- TV9 Kannada Photo gallery Cricket photos Ajinkya Rahane Announces Retirement: A Look Back at His Undefeated Test Captaincy
ಒಂದೇ ಒಂದು ಸೋಲಿಲ್ಲದ ಏಕೈಕ ನಾಯಕ ಅಜಿಂಕ್ಯ ರಹಾನೆ
Ajinkya Rahane Test captaincy record: ಭಾರತ ಕ್ರಿಕೆಟ್ನ 'ಜಂಟಲ್ಮ್ಯಾನ್' ಎಂದೇ ಖ್ಯಾತರಾಗಿದ್ದ ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ 38ನೇ ವಯಸ್ಸಿನಲ್ಲಿ ಈ ನಿರ್ಧಾರ ಕೈಗೊಂಡ ರಹಾನೆ, ಭಾರತಕ್ಕಾಗಿ 85 ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಸಹಿತ 5077 ರನ್ ಗಳಿಸಿದ್ದಾರೆ. ಅಜೇಯ ಟೆಸ್ಟ್ ನಾಯಕತ್ವದ ದಾಖಲೆ ಹೊಂದಿರುವ ರಹಾನೆ, ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Updated on: Jul 30, 2026 | 4:28 PM

ಭಾರತ ಕ್ರಿಕೆಟ್ನ ಜಂಟಲ್ಮ್ಯಾನ್ ಎನಿಸಿಕೊಂಡಿದ್ದ ಅಜಿಂಕ್ಯ ರಹಾನೆ ತಮ್ಮ 38ನೇ ವಯಸ್ಸಿನಲ್ಲಿ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಜುಲೈ 30, 2026 ರಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ಪೋಸ್ಟ್ ಮಾಡುವ ಮೂಲಕ ರಹಾನೆ ನಿವೃತ್ತಿ ಪ್ರಕಟಿಸಿದ್ದಾರೆ. ಕಳಪೆ ಫಾರ್ಮ್ನಿಂದಾಗಿ ಮೂರು ವರ್ಷಗಳ ಹಿಂದೆ ತಂಡದಿಂದ ಹೊರಗುಳಿದಿದ್ದ ಅಜಿಂಕ್ಯ ರಹಾನೆಗೆ ಮತ್ತೆ ತಂಡದಲ್ಲಿ ಆಡುವ ಅವಕಾಶ ಸಿಗಲೇ ಇಲ್ಲ(Star sports).

ಆದಾಗ್ಯೂ ದೇಶೀಯ ಕ್ರಿಕೆಟ್ ಆಡುವ ಮೂಲಕ ತಂಡಕ್ಕೆ ಮರಳಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಜುಲೈ 2023 ರಲ್ಲಿ ಭಾರತದ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ರಹಾನೆ ಐಪಿಎಲ್ನಲ್ಲಿ ಕೊಂಚ ಗಮನಾರ್ಹ ಪ್ರದರ್ಶನ ನೀಡಿದ್ದರಾದರೂ ನಾಯಕನಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರಶಸ್ತಿ ಎಡೆಗೆ ಮುನ್ನಡೆಸುವಲ್ಲಿ ವಿಫಲರಾದರು. ಇದೀಗ ರಹಾನೆ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ(BCCI).

ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೆ ಛಾಪು ಮೂಡಿಸಿದ್ದ ಅಜಿಂಕ್ಯ ರಹಾನೆ ತಂಡದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12 ಶತಕಗಳು ಸೇರಿದಂತೆ 38.46 ಸರಾಸರಿಯಲ್ಲಿ 5077 ರನ್ ಗಳಿಸಿದ್ದಾರೆ. ರಹಾನೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಹಾಗೂ ಮೆಲ್ಬೋರ್ನ್ ಮತ್ತು ವೆಲ್ಲಿಂಗ್ಟನ್ನಲ್ಲಿ ಶತಕಗಳನ್ನು ಬಾರಿಸಿದ್ದಾರೆ(BCCI).

ಆಟಗಾರನಾಗಿ ಮಾತ್ರವಲ್ಲದೆ ರಹಾನೆ ನಾಯಕನಾಗಿಯೂ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಅದರಲ್ಲಿ ನೆನಪಿನಲ್ಲಿ ಉಳಿಯುವಂತದ್ದು ಆಸ್ಟ್ರೇಲಿಯಾದಲ್ಲಿ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದದ್ದು. ಆ ಸರಣಿಯ ಮೊದಲ ಪಂದ್ಯದ ನಂತರ, ನಿಯಮಿತ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇಲೆ ಭಾರತಕ್ಕೆ ಮರಳಿದರು. ನಂತರ ರಹಾನೆ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ತಂಡವನ್ನು ಸರಣಿ ಗೆಲುವಿನತ್ತ ಮುನ್ನಡೆಸಿದರು(BCCI).

ಹಾಗೆಯೇ ಭಾರತೀಯ ಟೆಸ್ಟ್ ಕ್ರಿಕೆಟ್ನಲ್ಲಿ ಐದು ಪಂದ್ಯಗಳಿಗಿಂತ ಹೆಚ್ಚು ನಾಯಕತ್ವ ವಹಿಸಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲದ ಏಕೈಕ ನಾಯಕ ರಹಾನೆ. ಹೌದು, ಭಾರತ ರಹಾನೆ ನಾಯಕತ್ವದಲ್ಲಿ ಒಟ್ಟು ಆರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದರೆ, ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಅಂದರೆ ರಹಾನೆ ನಾಯಕತ್ವದಲ್ಲಿ ಭಾರತ ಎಂದಿಗೂ ಸೋತಿಲ್ಲ(BCCI).

ಟೆಸ್ಟ್ ಜೊತೆಗೆ, ಅವರು ಏಕದಿನ ಮತ್ತು ಟಿ20ಮಾದರಿಯಲ್ಲೂ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಏಕದಿನ ಪಂದ್ಯಗಳಲ್ಲಿ, ರಹಾನೆ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದರು, ಅವೆಲ್ಲವನ್ನೂ ಭಾರತ ಗೆದ್ದಿದೆ. ಹಾಗೆಯೇ 2 ಟಿ20 ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ ಒಂದು ಪಂದ್ಯವನ್ನು ಗೆದ್ದು ಒಂದು ಪಂದ್ಯವನ್ನು ಸೋತಿದ್ದಾರೆ(Star sports).




