T20 World Cup 2026: ಇಬ್ಬರಿಲ್ಲದ ಮೊದಲ ಟಿ20 ವಿಶ್ವಕಪ್
T20 World Cup 2026: ಬಹುನಿರೀಕ್ಷಿತ ಟಿ20 ವಿಶ್ವಕಪ್ 2026 ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್ನಲ್ಲಿ ಇಬ್ಬರು ಹಿರಿಯ ಆಟಗಾರರು ಕಾಣಿಸಿಕೊಳ್ಳುವುದಿಲ್ಲ. ಅಂದರೆ ಕಳೆದ 9 ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದ ಇಬ್ಬರು ಆಟಗಾರರು ಈ ಬಾರಿಯ ಟಿ20 ವಿಶ್ವಕಪ್ ತಂಡಗಳಲ್ಲಿಲ್ಲ ಎಂಬುದು ವಿಶೇಷ.
Updated on: Feb 05, 2026 | 2:17 PM

T20 World Cup 2026: ಟಿ20 ವಿಶ್ವಕಪ್ ಶುರುವಾಗಿ 18 ವರ್ಷಗಳು ಕಳೆದಿವೆ. ಈ ಹದಿನೆಂಟು ವರ್ಷಗಳಲ್ಲಿ 9 ಟಿ20 ವಿಶ್ವಕಪ್ ಟೂರ್ನಿಗಳು ನಡೆದಿವೆ. ಈ ಒಂಭತ್ತು ಟೂರ್ನಿಗಳಲ್ಲೂ ಇಬ್ಬರು ಆಟಗಾರರು ಕಾಣಿಸಿಕೊಂಡಿದ್ದಾರೆ. ಅಂದರೆ ಈವರೆಗಿನ ಎಲ್ಲಾ ವಿಶ್ವಕಪ್ಗಳಲ್ಲೂ ಕಣಕ್ಕಿಳಿದಿರುವುದು ಕೇವಲ ಇಬ್ಬರು ಮಾತ್ರ. ಆದರೆ ಆ ಇಬ್ಬರಿಲ್ಲದೆ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಯೋಜನೆಗೊಳ್ಳುತ್ತಿರುವುದು ವಿಶೇಷ.

ಹೌದು, ಟಿ20 ವಿಶ್ವಕಪ್ನ ಎಲ್ಲಾ ಆವೃತ್ತಿಗಳಲ್ಲಿ ಕಾಣಿಸಿಕೊಂಡ ಆಟಗಾರರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಒಬ್ಬರು. 2007ರ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಹಿಟ್ಮ್ಯಾನ್, ಆ ಬಳಿಕ 2009, 2010, 2012, 2014, 2016, 2021, 2022 ಮತ್ತು 2024 ರ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು.

ಆದರೆ ಕಳೆದ ಬಾರಿಯ ಟಿ20 ವಿಶ್ವಕಪ್ನ ಫೈನಲ್ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ಅವರು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ರೋಹಿತ್ ಶರ್ಮಾ ಅಲ್ಲದೆ, 2007, 2009, 2010, 2012, 2014, 2016, 2021, 2022 ಮತ್ತು 2024 ರ ಟಿ20 ವಿಶ್ವಕಪ್ಗಳಲ್ಲಿ ಕಣಕ್ಕಿಳಿದ ಮತ್ತೋರ್ವ ಆಟಗಾರನೆಂದರೆ ಬಾಂಗ್ಲಾದೇಶದ ಶಾಹಿಬ್ ಅಲ್ ಹಸನ್. 2025 ರಲ್ಲಿ ಶಾಕಿಬ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಒಂದು ವೇಳೆ ಅವರು ನಿವೃತ್ತಿಯಾಗದೇ ಇದ್ದಿದ್ದರೂ ಈ ಬಾರಿ ಕಣಕ್ಕಿಳಿಯುತ್ತಿರಲಿಲ್ಲ. ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ್ ತಂಡ ಹೊರಗುಳಿದಿದೆ.

ಅಂದರೆ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಹಾಗೂ ಶಾಕಿಬ್ ಅಲ್ ಹಸನ್ ಇಲ್ಲದೆ ವಿಶ್ವಕಪ್ ನಡೆಯಲಿರುವುದು ವಿಶೇಷ. ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನಾಡಿದ ದಾಖಲೆ ರೋಹಿತ್ ಶರ್ಮಾ ಹಾಗೂ ಶಾಕಿಬ್ ಅಲ್ ಹಸನ್ ಹೆಸರಿನಲ್ಲಿದೆ. 9 ಸೀಸನ್ಗಳಲ್ಲಿ 47 ಮ್ಯಾಚ್ಗಳನ್ನಾಡುವ ಮೂಲಕ ರೋಹಿತ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 43 ಪಂದ್ಯಗಳ ಮೂಲಕ ಶಾಕಿಬ್ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
