ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಬಾಬರ್ ಆಝಂ
Babar Azam Records: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಹೊಂದಿರುವ ಬಾಬರ್ ಆಝಂ ಇದೀಗ ಅತ್ಯಂತ ಹೀನಾಯ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಟಿ20 ವಿಶ್ವಕಪ್ನಲ್ಲಿ ಅತೀ ನಿಧಾನವಾಗಿ ಬ್ಯಾಟ್ ಬೀಸುವ ಮೂಲಕ. ಈ ದಾಖಲೆಯೊಂದಿಗೆ ಪಾಕ್ ತಂಡದ ಮಾಜಿ ಆಟಗಾರನ ಅನಗತ್ಯ ದಾಖಲೆಯನ್ನು ಮುರಿದಿದ್ದಾರೆ.
Updated on: Feb 25, 2026 | 7:41 AM

T20 World Cup 2026: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಅವರ ಕಳಪೆ ಬ್ಯಾಟಿಂಗ್ ಮುಂದುವರೆದಿದೆ. ಈ ಕಳಪೆ ಬ್ಯಾಟಿಂಗ್ನೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಬಾಬರ್ ಅತ್ಯಂತ ಹೀನಾಯ ದಾಖಲೆ ಬರೆದಿದ್ದಾರೆ. ಅದು ಸಹ ಅತೀ ಕಡಿಮೆ ಸ್ಟ್ರೈಕ್ ರೇಟ್ನೊಂದಿಗೆ..!

ಪಲ್ಲೆಕೆಲೆ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ನ 45ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ 24 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 25 ರನ್ಗಳು ಮಾತ್ರ. ಈ 25 ರನ್ಗಳೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಅತೀ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎಂಬ ಅನಗತ್ಯ ದಾಖಲೆಯೊಂದನ್ನು ಬಾಬರ್ ತಮ್ಮದಾಗಿಸಿಕೊಂಡಿದ್ದಾರೆ.

ಅಂದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕನಿಷ್ಠ 500 ರನ್ಗಳಿಸಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಅತೀ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಬ್ಯಾಟರ್ ಬಾಬರ್. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಝ್ ಹೆಸರಿನಲ್ಲಿತ್ತು.

ಟಿ20 ವಿಶ್ವಕಪ್ನಲ್ಲಿ 27 ಇನಿಂಗ್ಸ್ ಆಡಿರುವ ಮೊಹಮ್ಮದ್ ಹಫೀಝ್ 457 ಎಸೆತಗಳಲ್ಲಿ ಕಲೆಹಾಕಿರುವ ಒಟ್ಟು ರನ್ 511 ಮಾತ್ರ. ಅಂದರೆ 111.8ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಈ ಹೀನಾಯ ದಾಖಲೆಯನ್ನು ಬಾಬರ್ ಆಝಂ ತಮ್ಮದಾಗಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಈವರೆಗೆ 21 ಇನಿಂಗ್ಸ್ ಆಡಿರುವ ಬಾಬರ್ ಆಝಂ ಒಟ್ಟು 640 ರನ್ ಕಲೆಹಾಕಿದ್ದಾರೆ. ಈ 640 ರನ್ಗಳಿಸಲು ಅವರು ತೆಗೆದುಕೊಂಡಿರುವುದು ಬರೋಬ್ಬರಿ 574 ಎಸೆತಗಳನ್ನು ಎಂಬುದು ವಿಶೇಷ. ಅಂದರೆ ಕೇವಲ 111.5 ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ 500 ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
