Year Ender 2024: ರತನ್ ಟಾಟಾ, ಮನಮೋಹನ್ ಸಿಂಗ್, ಜಾಕಿರ್ ಹುಸೇನ್; ಈ ವರ್ಷ ನಿಧನರಾದ ಭಾರತೀಯ ಗಣ್ಯರಿವರು
2024 ವರ್ಷ ಸದ್ದಿಲ್ಲದೆ ಮುಗಿಯುತ್ತಿದೆ. ಈ 12 ತಿಂಗಳಲ್ಲಿ ಭಾರತದಲ್ಲಿ ಅನೇಕ ವಿದ್ಯಮಾನಗಳು ನಡೆದಿವೆ, ಹಲವು ದುರ್ಘಟನೆಗಳು ಸಂಭವಿಸಿವೆ. ಅನೇಕ ಗಣ್ಯರು ನಮ್ಮನ್ನು ಅಗಲಿದ್ದಾರೆ. ಅವರ ಪೈಕಿ ಅತಿ ಮುಖ್ಯರಾದವರ ಬಗ್ಗೆ ಮಾಹಿತಿ ಇಲ್ಲಿದೆ. ಈ ವರ್ಷ ಜಗತ್ತಿಗೆ ವಿದಾಯ ಹೇಳಿದ ಭಾರತೀಯ ಸೆಲೆಬ್ರಿಟಿಗಳಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ, ತಬಲಾ ವಾದಕ ಜಾಕಿರ್ ಹುಸೇನ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸೇರಿದಂತೆ ಹಲವರಿದ್ದಾರೆ.
ನವದೆಹಲಿ: 2024ನೇ ವರ್ಷ ಕೊನೆಗೊಳ್ಳುತ್ತಿದೆ. ಈ ವರ್ಷ ಅನೇಕ ಶ್ರೇಷ್ಠ ವ್ಯಕ್ತಿಗಳು ನಮ್ಮನ್ನು ಶಾಶ್ವತವಾಗಿ ಅಗಲಿದ್ದಾರೆ. ಈ ವರ್ಷ ನಮ್ಮೆಲ್ಲರಿಗೂ ಎಷ್ಟು ಸಂತೋಷದ ವರ್ಷವಾಗಿತ್ತೋ ಅಷ್ಟೇ ದುಃಖಕರ ವರ್ಷವೂ ಆಗಿತ್ತು. ರಾಜಕೀಯ, ವ್ಯಾಪಾರ, ಉದ್ಯಮ, ಸಂಸ್ಕೃತಿ, ಮನರಂಜನೆ ಕ್ಷೇತ್ರದ ಅನೇಕ ಗಣ್ಯರು ಈ ವರ್ಷ ನಿಧನರಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ರಾಷ್ಟ್ರೀಯ ಐಕಾನ್ ರತನ್ ಟಾಟಾ:
ಟಾಟಾ ಸನ್ಸ್‌ನ ಅಧ್ಯಕ್ಷ ರತನ್ ನೇವಲ್ ಟಾಟಾ ಅವರು ಅಕ್ಟೋಬರ್ 9ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ‘ರಾಷ್ಟ್ರೀಯ ಐಕಾನ್’ ಎಂದು ಕರೆಯಲ್ಪಡುವ ರತನ್ ಟಾಟಾ ಅವರು 20 ವರ್ಷಗಳಿಗೂ ಹೆಚ್ಚು ಕಾಲ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದರು. ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದ ನಂತರ, ರತನ್ ಟಾಟಾ ಭಾರತಕ್ಕೆ ಮರಳಿದರು. 1962ರಲ್ಲಿ ಅವರ ಮುತ್ತಜ್ಜ ಜಮ್ಸೆಟ್ಜಿ ಟಾಟಾ ಸ್ಥಾಪಿಸಿದ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು 1991ರಲ್ಲಿ ತಮ್ಮ ಚಿಕ್ಕಪ್ಪ ಜೆಆರ್‌ಡಿ ಟಾಟಾ ಅವರಿಂದ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಬಳಿಕ ಟಾಟಾ ಗ್ರೂಪ್ ಅನ್ನು ಸಂಪೂರ್ಣ ಹೊಸ ಎತ್ತರಕ್ಕೆ ಕೊಂಡೊಯ್ದರು. ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನ್ಯಾನೋವನ್ನು ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ರತನ್ ಟಾಟಾ ಅವರ ಕೊಡುಗೆ ಕೈಗಾರಿಕೋದ್ಯಮಿಯಾಗಿ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ಗಮನಾರ್ಹವಾದುದು.
ತಬಲಾ ಮಾಂತ್ರಿಕ ಜಾಕೀರ್ ಹುಸೇನ್:
ಭಾರತದ ಅತ್ಯಂತ ಪ್ರಸಿದ್ಧ ತಬಲಾ ವಾದಕ ಜಾಕಿರ್ ಹುಸೇನ್ ಸ್ಯಾನ್ ಫ್ರಾನ್ಸಿಸೊದಲ್ಲಿ ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ನಿಂದ 73ನೇ ವಯಸ್ಸಿನಲ್ಲಿ ನಿಧನರಾದರು. ಗಂಭೀರವಾದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಜಾಕಿರ್ ಹುಸೇನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದರು. ಅವರು ಒಂದು ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಜಾಕಿರ್ ಹುಸೇನ್ ಸಾಯುವ ಮೊದಲು ಕೆಲವು ಸಮಯದಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮಾರ್ಚ್ 9, 1951ರಂದು ಮುಂಬೈನ ಮಾಹಿಮ್‌ನಲ್ಲಿ ಜನಿಸಿದ ಜಾಕಿರ್ ಹುಸೇನ್ ಭಾರತೀಯ ಸಂಗೀತವನ್ನು ರಾಷ್ಟ್ರದ ಹೊರಗಿನ ಜಗತ್ತಿಗೆ ಕೊಂಡೊಯ್ಯುವಲ್ಲಿ ಪ್ರಮುಖರಾಗಿದ್ದರು. ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ಭಾರತವು ಪದ್ಮಭೂಷಣ, ಪದ್ಮವಿಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್‌ನ ಜೀವಮಾನದ ಗೌರವ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಒಂದೇ ರಾತ್ರಿಯಲ್ಲಿ ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದ ಮೊದಲ ಭಾರತೀಯ ಜಾಕಿರ್ ಹುಸೇನ್.
ಇದನ್ನೂ ಓದಿ: New Year 2025: ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ; ರಾಜ್ಯಾದ್ಯಂತ ಹೇಗಿದೆ ಸಿದ್ಧತೆ?
ಸೀತಾರಾಮ್ ಯೆಚೂರಿ:
ಭಾರತೀಯ ರಾಜಕೀಯದ ಹಿರಿಯ ನಾಯಕ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಗಸ್ಟ್ 19ರಂದು ನಿಧನರಾದರು. 73 ವರ್ಷದವರಾಗಿದ್ದ ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಎಡಪಂಥೀಯ ನಾಯಕರಲ್ಲಿ ಪ್ರಮುಖರಾಗಿರುವ ಸೀತಾರಾಂ ಯೆಚೂರಿ ಭಾರತೀಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದರು. ಜೀವನದುದ್ದಕ್ಕೂ ಕಾರ್ಮಿಕ ವರ್ಷದ ಹಕ್ಕುಗಳಿಗೆ ಹೋರಾಡಿದರು.
ಗಜಲ್ ಗಾಯಕ ಪಂಕಜ್ ಉದಾಸ್:
ಪ್ರಸಿದ್ಧ ಗಜಲ್ ಗಾಯಕ ಪಂಕಜ್ ಉದಾಸ್ ಫೆಬ್ರವರಿ 26ರಂದು ನಿಧನರಾದರು. ಅವರಿಗೆ 72 ವರ್ಷವಾಗಿತ್ತು. ಅವರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಉಂಟಾಗಿತ್ತು. ಗಜಲ್ ಗಾಯನಕ್ಕೆ ಅವರು ಹೊಸ ರೂಪ ನೀಡಿದರು. ಭಾರತೀಯ ಗಜಲ್ ಸಂಗೀತವನ್ನು ಜಾಗತಿಕ ಮನ್ನಣೆಗೆ ತರುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ.
ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ 92ನೇ ವಯಸ್ಸಿನಲ್ಲಿ ಡಿಸೆಂಬರ್ 26ರಂದು ದೆಹಲಿಯ ಏಮ್ಸ್‌ನಲ್ಲಿ ಮೃತಪಟ್ಟರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಭಾರತದ ಪ್ರಧಾನ ಮಂತ್ರಿಯಾಗಿ (2004-2014) ಎರಡು ಅವಧಿಗೆ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರನ್ನು ಭಾರತದ ಆರ್ಥಿಕ ಸುಧಾರಣೆಗಳ ವಾಸ್ತುಶಿಲ್ಪಿ ಎಂದು ಕರೆಯುತ್ತಾರೆ. 1991ರಲ್ಲಿ ಪಿವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ, ಮನಮೋಹನ್ ಸಿಂಗ್ ಅವರು ಹಲವಾರು ಸುಧಾರಣೆಗಳೊಂದಿಗೆ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಈ ನಿರ್ಧಾರವು ಭಾರತವನ್ನು ಕರಾಳ ಆರ್ಥಿಕ ಬಿಕ್ಕಟ್ಟಿನಿಂದ ಹೊರತಂದಿತು.
ಇದನ್ನೂ ಓದಿ: Year Ender 2024: ಭಾರತೀಯ ರಾಜಕೀಯದಲ್ಲಿ ಈ ವರ್ಷದ ಅಚ್ಚರಿಯ ಬೆಳವಣಿಗೆ, ಪ್ರಮುಖ ಹಿನ್ನಡೆಗಳಿವು
ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ 1971ರಲ್ಲಿ ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರನ ಸ್ಥಾನದೊಂದಿಗೆ ಭಾರತ ಸರ್ಕಾರದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಈ ವರ್ಷದ ಆರಂಭದಲ್ಲಿ ಸದನದಲ್ಲಿ 33 ವರ್ಷಗಳ ಸುದೀರ್ಘ ಸೇವೆಯ ನಂತರ ರಾಜ್ಯಸಭೆಯಿಂದ ನಿವೃತ್ತರಾದರು. ನರಸಿಂಹ ರಾವ್ ನೇತೃತ್ವದ ಆಡಳಿತದಲ್ಲಿ ಹಣಕಾಸು ಸಚಿವರಾಗುವ ಮೊದಲು ಮನಮೋಹನ್ ಸಿಂಗ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದರು.
ಸೆಪ್ಟೆಂಬರ್ 26, 1932ರಂದು ಅವಿಭಜಿತ ಭಾರತದ ಪಂಜಾಬ್‌ನ ಹಳ್ಳಿಯೊಂದರಲ್ಲಿ ಜನಿಸಿದ ಮನಮೋಹನ್ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು ನಂತರ ಆಕ್ಸ್‌ಫರ್ಡ್‌ನಿಂದ ಡಿ.ಫಿಲ್ ಪಡೆಯುವ ಮೊದಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
ಎಸ್.ಎಂ. ಕೃಷ್ಣ:
ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ಮನ್ನಣೆ ದೊರಕಿಸಿಕೊಟ್ಟ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಡಿಸೆಂಬರ್ 10ರಂದು ನಿಧನರಾದರು. ಅವರಿಗೆ 92 ವರ್ಷವಾಗಿತ್ತು. ಕೇಂದ್ರ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್ಎಂ ಕೃಷ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಆದರೆ, ತಮ್ಮ ರಾಜಕೀಯ ಜೀವನದ ಕೊನೆಯ ವರ್ಷಗಳನ್ನು ಬಿಜೆಪಿಯಲ್ಲಿ ಕಳೆದರು. 1932ರ ಮೇ 1ರಂದು ಮಂಡ್ಯ ಜಿಲ್ಲೆಯ ಸೋಮನಹಳ್ಳಿಯಲ್ಲಿ ಜನಿಸಿದ ಎಸ್ಎಂ ಕೃಷ್ಣ ಮೈಸೂರಿನ ಮಹಾರಾಜ ಕಾಲೇಜಿನಿಂದ ಪದವಿ ಪಡೆದರು. ಶಾಸಕರಾಗಿ, ಸಂಸದರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಎಸ್ಎಂ ಕೃಷ್ಣ ಕರ್ನಾಟಕದ ಅದರಲ್ಲೂ ಬೆಂಗಳೂರಿನ ಬೆಳವಣಿಗೆಗೆ ನೀಡಿದ ಕೊಡುಗೆ ಗಣನೀಯವಾದುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Tue, 31 December 24