೇರಿ ನೀರು ಬಿಡದಿದ್ದರೆ ತಮಿಳುನಾಡಿನ ಮೇಲಾಗುವ ಪರಿಣಾಮಗಳೇನು?

ಬೆಂಗಳೂರು, ಸೆಪ್ಟೆಂಬರ್ 8: ಕರ್ನಾಟಕದಲ್ಲಿ ಕಾವೇರಿಯನ್ನು ‘ಜೀವನದಿ’ ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಜಿಲ್ಲೆಗಳಿಗೆ ಕಾವೇರಿ ನದಿಯ ನೀರೇ ಜೀವನಾಧಾರ. ಹಾಗೇ, ತಮಿಳುನಾಡಿನ ಕೃಷಿಕರು ಕಾವೇರಿ ನದಿಯ ನೀರಿನ ಮೇಲೇ ಅವಲಂಬಿತರಾಗಿದ್ದಾರೆ.  ಹೀಗಾಗಿ, ಎರಡೂ ರಾಜ್ಯಗಳಿಗೆ ಕಾವೇರಿ ನದಿ ನೀರು ಅತ್ಯಗತ್ಯ. ಈ 2 ರಾಜ್ಯಗಳ ನಡುವಿನ ಕಾವೇರಿ ಜಲ ವಿವಾದ ಬ್ರಿಟಿಷರ ಕಾಲದಿಂದಲೂ ಇದೆ. ಅದಾಗಿ ಶತಮಾನವೇ ಕಳೆದರೂ ಈ ಜಲ ವಿವಾದ ಬಗೆಹರಿದಿಲ್ಲ. ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಿಂದ ಮತ್ತೊಮ್ಮೆ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ತಮಿಳುನಾಡಿಗೆ 15 ದಿನಗಳ ಕಾಲ ಕರ್ನಾಟಕ ಪ್ರತಿದಿನ 6 ಸಾವಿರ ಕ್ಯೂಸೆಕ್​​ ನೀರು ಹರಿಸಬೇಕೆಂದು ಪ್ರಾಧಿಕಾರ ಆದೇಶಿಸಿದೆ. ಇದಕ್ಕೆ ಕರ್ನಾಟಕದ ಕಾವೇರಿ ತೀರದ ಜಿಲ್ಲೆಗಳ ರೈತರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಾಗಾದರೆ, ಪ್ರತಿ ವರ್ಷ ಭಾರತದಲ್ಲಿ ಜೂನ್​ನಲ್ಲಿ ಮಳೆಗಾಲ ಆರಂಭವಾದರೂ ತಮಿಳುನಾಡು ಆಗಸ್ಟ್​ನಲ್ಲಿ ಕಾವೇರಿ ನೀರಿಗಾಗಿ ಏಕೆ ಪಟ್ಟು ಹಿಡಿದು ಕೂರುತ್ತದೆ? ಎಂಬುದರ ಮಾಹಿತಿ ಇಲ್ಲಿದೆ.

ತಮಿಳುನಾಡು ಭತ್ತದ ಕೃಷಿಯನ್ನು ಆಧರಿಸಿದ ರಾಜ್ಯ. ಕರ್ನಾಟಕದಲ್ಲೂ ಭತ್ತ ಬೆಳೆಯುತ್ತಾರೆ. ಆದರೆ, ನಮ್ಮ ರಾಜ್ಯದಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಒಂದು ಬಾರಿ ಮಾತ್ರ ಭತ್ತವನ್ನು ಬೆಳೆಯುತ್ತಾರೆ. ಜೂನ್​ ತಿಂಗಳಲ್ಲಿ ಬಿತ್ತನೆ ಶುರುವಾದರೆ ಮಳೆಗಾಲದ ಆರ್ಭಟ ಕಡಿಮೆಯಾಗುತ್ತಾ ಬರುವಷ್ಟರಲ್ಲಿ ಕಟಾವು ಮುಗಿದಿರುತ್ತದೆ. ಆದರೆ, ತಮಿಳುನಾಡಿನಲ್ಲಿ ಹಾಗಲ್ಲ. ಅಲ್ಲಿ ವರ್ಷಕ್ಕೆ 2 ಬಾರಿ ಭತ್ತವನ್ನು ಬೆಳೆಯುತ್ತಾರೆ. ಜೂನ್-ಜುಲೈನಲ್ಲಿ ಅಲ್ಪಾವಧಿ ಭತ್ತದ ತಳಿಯಾದ ಕುರುವೈ ಬಿತ್ತನೆ ಆರಂಭವಾದರೆ ಆಗಸ್ಟ್- ಸೆಪ್ಟೆಂಬರ್​ನಲ್ಲಿ ದೀರ್ಘಾವಧಿ ಭತ್ತದ ತಳಿಯಾದ ಸಾಂಬಾ ಬಿತ್ತನೆ ಆರಂಭವಾಗುತ್ತದೆ. ಭತ್ತದ ಬೆಳೆಗೆ ಅತಿ ಹೆಚ್ಚಿನ ನೀರು ಅಗತ್ಯವಿರುವುದರಿಂದ ತಮಿಳುನಾಡಿಗೆ ಈ ಅವಧಿಯಲ್ಲಿ ನೀರಿನ ಅಗತ್ಯ ಹೆಚ್ಚಾಗಿರುತ್ತದೆ.

ಆದರೆ, ಭಾರತಕ್ಕೆ ಜೂನ್​ನಲ್ಲೇ ಮಾನ್ಸೂನ್ ಪ್ರವೇಶವಾದರೂ ತಮಿಳುನಾಡಿನಲ್ಲಿ ಸರಿಯಾದ ಮಳೆಗಾಲ ಆರಂಭವಾಗುವುದು ಅಕ್ಟೋಬರ್ ತಿಂಗಳಲ್ಲಿ. ಅಲ್ಲಿಯವರೆಗೂ ಕೃಷಿ ಚಟುವಟಿಕೆಗಳಿಗೆ ತಮಿಳುನಾಡಿಗೆ ಕಾವೇರಿ ನೀರೇ ಆಧಾರ.  ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಆರಂಭವಾಗುವುದೇ ಅಕ್ಟೋಬರ್​ ತಿಂಗಳಾದ್ದರಿಂದ ಅಲ್ಲಿಯವರೆಗೂ ಕಾದು ಕುರುವೈ ತಳಿಯನ್ನು ಬೆಳೆದರೆ ಆ ಬೆಳೆ ಕೊಳೆತುಹೋಗುತ್ತದೆ. ಹೇಳಿಕೇಳಿ ಅದು ಬೇಸಿಗೆಯ ಭತ್ತದ ತಳಿ. ಹೀಗಾಗಿ, ಕರ್ನಾಟಕದಲ್ಲಿ ಮಳೆಗಾಲ ಶುರುವಾದಾಗ ತಮಿಳುನಾಡಿಗೆ ಹರಿಸುವ ಕಾವೇರಿ ನೀರು ಆ ಭತ್ತದ ತಳಿಗೆ ಸಾಕಾಗುತ್ತದೆ. ಆದರೆ, ಈ ಅವಧಿಯಲ್ಲಿ ಕರ್ನಾಟಕದಿಂದ ಸಾಕಷ್ಟು ಪ್ರಮಾಣದ ನೀರು ತಮಿಳುನಾಡಿಗೆ ಹರಿಯದಿದ್ದರೆ ಕುರುವೈ ಭತ್ತದ ಬೆಳೆ ಒಣಗಿಹೋಗುತ್ತದೆ. ಇನ್ನು, ಸಾಂಬಾ ತಳಿಯ ಬಿತ್ತನೆಗೂ ಕಾವೇರಿ ನೀರಿನ ಮೇಲೆ ತಮಿಳುನಾಡಿನ ರೈತರು ಅವಲಂಬಿತರಾಗಿದ್ದಾರೆ. ಆ ತಳಿ ಪೈರಾಗುವಷ್ಟರಲ್ಲಿ ತಮಿಳುನಾಡಿನಲ್ಲೂ ಮಳೆಯ ಆರ್ಭಟ ಜೋರಾಗುವುದರಿಂದ ನಂತರದ ಕೃಷಿಗೆ ಕಾವೇರಿಯ ಮೇಲಿನ ಅವಲಂಬನೆ ಇಲ್ಲವಾದರೂ ಆರಂಭದ ಹಂತದ ಕೃಷಿಗೆ ಕಾವೇರಿಯೇ ಮೂಲಾಧಾರ.

ಜುಲೈನಲ್ಲಿ ಬಿತ್ತನೆಯಾದ ಕುರುವೈ ಭತ್ತದ ತಳಿ ಪೈರಾಗುವಷ್ಟರಲ್ಲಿ ಅಂದರೆ ಆಗಸ್ಟ್​ನಲ್ಲಿ ಅದಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ತಮಿಳುನಾಡಿನ ಸಾಂಪ್ರದಾಯಿಕ ಮತ್ತು ಜನಪ್ರಿಯ ತಳಿಯಾದ ಸಾಂಬಾಗೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಬಿತ್ತನೆ ಮಾಡಲು ಕಾವೇರಿ ನೀರು ಬೇಕು. ನಂತರ ಅಕ್ಟೋಬರ್‌ನಿಂದ ಆರಂಭವಾಗುವ ಈಶಾನ್ಯ ಮುಂಗಾರು ಮಳೆಯೇ ಈ ಬೆಳೆಗೆ ಮುಖ್ಯ ಆಸರೆಯಾಗುತ್ತದೆ.

ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಅಕ್ಟೋಬರ್​ನಿಂದ ಡಿಸೆಂಬರ್​ವರೆಗೆ ಭಾರೀ ಮಳೆಯಾಗುತ್ತದೆ. ಹೀಗಾಗಿ, ಆಗಸ್ಟ್ ತಿಂಗಳಲ್ಲಿ ಕೃಷಿ ಬೆಳೆಗಳಿಗೆ ಬಿತ್ತನೆ ಮಾಡಲು ನೀರಿನ ಅಭಾವ ಉಂಟಾಗುತ್ತದೆ. ಅಷ್ಟರೊಳಗೆ ಕರ್ನಾಟಕದಲ್ಲಿ ಭಾರೀ ಮಳೆಯಾಗಿ ಕೆಆರ್​ಎಸ್​ ಡ್ಯಾಂ ತುಂಬುವುದರಿಂದ ಕೃಷಿ ಚಟುವಟಿಕೆಗಳಿಗೆ ತಮಿಳುನಾಡು ಕರ್ನಾಟಕದಿಂದ ಕೆಳಗೆ ಹರಿಯುವ ಕಾವೇರಿ ನದಿ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಇದೇ ಕಾರಣಕ್ಕೆ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನಲ್ಲಿ ಕಾವೇರಿ ನದಿ ನೀರಿಗಾಗಿ ಹೋರಾಟ ತೀವ್ರಗೊಳ್ಳುತ್ತದೆ.

ಇದನ್ನೂ ಓದಿ: ಕಾವೇರಿ ಜಲ ವಿವಾದ: ತಮಿಳುನಾಡಿಗೆ ನೀರು ಹರಿಸಬೇಕಿರುವ ಪ್ರಮಾಣ ಇಳಿಕೆಗೆ ಆಗ್ರಹಿಸಿ CWMAಗೆ ಕರ್ನಾಟಕ ಮನವಿ

‘ಕುರುವೈ’ ಕೃಷಿ ಋತುವಿನ ಅಗತ್ಯ:

ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶಗಳಾದ ತಂಜಾವೂರು, ತಿರುವಾರೂರ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಜೂನ್-ಜುಲೈ​ನಲ್ಲಿ ‘ಕುರುವೈ’ ಎಂಬ ಪ್ರಮುಖ ಭತ್ತದ ತಳಿ ಬೆಳೆಯಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಈ ಬೆಳೆಗೆ ತೀವ್ರ ಪ್ರಮಾಣದ ನೀರು ಅಗತ್ಯವಿರುತ್ತದೆ. ಈ ಹಂತದಲ್ಲಿ ನೀರು ಸಿಗದಿದ್ದರೆ ಬೆಳೆ ಪೂರ್ತಿ ಒಣಗಿ ಅಪಾರ ನಷ್ಟ ಸಂಭವಿಸುತ್ತದೆ.

‘ಕುರುವೈ’ ತಳಿ ಹೇಗೆ ಭಿನ್ನ?:

ಅಲ್ಪಾವಧಿಯ ಬೇಸಿಗೆ ಬೆಳೆಯಾದ ‘ಕುರುವೈ’ ನೈಋತ್ಯ ಮುಂಗಾರನ್ನು ನೆಚ್ಚಿಕೊಂಡಿದೆ. ಆದರೆ ಕರಾವಳಿ ತಮಿಳುನಾಡಿನಲ್ಲಿ ಈಶಾನ್ಯ ಮುಂಗಾರು (ಅಕ್ಟೋಬರ್‌ನಿಂದ ಡಿಸೆಂಬರ್) ಭಾರಿ ಮಳೆಯಾಗುತ್ತದೆ. ಅಷ್ಟರೊಳಗೆ ಕುರುವೈ ಬೆಳೆಗೆ ಕಾವೇರಿ ನೀರೇ ಆಧಾರ. ನೀರಿನ ಅಭಾವದಿಂದ ಮೆಟ್ಟೂರು ಜಲಾಶಯವು ನಿಗದಿತ ಜೂನ್ 12ರ ಗಡುವಿನೊಳಗೆ ತೆರೆಯದಿದ್ದಾಗ ‘ಕುರುವೈ’ ಬೆಳೆಯುವ ಅವಕಾಶ ಕೈತಪ್ಪುತ್ತದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ನೀರು ಬಿಟ್ಟಾಗ ರೈತರು ಕುರುವೈ ಬಿಟ್ಟು ನೇರವಾಗಿ ‘ಸಾಂಬಾ’ ತಳಿಯನ್ನೇ ಬೆಳೆಯುತ್ತಾರೆ. ವರ್ಷಕ್ಕೆ 2 ಬಾರಿ ಭತ್ತ ಬೆಳೆಯುವುದರಿಂದ ತಮಿಳುನಾಡಿನ ರೈತರು ಮೊದಲು ಕುರುವೈ ಭತ್ತವನ್ನು ಕಟಾವು ಮಾಡಿ, ನಂತರ ಸಾಂಬಾ ತಳಿಯನ್ನು ಬೆಳೆಯುತ್ತಾರೆ.

ಮುಂಗಾರು ಮಳೆಯ ಅಭಾವ:

ನೈಋತ್ಯ ಮುಂಗಾರು ಅವಧಿಯಲ್ಲಿ (ಜೂನ್‌ನಿಂದ ಸೆಪ್ಟೆಂಬರ್) ಕರ್ನಾಟಕದ ಕೊಡಗು ಮತ್ತು ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆಯಾಗುತ್ತದೆ. ಆದರೆ, ತಮಿಳುನಾಡು ಮಳೆ ನೆರಳಿನ ಪ್ರದೇಶದಲ್ಲಿರುವುದರಿಂದ ಈ ಅವಧಿಯಲ್ಲಿ ಅಲ್ಲಿ ನೇರ ಮಳೆ ಕಡಿಮೆಯಿರುತ್ತದೆ. ಆದ್ದರಿಂದ ಅವರು ಕರ್ನಾಟಕದ ಜಲಾಶಯಗಳನ್ನೇ ಆಶ್ರಯಿಸಿರುತ್ತಾರೆ. ತಮಿಳುನಾಡಿಗೆ ಮುಖ್ಯವಾಗಿ ಮಳೆ ಬರುವುದು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಬರುವ ಈಶಾನ್ಯ ಮುಂಗಾರಿನಿಂದ. ಆಗಸ್ಟ್‌ನಲ್ಲಿ ಅವರಿಗೆ ಸ್ವಂತ ಮಳೆಯ ಆಸರೆ ಇರುವುದಿಲ್ಲ. ಹೀಗಾಗಿ ಅಕ್ಟೋಬರ್‌ವರೆಗೆ ತಮ್ಮ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಕ್ಕೆ ಕಾವೇರಿ ನೀರು ಅತ್ಯಗತ್ಯವಾಗಿರುತ್ತದೆ.

ಮೆಟ್ಟೂರು ಡ್ಯಾಂ ತುಂಬಬೇಕು:

ತಮಿಳುನಾಡಿನ ಪ್ರಮುಖ ನೀರಾವರಿ ಆಧಾರವಾದ ಮೆಟ್ಟೂರು ಜಲಾಶಯ ತುಂಬಲು ಹಾಗೂ ಅಲ್ಲಿಂದ ಡೆಲ್ಟಾ ಕಾಲುವೆಗಳಿಗೆ ನೀರು ಹರಿಸಲು ಆಗಸ್ಟ್‌ನಲ್ಲಿ ಹರಿವು ಹೆಚ್ಚಿರಬೇಕಾಗುತ್ತದೆ. ಹೀಗಾಗಿ, ಕಾವೇರಿ ನದಿಯ ನೀರಿನ ಹರಿವು ಹೆಚ್ಚಾಗಿರಬೇಕಾಗುತ್ತದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಆದೇಶ

ಸಾಂಬಾ ಬೆಳೆ ಎಂದರೇನು?:

‘ಸಾಂಬಾ’ ಎಂಬುದು ತಮಿಳುನಾಡಿನಲ್ಲಿ ಅತ್ಯಂತ ಪ್ರಮುಖವಾದ ಹಾಗೂ ದೀರ್ಘಾವಧಿಯ ಭತ್ತದ ತಳಿಯಾಗಿದೆ. ಸಾಮಾನ್ಯವಾಗಿ ಆಗಸ್ಟ್‌ನಿಂದ ಜನವರಿ ಅವಧಿಯಲ್ಲಿ ಈ ತಳಿಯನ್ನು ಬೆಳೆಯಲಾಗುತ್ತದೆ. ಈ ಋತುವಿನಲ್ಲಿ ಬೆಳೆಯಲಾಗುವ ಸಾಂಪ್ರದಾಯಿಕ, ಗಟ್ಟಿ ಧಾನ್ಯದ ಅಕ್ಕಿ ತಳಿಗಳನ್ನು ಕೂಡ ‘ಸಾಂಬಾ’ ಎಂದೇ ಕರೆಯಲಾಗುತ್ತದೆ. ಈ ಭತ್ತಕ್ಕೆ ಆಗಸ್ಟ್‌ನಲ್ಲಿ ಬಿತ್ತನೆ ಮಾಡಿ, ಜನವರಿ ಸಮಯದಲ್ಲಿ ಕೊಯ್ಲು ಮಾಡಲಾಗುತ್ತದೆ. ಈ ಬೆಳೆ ಕೊಯ್ಲಿಗೆ ಬರಲು ಸುಮಾರು 130ರಿಂದ 165 ದಿನಗಳು ಬೇಕಾಗುತ್ತದೆ. ಈ ಬೆಳೆಯನ್ನು ಬೆಳೆಯುವ ರೈತರು ಈಶಾನ್ಯ ಮುಂಗಾರು ಮಳೆ ಹಾಗೂ ಕಾವೇರಿ ಡೆಲ್ಟಾದ ಮೆಟ್ಟೂರು ಜಲಾಶಯದಿಂದ ಹರಿಯುವ ಕಾಲುವೆ ನೀರನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ.

ಮಧ್ಯ ಮತ್ತು ಕರಾವಳಿ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶವು ಸಾಂಬಾ ಬೆಳೆಗೆ ಪ್ರಮುಖ ಕೇಂದ್ರವಾಗಿದೆ. ತಮಿಳುನಾಡಿನ ತಂಜಾವೂರು, ತಿರುವಾರೂರ್, ನಾಗಪಟ್ಟಣಂ ಮತ್ತು ಮೈಲಾಡುತುರೈ, ತಿರುಚಿರಾಪಳ್ಳಿ, ಕಡಲೂರು, ಪುದುಕ್ಕೊಟ್ಟೈ, ಅರಿಯಲೂರ್, ವಿಲ್ಲುಪುರಂ, ರಾಮನಾಥಪುರಂ ಮತ್ತು ಕನ್ಯಾಕುಮಾರಿಯಲ್ಲಿ ಈ ಸಾಂಬಾ ತಳಿ ಬೆಳೆಯುತ್ತಾರೆ.

ತಮಿಳುನಾಡಿನಲ್ಲಿ ಸಾಂಬಾ ಕೃಷಿಯ ಮಹತ್ವ:

ಸಾಂಬಾ ಭತ್ತದ ತಳಿಯನ್ನು ಆಗಸ್ಟ್‌ನಲ್ಲಿ ಬಿತ್ತನೆ ಮಾಡಿ, ಜನವರಿ ಸಮಯದಲ್ಲಿ ಕೊಯ್ಲು ಮಾಡಲಾಗುತ್ತದೆ. ಈ ತಳಿ ಕೊಯ್ಲು ಮಾಡಲು ಸುಮಾರು 130ರಿಂದ 165 ದಿನಗಳು ಬೇಕು. ‘ಕುರುವೈ’ ನಂತಹ ಅಲ್ಪಾವಧಿ ಬೆಳೆಗಳಿಗೆ ಹೋಲಿಸಿದರೆ ಇದು ದೀರ್ಘಾವಧಿಯ ಬೆಳೆಯಾಗಿದೆ. ಬಿರಿಯಾನಿಗೆ ಬಳಸುವ ಸೀರಗ ಸಾಂಬಾ, ಹೆಚ್ಚಿನ ನಾರಿನಂಶವಿರುವ,  ದೇಹದ ಶಕ್ತಿ ಹೆಚ್ಚಿಸುವ ಪೌಷ್ಟಿಕಾಂಶಭರಿತ ಕೆಂಪು ಅಕ್ಕಿ ತಳಿಯಾದ ಮಾಪಿಳ್ಳೈ ಸಾಂಬಾ, ದೇಶಿ ತಳಿಗಳಾದ ತಂಗ ಸಾಂಬಾ ಮತ್ತು ವಡನ್ ಸಾಂಬಾ ತಮಿಳುನಾಡಿನ ಜನಪ್ರಿಯ ಮತ್ತು ಸಾಂಪ್ರದಾಯಿಕ ಭತ್ತದ ತಳಿಗಳಾಗಿವೆ.

ಕುರುವೈ ತಳಿ ಬಹಳ ಸೂಕ್ಷ್ಮವಾದ ಭತ್ತದ ತಳಿಯಾದ್ದರಿಂದ ಅದನ್ನು ಬೇಗ ಕಟಾವು ಮಾಡಲು ಸಾಧ್ಯವಿದ್ದರೂ ಹೆಚ್ಚಿನ ರೈತರು ಸಾಂಬಾ ತಳಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕುರುವೈ ತಳಿಗಿಂತಲೂ ಗಟ್ಟಿ ಜಾತಿಯ ತಳಿಯಾದ ಸಾಂಬಾ ಭತ್ತ ಬೆಳೆಯುವವರ ಪ್ರಮಾಣ ತಮಿಳುನಾಡಿನಲ್ಲಿ ಹೆಚ್ಚು. ಆದರೆ, ಈ ತಳಿಗೆ ನೀರು ಹೆಚ್ಚು ಬೇಕು. ಹೀಗಾಗಿ, ಈ ಭತ್ತದ ಬಿತ್ತನೆ ಸಮಯದಲ್ಲಿ ಕಾವೇರಿ ನೀರಿಗಾಗಿ ರೈತರು ತಮಿಳುನಾಡು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ.

ಮಧ್ಯ ಮತ್ತು ಕರಾವಳಿ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶವು ಸಾಂಬಾ ಬೆಳೆಗೆ ಪ್ರಮುಖ ಕೇಂದ್ರವಾಗಿದೆ. ಜಲಾಶಯಗಳಲ್ಲಿನ ನೀರಿನ ಮಟ್ಟ ಮತ್ತು ಈಶಾನ್ಯ ಮುಂಗಾರಿನ ಆಗಮನವನ್ನು ಆಧರಿಸಿ ಈ ತಳಿಯನ್ನು ಬೆಳೆಯುವ ವಿಸ್ತೀರ್ಣ ಬದಲಾಗುತ್ತದೆ. ಅಂದಾಜಿನ ಪ್ರಕಾರ, ತಮಿಳುನಾಡಿನಲ್ಲಿ ಸುಮಾರು 30ರಿಂದ 32 ಲಕ್ಷ ಎಕರೆ ಜಾಗದಲ್ಲಿ ಸಾಂಬಾ ಭತ್ತವನ್ನು ಬೆಳೆಯುತ್ತಾರೆ.

ಕಾವೇರಿ ವಿವಾದದ ಇತಿಹಾಸ:

1924ರ ಸಂದರ್ಭದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ನಡುವೆ ಒಪ್ಪಂದ ನಡೆದಿತ್ತು. ಮದ್ರಾಸ್ ಪ್ರೆಸಿಡೆನ್ಸಿ (ಈಗಿನ ತಮಿಳುನಾಡು) ಮತ್ತು ಮೈಸೂರು ಸಂಸ್ಥಾನದ (ಈಗಿನ ಕರ್ನಾಟಕ) ನಡುವೆ ಬ್ರಿಟಿಷರ ಅವಧಿಯಲ್ಲಿ 2 ಪ್ರಮುಖ ಒಪ್ಪಂದಗಳು ನಡೆದವು. 1924ರ ಒಪ್ಪಂದವು ಕೃಷ್ಣರಾಜಸಾಗರ (ಕೆಆರ್​ಎಸ್​) ಮತ್ತು ಮೆಟ್ಟೂರು ಡ್ಯಾಂಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಆಗ ನಡೆದ ಈ ಒಪ್ಪಂದಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಹೆಚ್ಚು ಅನುಕೂಲಕರವಾಗಿದ್ದವು, ಮೈಸೂರು ಸಂಸ್ಥಾನಕ್ಕೆ ನೀರಾವರಿ ವಿಸ್ತರಣೆಗೆ ಕಠಿಣ ಷರತ್ತುಗಳನ್ನು ಹೇರಿದ್ದವು ಎಂಬುದು ಕರ್ನಾಟಕದ ನಿರಂತರ ವಾದ. 1924ರ ಒಪ್ಪಂದದ 50 ವರ್ಷಗಳ ಅವಧಿ 1974ಕ್ಕೆ ಅಂತ್ಯಗೊಂಡ ನಂತರ, ಕರ್ನಾಟಕವು ತನ್ನ ಭಾಗದ ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳಲ್ಲಿ ಡ್ಯಾಂ ನಿರ್ಮಿಸಿ ನೀರಾವರಿ ವಿಸ್ತರಿಸಲು ತೊಡಗಿದಾಗ ವಿವಾದ ತೀವ್ರಗೊಂಡಿತು. ಇಂದಿಗೂ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಇತ್ಯರ್ಥಗೊಂಡಿಲ್ಲ.

References:
Tamil Nadu Agriculture University Agri Tech portal

Down To Earth

The Week

Times of India

ANI

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Tue, 8 September 26

Loading...
Unable to load recommendations.
Follow Us