AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಲಾರ್ಡ್ಸ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಖಚಿತ

India vs England 3rd ODI: ಭಾರತ vs ಇಂಗ್ಲೆಂಡ್ ಅಂತಿಮ ಏಕದಿನ ಪಂದ್ಯ ಲಾರ್ಡ್ಸ್‌ನಲ್ಲಿ ಸರಣಿ ನಿರ್ಧರಿಸಲಿದೆ. ವಾಷಿಂಗ್ಟನ್ ಸುಂದರ್ ಗಾಯದಿಂದ ಹೊರಬಿದ್ದಿದ್ದು, ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ XIನಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. ರೋಹಿತ್ ಶರ್ಮಾ ಕಳಪೆ ಫಾರ್ಮ್ ಹಾಗೂ ವಿರಾಟ್ ಕೊಹ್ಲಿಯ ಲಾರ್ಡ್ಸ್ ದಾಖಲೆ ಕಳವಳ ಮೂಡಿಸಿದೆ. ಕೆಎಲ್ ರಾಹುಲ್, ಕುಲ್ದೀಪ್ ಯಾದವ್​ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

IND vs ENG: ಲಾರ್ಡ್ಸ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಖಚಿತ
Team India
ಪೃಥ್ವಿಶಂಕರ
|

Updated on: Jul 18, 2026 | 10:32 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳು ಮುಗಿದಿದ್ದು ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಕಾರ್ಡಿಫ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ಇಂಗ್ಲೆಂಡ್ ಗೆದ್ದು ಸರಣಿಯನ್ನು ಸಮಬಲಗೊಳಿಸಿದೆ. ಸರಣಿಯ ಮೂರನೇ ಪಂದ್ಯ ಈಗ ಲಾರ್ಡ್ಸ್‌ನಲ್ಲಿ (Lord’s) ನಡೆಯಲಿದೆ. ಟೀಂ ಇಂಡಿಯಾ ಎರಡನೇ ಪಂದ್ಯವನ್ನು ಸೋಲಲು ತಂಡದ ಬ್ಯಾಟಿಂಗ್‌ ವಿಭಾಗದ ಅದರಲ್ಲೂ ಆಲ್‌ರೌಂಡರ್​ಗಳ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು. ಅಲ್ಲದೆಯೇ ವಾಷಿಂಗ್ಟನ್ ಸುಂದರ್ ಅವರ ಗಾಯ ಕೂಡ ತಂಡಕ್ಕೆ ಬೌಲಿಂಗ್ ಕೊರತೆಯನ್ನುಂಟು ಮಾಡಿತು. ಇದೀಗ 3ನೇ ಪಂದ್ಯದಿಂದ ಸುಂದರ್ ಹೊರಬಿದ್ದಿದ್ದು, ಅವರ ಬದಲಿಗೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇದರರ್ಥ ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಬದಲಾವಣೆಯಾಗುವುದು ಖಚಿತವಾಗಿದೆ.

ಬ್ಯಾಟಿಂಗ್ ವಿಭಾಗ ಹೇಗಿರಲಿದೆ?

ಎಂದಿನಂತೆ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಗಿಲ್ ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿದ್ದು, ಅದನ್ನು ಮುಂದುವರೆಸಲಿದ್ದಾರೆ. ಆದರೆ ರೋಹಿತ್ ಶರ್ಮಾರ ಕಳಪೆ ಫಾರ್ಮ್​ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಸರಣಿಯ ಎರಡೂ ಪಂದ್ಯಗಳಲ್ಲೂ ರೋಹಿತ್ ಅವರ ಪ್ರದರ್ಶನ ಕಳಪೆಯಾಗಿತ್ತು. ಇದರ ನಡುವೆ ರೋಹಿತ್ ಅವರ ವಿದಾಯದ ವದಂತಿ ಕೂಡ ದೊಡ್ಡ ಸಂಚಲನ ಮೂಡಿಸಿದೆ. ಹೀಗಾಗಿ ರೋಹಿತ್ ತನ್ನ ನಿವೃತ್ತಿಯನ್ನು ಬಯಸುತ್ತಿರುವವರಿಗೆ ಹಾಗೂ ತನ್ನ ಹಳೆಯ ಲಯಕ್ಕೆ ಮರಳಲು ಇದು ಉತ್ತಮ ಹಾಗೂ ಕೊನೆಯ ಅವಕಾಶ ಎನ್ನಬಹುದು.

ಇಶಾನ್ ಕಿಶನ್ ಔಟ್

ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಬ್ಯಾಟ್ ಬೀಸಲಿದ್ದು, ಕಳೆದ ಪಂದ್ಯದಲ್ಲಿ ಅವರು ಅರ್ಧಶತಕ ಬಾರಿಸಿರುವುದರಿಂದ ಅವರ ಬಗ್ಗೆ ಯಾವುದೇ ಕಳವಳವಿಲ್ಲ. ಆದರೆ ಲಾರ್ಡ್ಸ್‌ ಮೈದಾನದಲ್ಲಿ ಕೊಹ್ಲಿಗೆ ಇದುವರೆಗೆ ಒಂದೇ ಒಂದು ಅರ್ಧಶತಕವನ್ನು ಬಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೊಹ್ಲಿ ಈ ಬಾರಿ ಆ ಬರವನ್ನು ನೀಗಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅವರಿಂದ ನಿರೀಕ್ಷಿತ ಮೂಡಿಬಂದಿಲ್ಲ. ಆದ್ದರಿಂದ ಇಶಾನ್ ಕಿಶನ್​ ಅವರನ್ನು ಹೊರಗಿಡುವ ಸಾಧ್ಯತೆಗಳಿವೆ. ಹೀಗಾಗಿ 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡಲಿದ್ದಾರೆ.

IND vs ENG: ಲಾರ್ಡ್ಸ್‌ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ

ಸುಂದರ್ ಬದಲಿಗೆ ಯಾರು?

ಇನ್ನು ಆಲ್‌ರೌಂಡರ್​ಗಳ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಇಲ್ಲದಿರುವ ಕಾರಣ ಅವರ ಬದಲಿಗೆ ಅನಾರೋಗ್ಯದ ಕಾರಣ ಕಳೆದ ಪಂದ್ಯದಲ್ಲಿ ಆಡದ ಕೆಎಲ್ ರಾಹುಲ್​ಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಉಳಿದಂತೆ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಆಲ್‌ರೌಂಡರ್​ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಕುಲ್ದೀಪ್ ಯಾದವ್ ಸ್ಪಿನ್ ಬೌಲರ್ ಆಗಿ ಆಡುವ ಸಾಧ್ಯತೆಗಳಿವೆ. ಇನ್ನು ಬೌಲಿಂಗ್‌ ವಿಭಾಗದಲ್ಲಿ ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಆಡುವುದು ಖಚಿತ.

ಭಾರತದ ಸಂಭಾವ್ಯ ಆಡುವ 11: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಗುರ್ನೂರ್ ಬ್ರಾರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us