WITT Satta Sammelan: ವಿಪಕ್ಷಗಳ ನಾಯಕರು ಬಿಜೆಪಿಗೆ ವಲಸೆ ಬರಲು ಏನು ಕಾರಣ? ಸಚಿವ ಶೆಖಾವತ್ ಹೇಳುವುದಿದು

Gajendra Singh Shekhawat at What India Thinks Today: ಡಬ್ಲ್ಯುಐಟಿಟಿ 2024 ಶೃಂಗಸಭೆಯ ಬಾಗವಾಗಿ ನಡೆದ ‘ಸತ್ತ ಸಮ್ಮೇಳನ’ದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮಾತನಾಡಿದರು. ಬಿಜೆಪಿ ಸೇರುತ್ತಿರುವ ವಿರೋಧ ಪಕ್ಷಗಳ ನಾಯಕರ ಬಗ್ಗೆ ಮಾತನಾಡುತ್ತಾ, ಈಗ ದೇಶವು ಪ್ರಧಾನಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕರ ಕೈಯಲ್ಲಿದೆ ಮತ್ತು ದೇಶವು ನಿರಂತರವಾಗಿ ಪ್ರಗತಿಯಲ್ಲಿದೆ ಎನ್ನುವ ವಿಶ್ವಾಸ ಎಲ್ಲರಲ್ಲೂ ಇದೆ. ಇದು ವಿಪಕ್ಷ ನಾಯಕರನ್ನು ಬಿಜೆಪಿಯತ್ತ ಕರೆತರುತ್ತಿದೆ ಎಂದಿದ್ದಾರೆ.

WITT Satta Sammelan: ವಿಪಕ್ಷಗಳ ನಾಯಕರು ಬಿಜೆಪಿಗೆ ವಲಸೆ ಬರಲು ಏನು ಕಾರಣ? ಸಚಿವ ಶೆಖಾವತ್ ಹೇಳುವುದಿದು
ಗಜೇಂದ್ರ ಸಿಂಗ್ ಶೇಖಾವತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2024 | 4:55 PM

What India Thinks Today Global Summit 2024: ಮಂಗಳವಾರ ಟಿವಿ9 ನೆಟ್‌ವರ್ಕ್‌ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಾವೇಶದ ಭಾಗವಾಗಿ ಕೊನೆಯ ದಿನವಾದ ಮಂಗಳವಾರದಂದು ನಡೆದ ಅಧಿಕಾರ ಸಮ್ಮೇಳನದಲ್ಲಿ (Satta Sammelan) ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhawat) ಅವರ ಮಾತುಗಳು ಗಮನ ಸೆಳೆದಿದ್ದವು. ಇಲ್ಲಿ ಸತ್ತ ಎಂಬುದು ಹಿಂದಿ ಪದವಾಗಿದ್ದು ಅದರ ಅರ್ಥ ಅಧಿಕಾರ ಅಥವಾ ಪವರ್ ಎಂದಿದೆ. ಇಲ್ಲಿ ರಾಜಕೀಯ ಅಧಿಕಾರದ ಬಗ್ಗೆ ನಡೆದ ಚರ್ಚೆಯಲ್ಲಿ ಸಚಿವ ಗಜೇಂದ್ರ ಶೆಖಾವತ್ ಕೆಲ ಪ್ರಮುಖ ಪ್ರಶ್ನೆಗಳಿಗೆ ನಿರಾಯಾಸ ಉತ್ತರ ನೀಡಿದರು. ವಿರೋಧ ಪಕ್ಷಗಳ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಕುರಿತು ಮಾತನಾಡಿದ ಶೆಖಾವತ್, ದೇಶದ ಚುಕ್ಕಾಣಿ ಈಗ ನರೇಂದ್ರ ಮೋದಿ ಅವರಂತಹ ಸಮರ್ಥ ನಾಯಕನ ಕೈಯಲ್ಲಿ ಇರುವುದು ಮತ್ತು ದೇಶ ನಿರಂತರವಾಗಿ ಪ್ರಗತಿ ಕಾಣುತ್ತಿರುವುದು ಎಲ್ಲರ ವಿಶ್ವಾಸ ಮೂಡಿಸಿದೆ ಎಂದಿದ್ದಾರೆ.

ಇದೇ ವೇಳೆ ರಾಜಸ್ಥಾನದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಮುಖಂಡ ಅಶೋಕ್ ಗೆಹಲೋತ್ ಅವರ ಜಾದೂಗಾರ ಎನ್ನುವ ವಿಚಾರ ಪ್ರಸ್ತಾಪಕ್ಕೆ ಬಂದಿತು. ಅವರ ಜಾದೂಗಾರಿಕೆಯನ್ನು ತಾವು ಕಲಿಯುತ್ತೀರಾ ಎಂಬ ಪ್ರಶ್ನೆಗೆ ಶೆಖಾವತ್ ಮಾರ್ಮಿಕ ಉತ್ತರ ನೀಡಿದರು.

‘ರಾಜಸ್ಥಾನದ ವಿಧಾನಸಭಾ ಚುನಾವಣೆಗೆ ಮೊದಲು ಅವರು (ಗೆಹ್ಲೋತ್) ಸೋಲುತ್ತಾರೆ ಎಂದು ಹೇಳಿದ್ದೆ. ಅದರಂತೆ ಸೋತಿದ್ದಾರೆ. ಈ ಹಿಂದೆ ರಾಜ್ಯದ ಚುನಾವಣೆಯಲ್ಲಿ ಸೋತಾಗ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಈ ಬಾರಿ ಅವರಿಗೆ ಹಾಗಾಗುವುದಿಲ್ಲ. ಏಕೆಂದರೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಯಕನಾಗಿ ತೋರಿದ ಧೋರಣೆಯಿಂದಾಗಿ ದೆಹಲಿಗೆ ಅವರಿಗೆ ಬರಲು ಅವಕಾಶ ಇರುವುದಿಲ್ಲ. ಈ ಸಂದರ್ಭದಲ್ಲಿ ಅವರು ಖಾಲಿಯಾಗಿ ಉಳಿದಿರುತ್ತಾರೆ. ಬಿಡುವಾದಾಗ ಅವರ ಬಳಿ ಮ್ಯಾಜಿಕ್ ಕಲಿಯಲು ಹೋಗುತ್ತೇನೆ,’ ಎಂದು ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಕಾವತ್ ಹೇಳಿದರು.

ಇದನ್ನೂ ಓದಿ: ಲಾರ್ಡ್ ಮೆಕಾಲೆ ಅವರ ನೀತಿಗಳ ಬಗ್ಗೆ ರಾಮ್‌ದೇವ್ ಹೇಳಿದ್ದೇನು?

ಅಶೋಕ್ ಗೆಹ್ಲೋತ್ ಮಾಂತ್ರಿಕರ ಕುಟುಂಬಕ್ಕೆ ಸೇರಿದವರು. ಜಾದೂಗಾರಿಕೆ ವಿದ್ಯೆ ಬಲ್ಲವರು. ರಾಜಕೀಯದಲ್ಲೂ ಅವರು ಜಾದೂಗಾರ ಎಂದು ಖ್ಯಾತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಗೆಹ್ಲೋತ್ ಸೋತಾಗ ಗಜೇಂದ್ರ ಸಿಂಗ್ ವ್ಯಂಗ್ಯ ಮಾಡಿದ್ದರು. ರಾಜಸ್ಥಾನ ರಾಜ್ಯ ಮಾಂತ್ರಿಕರ ವಶದಿಂದ ಮುಕ್ತವಾಯಿತು ಎಂದು ಲೇವಡಿ ಮಾಡಿದ್ದರು. ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿ, ಗೆಹ್ಲೋತ್​ರನ್ನು ಮತ್ತೊಮ್ಮೆ ಕುಟುಕಿದ್ದಾರೆ.

ಗೆಹ್ಲೋಟ್ ಜೊತೆ ದ್ವೇಷವಿಲ್ಲ: ಶೇಖಾವತ್

ಅಶೋಕ್ ಗೆಹ್ಲೋಟ್ ಮತ್ತು ತಮ್ಮ ನಡುವೆ ಯಾವ ದ್ವೇಷ ಇಲ್ಲ ಎಂದೂ ಶೆಖಾವತ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ತಮ್ಮ ಹಾಗೂ ಅವರ ಹಿಂದಿನ ಭೇಟಿಯನ್ನು ಉಲ್ಲೇಖಿಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, “ರಾಜಸ್ಥಾನದಲ್ಲಿ ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭವಿತ್ತು. ಆಗ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಜನಲಾಲ್ ಶರ್ಮಾ ವೇದಿಕೆಯಲ್ಲಿದ್ದರು. ಅಮಿತ್ ಶಾ, ವಸುಂಧರಾ ರಾಜೇ ಸಿಂಧಿಯಾ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ನಾನು ಕೂಡ ಅಲ್ಲಿ ಹಾಜರಿದ್ದೆ. ವಿರೋಧ ಪಕ್ಷದ ನಾಯಕರಾಗಿ ಅಶೋಕ್ ಗೆಹ್ಲೋಟ್ ಕೂಡ ಇದ್ದರು.

“ಕಾಕತಾಳೀಯವೆಂದರೆ ಅಶೋಕ್ ಗೆಹ್ಲೋಟ್ ಮತ್ತು ನನ್ನ ಕುರ್ಚಿ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿತ್ತು. ನಾವು ವಿಭಿನ್ನ ರಾಜಕೀಯ ವ್ಯಕ್ತಿಗಳಾಗಿರಬಹುದು. ದೇಶದ ಬಗ್ಗೆ ನಮ್ಮ ದೃಷ್ಟಿಕೋನವೂ ಭಿನ್ನವಾಗಿರಬೇಕು. ಆದರೆ ಪರಸ್ಪರ ದ್ವೇಷವಿಲ್ಲ. ನಮ್ಮ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಹೇಳಲಾಗಿದೆ” ಎಂದು ಗಜೇಂದ್ರ ಶೆಖಾವತ್ ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಕೇವಲ ರಾಜಕಾರಣಿಯಲ್ಲ, ಅವರೊಬ್ಬ ದಾರ್ಶನಿಕ ಮತ್ತು ವಿಶ್ವನಾಯಕ: ಡಾ ರಾಮೇಶ್ವರ್ ರಾವ್ ಜೂಪಾಲಿ

ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಲು ಕಾರಣವೇನು?

ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಯಕರು ಸೇರ್ಪಡೆಯಾಗುತ್ತಿರುವ ಬಗ್ಗೆ ಕೇಂದ್ರ ಸಚಿವರು ಪ್ರತಿಕ್ರಿಯಿಸಿ, ಬಿಜೆಪಿಯ ವಂಶ ನಿರಂತರವಾಗಿ ಬೆಳೆಯುತ್ತಿದೆ. ಭವಿಷ್ಯದಲ್ಲಿಯೂ ಈ ಟ್ರೆಂಡ್ ಮುಂದುವರಿಯುತ್ತದೆ ಎಂದರು.

ಪಕ್ಷಕ್ಕೆ ಬರುವ ಬಗ್ಗೆ ವಿರೋಧ ಪಕ್ಷದ ನಾಯಕರು ಏನು ಯೋಚಿಸುತ್ತಿದ್ದಾರೆ? ಗೆಲುವನ್ನು ಖಾತರಿಪಡಿಸಲು ಬರುತ್ತಿದ್ದಾರೆಯೇ? ಈ ಕುರಿತು ಕೇಂದ್ರ ಸಚಿವ ಶೇಖಾವತ್ ಉತ್ತರ ಹೀಗಿದೆ: “ಹಲವು ವಿಷಯಗಳಿರಬಹುದು. ಬಹುಶಃ ಅವರು ಗೆಲುವು ಗ್ಯಾರಂಟಿ ಎಂದು ನೋಡುತ್ತಾರೆ. ನಾವು ಮತ್ತೆ ಬಹುಮತದಿಂದ ಗೆಲ್ಲುತ್ತೇವೆ ಎಂಬ ಭಾವನೆ ಅವರಲ್ಲಿದೆ. ಮೋದಿ ಒಬ್ಬ ಮಹಾನ್ ನಾಯಕ ಎಂದು ವಿಪಕ್ಷಗಳ ನಾಯಕರು ನಂಬಲು ಆರಂಭಿಸಿದ್ದಾರೆ. ದೇಶ ಈಗ ಸುರಕ್ಷಿತ ಕೈಯಲ್ಲಿದೆ. ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ವಿರೋಧ ಪಕ್ಷದ ನಾಯಕರು ಬಿಜೆಪಿ ಸೇರಲು ಇದೇ ಕಾರಣ ಎಂದು ನಾನು ಭಾವಿಸಿದ್ದೇನೆ” ಎಂದು ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದರು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ