‘ರಾಮಮಂದಿರ ದೇಣಿಗೆ ಹಗರಣದಲ್ಲಿ ಮೌನವೇಕೆ?’; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ, ಖರ್ಗೆ ಪತ್ರ

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಂಸತ್ತಿನ ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಈ ಹಗರಣದ ಕುರಿತು ಪ್ರಧಾನಿಯವರ ಮೌನ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡುವುದು ಪ್ರಧಾನಿಯ ಕರ್ತವ್ಯ ಎಂದು ಆಗ್ರಹಿಸಿದ್ದಾರೆ.

‘ರಾಮಮಂದಿರ ದೇಣಿಗೆ ಹಗರಣದಲ್ಲಿ ಮೌನವೇಕೆ?’; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ, ಖರ್ಗೆ ಪತ್ರ
Mallikarjun Kharge And Rahul Gandhi
Image Credit source: PTI

Updated on: Jul 19, 2026 | 12:59 PM

ಮುಖ್ಯಾಂಶಗಳು

  • ರಾಮ ಮಂದಿರ ದೇಣಿಗೆ ಹಗರಣದ ಕುರಿತು ಕಾಂಗ್ರೆಸ್ ಅಸಮಾಧಾನ
  • ಈ ಹಗರಣದಲ್ಲಿ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
  • ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕರಿಂದ ಪತ್ರ

ನವದೆಹಲಿ, ಜುಲೈ 19: ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ (Ram Mandir Donation Theft) ಭಾರಿ ಪ್ರಮಾಣದ ಕಳ್ಳತನ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಅವರು, ತಮ್ಮ ಕಷ್ಟದ ಗಳಿಕೆಯನ್ನು ಭಕ್ತಿಯಿಂದ ದಾನ ಮಾಡಿದ ಲಕ್ಷಾಂತರ ಭಕ್ತರಿಗೆ ಈ ಕಳ್ಳತನದಿಂದ ವಂಚನೆಯಾಗಿದೆ. ಈ ಹಗರಣದಲ್ಲಿ ನೀವು ಮೌನ ವಹಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ತಾವು ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, “ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಸಾವಿರಾರು ಕೋಟಿ ರೂ.ಗಳ ಕಳ್ಳತನ ನಡೆದಿರುವುದು ನಿಮ್ಮ ಗಮನಕ್ಕೆ ಬಂದಿದೆ. ಅಪಾರ ನಂಬಿಕೆ, ಭಕ್ತಿ ಮತ್ತು ವಿಶ್ವಾಸದಿಂದ ತಮ್ಮ ಕಷ್ಟದ ಹಣವನ್ನು ದೇಣಿಗೆಯಾಗಿ ನೀಡಿದ ಲಕ್ಷಾಂತರ ಭಕ್ತರಿಗೆ ಈ ಕಳ್ಳತನದಿಂದಾಗಿ ದ್ರೋಹ ಬಗೆದಂತಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಣಿಗೆ ಕಳ್ಳತನಕ್ಕೆ ಪ್ರಾಯಶ್ಚಿತ್ತ; ರಾಮ ಮಂದಿರದಲ್ಲಿ 10 ದಿನದ ಶುದ್ಧೀಕರಣ ಆರಂಭ

ಸರ್ಕಾರದಿಂದಲೇ ಸದಸ್ಯರ ನೇಮಕ:

ಹಾಗೇ, ರಾಮ ಮಂದಿರ ಟ್ರಸ್ಟ್‌ನ ರಚನೆಯ ಕುರಿತು ಪ್ರಶ್ನಿಸಿರುವ ಕಾಂಗ್ರೆಸ್ ನಾಯಕರು, ಪ್ರಧಾನಿಯವರ ಮೌನವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ನೀವು ಸಂಸತ್ತಿನಲ್ಲಿ ಈ ಟ್ರಸ್ಟ್ ರಚನೆಯನ್ನು ಘೋಷಿಸಿದ್ದೀರಿ. ಇದರ ಸದಸ್ಯರನ್ನು ಸಂಪೂರ್ಣವಾಗಿ ನಿಮ್ಮ ಸರ್ಕಾರವೇ ನೇಮಿಸಿದೆ. ಈ ಟ್ರಸ್ಟ್‌ನ ಸದಸ್ಯರು ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಎಂಬುದು ಸಾರ್ವಜನಿಕವಾಗಿ ತಿಳಿದಿರುವ ವಿಚಾರ. ಇದರ ಅಪಕೀರ್ತಿಗೆ ಒಳಗಾಗಿರುವ ಮಾಜಿ ಪ್ರಧಾನ ಕಾರ್ಯದರ್ಶಿ ಕೂಡ ನಿಮ್ಮ ಆಪ್ತರಾಗಿದ್ದರು. ಹೀಗಿರುವಾಗ ಈ ದೇಣಿಗೆ ವಂಚನೆಯಲ್ಲಿ ನೀವು ಯಾವುದೇ ಪ್ರತಿಕ್ರಿಯೆ ನೀಡದಿರುವುದು ಬೇರೆ ರೀತಿಯ ಸಂದೇಶ ರವಾನಿಸುವ ಸಾಧ್ಯತೆಯಿದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ತನಿಖೆಗೆ ಕಾಂಗ್ರೆಸ್ ಆಗ್ರಹ:

“ಇಂತಹ ದೊಡ್ಡ ಅಪರಾಧದ ಸಂದರ್ಭದಲ್ಲೂ ನಿಮ್ಮ ಮೌನವನ್ನು ಒಪ್ಪಲು ಸಾಧ್ಯವಿಲ್ಲ. ಇದಕ್ಕೆ ಹೊಣೆಗಾರರಾದವರಿಗೆ ಶಿಕ್ಷೆಯಾಗಬೇಕು. ನಗದು, ಚಿನ್ನ, ಬೆಳ್ಳಿ ಸೇರಿದಂತೆ ಎಲ್ಲಾ ಕಾಣಿಕೆಗಳ ನಿರ್ವಹಣೆಯನ್ನು ಒಳಗೊಂಡಂತೆ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಬಗ್ಗೆ ತಕ್ಷಣವೇ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಆದೇಶಿಸಬೇಕು” ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನಿಷ್ಪಕ್ಷಪಾತ ತನಿಖೆಗೆ ಆರ್​ಎಸ್​ಎಸ್​ ಕರೆ

ಟ್ರಸ್ಟ್‌ನ ಲೆಕ್ಕಪತ್ರಗಳನ್ನು ಸಾರ್ವಜನಿಕಗೊಳಿಸಿ:

ಭಕ್ತರ ಕಾಣಿಕೆಗಳು ಹೇಗೆ ಬಳಕೆಯಾಗಿವೆ ಎಂಬುದನ್ನು ಪ್ರತಿಯೊಬ್ಬ ಭಕ್ತನೂ ತಿಳಿದುಕೊಳ್ಳುವಂತಾಗಲು ತನಿಖೆಯ ವರದಿ ಮತ್ತು ಟ್ರಸ್ಟ್‌ನ ಲೆಕ್ಕಪತ್ರಗಳನ್ನು ತಕ್ಷಣವೇ ಸಾರ್ವಜನಿಕಗೊಳಿಸಬೇಕು ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಆಗ್ರಹಿಸಿದ್ದಾರೆ. “ಯಾರೇ ತಪ್ಪಿತಸ್ಥರಾಗಿದ್ದರೂ, ಅವರ ಹುದ್ದೆ ಅಥವಾ ಪ್ರಭಾವವನ್ನು ಲೆಕ್ಕಿಸದೆ ಕಠಿಣ ಕ್ರಮ ಕೈಗೊಳ್ಳಬೇಕು. ನಿಮ್ಮ ಸರ್ಕಾರದ ಮತ್ತು ಟ್ರಸ್ಟ್‌ನ ವಿಶ್ವಾಸಾರ್ಹತೆಯು ನೀವು ಎಷ್ಟು ಪಾರದರ್ಶಕವಾಗಿ ಮತ್ತು ವೇಗವಾಗಿ ಕ್ರಮ ಕೈಗೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಭಾರತದ ಜನರು ಇದನ್ನು ಗಮನಿಸುತ್ತಿದ್ದಾರೆ. ಜೈ ಹಿಂದ್!” ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

ರಾಮಮಂದಿರ ದೇಣಿಗೆ ಹಗರಣ:

ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸ್ವೀಕರಿಸಿದ ದೇಣಿಗೆಯಲ್ಲಿ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದೆ. ವಿಶೇಷ ತನಿಖಾ ತಂಡ (SIT) ಈ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ತನ್ನ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವ ನಿರೀಕ್ಷೆಯಿದೆ. ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈಗಾಗಲೇ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲಾಗಿದೆ.

ರಾಮಮಂದಿರದ ಕಾಣಿಕೆ ಹಣದ ಕಳ್ಳತನಕ್ಕೆ ಸಂಬಂಧಿಸಿದಂತೆ ತನಿಖೆಯು ತೀವ್ರಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಕಾಣಿಕೆ ಹಣವನ್ನು ಎಣಿಸುವ ಕಾರ್ಯದಲ್ಲಿ ತೊಡಗಿದ್ದ ಸುಮಾರು 30ಕ್ಕೂ ಹೆಚ್ಚು ಸಿಬ್ಬಂದಿಗಳ ಮೇಲೆ ತನಿಖಾ ಸಂಸ್ಥೆಗಳು ತೀವ್ರ ನಿಗಾ ಇಟ್ಟಿವೆ. ವಿಚಾರಣೆಗೆ ಒಳಗಾಗಿರುವ ಹಲವು ಸಿಬ್ಬಂದಿಗಳನ್ನು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಪದಾಧಿಕಾರಿಗಳು ಅಥವಾ ಅವರ ಆಪ್ತರ ಶಿಫಾರಸಿನ ಮೇರೆಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Sun, 19 July 26

Follow Us