Andre Russell: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಆಂಡ್ರೆ ರಸೆಲ್
Andre Russell Records: ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ದಾಂಡಿಗ ಆಂಡ್ರೆ ರಸೆಲ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ ಯಾರೂ ಕೂಡ ಮಾಡದ ವರ್ಲ್ಡ್ ರೆಕಾರ್ಡ್ ಎಂಬುದು ವಿಶೇಷ.
Updated on: Feb 12, 2024 | 9:37 AM

ಅಡಿಲೇಡ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆ್ಯಂಡ್ರೆ ರಸೆಲ್ ಕೇವಲ 16 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 37 ರನ್ ಬಾರಿಸಿ ಮಿಂಚಿದ್ದರು. ಈ 37 ರನ್ಗಳೊಂದಿಗೆ ರಸೆಲ್ ಟಿ20 ಕ್ರಿಕೆಟ್ನಲ್ಲಿ ಯಾರೂ ಮಾಡದ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ.

ಈ ಪಂದ್ಯದಲ್ಲಿ 37 ರನ್ ಕಲೆಹಾಕುವುದರೊಂದಿಗೆ ಆಂಡ್ರೆ ರಸೆಲ್ ಟಿ20 ಕ್ರಿಕೆಟ್ನಲ್ಲಿ 8 ಸಾವಿರ ರನ್ ಪೂರೈಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 8 ಸಾವಿರ ರನ್ ಹಾಗೂ 400 ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಮಸಲ್ಮ್ಯಾನ್ ಖ್ಯಾತಿಯ ರಸೆಲ್ ಪಾಲಾಗಿದೆ.

ಅಂದರೆ ರಸೆಲ್ ಅವರನ್ನು ಹೊರತುಪಡಿಸಿ ಟಿ20 ಕ್ರಿಕೆಟ್ನಲ್ಲಿ ಯಾವುದೇ ಆಟಗಾರ 8 ಸಾವಿರ ರನ್ + 400 ವಿಕೆಟ್ಗಳನ್ನು ಪಡೆದಿಲ್ಲ. ಇದೀಗ ಈ ಸಾಧನೆ ಮಾಡಿದ ಮೊದಲ ಆಲ್ರೌಂಡರ್ ಎಂಬ ಹೆಗ್ಗಳಿಕೆಗೆ ರಸೆಲ್ ಪಾತ್ರರಾಗಿದ್ದಾರೆ. ಇದರೊಂದಿಗೆ ಇನ್ನೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆ ದಾಖಲೆಗಳಾವುವು ಎಂದರೆ...

ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಂಡೀಸ್ ಬ್ಯಾಟರ್ಗಳ ಪಟ್ಟಿಯಲ್ಲಿ ಆಂಡ್ರೆ ರಸೆಲ್ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (14,562) ಮತ್ತು ಕೀರನ್ ಪೊಲಾರ್ಡ್ (12,577) ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಇದೀಗ 8,029 ರನ್ಗಳೊಂದಿಗೆ ರಸೆಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ಗಳನ್ನು ಕಬಳಿಸಿದ ಬೌಲರ್ಗಳ ಪಟ್ಟಿಯಲ್ಲಿ ರಸೆಲ್ 6ನೇ ಸ್ಥಾನದಲ್ಲಿದ್ದಾರೆ. ಈ ಸಾಧಕರ ಪಟ್ಟಿಯಲ್ಲಿ ಡ್ವೇನ್ ಬ್ರಾವೊ (623), ರಶೀದ್ ಖಾನ್ (556), ಸುನಿಲ್ ನರೈನ್ (532), ಇಮ್ರಾನ್ ತಾಹಿರ್ (497), ಮತ್ತು ಶಕೀಬ್ ಅಲ್ ಹಸನ್ (476) ಟಾಪ್-5 ನಲ್ಲಿದ್ದಾರೆ. ಇದೀಗ 424 ವಿಕೆಟ್ಗಳೊಂದಿಗೆ ರಸೆಲ್ 6ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಿನಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನದ ಮೂಲಕ ಸಂಚಲನ ಸೃಷ್ಟಿಸುವ ಆಂಡ್ರೆ ರಸೆಲ್ ಇದೀಗ 8 ಸಾವಿರ ರನ್ + 400 ವಿಕೆಟ್ಗಳನ್ನು ಕಬಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿರುವುದು ವಿಶೇಷ.

TV9 Kannada
Read More
