- Kannada News Photo gallery A Youth Commits Suicide For His Lover In Friend House at bilagi News In Kannada
ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಗೆಳೆಯನ ಮನೆಯಲ್ಲೇ ಪ್ರಿಯಕರ ದುರಂತ ಸಾವು
ಯುವಕನೋರ್ವ ತನ್ನ ಪ್ರೇಯಸಿಯೊಂದಿಗೆ ತನ್ನ ಗೆಳೆಯನ ಮನೆಗೆ ಹೋಗಿದ್ದ. ಆದರೆ ಪ್ರೇಯಸಿ ಇರುವಾಗಲೇ ಗೆಳೆಯನ ಜೊತೆಗೆ ಪ್ರಿಯಕರ ಎಣ್ಣೆ ಪಾರ್ಟಿ ಮಾಡಲು ಶುರು ಮಾಡಿದ್ದಾನೆ. ಇದರಿಂದ ಕೋಪಗೊಂಡ ಪ್ರೇಯಸಿ ಅಲ್ಲಿಂದ ಮನೆಗೆ ಹೋಗಿದ್ದಳು. ಇದರಿಂದ ಬೇಜಾರು ಮಾಡಿಕೊಂಡ ಪ್ರಿಯಕರ, ವಾಪಸ್ ಬರದಿದ್ದರೆ ನೇಣು ಹಾಕಿಕೊಂಡು ಸಾಯುವುದಾಗಿ ವಿಡಿಯೊ ಕಾಲ್ ಮಾಡಿದ್ದಾನೆ. ಅದರಂತೆ ಪ್ರೇಯಸಿ ವಾಪಸ್ ಬರುವಷ್ಟರಲ್ಲಿ ಪ್ರಿಯಕರ ಪ್ರಾಣ ಕಳೆದುಕೊಂಡಿದ್ದಾನೆ. ಬಾಗಲಕೋಟೆ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
Updated on: Jan 16, 2025 | 6:36 PM

ಪ್ರೇಯಸಿಗೆ ಹೆದರಿಸಲು ಹೋಗಿ ಪ್ರಿಯಕರ ದುರಂತ ಸಾವು ಕಂಡಿದ್ದಾನೆ. ಪ್ರೇಯಸಿ ಸಿಟ್ಟು ಮಾಡಿಕೊಂಡು ಹೋಗಿದ್ದಕ್ಕೆ ಪ್ರಿಯಕರ ದುಡುಕಿನ ನಿರ್ಧಾರ ಕೈಗೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಹೌದು...ಪ್ರೇಯಸಿ ಬರಲಿಲ್ಲವೆಂದು ಅಜಯ್ ಎನ್ನುವಾತ, ಸ್ನೇಹಿತನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಜಯಪುರ ಜಿಲ್ಲೆಯ ಬೀಳಗಿ ತಾಲೂಕಿನ ನಿಂಗಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಜಯ್ ಹಾಗೂ ಅನುಪಮ(ಹೆಸರು ಬದಲಾಯಿಸಲಾಗಿದೆ) ಇಬ್ಬರು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರ ನಿವಾಸಿಗಳು. ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದು, ನಿನ್ನೆ (ಜನವರಿ 16) ಅಜಯ್ ಹಾಗೂ ಪ್ರೇಯಸಿ ಅನುಪಮ ಜೊತೆಗೆ ಬೀಳಗಿ ತಾಲ್ಲೂಕಿನ ನಿಂಗಾಪುರದ ಸ್ನೇಹಿತ ನವೀನ್ ಮನೆಗೆ ಹೋಗಿದ್ದಾರೆ.

ಆದ್ರೆ, ಮನೆಯಲ್ಲಿ ಪ್ರೇಯಸಿ ಮುಂದೆನೇ ಪ್ರಿಯಕರ ತನ್ನ ಗೆಳೆಯನೊಂದಿಗೆ ಸೇರಿಕೊಂಡು ಮದ್ಯ ಸೇವನೆ ಮಾಡಲು ಶುರು ಮಾಡಿದ್ದಾನೆ. ಇದಕ್ಕೆ ಸಿಟ್ಟಾದ ಅನುಪಮ ಅಲ್ಲಿಂದ ಹೋಗಲು ಎದ್ದಿದ್ದಾಳೆ. ಆಗ ಅಜಯ್ ಸ್ನೇಹಿತ ನವೀನ್ ಮುಧೋಳಕ್ಕೆ ಬಿಟ್ಟು ಬರುತ್ತೇನೆಂದು ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದ.

ಆಗ ಅಜಯ್ ಅನುಪಮಗೆ ವಿಡಿಯೊ ಕಾಲ್ ಮಾಡಿ ವಾಪಸ್ ಬರದಿದ್ದರೆ ನೇಣು ಹಾಕಿಕೊಂಡು ಸಾಯೋದಾಗಿ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಅನುಪಮ ಹಾಗೂ ನವೀನ್ ಕೂಡಲೇ ವಾಪಸ್ ಬರುವಷ್ಟರಲ್ಲಿ ಅಜಯ್ ನೇಣು ಹಾಕಿಕೊಂಡಿದ್ದಾನೆ.

ಇನ್ನು ನೇಣು ಹಾಕಿಕೊಳ್ತೇನೆ ಎನ್ನುತ್ತಲೇ ನವೀನ್ ಹಾಗೂ ಅನು ತಕ್ಷಣ ವಾಪಸ್ ಬಂದಿದ್ದರು. ಅಷ್ಟರಾಗಲೇ ಅಜಯ್ ಕುಣಿಕೆಯಲ್ಲಿ ನೇತಾಡುತ್ತಿದ್ದ. ಸ್ವಲ್ಪ ಉಸಿರಾಟ ಸಹ ಇತ್ತು. ತಕ್ಷಣವೇ ಬೈಕ್ ಮೇಲೆ ಕೂರಿಸಿಕೊಂಡು ಅರಕೇರಿ ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾನೆ.

ಆದರೆ ಅಷ್ಟರಾಗಲೇ ಅಜಯ್ ಉಸಿರು ನಿಂತಿದೆ. ನಂತರ ಅರಕೇರಿ ಮಾರ್ಗ ಮಧ್ಯೆ ನವೀನ್, ಅಜಯ್ ಶವ ಹಾಗೂ ಅನುಪಮಳನ್ನು ಬಿಟ್ಟು ಓಡಿ ಹೋಗಿದ್ದಾನೆ. ಬೀಳಗಿ ಪೊಲೀಸರು ಸದ್ಯ ಪ್ರೇಯಿಸಿ ಹಾಗೂ ಮೃತ ಅಜಯ್ ಗೆಳೆಯ ನವೀನ್ನನ್ನು ವಶಕ್ಕೆ ಪಡೆದಿದ್ದಾರೆ.

ಅಜಯ್ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ. ಹೊಡೆದು ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ಶವ ಬೇರೆ ಕಡೆ ಸಾಗಿಸೋಕೆ ಹೊರಟಿರುವ ಸಂಶಯವಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಯುವಕ ದುಡುಕಿ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಜಾರಿದನಾ? ಇಲ್ಲ ಕುಟುಂಬಸ್ಥರ ಆರೋಪದ ಪ್ರಕಾರ ಕೊಲೆ ನಡೆದಿದೆಯಾ ಎನ್ನುವುದನ್ನು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.



















