‘ಸಿಎಂ ವಿಜಯ್ ಜೊತೆಗೂಡಿ ಕೆಲಸ ಮಾಡುತ್ತೇವೆ’; ಚೆನ್ನೈನಲ್ಲಿ ಪ್ರಧಾನಿ ಮೋದಿ ಭರವಸೆ

ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಕೈಜೋಡಿಸಿ ದಕ್ಷಿಣ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಕೆಲಸ ಮಾಡಲಿದೆ ಎಂದು ತಮಿಳುನಾಡಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಎಂ.ಕೆ. ಸ್ಟಾಲಿನ್ ಸೇರಿದಂತೆ ಹಿಂದಿನ ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ತಮ್ಮ ಅನುಭವವನ್ನು ಸ್ಮರಿಸಿದ ಪ್ರಧಾನಿ ಮೋದಿ, ತಾವು ಮುಖ್ಯಮಂತ್ರಿಯಾಗಿದ್ದ ಕಾಲವು ರಾಜ್ಯಗಳ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ತಮಗೆ ಸಹಾಯ ಮಾಡಿತು ಎಂದು ಹೇಳಿದ್ದಾರೆ.

‘ಸಿಎಂ ವಿಜಯ್ ಜೊತೆಗೂಡಿ ಕೆಲಸ ಮಾಡುತ್ತೇವೆ’; ಚೆನ್ನೈನಲ್ಲಿ ಪ್ರಧಾನಿ ಮೋದಿ ಭರವಸೆ
ಸಿಎಂ ವಿಜಯ್ ಜೊತೆ ಪ್ರಧಾನಿ ಮೋದಿ
Image Credit source: PTI

Updated on: Oct 11, 2026 | 4:37 PM

ಚೆನ್ನೈ, ಅಕ್ಟೋಬರ್ 11: “ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಜೊತೆ ಕೈಜೋಡಿಸಿ ಕೇಂದ್ರ ಸರ್ಕಾರವು ತಮಿಳುನಾಡಿನ ಅಭಿವೃದ್ಧಿಯನ್ನು ಮುನ್ನಡೆಸಲಿದೆ. ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯಗಳ ನಿರೀಕ್ಷೆಗಳು ಏನೆಂಬುದನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ ಪ್ರಧಾನಿಯಾದ ನಂತರ ಆ ಆಕಾಂಕ್ಷೆಗಳನ್ನು ಈಡೇರಿಸಲು ಯತ್ನಿಸಿದ್ದು ಮಾತ್ರವಲ್ಲದೆ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಆಕಾಂಕ್ಷೆಯ ಗುರಿಗಳನ್ನು ತಲುಪಲು ಸಾಧ್ಯವಾಗುವಂತೆ ಶ್ರಮಿಸಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ಚೆನ್ನೈನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ದೇಶದ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ರಾಜ್ಯ ನೀಡಿರುವ ಕೊಡುಗೆಯನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


“2014ರಿಂದ ನಮ್ಮ ಇಲೆಕ್ಟ್ರಾನಿಕ್ಸ್ ರಫ್ತು 11 ಪಟ್ಟು ಹೆಚ್ಚಾಗಿದೆ ಮತ್ತು ಇಂದು ನಾವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕರಾಗಿದ್ದೇವೆ. ನಮ್ಮ ರಕ್ಷಣಾ ರಫ್ತು 50 ಪಟ್ಟು ಹೆಚ್ಚಾಗಿದೆ. ನಮ್ಮ ಎಂಜಿನಿಯರಿಂಗ್ ರಫ್ತು ಕೂಡ ಹೊಸ ದಾಖಲೆಯನ್ನು ಬರೆದಿದೆ. ಉತ್ಪಾದನಾ ಕ್ಷೇತ್ರದಲ್ಲಿನ ಈ ಬೆಳವಣಿಗೆಯಿಂದಾಗಿ ದೇಶದ ಯುವಕರಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ

ರಾಜ್ಯದ ಕೆಲವು ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ತೂತುಕುಡಿಯಲ್ಲಿರುವ ಚಿದಂಬರನಾರ್ ಬಂದರನ್ನು ಸುಮಾರು 17,000 ಕೋಟಿ ರೂ. ಹೂಡಿಕೆಯೊಂದಿಗೆ ವಿಶ್ವದರ್ಜೆಯ ಮೆಗಾ ಕಂಟೈನರ್ ಮತ್ತು ಹಸಿರು ಇಂಧನ ಹಬ್ ಆಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. “ಈ ಯೋಜನೆಯು ಪೂರ್ಣಗೊಂಡ ನಂತರ, ಈ ಬಂದರು ವಿಶ್ವದ ಬೃಹತ್ ಕಂಟೈನರ್ ಹಡಗುಗಳನ್ನು ಸಾಗಿಸುವ ಸಾಮರ್ಥ್ಯ ಪಡೆಯಲಿದೆ. ಇದು ತಮಿಳುನಾಡನ್ನು ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರದ ಜಾಗತಿಕ ಹಬ್ ಆಗಿ ಮಾರ್ಪಡಿಸಲು ನೆರವಾಗಲಿದೆ” ಎಂದು ಅವರು ಹೇಳಿದರು.


ಇದನ್ನೂ ಓದಿ: ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ

“ಒಬ್ಬ ಮುಖ್ಯಮಂತ್ರಿಯಾಗಿ ನನಗೆ ಕರುಣಾನಿಧಿ ಮತ್ತು ಜಯಲಲಿತಾ ಅವರೊಂದಿಗೆ ಸಂವಾದ ನಡೆಸಲು ಹಲವು ಅವಕಾಶಗಳು ಸಿಕ್ಕಿದ್ದವು. ನಾನು ಪ್ರಧಾನಿಯಾದಾಗ ಜಯಲಲಿತಾ, ಒ. ಪೆನ್ನೀರ್​ಸೆಲ್ವಮ್, ಇ. ಪಳನಿಸ್ವಾಮಿ ಮತ್ತು ಎಂ.ಕೆ. ಸ್ಟಾಲಿನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು. ಸರ್ಕಾರಗಳು ಬದಲಾಗಬಹುದು, ಆದರೆ ತಮಿಳುನಾಡಿನ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡುವ ನನ್ನ ಸಂಕಲ್ಪ ಎಂದೆಂದಿಗೂ ಸ್ಥಿರವಾಗಿರುತ್ತದೆ. ನಾವು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರೊಂದಿಗೆ ಈ ಪಯಣವನ್ನು ಮುಂದುವರಿಸುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.


ಇದಕ್ಕೂ ಮುನ್ನ, ಭಾನುವಾರ ಪ್ರಧಾನಿ ಮೋದಿ ಚೆನ್ನೈ ಮೆಟ್ರೋ ರೈಲು ಯೋಜನೆಯ ಹಂತ-2ರ ಪೂನಮಲ್ಲೆ-ವಡಪಳನಿ ವಿಭಾಗವನ್ನು ಉದ್ಘಾಟಿಸಿದರು. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರೊಂದಿಗೆ ಮೋದಿ ಹೊಸ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದ್ದು ವಿಶೇಷವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us