ಪೂರನ್-ಕರನ್ ಸಿಡಿಲಬ್ಬರ: MI ಲಂಡನ್ ಶುಭಾರಂಭ
MI London vs Sunrisers Leeds: ದಿ ಹಂಡ್ರೆಡ್ ಲೀಗ್ನ ಮೊದಲ ಪಂದ್ಯದಲ್ಲೇ ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಸೋಲುಣಿಸುವಲ್ಲಿ ಎಂಐ ಲಂಡನ್ ತಂಡ ಯಶಸ್ವಿಯಾಗಿದೆ. ಲಂಡನ್ನಲ್ಲಿ ನಡೆದ ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಹಾಗೂ ಸ್ಯಾಮ್ ಕರನ್ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಂಐ ಲಂಡನ್ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಕ್ರಿಕೆಟ್ ಟೂರ್ನಿ ಶುರುವಾಗಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎಂಐ ಲಂಡನ್ ತಂಡವು ಭರ್ಜರಿ ಜಯದೊಂದಿಗೆ ಶುಭಾರಂಭ ಮಾಡಿದೆ. ಸನ್ರೈಸರ್ಸ್ ಲೀಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಲಂಡನ್ ತಂಡದ ನಾಯಕ ಸ್ಯಾಮ್ ಕರನ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಆರಂಭಿಕ ದಾಂಡಿಗ ಮಿಚೆಲ್ ಮಾರ್ಷ್ (41 ರನ್, 27 ಎಸೆತ) ಉತ್ತಮ ಆರಂಭ ಒದಗಿಸಿದ್ದರು. ಇನ್ನು ರಯಾನ್ ರಿಕೆಲ್ಟನ್ 25 ರನ್ಗಳ ಕೊಡುಗೆ ನೀಡಿದರು. ಆದರೆ ಬಳಿಕ ಬಂದ ಸನ್ರೈಸರ್ಸ್ ಲೀಡ್ಸ್ ತಂಡದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಲೀಡ್ಸ್ ತಂಡವು 99 ಎಸೆತಗಳಲ್ಲಿ 143 ರನ್ಗಳಿಸಿ ಆಲೌಟ್ ಆಯಿತು.
ಎಂಐ ಲಂಡನ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ರಿಚರ್ಡ್ ಗ್ಲೀಸನ್ 19 ಎಸೆತಗಳಲ್ಲಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇನ್ನು ಸ್ಯಾಮ್ ಕರನ್ 15 ಎಸೆತಗಳಲ್ಲಿ 27 ರನ್ ನೀಡಿ 2 ವಿಕೆಟ್ ಕಬಳಿಸಿದರು.
144 ರನ್ಗಳ ಗುರಿ:
100 ಎಸೆತಗಳಲ್ಲಿ 144 ರನ್ಗಳ ಗುರಿ ಪಡೆದ ಎಂಐ ಲಂಡನ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ವಿಲ್ ಜ್ಯಾಕ್ಸ್ ಕೇವಲ 2 ರನ್ಗಳಿಸಿ ಔಟಾದರೆ, ಜೇಮ್ಸ್ ವಿನ್ಸ್ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಜೇಸನ್ ರಾಯ್ (0) ಸೊನ್ನೆ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಈ ಹಂತದಲ್ಲಿ ಕಣಕ್ಕಿಳಿದ ಸ್ಯಾಮ್ ಕರನ್ ಹಾಗೂ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ಸನ್ರೈಸರ್ಸ್ ಲೀಡ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.
ಪರಿಣಾಮ ಸ್ಯಾಮ್ ಕರನ್ ಬ್ಯಾಟ್ನಿಂದ 39 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 60 ರನ್ ಮೂಡಿಬಂತು. ಮತ್ತೊಂದೆಡೆ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ನಿಕೋಲಸ್ ಪೂರನ್ 22 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 58 ರನ್ ಚಚ್ಚಿದರು. ಈ ಮೂಲಕ ಎಂಐ ಲಂಡನ್ ತಂಡವು 84 ಎಸೆತಗಳಲ್ಲಿ 144 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಎಂಐ ಲಂಡನ್ ಪ್ಲೇಯಿಂಗ್ 11: ಜೇಮ್ಸ್ ವಿನ್ಸ್ , ವಿಲ್ ಜ್ಯಾಕ್ಸ್ , ಜೇಸನ್ ರಾಯ್ , ಸ್ಯಾಮ್ ಕರನ್ (ನಾಯಕ) , ನಿಕೋಲಸ್ ಪೂರನ್ (ವಿಕೆಟ್ ಕೀಪರ್) ಜೋಶ್ ಫಿಲಿಪ್ , ಟಾಮ್ ಕರನ್ , ರಶೀದ್ ಖಾನ್ , ಟ್ರೆಂಟ್ ಬೌಲ್ಟ್ , ರಿಚರ್ಡ್ ಗ್ಲೀಸನ್ , ನಾಥನ್ ಸೌಟರ್.
ಇದನ್ನೂ ಓದಿ: ನೋ ಬಾಲ್ ಎಸೆದರೆ ಬೌಲರ್ ಬೌಲ್ಡ್: 10 ಹೊಸ ನಿಯಮ ಪರಿಚಯಿಸಿದ ಬಿಸಿಸಿಐ
ಸನ್ರೈಸರ್ಸ್ ಲೀಡ್ಸ್ ಪ್ಲೇಯಿಂಗ್ 11: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್ , ಝಾಕ್ ಕ್ರಾಲಿ (ನಾಯಕ) , ಹ್ಯಾರಿ ಬ್ರೂಕ್ , ಡಾನ್ ಲಾರೆನ್ಸ್ , ಟಾಮ್ ಅಲ್ಸೋಪ್ , ಬೆನ್ನಿ ಹೋವೆಲ್ , ಬ್ರೈಡನ್ ಕಾರ್ಸ್ , ಮ್ಯಾಥ್ಯೂ ಪಾಟ್ಸ್ , ನಾಥನ್ ಎಲ್ಲಿಸ್ , ಅಬ್ರಾರ್ ಅಹ್ಮದ್.




