ಒಂದೇ ಪಂದ್ಯದಲ್ಲಿ 5 ವಿಶ್ವ ದಾಖಲೆ ಬರೆದ ಆಸ್ಟ್ರೇಲಿಯಾ..!
Scotland vs Australia: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತು. 155 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡ 9.4 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದೆ. ಆ ದಾಖಲೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ...
Updated on: Sep 05, 2024 | 1:09 PM

ಎಡಿನ್ಬರ್ಗ್ನ ಗ್ರೇಂಜ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಲವು ದಾಖಲೆಗಳನ್ನು ಬರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ ತಂಡವು 9 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. ಈ ಗುರಿಯನ್ನು ಕೇವಲ 9.4 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಆಸೀಸ್ ಪಡೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

ಸತತ ಬೌಂಡರಿಗಳ ದಾಖಲೆ: ಈ ಪಂದ್ಯದ ಪವರ್ಪ್ಲೇನ ಕೊನೆಯ 14 ಎಸೆತಗಳಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಸತತ ಬೌಂಡರಿಗಳನ್ನು ಬಾರಿಸಿದ್ದು ವಿಶೇಷ. ಅಂದರೆ 3.5 ಓವರ್ನಿಂದ 6 ಓವರ್ವರೆಗೆ 6, 4, 6, 6, 4, 6, 4, 4, 4, 6, 4, 4, 4, 4 ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಸತತ ಬೌಂಡರಿ ಬಾರಿಸಿದ ಹೊಸ ವಿಶ್ವ ದಾಖಲೆ ನಿರ್ಮಿಸಿದರು.

ಪವರ್ಪ್ಲೇ ದಾಖಲೆ: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಆಸ್ಟ್ರೇಲಿಯಾ ಪಾಲಾಗಿದೆ. ಆಸೀಸ್ ಪಡೆಯು ಸ್ಕಾಟ್ಲೆಂಡ್ ವಿರುದ್ಧ 6 ಓವರ್ಗಳಲ್ಲಿ 113 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದೆ. ಇದಕ್ಕೂ ಮುನ್ನ ಈ ದಾಖಲೆ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿತ್ತು. 2023 ರಲ್ಲಿ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಮೊದಲ 6 ಓವರ್ಗಳಲ್ಲಿ 102 ರನ್ ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಅತ್ಯಂತ ವೇಗದ ಚೇಸ್: ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ನೀಡಿದ 155 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ಕೇವಲ 9.4 ಓವರ್ಗಳಲ್ಲಿ ಚೇಸ್ ಮಾಡಿದೆ. 150+ ಸ್ಕೋರ್ ಅನ್ನು ಅತೀ ಕಡಿಮೆ ಓವರ್ಗಳಲ್ಲಿ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.

ವೇಗದ ಶತಕ: ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 100 ರನ್ ಪೂರೈಸಿದ ದಾಖಲೆಯನ್ನು ಸಹ ಆಸ್ಟ್ರೇಲಿಯಾ ನಿರ್ಮಿಸಿದೆ. ಈ ಪಂದ್ಯದಲ್ಲಿ 5.3 ಓವರ್ಗಳಲ್ಲಿ 100 ರನ್ಗಳನ್ನು ಪೂರೈಸುವ ಮೂಲಕ ಸೌತ್ ಆಫ್ರಿಕಾ ತಂಡದ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದೆ. 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೌತ್ ಆಫ್ರಿಕಾ 5.3 ಓವರ್ಗಳಲ್ಲಿ 100 ರನ್ಗಳಿಸಿ ಈ ದಾಖಲೆ ನಿರ್ಮಿಸಿತ್ತು. ಇದೀಗ ಈ ವಿಶ್ವ ದಾಖಲೆಯನ್ನು ಸರಿಗಟ್ಟುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

ಪವರ್ಫುಲ್ ದಾಖಲೆ: ಈ ಪಂದ್ಯದ ಪವರ್ಪ್ಲೇನಲ್ಲಿ ಆಸ್ಟ್ರೇಲಿಯಾ ತಂಡವು ಒಟ್ಟು 24 ಬೌಂಡರಿಗಳನ್ನು ಬಾರಿಸಿದ್ದರು. ಇದರಲ್ಲಿ 17 ಫೋರ್ ಹಾಗೂ 7 ಸಿಕ್ಸ್ಗಳು ಒಳಗೊಂಡಿದ್ದವು. ಇದು ಟಿ20 ಕ್ರಿಕೆಟ್ ಇತಿಹಾಸ ಪವರ್ಪ್ಲೇನಲ್ಲಿ ಮೂಡಿಬಂದ ಗರಿಷ್ಠ ಬೌಂಡರಿಗಳಾಗಿವೆ. ಈ ಮೂಲಕ ಪವರ್ಪ್ಲೇನಲ್ಲಿ ಅತ್ಯಧಿಕ ಬೌಂಡರಿಗಳನ್ನು ಸಿಡಿಸಿದ ವಿಶೇಷ ವಿಶ್ವ ದಾಖಲೆಯನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




