IPL 2024: ಐಪಿಎಲ್ ಸೀಸನ್ 17 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ (RR) ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಜರುಗಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ.
ಒಂದು ವೇಳೆ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡಚಣೆಯುಂಟು ಮಾಡಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಈಗಾಗಲೇ ಐಪಿಎಲ್ನ 2 ಪಂದ್ಯಗಳು ಮಳೆಗೆ ಅಹುತಿಯಾಗಿದೆ. ಹೀಗಾಗಿ ಎಲಿಮಿನೇಟರ್ ಪಂದ್ಯದ ವೇಳೆ ಮಳೆ ಬಂದರೆ...? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ...
ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. ಅದರಂತೆ 2 ತಂಡಗಳು 20 ಓವರ್ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್ಗಳ ಕಡಿತಕ್ಕೆ ಮುಂದಾಗಬಹುದು)
ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ 8 ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ.
ಇನ್ನು ಪ್ಲೇಆಫ್ ಪಂದ್ಯಗಳಿಗೆ ಹೆಚ್ಚುವರಿ 120 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅಂದರೆ ಐಪಿಎಲ್ ಪಂದ್ಯದ ನಿಗದಿತ ಸಮಯ 3 ಗಂಟೆ 15 ನಿಮಿಷಗಳು. ಒಂದು ವೇಳೆ ಮಳೆ ಬಂದು ಅಥವಾ ಇನ್ನಿತರ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 2 ಗಂಟೆಯನ್ನು ಬಳಸಲಾಗುತ್ತದೆ. ಅಂದರೆ ಎಲಿಮಿನೇಟರ್ ಪಂದ್ಯಕ್ಕೆ 7.30 ರಿಂದ 1 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ.
ಇದಾಗ್ಯೂ ಪಂದ್ಯ ನಡೆಯದಿದ್ದರೆ ಅಥವಾ ಪೂರ್ಣಗೊಳ್ಳದಿದ್ದರೆ ಮ್ಯಾಚ್ ಅನ್ನು ಮೀಸಲು ದಿನದಾಟವನ್ನು ಬಳಸಲಾಗುತ್ತದೆ. ಮೀಸಲು ದಿನದಾಟದಲ್ಲೂ ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದು ಕಂಡು ಬಂದರೆ ಸೂಪರ್ ಓವರ್ ಆಡಿಸಲು ಮುಂದಾಗಲಿದ್ದಾರೆ.
ಇನ್ನು ಮಳೆಯಿಂದಾಗಿ ಕನಿಷ್ಠ ಸೂಪರ್ ಓವರ್ ಪಂದ್ಯ ಕೂಡ ನಡೆಯದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ ಲೀಗ್ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಟಾಪ್-4 ಸ್ಥಾನಗಳಲ್ಲಿ ಮೇಲಿರುವ ತಂಡವು ಮುಂದಿನ ಹಂತಕ್ಕೇರಲಿದೆ.
ಅಂದರೆ ಎಲಿಮಿನೇಟರ್ ಪಂದ್ಯವು ರದ್ದಾದರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಏಕೆಂದರೆ ಆರ್ಸಿಬಿ ತಂಡ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಎಲಿಮಿನೇಟರ್ ಪಂದ್ಯದ ವೇಳೆ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆದರೆ ಅದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವರದಾನವಾಗಲಿದೆ.
Published On - 8:54 am, Wed, 22 May 24