ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
IPL 2026 PBKS vs GT: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 19.1 ಓವರ್ಗಳಲ್ಲಿ 165 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
Updated on: Apr 01, 2026 | 7:05 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದ ಮೂಲಕ ಪಂಜಾಬ್ ಕಿಂಗ್ಸ್ ತಂಡದ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep singh) ಅತ್ಯಂತ ಹೀನಾಯ ದಾಖಲೆ ಬರೆದಿದ್ದಾರೆ. ಅದು ಸಹ ದೀರ್ಘಾವಧಿ ಬೌಲಿಂಗ್ ಮಾಡುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 19 ಓವರ್ಗಳಲ್ಲಿ 150 ರನ್ ಕಲೆಹಾಕಿದ್ದರು. ಅದರಂತೆ 20ನೇ ಓವರ್ ಎಸೆಯಲು ಬಂದ ಅರ್ಷದೀಪ್ ಸಿಂಗ್ ಮೊದಲ ಎಸೆತವನ್ನು ವೈಡ್ ಮಾಡಿದರು. ಇದಾದ ಬಳಿಕ ಸತತ 2 ಉತ್ತಮ ಎಸೆತಗಳನ್ನು ಎಸೆದರು.

ಆ ಬಳಿಕ ನೋ ಬಾಲ್ ಹಾಗೂ 2 ವೈಡ್ಗಳನ್ನು ಎಸೆದರು. ಇದಾದ ಬಳಿಕ ಮತ್ತೆರಡು ಉತ್ತಮ ಎಸೆತಗಳ ಮೂಲಕ ಗಮನ ಸೆಳೆದರು. ಆ ಬಳಿಕ ಮತ್ತೊಂದು ವೈಡ್ ಎಸೆದಿದ್ದಾರೆ. ಹೀಗೆ ನೋ ಬಾಲ್, ವೈಡ್ಗಳ ಮೂಲಕ ಕೊನೆಯ ಓವರ್ ಪೂರ್ಣಗೊಳಿಸಲು ಅರ್ಷದೀಪ್ ಸಿಂಗ್ ಬರೋಬ್ಬರಿ 11 ಎಸೆತಗಳನ್ನು ತೆಗೆದುಕೊಂಡಿದ್ದಾರೆ.

ಈ 11 ಎಸೆತಗಳೊಂದಿಗೆ ಐಪಿಎಲ್ನಲ್ಲಿ ದೀರ್ಘಾವಧಿಯ ಓವರ್ ಎಸೆದ ಬೌಲರ್ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಪಂದ್ಯದ 20ನೇ ಓವರ್ನಲ್ಲಿ 11 ಎಸೆತಗಳನ್ನು ಎಸೆದ 2ನೇ ಬೌಲರ್ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ. ಇದಕ್ಕೂ ಮುನ್ನ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂದೀಪ್ ಶರ್ಮಾ 20ನೇ ಓವರ್ನಲ್ಲಿ 11 ಎಸೆತಗಳನ್ನು ಎಸೆದಿದ್ದರು.

ಹಾಗೆಯೇ ಮೊಹಮ್ಮದ್ ಸಿರಾಜ್ (2023), ತುಷಾರ್ ದೇಶಪಾಂಡೆ (2023), ಶಾರ್ದೂಲ್ ಠಾಕೂರ್ (2025), ಸಂದೀಪ್ ಶರ್ಮಾ (2025), ಹಾರ್ದಿಕ್ ಪಾಂಡ್ಯ (2025) ನಂತರ ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ 11 ಎಸೆತಗಳನ್ನು ಎಸೆದ 6ನೇ ಬೌಲರ್ ಎಂಬ ಅಪಖ್ಯಾತಿಗೂ ಒಳಗಾಗಿದ್ದಾರೆ.
