Analysis: ಕಾಶ್ಮೀರದಲ್ಲಿ ಅಲ್ಪಸಂಖ್ಯಾತರ ಹತ್ಯೆ: ಕಾಶ್ಮೀರದ ಸ್ಥಿರತೆಗೆ ಧಕ್ಕೆಯಾದೀತು, ಆದರೆ 90ರ ದಶಕದಷ್ಟು ಪರಿಸ್ಥಿತಿ ಹದಗೆಡದು
ಅಫ್ಘಾನಿಸ್ತಾನದ ವಿದ್ಯಮಾನ ಕಾಶ್ಮೀರದ ಮೇಲೆ ಪರಿಣಾಮ ಬೀರಬಲ್ಲದು ಎಂಬ ವಿಶ್ಲೇಷಣೆಗಳಿಗೆ ಪೂರಕವಾಗಿ ಹಲವು ಘಟನೆಗಳು ವರದಿಯಾಗಿವೆ. ಅಂದು (90ರ ದಶಕದಲ್ಲಿ) ಆದಂಥ ಅನಾಹುತಗಳು ಇಂದಿನ ಸಂದಿಗ್ಧ-ಸಂಕೀರ್ಣ ಸಂದರ್ಭದಲ್ಲಿ ಮರುಕಳಿಸುವುದು ಭಾರತದ ಹಿತಕ್ಕೆ ಖಂಡಿತ ಪೂರಕವಾದುದಲ್ಲ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಏಳು ಮಂದಿ ನಾಗರಿಕರನ್ನು ಇತ್ತೀಚೆಗೆ ಕೊಂದಿದ್ದಾರೆ. ಈ ಬೆಳವಣಿಗೆಯ ನಂತರ ಕಾಶ್ಮೀರದ ಭದ್ರತಾ ಪರಿಸ್ಥಿತಿ ಹದಗೆಡುತ್ತಿದ್ದು, 90ರ ದಶಕದಲ್ಲಿ ಕಾಣಿಸಿಕೊಂಡಿದ್ದ ಪರಿಸ್ಥಿತಿಗೆ ಈಗಿನ ಬೆಳವಣಿಗೆಯನ್ನು ತಳಕು ಹಾಕಲಾಗುತ್ತಿದೆ. ಹತ್ಯೆಯಾದ ಏಳು ಮಂದಿಯ ಪೈಕಿ ಆರು ಜನರು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ. ಯಾವುದೇ ನಿರ್ಣಯಕ್ಕೆ ಬರುವ ಮೊದಲು ಹಿನ್ನೆಲೆಯಲ್ಲಿರುವ ಹಲವು ವಿಚಾರಗಳನ್ನು ಪರಿಶೀಲಿಸಬೇಕಾಗುತ್ತದೆ ಎನ್ನುತ್ತಾರೆ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹುಸೇನಿ.
ಹಲವು ವರ್ಷಗಳಿಂದ ಜಮ್ಮು ಕಾಶ್ಮೀರದಲ್ಲಿ ವಿವಿಧ ಸಮುದಾಯಗಳು ಒಂದೇ ಪ್ರದೇಶದಲ್ಲಿ ನೆಲೆಸಿವೆ. ಕಣಿವೆಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚು. ಆದರೆ ಬಹುಕಾಲದಿಂದ ಹಿಂದೂ ಮತ್ತು ಸಿಖ್ ಸಮುದಾಯಗಳಿಗೆ ಸೇರಿದವರೂ ಇಲ್ಲಿದ್ದರು. ಹಿಂದೂ ಮತ್ತು ಸಿಖ್ ಧರ್ಮಗಳ ಪವಿತ್ರ ಸ್ಥಳಗಳು ಕಣಿವೆಯ ಇತಿಹಾಸ ಮತ್ತು ಪೌರಾಣಿಕ ಕಥೆಗಳ ಭಾಗವೇ ಆಗಿವೆ. ವಿವಿಧ ಧರ್ಮಗಳಿಗೆ ಸೇರಿದ ಜನರು ಒಟ್ಟಿಗೆ ಬದುಕುವುದು ಪಾಕಿಸ್ತಾನದ ಉದ್ದೇಶಗಳಿಗೆ ಪೂರಕವಲ್ಲ. ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕೆಂದು ಹಲವು ಸಂಚು ನಡೆಸುತ್ತಿರುವ ಪಾಕಿಸ್ತಾನವು, ಸ್ಥಳೀಯ ಮುಸ್ಲಿಮರು ಇತರ ಧರ್ಮೀಯರು ಹಾಗೂ ಭಾರತದ ಇತರ ರಾಜ್ಯಗಳಿಂದ ಬಂದಿರುವವರ ವಿರುದ್ಧ ಧ್ವನಿ ಎತ್ತಬೇಕೆಂದು ಚಿತಾವಣೆ ಮಾಡುತ್ತಲೇ ಇದೆ.
ಇಸ್ಲಾಂ ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ ಬೇಕಾದಂತೆ ಬಾಗಿಸಿಕೊಳ್ಳುವ ಕಲೆಯಲ್ಲಿ ಪಾಕಿಸ್ತಾನ ನಿಷ್ಣಾತ. ಇದೀಗ ಕಾಶ್ಮೀರದ ವಿಚಾರದಲ್ಲಿಯೂ ಪಾಕ್ ಇದೇ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಕಾಶ್ಮೀರಿ ಮುಸ್ಲಿಮರ ಇಸ್ಲಾಂ ಧರ್ಮವನ್ನೇ ದಾಳವಾಗಿಸಿಕೊಂಡು, ತನ್ನ ಪರ ಒಲಿಸಿಕೊಂಡು, ಅವರ ನಿಷ್ಠೆ ಬದಲಿಸುವುದು ಪಾಕಿಸ್ತಾನದ ಉದ್ದೇಶ. ಈ ಅತಿದೊಡ್ಡ ಯೋಜನೆಯ ಭಾಗವಾಗಿ ಕಾಶ್ಮೀರದಲ್ಲಿ ನೆಲೆಸಿರುವ ಇತರ ಧರ್ಮೀಯರನ್ನು ನಿರ್ಮೂಲಗೊಳಿಸಲು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಜನವರಿ 1990ರಲ್ಲಿ ಇದೇ ಕಾರ್ಯತಂತ್ರವನ್ನು ಕಾಶ್ಮೀರಿ ಪಂಡಿತರ ಮೇಲೆ ಪಾಕ್ ಪ್ರಯೋಗಿಸಿತು. ಜನಾಂತೀಯ ಹತ್ಯಾಕಾಂಡಕ್ಕೆ ಬೆದರಿದ ಸಾವಿರಾರು ಮಂದಿ ಕಾಶ್ಮೀರ ಕಣಿವೆಯಿಂದ ಹೊರ ನಡೆಯಬೇಕಾಯಿತು. ಕೆಲವರು ಉಗ್ರರಿಗೆ ಹೆದರದೇ ಕಾಶ್ಮೀರದಲ್ಲಿಯೇ ಉಳಿದರಾದರೂ, ಸರ್ಕಾರಕ್ಕೆ ಅವರ ಹಿತಾಸಕ್ತಿ ಕಾಪಾಡಲು ಸಾಧ್ಯವಾಗಲಿಲ್ಲ. ಇಂದಿಗೂ ಕಾಶ್ಮೀರದ ಸಿಖ್ಖರು ಗುಂಪುಗುಂಪಾಗಿ ಅಲ್ಲಲ್ಲಿ ನೆಲೆಸಿದ್ದಾರೆ. ಆದರೆ ಕಾಶ್ಮೀರಿ ಪಂಡಿತರು ಮಾತ್ರ ಬಹುಸಂಖ್ಯಾತರ ನಡುವೆ ಹಂಚಿಹೋಗಿದ್ದಾರೆ.
ಮುಸ್ಲಿಮೇತರ ಜನಾಂಗಗಳನ್ನು ಕಾಶ್ಮೀರದಿಂದ ಹೊರಹಾಕುವ ಪಾಕಿಸ್ತಾನದ ಪ್ರಯತ್ನವು 90ರ ದಶಕದಿಂದಲೂ ಮುಸುಕಿನ ಯುದ್ಧವಾಗಿ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಲೇ ಇದೆ. ಕಾಶ್ಮೀರಿ ಪಂಡಿತರು, ಹಿಂದೂ ವಲಸೆ ಕಾರ್ಮಿಕರು ಅಥವಾ ಬೀದಿ ವ್ಯಾಪಾರಿಗಳು, ಸಿಖ್ ಸಮುದಾಯಕ್ಕೆ ಸೇರಿದವರನ್ನು ಗುರಿಯಾಗಿಸಿ ಹತ್ಯೆಗಳು ನಡೆಯುತ್ತಲೇ ಇವೆ. ಇದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ಅವರು ಕಾಶ್ಮೀರದಿಂದ ಹೊರನಡೆಯಬೇಕು, ಎರಡನೆಯದ್ದು ತಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ ಭದ್ರತಾ ಸಿಬ್ಬಂದಿಗೆ ನಾವೆಷ್ಟು (ಭಯೋತ್ಪಾದಕರು) ಉಗ್ರವಾಗಿ ಪ್ರತಿಕ್ರಿಯಿಸಬಲ್ಲೆವು ಎಂದು ಸಾರಿಹೇಳುವುದು. ಒಂದು ನಿರ್ದಿಷ್ಟ ಪ್ರದೇಶದಲ್ಲಿ ನಾವು ಪ್ರಬಲರಾಗಿದ್ದೇವೆ, ನಮ್ಮ ಮಾತೇ ನಡೆಯುತ್ತದೆ ಎಂದು ಸಾರಿ ಹೇಳಲು ಲಷ್ಕರ್-ಎ-ತಯ್ಯಬಾ ಉಗ್ರರು 1990 ಮತ್ತು 2000ನೇ ಇಸವಿಯಲ್ಲಿ ಇಂಥ ತಂತ್ರಗಳನ್ನು ಅನುಸರಿಸುತ್ತಿದ್ದರು. ಹೀಗಾಗಿಯೇ ವಂದಮಾ, ನಂದಿಮಾರ್ಗ್ ಮತ್ತು ಚಿತ್ತಿಸಿಂಗ್ಪುರ ಪ್ರದೇಶಗಳು ಕಾಶ್ಮೀರ ಭಯೋತ್ಪಾದನೆಯ ಇತಿಹಾಸದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಸಿದ ದೊಡ್ಡಮಟ್ಟದ ಹಿಂಸಾಚಾರದ ಮೈಲುಗಲ್ಲುಗಳಾಗಿ ಉಳಿದುಬಿಟ್ಟಿವೆ. ಇಂಥ ಉದ್ದೇಶಿತ ಹತ್ಯೆಗಳಿಗೆ ಅಲ್ಪಸಂಖ್ಯಾತ ಸಮುದಾಯಗಳೇ ಸುಲಭದ ಗುರಿಯಾಗುತ್ತಿವೆ ಎನ್ನುವುದನ್ನು ಒಪ್ಪಲೇ ಬೇಕಾಗುತ್ತದೆ.
ಇದರ ಜೊತೆಗೆ 2017-18ರಲ್ಲಿ ಮತ್ತೊಂದು ರೀತಿಯ ವಿದ್ಯಮಾನ ಕಾಶ್ಮೀರದಲ್ಲಿ ಕಾಣಿಸಿಕೊಂಡಿತ್ತು. ರಜೆಯ ಮೇಲೆ ಹಳ್ಳಿಗಳಿಗೆ ಬಂದಿದ್ದ ಭಾರತೀಯ ಸೇನೆಯ ಯೋಧರು ಹಾಗೂ ಪೊಲೀಸರನ್ನು ಉಗ್ರರು ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದರು. 2017-18ರಲ್ಲಿ ಇಂಥ ಹತ್ಯೆಗಳು ಹೆಚ್ಚಾಗಿದ್ದವು. ಇಂಥ ಯೋಧರು ಅಥವಾ ಪೊಲೀಸರಿಗೆ ಭದ್ರತೆ ಒದಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಕಾಶ್ಮೀರದ ನೂರಾರು ಹಳ್ಳಿಗಳಿಗೆ ಇಂಥವರು ಬಂದು-ಹೋಗಿ ಮಾಡುತ್ತಿರುತ್ತಾರೆ. ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಯ ಒತ್ತಡ ಹೆಚ್ಚಾದ ನಂತರ ತಮ್ಮ ಅಸ್ತಿತ್ವ ಸಾಬೀತುಪಡಿಸಿಕೊಳ್ಳಲು ಉಗ್ರರು ನಿಶ್ಯಸ್ತ್ರರಾಗಿ ಹಳ್ಳಿಗಳಲ್ಲಿ ಸಿಗುತ್ತಿದ್ದ ಇಂಥ ಸೈನಿಕರು ಅಥವಾ ಪೊಲೀಸರನ್ನು ಕೊಲ್ಲುತ್ತಿದ್ದರು. ಭಾರತೀಯ ಸೇನೆ ಮತ್ತು ಭದ್ರತಾ ಸಿಬ್ಬಂದಿ ಭಯೋತ್ಪಾದಕರನ್ನು ವ್ಯಾಪಕವಾಗಿ ಹತ್ತಿಕ್ಕದ ನಂತರ ಅವರು ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಇಂಥ ಕೃತ್ಯಗಳಿಗೆ ಕೈಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರ ಹತ್ಯೆ ಹೆಚ್ಚಾಗಲು ಈ ಬೆಳವಣಿಗೆಯೇ ಮುಖ್ಯ ಕಾರಣವಾಗಿರಬಹುದು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯು ಬಹುತೇಕ ನಿಯಂತ್ರಣದಲ್ಲಿದೆ. ಆದರೆ ಸಕ್ರಿಯರಾಗಿರುವ ಉಗ್ರರು ಹಾಗೂ ಉಗ್ರಗಾಮಿ ಸಂಘಟನೆಗಳ ಜಾಲಗಳನ್ನು ಗುರುತಿಸಿ ನಾಶಪಡಿಸುವ ಭದ್ರತಾ ಪಡೆಗಳ ಪ್ರಯತ್ನಕ್ಕೆ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಈ ಸಂಘಟನೆಗಳ ಬೆಂಬಲಿಗರ ಜಾಲವೇ ಉಗ್ರಗಾಮಿಗಳಿಗೆ ಅಗತ್ಯ ನೆರವು ಒದಗಿಸುತ್ತಿದೆ. ಹೀಗಾಗಿಯೇ ಗಡಿಯಿಂದ ಒಳನುಸುಳುವ ಪ್ರಮಾಣ ಅತ್ಯಂತ ಕಡಿಮೆಯಿದ್ದರೂ, ಸ್ಥಳೀಯವಾಗಿ ಹೊಸಬರು ಉಗ್ರಗಾಮಿ ಗುಂಪುಗಳಿಗೆ ಸೇರಿಕೊಳ್ಳುವ ಸಾಧ್ಯತೆ ಕ್ಷೀಣಿಸಿದ್ದರೂ, ಶಸ್ತ್ರಾಸ್ತ್ರಗಳ ಕೊರತೆಯಿದ್ದರೂ ಉಗ್ರಗಾಮಿಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದಾರೆ. ನಾನು ಖಂಡಿತ ಭಾರತೀಯ ಭದ್ರತಾ ಸಿಬ್ಬಂದಿಯ ಕಾರ್ಯಾಚರಣೆಗಳ ಬಗ್ಗೆ ಕೇವಲವಾಗಿ ಮಾತನಾಡುತ್ತಿಲ್ಲ. ಗಡಿಯಲ್ಲಿ ಒಳನುಸುಳುವಿಕೆ ತಡೆಯುವ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ರಾತ್ರೋರಾತ್ರಿ ಫಲ ನೀಡುವುದಿಲ್ಲ ಎಂಬುದು ತಿಳಿದಿರುವ ಸಂಗತಿಯೇ ಆಗಿದೆ.
90ರ ದಶಕದಷ್ಟು ತೀವ್ರವಾಗಿ ಈ ಬಾರಿ ಭಯೋತ್ಪಾದಕ ಗುಂಪುಗಳು ಕಾರ್ಯಾಚರಣೆ ನಡೆಸಲಾರವು. ಪ್ರಸ್ತುತ ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯ ಉಪಸ್ಥಿತಿ ಗಮನಾರ್ಹ ಪ್ರಮಾಣದಲ್ಲಿದೆ. ಮಾತ್ರವಲ್ಲ, ಪರಿಸ್ಥಿತಿಯೂ ಸಾಕಷ್ಟು ನಿಯಂತ್ರಣದಲ್ಲಿದೆ. ಭಯೋತ್ಪಾದಕರು ಈಗ ಗಳಿಸುತ್ತಿರುವ ಯಶಸ್ಸು ದೀರ್ಘಕಾಲಕ್ಕೆ ಮುಂದುವರಿಯಲಾರದು. ಅಮಾಯಕರನ್ನು ಕೊಲ್ಲುತ್ತಿರುವ ಉಗ್ರರನ್ನು ಗುರುತಿಸಿ, ಭದ್ರತಾ ಪಡೆಗಳು ಹೊಸಕಿಹಾಕುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವುದು ಇತ್ತೀಚಿನ ಬೆಳವಣಿಗೆಗಳು ಮತ್ತು ಅದರಿಂದ ಪಾಕಿಸ್ತಾನಕ್ಕೆ ಆಗಿರುವ ಅನುಕೂಲದ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಮರುಜೀವ ಕೊಡುವ ಪಾಕಿಸ್ತಾನದ ಪ್ರಯತ್ನಕ್ಕೆ ಪೂರಕವಾಗಿ ಕಾಶ್ಮೀರದಲ್ಲಿರುವ ಭಯೋತ್ಪಾದಕರಿಗೆ ಅಫ್ಘಾನಿಸ್ತಾನದಿಂದ ಪ್ರೇರಣೆ ಸಿಗುತ್ತಿದೆ. ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲುವುದು ಭಯೋತ್ಪಾದಕರ ಪಾಲಿಗೆ ಕಡಿಮೆ ಹೂಡಿಕೆಯಿಂದ, ಕಡಿಮೆ ರಿಸ್ಕ್ನಿಂದ ಸಿಗುವ ಹೆಚ್ಚು ಲಾಭದಂಥ ಅನುಕೂಲಕರ ಅವಕಾಶ ಸಿಗುತ್ತದೆ. ಕಾಶ್ಮೀರದಲ್ಲಿ ಎಲ್ಲವೂ ಸರಿಯಿಲ್ಲ, ಅಶಾಂತಿ ನೆಲೆಸಿದೆ, ಭಾರತ ಸರ್ಕಾರಕ್ಕೆ ಅಲ್ಲಿನ ಜನರ ಬೆಂಬಲ ಇಲ್ಲ ಎಂದೆಲ್ಲಾ ತೋರಿಸಿಕೊಳ್ಳಲು, ಹೆಚ್ಚು ಪ್ರಚಾರ ಪಡೆದುಕೊಳ್ಳಲು ಅಲ್ಪಸಂಖ್ಯಾತರ ಹತ್ಯೆಯನ್ನು ಒಂದು ತಂತ್ರವಾಗಿ ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಮುಂದೊಂದು ದಿನ ಒಳ್ಳೆಯ ಅವಕಾಶ ಸಿಗುವವರೆಗೂ ಕಾಶ್ಮೀರದಲ್ಲಿ ಹಿಂಸಾಚಾರವನ್ನು ಜೀವಂತ ಇರಿಸಬೇಕು ಎಂಬ ಪಾಕಿಸ್ತಾನದ ಉದ್ದೇಶಕ್ಕೆ ಈ ಹತ್ಯೆಗಳು ಪೂರಕವಾಗಿವೆ.
ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ನಿಸ್ತೇಜಗೊಂಡಿವೆ. ಇಂಥ ಸವಾಲಿನ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಮೇಲಿನ ಹೊಣೆಗಾರಿಕೆ ಹೆಚ್ಚು. ಮುಂದೇನಾಗಬಹುದು ಎಂಬ ಮುಂಚಿತವಾಗಿಯೇ ವಿಶ್ಲೇಷಿಸಿ ಕಾರ್ಯಾಚರಣೆ ನಡೆಸಲು ಚಾಕಚಕ್ಯತೆ, ಪರಿಶ್ರಮ ಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೂ ಅತ್ಯಗತ್ಯ. ಅಂದು (90ರ ದಶಕದಲ್ಲಿ) ಆದಂಥ ಅನಾಹುತಗಳು ಇಂದಿನ ಸಂದಿಗ್ಧ-ಸಂಕೀರ್ಣ ಸಂದರ್ಭದಲ್ಲಿ ಮರುಕಳಿಸುವುದು ಭಾರತದ ಹಿತಕ್ಕೆ ಖಂಡಿತ ಪೂರಕವಾದುದಲ್ಲ.
(ಲೇಖಕರು: ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್)
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ: ವಿದೇಶಾಂಗ ವ್ಯವಹಾರಗಳ ಇಲಾಖೆ ಆತಂಕ ಇದನ್ನೂ ಓದಿ: Missile Power: ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆ, ಮೇಲುಗೈಗೆ ಸಾಕ್ಷಿಯಾದ ಸೂಪರ್ಸಾನಿಕ್ ಬ್ರಹ್ಮೋಸ್, ಸಬ್ಸಾನಿಕ್ ನಿರ್ಭಯ್