‘ಜ್ಞಾನೇಶ್ ಕುಮಾರ್ ವಜಾಗೊಳ್ಳುವವರೆಗೂ ಪ್ರತಿದಿನ ಜಂತರ್ ಮಂತರ್‌ಗೆ ಪಾದಯಾತ್ರೆ’; ಸಿಜೆಪಿ ನಿರ್ಧಾರ

ದೆಹಲಿಯಲ್ಲಿ ಇಂದು ನಡೆದ ಪೊಲೀಸ್ ಕಾರ್ಯಾಚರಣೆಗೆ ಜಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಮತದಾರರ ಪಟ್ಟಿ ಅಕ್ರಮ ಮತ್ತು ಆಡಳಿತಾರೂಢ ಬಿಜೆಪಿಯೊಂದಿಗೆ ಮತ ಕಳ್ಳತನದ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ಅಥವಾ ಅವರನ್ನು ಹುದ್ದೆಯಿಂದ ವಜಾಗೊಳಿಸುವವರೆಗೆ ಪ್ರತಿದಿನ ಜಂತರ್ ಮಂತರ್‌ಗೆ ಪಾದಯಾತ್ರೆ ನಡೆಸುವುದಾಗಿ ದಿಟ್ಟ ಸವಾಲು ಹಾಕಿವೆ.

‘ಜ್ಞಾನೇಶ್ ಕುಮಾರ್ ವಜಾಗೊಳ್ಳುವವರೆಗೂ ಪ್ರತಿದಿನ ಜಂತರ್ ಮಂತರ್‌ಗೆ ಪಾದಯಾತ್ರೆ’; ಸಿಜೆಪಿ ನಿರ್ಧಾರ
ಸಿಜೆಪಿ ಪ್ರತಿಭಟನೆಯ
Image Credit source: PTI

Updated on: Oct 10, 2026 | 9:28 PM

ನವದೆಹಲಿ, ಅಕ್ಟೋಬರ್ 10: ದೆಹಲಿ ಪೊಲೀಸರ ತೀವ್ರ ಭದ್ರತಾ ಕಾರ್ಯಾಚರಣೆ ಹಾಗೂ ಹಲವಾರು ನಾಯಕರ ಬಂಧನದ ನಡುವೆಯೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಂದು ನಡೆದ ತನ್ನ ಪ್ರತಿಭಟನೆಯನ್ನು “ಅರ್ಧ ಗೆಲುವು” ಎಂದು ಹೇಳಿಕೊಂಡಿದೆ. ಅಲ್ಲದೆ, ತಾವು ಭಾನುವಾರವೂ ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದೆ.

ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ತಕ್ಷಣವೇ ಪೊಲೀಸರು ಅಭಿಜಿತ್ ದಿಪ್ಕೆ ಹಾಗೂ ಇತರರನ್ನು ವಿಮಾನದ ಒಳಗಿನಿಂದಲೇ ವಶಕ್ಕೆ ಪಡೆದಿದ್ದಾರೆ. ಅವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಮಗಿಲ್ಲ ಎಂದು ಪಕ್ಷದ ಪ್ರತಿನಿಧಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಲ್ಲಿದ್ದ ಅಭಿಜಿತ್ ದೀಪ್ಕೆ ಅವರ ಅಜ್ಜಿ ಇಂದು ಬೆಳಿಗ್ಗೆ ನಿಧನರಾಗಿದ್ದರೂ, ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ದಿಪ್ಕೆ ಅವರಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಅವರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ: ದೆಹಲಿಗೆ ಬಂದಿಳಿಯುತ್ತಿದ್ದಂತೆಯೇ ಅಭಿಜಿತ್ ದೀಪ್ಕೆ ವಿಮಾನದಲ್ಲೇ ಪೊಲೀಸ್ ವಶಕ್ಕೆ!

ಪೊಲೀಸ್ ದೌರ್ಜನ್ಯದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಜೆಪಿ ನಾಯಕ ಅಜಿಂಕ್ಯ ಶಿಂಧೆ, “ಪ್ರತಿಭಟನಾ ಚಳವಳಿಯ ಭಯದಿಂದ ಸರ್ಕಾರವು ಇಡೀ ರಾಷ್ಟ್ರದ ರಾಜಧಾನಿಯನ್ನೇ ಬಂದ್ ಮಾಡಲು ಯತ್ನಿಸಿದೆ” ಎಂದು ಆರೋಪಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದಿರುವ ಅವರು, ತಾವು ನಾಳೆ ಮತ್ತಷ್ಟು ಬಲವಾಗಿ ಬೀದಿಗಿಳಿಯುವುದಾಗಿ ಎಚ್ಚರಿಸಿದ್ದಾರೆ.


ಪೋಲೀಸ್ ಕಟ್ಟುನಿಟ್ಟಿನ ನಿರ್ಬಂಧಗಳ ಹೊರತಾಗಿಯೂ ತಮ್ಮ ಹೋರಾಟವನ್ನು ಪ್ರತಿದಿನ ಮುಂದುವರಿಸುವುದಾಗಿ ಮತ್ತು ಜಂತರ್ ಮಂತರ್ ಚಲೋಗೆ ಬದ್ಧವಾಗಿರುವುದಾಗಿ ಸಿಜೆಪಿ ಪುನರುಚ್ಚರಿಸಿದೆ.

ಇದನ್ನೂ ಓದಿ: ‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ಸಂಚು’; ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ

ಎಸ್​ಐಆರ್​ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿವೆ ಎಂದು ಆರೋಪಿಸಿ ಸಿಜೆಪಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ಇದರ ನಡುವೆಯೂ ದೆಹಲಿಗೆ ಆಗಮಿಸಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದರು. ಅವರನ್ನು ಇಟ್ಟಿರುವ ಸ್ಥಳದ ಬಗ್ಗೆ ಮಾಹಿತಿ ನೀಡುವಂತೆ ಮತ್ತು ಅವರನ್ನು ಬಿಡುಗಡೆ ಮಾಡುವಂತೆ ಸಿಜೆಪಿ ಪಟ್ಟುಹಿಡಿದಿದೆ. ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತು ರಾಂಕಾ ಅವರನ್ನು ವಶಕ್ಕೆ ಪಡೆದ ನಂತರ, ಈಗ ಅಜಿಂಕ್ಯ ಶಿಂಧೆ ಅವರು ಪ್ರತಿಭಟನೆಯ ಮುಂದಿನ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us