ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮೋರ್ಗನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಇಂಗ್ಲೆಂಡ್ ಆಟಗಾರ, ಹಲವು ಕ್ರಿಕೆಟ್ ಲೀಗ್ಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್ ಬೈ ಹೇಳುತ್ತಿರುವುದಾಗಿ ಮೋರ್ಗನ್ ತಿಳಿಸಿದ್ದಾರೆ.
36 ವರ್ಷದ ಮೋರ್ಗನ್ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಬಗ್ಗೆ ದೀರ್ಘ ಪತ್ರವನ್ನು ಬರೆದಿದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಬಯಸಿದ್ದೇನೆ. ಇದರೊಂದಿಗೆ ವೃತ್ತಿಪರ ಕ್ರಿಕೆಟ್ ಆಡುವ ಸಾಹಸ ಮತ್ತು ಸವಾಲುಗಳನ್ನು ಕಳೆದುಕೊಳ್ಳಲಿದ್ದೇನೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನನ್ನ ನಿವೃತ್ತಿಯ ನಂತರ, ನಾನು ನನ್ನ ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಭವಿಷ್ಯದಲ್ಲಿ ಇದು ಮತ್ತಷ್ಟು ಸಂತೋಷದೊಂದಿಗೆ ಮುಂದುವರೆಯಲಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
2019 ರಲ್ಲಿ ಇಂಗ್ಲೆಂಡ್‌ಗೆ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ನಾಯಕ ಮೋರ್ಗನ್, 126 ಏಕದಿನ ಮತ್ತು 72 ಟಿ20 ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಇಂಗ್ಲೆಂಡ್ ತಂಡವು 118 ಪಂದ್ಯಗಳಲ್ಲಿ ಗೆದ್ದಿರುವುದು ದಾಖಲೆಯಾಗಿದೆ.
ಇನ್ನು ಇಂಗ್ಲೆಂಡ್ ಪರ ಅತಿ ಹೆಚ್ಚು ಏಕದಿನ ರನ್ (6,957), ಹಾಗೂ ಟಿ20 ರನ್ಗಳು (2,458) ಮತ್ತು ಎರಡೂ ಸ್ವರೂಪಗಳಲ್ಲಿ ಅತ್ಯಧಿಕ ಸಿಕ್ಸರ್ಗಳನ್ನು ಬಾರಿಸಿದ ದಾಖಲೆ ಕೂಡ ಮೋರ್ಗನ್ ಹೆಸರಿನಲ್ಲಿದೆ.
ವಿಶೇಷ ಎಂದರೆ 2009 ರಲ್ಲಿ ಇಂಗ್ಲೆಂಡ್ ಪರ ಕಣಕ್ಕಿಳಿಯುವ ಮೊದಲು ಮೋರ್ಗನ್ 2006 ರಲ್ಲಿ ಐರ್ಲೆಂಡ್ ಪರ ಆಡಿದ್ದರು. 23 ಏಕದಿನ ಪಂದ್ಯಗಳಲ್ಲಿ ಐರಿಷ್ ತಂಡವನ್ನು ಪ್ರತಿನಿಧಿಸಿದ್ದ ಮೋರ್ಗನ್ 35.42 ರ ಸರಾಸರಿಯಲ್ಲಿ 744 ರನ್ ಕಲೆಹಾಕಿದ್ದರು.
ಅಲ್ಲದೆ ಐಪಿಎಲ್ನಲ್ಲಿ ಆರ್ಸಿಬಿ, ಕೆಕೆಆರ್ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಕೆಕೆಆರ್ ತಂಡದ ನಾಯಕರಾಗಿ 2021 ರಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಆದರೆ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೆಕೆಆರ್ ಸೋತಿತು. ಇನ್ನು ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಅವರು ಮಾರಾಟವಾಗದೆ ಉಳಿದಿದ್ದರು. ಇದರೊಂದಿಗೆ ಅವರ ಐಪಿಎಲ್ ಕೆರಿಯರ್ ಕೂಡ ಅಂತ್ಯಗೊಂಡಿತ್ತು.
Published On - 5:29 pm, Mon, 13 February 23