Dinesh Karthik: RCB ಅಭಿಮಾನಿಗಳು ನಿಷ್ಠಾವಂತರೇ… ಆದರೆ,
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಆರ್‌ಸಿಬಿ ತಂಡವು 4 ಮ್ಯಾಚ್ಗಳಲ್ಲಿ ಸೋತಿದೆ. ಸಿಎಸ್ಕೆ ವಿರುದ್ಧದ ಸೋಲಿನೊಂದಿಗೆ IPL 2024 ಅನ್ನು ಶುರು ಮಾಡಿದ್ದ ಆರ್‌ಸಿಬಿ, ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿತ್ತು. ಇದಾದ ಬಳಿಕ ಕೆಕೆಆರ್, ಎಲ್ಎಸ್ಜಿ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿದೆ.
Updated on: Apr 08, 2024 | 10:07 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಅತ್ಯಂತ ನಿಷ್ಠಾವಂತ ಅಭಿಮಾನಿಗಳು ಯಾರೆಂದು ಕೇಳಿದ್ರೆ, ಥಟ್ಟನೆ ಬರುವ ಉತ್ತರ RCB ಫ್ಯಾನ್ಸ್. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಬಗ್ಗೆ ದಿನೇಶ್ ಕಾರ್ತಿಕ್ ಮಾತನಾಡಿದ್ದಾರೆ.

ರವಿಚಂದ್ರನ್ ಅಶ್ವಿನ್ ಅವರ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಡಿಕೆ, ಆರ್‌ಸಿಬಿ ಅಭಿಮಾನಿಗಳು ನಿಷ್ಠಾವಂತರು. ಒಂದು ರೀತಿಯಲ್ಲಿ ನಮ್ಮ ಕುಟುಂಬದಂತೆ. ನೀವು ಎಲ್ಲೇ ಹೋಗಿ, ಏನೇ ಆಗಲಿ, ನಮ್ಮನ್ನು ಹುರಿದುಂಬಿಸುತ್ತಾರೆ.

ಆರ್‌ಸಿಬಿ ಅಭಿಮಾನಿಗಳು ಹುರಿದುಂಬಿಸುವುದು ಕೇಳಿದ್ರೆ, ನಾನು ಈ ಭೂಮಿ ಮೇಲಿನ ಶ್ರೇಷ್ಠ ಆಟಗಾರ ಎಂದೆನಿಸಿಬಿಡುತ್ತೆ. ಆರ್‌ಸಿಬಿ ಫ್ಯಾನ್ಸ್ ಯಾವತ್ತಿಗೂ, ಎಂದಿಗೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ಅಂತಹ ನಿಷ್ಠಾವಂತ ಅಭಿಮಾನಿಗಳು ಎಂದು ದಿನೇಶ್ ಕಾರ್ತಿಕ್ ಆರ್‌ಸಿಬಿ ಫ್ಯಾನ್ಸ್ ಬೆಂಬಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಾಗ್ಯೂ ಆರ್ಸಿಬಿಯ ಕೆಲ ಅಭಿಮಾನಿಗಳಿಗೆ ಮತ್ತೊಂದು ಮುಖ ಕೂಡ ಇದೆ. ಅದೇನೆಂದರೆ, ನಾವು ಕಳಪೆ ಪ್ರದರ್ಶನ ನೀಡಿದರೆ ವೈಯುಕ್ತಿಕ ಮಟ್ಟದಲ್ಲಿ ನಿಂದಿಸುತ್ತಾರೆ. ನನಗೇನೆ ಹಲವು ಬಾರಿ ಡೈರೆಕ್ಟ್ ಮೆಸೇಜ್ ಮಾಡಿ ನಿಂದಿಸಿದ್ದಾರೆ. ಇದರೊಂದು ನಕರಾತ್ಮಕ ವಿಷಯ ಎಂದು ದಿನೇಶ್ ಕಾರ್ತಿಕ್ ಹೇಳಿದರು.

ಈ ಒಂದು ವಿಷಯವನ್ನು ಬಿಟ್ಟರೆ, ಆರ್‌ಸಿಬಿ ಅಭಿಮಾನಿಗಳು ಯಾವತ್ತೂ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಫ್ಯಾನ್ಸ್ ಕಡೆಯಿಂದ ಸಿಗುವ ಇಂತಹ ಬೆಂಬಲವು ನಂಬಲಸಾಧ್ಯ ಎಂದು ದಿನೇಶ್ ಕಾರ್ತಿಕ್ ಆರ್‌ಸಿಬಿ ಅಭಿಮಾನಿಗಳ ನಿಷ್ಠೆಯನ್ನು ಹಾಡಿ ಹೊಗಳಿದ್ದಾರೆ.

ಈ ಬಾರಿಯ ಐಪಿಎಲ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತಂಡದ ಈ ಹೀನಾಯ ಪ್ರದರ್ಶನ ಹೊರತಾಗಿಯೂ ಆರ್‌ಸಿಬಿ ಅಭಿಮಾನಿಗಳ ಬೆಂಬಲ ಕಡಿಮೆಯಾಗಿಲ್ಲ. ಇದನ್ನೇ ಪ್ರಸ್ತಾಪಿಸಿ ದಿನೇಶ್ ಕಾರ್ತಿಕ್ ಆರ್‌ಸಿಬಿ ಫ್ಯಾನ್ಸ್ ಸಪೋರ್ಟ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

TV9 Kannada
Read More



